ನನಗೆ ಮುಖಭಂಗವಾಗಿದೆ ಎಂದು ಪಾಲಿಕೆಯ ಭ್ರಷ್ಟರು ಪಾರ್ಟಿ ಮಾಡುತ್ತಿರಬಹುದು!
ಮಂಗಳೂರಿನಲ್ಲಿ ಹಿಂದೆ ಒಬ್ಬರು ಖಡಕ್ ಕಮೀಷನರ್ ಹರೀಶ್ ಕುಮಾರ್ ಇದ್ದದ್ದು ನಿಮಗೆ ಗೊತ್ತೆ ಇದೆ. ಅವರು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಅನಧಿಕೃತ ಕಟ್ಟಡಗಳ ಪಟ್ಟಿ ಮಾಡಿದ್ದರು. ಅದರಲ್ಲಿ ಕೆಲವು ಕಟ್ಟಡಗಳ ಮಾಲೀಕರು ನ್ಯಾಯಾಲಯದಲ್ಲಿ ಅಪೀಲು ಮಾಡಿದ್ದರು. ಆದರೆ ನ್ಯಾಯಾಲಯ ಕಟ್ಟಡ ಮಾಲೀಕರ ವಾದವನ್ನು ಪುರಸ್ಕರಿಸಿರಲಿಲ್ಲ. ಅದರ ಅರ್ಥ ಪಾಲಿಕೆ ಅನಧಿಕೃತ ಕಟ್ಟಡಗಳನ್ನು ಕೆಡವಬಹುದು ಎನ್ನುವುದೇ ಆಗಿತ್ತು. ಒಂದು ವೇಳೆ ಪಾಲಿಕೆ ತಮ್ಮ ಪಟ್ಟಿಯಲ್ಲಿದ್ದ ಅನಧಿಕೃತ ಕಟ್ಟಡಗಳನ್ನು ಆವತ್ತೇ ಕೆಡವಿದ್ದಿದ್ದರೆ ಅದೊಂದು ಐತಿಹಾಸಿಕ ಘಟನೆ ಆಗಿ ಪಾಲಿಕೆಯ ಇತಿಹಾಸದಲ್ಲಿ ದಾಖಲಾಗುತ್ತಿತ್ತು. ಆದರೆ ಹರೀಶ್ ಕುಮಾರ್ ಅವರ ಹಠಾತ್ ವರ್ಗಾವಣೆ ಆದ ಕಾರಣ ಅದು ಜಾರಿಗೆ ಬಂದಿರಲಿಲ್ಲ. ಅದರ ನಂತರ ಇವತ್ತಿಗೂ ಆ ಅನಧಿಕೃತ ಕಟ್ಟಡಗಳು ಹಾಗೆ ಇದೆ. ನಾನು ಈ ಬಗ್ಗೆ ಲೋಕಾಯುಕ್ತರಿಗೆ ದೂರು ಕೊಟ್ಟ ನಂತರ ಅವರು ಪಾಲಿಕೆಗೆ ನವೆಂಬರ್ 17 ರಿಂದ ಎಂಟು ವಾರಗಳ ಒಳಗೆ ಈ ಬಗ್ಗೆ ಸೂಕ್ತ ಉತ್ತರ ಕೊಡಬೇಕು ಎಂದು ಸೂಚಿಸಿದ್ದಾರೆ. ಹಾಗೆ ದೂರು ಕೊಟ್ಟ ನನಗೂ ಅದರ ಮಾಹಿತಿಯನ್ನು ನೀಡಬೇಕು ಎಂದು ಹೇಳಿದ್ದಾರೆ.
“ಸರ್, ಆ ಅನಧಿಕೃತ ಕಟ್ಟಡ ಕಟ್ಟಿದವರು ನಮ್ಮವರು, ನಮಗೆ ಬೇಕಾದವರು” ಎಂದು ಪಾಲಿಕೆ ಹೇಳುತ್ತದೆಯಾ ಎನ್ನುವುದು ನನ್ನ ಕುತೂಹಲ. ಅಂತಹ ಅಸಹ್ಯ ವರದಿಯನ್ನು ಕೊಡಲು ಕೂಡ ಪಾಲಿಕೆ ಹಿಂಜರಿಯಲಿಕ್ಕೆ ಇಲ್ಲ ಎನ್ನುವುದು ನನ್ನ ಭಾವನೆ. ಎಂಟು ವಾರಗಳ ನಂತರ ಪಾಲಿಕೆಯಿಂದ ಏನು ಉತ್ತರ ಬರಬಹುದು ಎನ್ನುವುದನ್ನು ನಾನು ಕಾಯುತ್ತಿದ್ದೇನೆ.
