ಹೇಳುವೆ ಕೇಳಿ, ಕಾಶ್ಮೀರದಲ್ಲಿ ಉಗ್ರರು ಸೈನ್ಯದ ವಿರುದ್ಧ ಕೆರಳಿದ ಕತೆಯಾ…
ಜಮ್ಮು-ಕಾಶ್ಮೀರ ದೇಶದ ಮುಕುಟ, ಭೂ ಲೋಕದ ಸ್ವರ್ಗ ಎಂದು ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳು ಅವಡುಗಚ್ಚಿ ಓದುತ್ತಿದ್ದರೆ, ಇಲ್ಲಿ ಕಾಶ್ಮಿರದಲ್ಲಿ ಮಾತ್ರ ಉಗ್ರರ ನಳಿಕೆಯಿಂದ ಗುಂಡುಗಳು ಹಾರುತ್ತವೆ. ಹಾಗೆ ಹಾರಿದ ಗುಂಡುಗಳು ನಮ್ಮ ಯೋಧರದ್ದೋ, ಸಾರ್ವಜನಿಕರದ್ದೋ ಗುಂಡಿಗೆ ಸೇರುತ್ತವೆ. ಪಕ್ಕದ ಮನೆಯವನೇ ಏಕಾಏಕಿ ಬಂದೂಕು ಹಿಡಿದು ನಿಲ್ಲುತ್ತಾನೆ, ಕಲ್ಲು ತೂರುತ್ತಾನೆ, ಒಮ್ಮಿಂದೊಮ್ಮೆಲೆ ಗುಂಡಿನ ಸದ್ದು ಕೇಳಿಬರುತ್ತದೆ. ಆದರೂ ಕಾಶ್ಮೀರ ಮಾತ್ರ ವಿದ್ಯಾರ್ಥಿಗಳಿಗೆ ಭೂಲೋಕದ ಸ್ವರ್ಗವೇ. ಅಲ್ಲಿ ವಾಸಿಸುವವರಿಗೆ ಮಾತ್ರ ಅದು ನರಕ.
ಇದನ್ನು ಮನಗಂಡೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೊದಲು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಮುಂದಾಯಿತು. ಮೊದಲು ಬರ್ಹಾನ್ ವನಿಯನ್ನು ಒಡೆದುರುಳಿಸಿತು. ಬಳಿಕ ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕಿಸ್ತಾನದ ಉಪಟಳಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಯಿತು. ನೋಟು ನಿಷೇಧಗೊಳಿಸಿ ಕಾಶ್ಮೀರಿ ಉಗ್ರರು ಹಾಗೂ ಪ್ರತ್ಯೇಕತಾವಾದಿಗಳ ಜೇಬು ಖಾಲಿ ಮಾಡಿತು. ಪ್ರತ್ಯೇಕತಾವಾದಿಗಳ ಮೇಲೆ ಎನ್ಐಎ ದಾಳಿ ಮಾಡಿಸಿ ಜೈಲಿಗೆ ಅಟ್ಟಲಾಯಿತು. ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದೇ ಇತ್ತು. ಇಷ್ಟೆಲ್ಲ ಕ್ರಮ ಕೈಗೊಂಡ ಬಳಿಕ ಕಾಶ್ಮೀರದಲ್ಲಿ ಕಲ್ಲು ತೂರಾಟ ಕಡಿಮೆಯಾಗತೊಡಗಿವೆ, ಯುವಕರು ಉಗ್ರರ ತಂಡದಿಂದ ಸಾಮಾನ್ಯ ಜನರಾಗಲು ಹಂಬಲಿಸುತ್ತಿದ್ದಾರೆ. ಪರಿಸ್ಥಿತಿ ಬದಲಾಗುತ್ತಿದೆ.
ಆದರೆ ಇದೇ ಉಗ್ರರಿಗೆ ನುಂಗಲಾರದ ತುತ್ತಾಗಿದೆ. ಕಾಶ್ಮೀರದಲ್ಲಿ ಮತ್ತೆ ಶಾಂತಿಕದಡಲು ಉಪಟಳ ಮಾಡುತ್ತಿದ್ದಾರೆ. ಉಗ್ರ ಸಂಘಟನೆ ಬಲಪಡಿಸಲು ಮುಂದಾಗಿದ್ದಾರೆ. ಅಷ್ಟಕ್ಕೂ ಕಾಶ್ಮೀರವನ್ನು ನರಕ ಮಾಡಲು ತಂತ್ರ ಮಾಡುತ್ತಿರುವ ಉಗ್ರ ಸಂಘಟನೆ ಯಾವುದು? ಅದು ಮಾಡಿರುವ ತಂತ್ರ ಯಾವುದು ಗೊತ್ತೇ?
ಬುರ್ಹಾನ್ ವಾನಿ, ಜಾಕೀರ್ ಮೂಸಾ ಸೇರಿ ಹಲವು ಉಗ್ರರನ್ನು ಕಾಶ್ಮೀರದಲ್ಲಿ ಹತ್ಯೆ ಮಾಡಿದ ಬಳಿಕ ಸುಮ್ಮನಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಈಗ ಮತ್ತೆ ಕಾರ್ಯಾಚರಣೆ ಶುರುವಿಟ್ಟುಕೊಳ್ಳಲು, ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಯೋಜನೆ ರೂಪಿಸಿದೆ. ಅದರಲ್ಲೂ ಪ್ರಮುಖವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಉಗ್ರ ಸಂಘಟನೆಗೆ ಸೇರುವಂತೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಹುನ್ನಾರ ಮಾಡಿದೆ ಎಂದು ತಿಳಿದುಬಂದಿದೆ.
2013ರಲ್ಲಿ ಸಂಸತ್ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಅಫ್ಜಲ್ ಗುರುವಿನನ್ನು ಗಲ್ಲಿಗೇರಿಸಿದ್ದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಉಗ್ರ ಸಂಘಟನೆಗಳು, ಅಫ್ಜಲ್ ನನ್ನೇ ಹೀರೋನನ್ನಾಗಿ ಮಾಡಿ ಸುಮಾರು 53 ಯುವಕರನ್ನು ಸಂಘಟನೆಗೆ ಸೇರಿಸಿಕೊಂಡಿವೆ.
ಅದೇ ರೀತಿ, 2016ರಲ್ಲಿ ಕಾಶ್ಮೀರದಲ್ಲಿ ಸೇನೆಯ ಗುಂಡಿಗೆ ಬಲಿಯಾದ ಬುರ್ಹಾನ್ ವನಿ ಎಂಬ ಉಗ್ರನನ್ನು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಬಂಡವಾಳವನ್ನಾಗಿ ಮಾಡಿದ್ದು, ಆತನನ್ನೂ ಹೀರೋ, ಹುತಾತ್ಮನನ್ನಾಗಿ ಮಾಡಿದೆ.
ಇದಕ್ಕೆ ದ್ಯೋತಕವಾಗಿ ಬುರ್ಹಾನ್ ವನಿ ಹೆಸರಿನಲ್ಲಿ 2016ರಲ್ಲಿ 88 ಹಾಗೂ 2017ರಲ್ಲಿ ಬರೋಬ್ಬರಿ ನೂರು ಯುವಕರನ್ನು ಸಂಘಟನೆಗೆ ಸೇರಿಸಿಕೊಳ್ಳುವ ಮೂಲಕ ಸೈನ್ಯದ ವಿರುದ್ಧ ಯುದ್ಧ ಸಾರಿದೆ.
ಅಷ್ಟೇ ಅಲ್ಲ, ಪ್ರಸಕ್ತ ವರ್ಷದಲ್ಲಿ ಭಾರತೀಯ ಸೇನೆ 203 ಉಗ್ರರನ್ನು ಹೊಡೆದುರುಳಿಸಿದ್ದು ಹಾಗೂ ಇದುವರೆಗೆ ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರತೀಯ ಸೈನಿಕರು ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದು ಉಗ್ರರನ್ನು ಮತ್ತಷ್ಟು ಕೆರಳಿಸಿದ್ದು, ಈಗ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿಗೆ ಪ್ರಚೋದನೆ ನೀಡಲು ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಸೆಳೆಯಲಾಗುತ್ತಿದೆ.
ಇಷ್ಟಾದರೂ, ಉಗ್ರರನ್ನು ಹೊಡೆದುರುಳಿಸದೇ ಬಿಡುವುದಿಲ್ಲ ಎನ್ನುವ ಭಾರತೀಯ ಸೇನೆ, ಜಮ್ಮು-ಕಾಶ್ಮೀರವನ್ನು ಮತ್ತೆ ಸ್ವರ್ಗವನ್ನಾಗಿಸುತ್ತೇವೆ ಎನ್ನುವ ಕೇಂದ್ರ ಸರ್ಕಾರದ ದೃಢ ನಿರ್ಧಾರವೇ ಕಾಶ್ಮೀರದ ಜನರಿಗಿರುವ ಶ್ರೀರಕ್ಷೆಯಾಗಿದೆ. ಇದೇ ದಿಸೆಯಲ್ಲಿ ಭಾರತೀಯ ಸೇನೆ ಅಲ್ಲಿ ಉಗ್ರರನ್ನು ಸಂಪೂರ್ಣವಾಗಿ ನಾಶಪಡಿಸಲಿ, ಶಾಶ್ವತವಾಗಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತಾಗಲಿ ಎಂಬುದು ಆಶಯ. ಆ ಕನಸು ನನಸಾಗಲಿ.
Leave A Reply