ಇನ್ನು ನಾನು ಕೊಟ್ಟ ದೂರಿನಲ್ಲಿ ಇದ್ದ ಎರಡನೇ ಅಂಶ ಪಾಲಿಕೆಯಲ್ಲಿ ಟೆಂಡರ್ ಕರೆಯದೇ ಚರಂಡಿ ಕಾಮಗಾರಿಗಳನ್ನು ನಡೆಸಲಾಗುತ್ತದೆ ಎನ್ನುವುದು. ನನ್ನ ಈ ದೂರನ್ನು ನೋಡಿದ ಲೋಕಾಯುಕ್ತರು ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಹಾಗೆ ಚರಂಡಿಗಳನ್ನು ನಿರ್ಮಿಸಲಾಗುತ್ತದೆ ಎನ್ನುವ ಅರ್ಥದಲ್ಲಿ ಮಾತನಾಡಿದರು. ಯಾವಾಗ ಲೋಕಾಯುಕ್ತರು ಈ ವಿಷಯದಲ್ಲಿ ಪಾಲಿಕೆಯ ವಿರುದ್ಧ ಚಾಟಿ ಬೀಸಲಿಲ್ಲವೋ ಅದನ್ನೇ ತಮ್ಮ ಪರವಾಗಿ ಲೋಕಾಯುಕ್ತರು ಮಾತನಾಡಿದ್ದಾರೆ ಎಂದು ತಿಳಿದುಕೊಂಡಿರುವ ಪಾಲಿಕೆಯ ಕೆಲವು ಭ್ರಷ್ಟಾತೀ ಭ್ರಷ್ಟರು “ಹನುಮಂತ ಕಾಮತ್ ಗೆ ಮುಖಭಂಗವಾಗಿದೆ” ಎಂದು ಖುಷಿ ಪಡುತ್ತಿದ್ದಾರೆ. ಕೆಲವರು ಪಾರ್ಟಿ ಮಾಡಿ ಎಂಜಾಯ್ ಮಾಡಿರಬಹುದು. ಆದರೆ ನಾನು ಆವತ್ತೇ ಲೋಕಾಯುಕ್ತರು ಕೆಲವು ಸಲ ಟೆಂಡರ್ ಕರೆಯದೇ ಮಾಡಬೇಕಾಗುತ್ತದೆ ಎಂದು ಹೇಳಿದಾಗಲೇ ನನ್ನ ವಾದವನ್ನು ಮಂಡಿಸಿದ್ದೆ. “ಸರ್, ಕರ್ನಾಟಕ ಮುನ್ಸಿಪಲ್ ಕಾರ್ಪೋರೇಶನ್ ಆಕ್ಟ್ 1976, ಕಲಾಂ 183 ಪ್ರಕಾರ ಟೆಂಡರ್ ಕರೆಯದೇ ಕಾಮಗಾರಿ ನಡೆಸುವಂತಿಲ್ಲ” ಎಂದಿದ್ದೆ. ಆದರೆ ಲೋಕಾಯುಕ್ತರ ಹೇಳಿಕೆಯನ್ನು ಮತ್ತು ಕಾನೂನನ್ನು ತುಲನೆ ಮಾಡುವಾಗ ಟೆಂಡರ್ ರಹಿತವಾಗಿ ಕಾಮಗಾರಿ ಮಾಡಿದರೂ ಸರಿ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಸರಕಾರ ಮಾಡಿರುವ ಕಾನೂನಿನಲ್ಲಿ ಸ್ಪಷ್ಟವಾಗಿ ವಿಷಯ ಹೇಳಿರುವಾಗ ಸರಕಾರದ ಅಂಗವೇ ಆಗಿರುವ ಲೋಕಾಯುಕ್ತ ನ್ಯಾಯಾಧೀಶರು ಲಾ ಬ್ರೇಕ್ ಮಾಡಬಹುದು ಎಂದು ಪರೋಕ್ಷವಾಗಿ ಹೇಳಿದಂತೆ ಆಗುತ್ತದೆ.
ಅದಕ್ಕೆ ಕೊನೆಯದಾಗಿ ನಾನು ಹೇಳಿದೆ ” ನೀವು ಈ ರೀತಿ ಆದೇಶ ಮಾಡಿದರೆ ಪಾಲಿಕೆ ಮುಂದೆ ಎಲ್ಲಾ ಕಾಮಗಾರಿಗಳನ್ನು ಹೀಗೆ ಟೆಂಡರ್ ಕರೆಯದೆ ಮಾಡಿ ಕೇಳಿದರೆ ಲೋಕಾಯುಕ್ತರ ಆದೇಶ ಇದೆ ಎಂದು ಹೇಳಿ ನುಣುಚಿಕೊಳ್ಳುತ್ತದೆ” ಎಂದು ಹೇಳಿದೆ. ನನ್ನ ಪ್ರಯತ್ನವನ್ನು ನಾನು ಮಾಡಿದ್ದೇನೆ. ಕಾನೂನಿನ ಪ್ರಕಾರ ಮುಂದೆಯೂ ಪಾಲಿಕೆ ಲಾ ಬ್ರೇಕ್ ಮಾಡಿ ಕಾಮಗಾರಿ ಮಾಡಿದರೆ ನನ್ನ ಹೋರಾಟ ಮುಂದುವರೆಯಲಿದೆ.
ಇನ್ನೊಂದು ವಿಷಯವನ್ನು ನಿಮ್ಮ ಗಮನಕ್ಕೆ ತರಬೇಕಾಗಿದೆ. ಅದೇನೆಂದರೆ ಮರವೂರಿನ ಐದು ಮೀಟರ್ ಎತ್ತರದ ಡ್ಯಾಂನಲ್ಲಿ ಮಂಗಳೂರಿನವರಿಗೆ ಕುಡಿಯಲು ಎಂದು ನೀರು ನಿಲ್ಲಿಸುತ್ತಾರೆ. ಅದರ ಗೇಟ್ ವಾಲ್ ಸರಿ ಇಲ್ಲ ಎಂದು ಅಚಾನಕ್ ಆಗಿ ಅದನ್ನು ತೆರೆದಿದ್ದಾರೆ. ಗೇಟ್ ತೆಗೆದರೆ ಏನಾಗುತ್ತದೆ? ನೀರು ಹರಿದು ಹೋಗುತ್ತದೆ. ಇವರು ಗೇಟ್ ತೆಗೆಯುವ ಮೂಲಕ ಯಾರಿಗೆ ನಷ್ಟ, ಯಾರಿಗೆ ಲಾಭ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು. ಲಾಭ ನಿಸ್ಸಂಶಯವಾಗಿ ಮರಳು ತೆಗೆಯುವವರಿಗೆ, ನಷ್ಟ ಇನ್ನು ಬರುವ ಈ ಬೇಸಿಗೆಯಲ್ಲಿ ನೀರು ಕಡಿಮೆಯಾದರೆ ಅನುಭವಿಸುವ ನಮಗೆ.
ಮರಳು ತೆಗೆಯುವರಿಗೆ ಲಾಭ ತರುವ ಉದ್ದೇಶದಿಂದ ಮತ್ತು ರಾಜಕೀಯದವರ ಒತ್ತಡದಿಂದ ಗೇಟ್ ತೆಗೆಯಲಾಗಿದೆ ವಿನ: ಬೇರೆ ಯಾವ ರಿಪೇರಿಯೂ ಇಲ್ಲ ಎಂದು ಅಲ್ಲಿನವರು ಹೇಳುತ್ತಾರೆ. ಇದು ನಿಜಾನಾ, ಸುಳ್ಳಾ ಎನ್ನುವುದನ್ನು ಜಿಲ್ಲಾಡಳಿತವೇ ಹೇಳಬೇಕು. ಗೇಟ್ ತೆರೆಯಲು ಜಿಲ್ಲಾಧಿಕಾರಿ ವಿರುದ್ಧ ಇದ್ರು ಎನ್ನುವ ಮಾಹಿತಿ ಇದೆ. ಆದ್ದರಿಂದ ಬಹುಶ: ಒಳಗೆ ಬೇರೆ ಇಟ್ಟು ಹೊರಗೆ ಸುಳ್ಳು ಹೇಳಲು ಅವರ ಮನಸ್ಸು ಒಪ್ಪುತ್ತಿಲ್ಲವೇನೋ? ಅದಕ್ಕೆ ಇಲ್ಲಿಯ ತನಕ ಜಿಲ್ಲಾಧಿಕಾರಿ ಏನೂ ಹೇಳಿಕೆ ನೀಡಿಲ್ಲ. ಯಾರಾದರೂ ಪತ್ರಕತ್ಥರು ಕೇಳಿದರೆ ಏನು ಹೇಳುತ್ತಾರೆ ಎನ್ನುವುದು ಸದ್ಯದ ಪ್ರಶ್ನೆ
Leave A Reply