ಗುಜರಾತ್ನಲ್ಲಿ ಎಡವಿತೇ ಮೋದಿ-ಶಾಹ್ ಜೋಡಿ?
ಎಬಿಪಿ ನ್ಯೂಸ್ ವರದಿ ಸುಳ್ಳಾಗಿರಲಿಲ್ಲ. ಆದರೆ ಪರಿಪೂರ್ಣ ಸತ್ಯವೂ ಅಲ್ಲ. ಆರಂಭದಲ್ಲಿ ಅವರೆಲ್ಲರ ಪ್ರಕಾರ ಬಿಜೇಪಿಯ ಗೆಲುವು ನಿಶ್ಚಯವಾಗಿತ್ತು. ಕಾಲಕ್ರಮದಲ್ಲಿ ಅದು ಕಡಿಮೆಯಾಗುತ್ತ ಬಂದು ಕಾಂಗ್ರೆಸ್ಸು ಮತ್ತು ಬಿಜೇಪಿಗಳ ನಡುವೆ ಸಮಾನ ಕದನವಿತ್ತು. ವಾಸ್ತವವಾಗಿ ಅದು ಉಲ್ಟಾ. ಆರಂಭದಲ್ಲಿ ಮೋದಿ ಪಾಳಯದ ವಿರುದ್ಧ ಜನಾಕ್ರೋಶ ಘನೀಭವಿಸಿತ್ತು. ಬರು ಬರುತ್ತ ಅದನ್ನು ಕಡಿಮೆ ಮಾಡುವಲ್ಲಿ ಮೋದಿ-ಶಾಹ್ ಜೋಡಿ ಯಶಸ್ವಿಯಾಯ್ತು.
ಮತ್ತೊಮ್ಮೆ ವೋಟ್ ಬ್ಯಾಂಕಿಗಾಗಿ ಒಡೆದು ಆಳುವ ದಾರಿ ಬಳಕೆಯಾಗತೊಡಗಿದೆ. ಗುಜರಾತಿನಲ್ಲಿ ಮೋದಿಯವರು ಈ ಬಾರಿ ಇಟ್ಟ ಹೆಜ್ಜೆ ಬಲು ತೊಡಕಿನದು. 2014ರ ಚುನಾವಣೆಯಲ್ಲಿ ತರುಣರಿಗೆಲ್ಲ ವಿಕಾಸದ ಕನಸನ್ನು ತೋರಿದ ಮೋದಿಯವರು ಗುಜರಾತಿನಲ್ಲಿ ಮಾತ್ರ ಬೇರೆಯದೇ ಹಾದಿಯೊಂದನ್ನು ಹಿಡಿದಿದ್ದರು. ಜಿಎಸ್ಟಿ ಜಾರಿಗೆ ತರುವಾಗಿನ ಅವರ ಧೈರ್ಯ ಗುಜರಾತಿನ ಚುನಾವಣೆಯ ಹೊಸ್ತಿಲಲ್ಲಿ ಇಂಗಿ ಹೋಗಿತ್ತು. ನಿಸ್ಸಂಶಯವಾಗಿ ಜಿಎಸ್ಟಿಯ ಅನುಷ್ಠಾನದಲ್ಲಿ ಸರ್ಕಾರ ಎಡವಿದ್ದು ಕಣ್ಣಿಗೆ ರಾಚುತ್ತಿತ್ತು. ಮೂರು ವರ್ಷಗಳಷ್ಟು ಸುದೀರ್ಘ ಅವಧಿ ದೊರೆತಾಗಲೂ ಅದಕ್ಕಾಗಿ ಬೇಕಾದ ತಯಾರಿ ಮಾಡಿಕೊಳ್ಳದೇ ಏಕಾಕಿ, ತರಾತುರಿಯಲ್ಲಿ ತಂದಂತಿತ್ತು ಈ ತೆರಿಗೆ ವ್ಯವಸ್ಥೆ. ಪ್ರಧಾನ ಮಂತ್ರಿಗಳೇ ಆನಂತರ ಅಧಿಕಾರಗಳ ಮೇಲೆ ಹರಿಹಾಯ್ದು ಸಮಸ್ಯೆಗಳನ್ನು ಮುಂಚಿತವಾಗಿ ಊಹಿಸಲಿಲ್ಲವೆಂದು ಬೇಸರಿಸಿಕೊಂಡಿದ್ದರು. ಆದರೆ ಆಗಬೇಕಿದ್ದ ಸಮಸ್ಯೆಯಂತೂ ಆಗಿತ್ತು. ವ್ಯಾಪಾರಿಗಳೇ ತುಂಬಿದ್ದ ಗುಜರಾತಿನಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಗುಜರಾತಿನ ಚುನಾವಣೆಯ ಆಂತರಿಕ ವರದಿ ತರಿಸಿಕೊಂಡ ಪ್ರಧಾನಿ ಮಂತ್ರಿಗಳು ತಡಬಡಾಯಿಸಿಬಿಟ್ಟರು. ಕೇರಳದ ಪಾದಯಾತ್ರೆಯಲ್ಲಿದ್ದ ಅಮಿತ್ ಶಾಹ್ರನ್ನು ತುರ್ತಾಗಿ ಕರೆಸಿಕೊಂಡು ಮುಂದಿನ ನಡೆಯ ಕುರಿತಂತೆ ರಣತಂತ್ರ ರೂಪಿಸಲಾರಂಭಿಸಿದರು. ಆಗಿಂದಾಗ್ಯೇ ಜಿಎಸ್ಟಿ ಸಭೆ ಕರೆದು ಬದಲಾವಣೆಗಳನ್ನು ಘೋಷಿಸುವ ನಿರ್ಣಯ ಮಾಡಲಾಯಿತು. ಈ ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ನರೇಂದ್ರ ಮೋದಿ ನಿರ್ಣಯವೊಂದರಲ್ಲಿ ಹಿಂಜರಿದಂತೆ ಕಂಡಿತ್ತು. ಜಿಎಸ್ಟಿ ಪರಿಷ್ಕರಣೆಯಲ್ಲಿ ಖಾಕ್ರಾ ಎಂಬ ಗುಜರಾತಿ ತಿಂಡಿಯನ್ನು ಸೇರಿಸಿದ್ದಂತೂ ನಿಸ್ಸಂಶಯವಾಗಿ ಚುನಾವಣೆಯ ಗಿಮಿಕ್ಕೇ ಆಗಿತ್ತು. ಮೋದಿ-ಶಾಹ್ ಜೋಡಿಯ ಮೇಲೆ ನಿರ್ಭರವಾದ ಬಿಜೇಪಿಗೆ ಇವೆಲ್ಲ ಅರಿವಾಗುವ ಮುನ್ನವೇ ಅವರೀರ್ವರೂ ತಮ್ಮ ದಾಳ ಪ್ರಯೋಗಿಸಲು ಶುರು ಮಾಡಿದ್ದರು. ಆಗಲೇ ಅವರ ಅರಿವಿಗೆ ಬಂದಿದ್ದು ಕಾಂಗ್ರೆಸ್ಸು ಆರು ತಿಂಗಳಿಂದ ನೆಲ ಮಟ್ಟದ ಚಟುವಟಿಕೆಯಲ್ಲಿ ನಿರತವಾಗಿದೆ ಅಂತ. ರಾಹುಲ್ ಗಾಂಧಿಯ ಇಮೇಜ್ ಹೆಚ್ಚಿಸಲು ಅಲ್ಲೊಂದು ದೊಡ್ಡ ಪಡೆ ಸಿದ್ಧವಾಗಿ ನಿಂತಿತ್ತು. ಇದ್ದಕ್ಕಿಂದ್ದಂತೆ ರಾಹುಲ್ ಚುರುಕಾಗಿದ್ದರು. ವ್ಯಾಪಕ ಓಡಾಟ, ಬುದ್ಧಿವಂತಿಕೆಯ ನಡೆ, ಎಚ್ಚರಿಕೆಯ ಟ್ವೀಟುಗಳಿಂದ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಕಾಂಗ್ರೆಸ್ಸು 22 ವರ್ಷಗಳ ಬಿಜೆಪಿಯ ಆಳ್ವಿಕೆಯ ವಿರುದ್ಧ ಗುಟುರು ಹಾಕಿ ನಿಂತಿತ್ತು. ಮೊದಲೆಲ್ಲ ವಿಕಾಸದ ವಿಚಾರದಿಂದ ದೂರ ನಿಂತು ಜಾತಿ ರಾಜಕಾರಣದ ಮೇಲೆ ಅಧಿಕಾರದ ಸೌಧ ಕಟ್ಟುತ್ತಿದ್ದ ಕಾಂಗ್ರೆಸ್ಸು ಈ ಬಾರಿ ಗುಜರಾತಿನಲ್ಲಿ ಬೇರೆ ಬಗೆಯದ್ದೇ ಹೋರಾಟ ಶುರು ಮಾಡಿತ್ತು. ಇಡಿಯ ಪ್ರಚಾರದಲ್ಲಿ ಒಮ್ಮೆಯಾದರೂ ಅವರು ಗೋಧ್ರಾ ದುರಂತದ ಕುರಿತಂತೆ ಮಾತಾಡಲಿಲ್ಲ. ಮುಸಲ್ಮಾನರನ್ನು ಸಂತುಷ್ಟರಾಗಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಗುಜರಾತಿನಲ್ಲಿ ಹಿಂದೂಗಳನ್ನು ಎದುರು ಹಾಕಿಕೊಂಡಿದ್ದೇ ಎಲ್ಲ ಸಮಸ್ಯೆಗಳ ಮೂಲವೆಂಬುದು ಅವರಿಗೆ ಸ್ಪಷ್ಟವಾಗಿತ್ತು. ಹೀಗಾಗಿಯೇ ಈ ಬಾರಿ ಅವರ ಚುನಾವಣೆಯ ತಂತ್ರಗಾರಿಕೆ ಭಿನ್ನವಾಗಿತ್ತು. ಅಭಿವೃದ್ಧಿಯ ಮೇಲೆಯೇ ದೃಷ್ಟಿ ಕೇಂದ್ರೀಕರಿಸಿದ ಕಾಂಗ್ರೆಸ್ಸು ಸ್ವತಃ ಬಿಜೇಪಿ ಒಂದು ಹೆಜ್ಜೆ ಹಿಂದೆ ಹೋಗುವ ಅನಿವಾರ್ಯತೆ ಸೃಷ್ಟಿಸಿತು. ಅದರಿಂದಾಗಿಯೇ ವಿಕಾಸದ ಮಾತಿನಿಂದ ಪ್ರಚಾರ ಆರಂಭಿಸಿದ ನರೇಂದ್ರ ಮೋದಿ ಬರಬರುತ್ತ ಹಿಂದುತ್ವದ ಚರ್ಚೆಗೆ ಆತುಕೊಂಡರು. ಅತ್ತ ರಾಹುಲ್ ವಿಕಾಸದ ಚರ್ಚೆ ಮಾಡುತ್ತಲೇ ಮಂದಿರಗಳಿಗೆ ಹೋಗಲಾರಂಭಿಸಿದರು. ಕಾಂಗ್ರೆಸ್ಸು ನಿರ್ಮಿಸಿದ ಖೆಡ್ಡಾಕ್ಕೆ ಸರಿಯಾಗಿ ಹೋಗಿ ಬಿತ್ತು ಬಿಜೇಪಿ. ರಾಹುಲ್ ಗಾಂಧಿಯ ಜಾತಿಯ ಪ್ರಶ್ನೆ ಮಾಡಿತು. ಆತನ ಪೂರ್ವಾಪರಗಳನ್ನು ಮುಂದಿಡುವ ವಿಫಲ ಯತ್ನವನ್ನೂ ಮಾಡಿತು. ಇವೆಲ್ಲದರೊಟ್ಟಿಗೆ ಮೋದಿ ಬಳಗ ಹತಾಶವಾಗಿದ್ದಂತೂ ಎದ್ದೆದ್ದು ಕಾಣುತ್ತಿತ್ತು. ಅನುಮಾನವೇ ಇಲ್ಲ. 2014ರ ಚುನಾವಣೆಯ ವೇಳೆಗೆ ಎದುರಾಳಿಯ ಹೆಸರೂ ಎತ್ತದೇ ಗೂಳಿಯಂತೆ ನುಗ್ಗುತ್ತಿದ್ದ ಮೋದಿ ಈಗ ರಾಹುಲ್ ಎತ್ತಿದ ಪ್ರತೀ ಪ್ರಶ್ನೆಗೂ ಉತ್ತರಿಸುತ್ತ, ಆತನ ಪ್ರತೀ ನಡೆಯನ್ನೂ ಟೀಕಿಸುತ್ತ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದರು. ಈ ಬಗೆಯ ಆಕ್ರೋಶ ಮೋದಿಯವರಲ್ಲಿ ದೆಹಲಿ ಚುನಾವಣೆಯ ಕಾಲಕ್ಕೆ ಕಂಡುಬಂದಿತ್ತು. ಅವರು ಆಗಲೇ ಕೇಜ್ರೀವಾಲರನ್ನು ನಿಂದಿಸುವ ಭಾಷಣಗಳನ್ನು ಮಾಡಿದ್ದು. ಸೋಲುವ ಹೆದರಿಕೆ ಬಂದಾಗಲೇ ಮೋದಿ ಆಕ್ರೋಶದ ಭಾಷಣ ಮಾಡೋದು. ಇಲ್ಲವಾದಲ್ಲಿ ಅವರು ಎದುರಾಳಿಗಳ ಕಾಲೆಳೆಯುತ್ತ ವ್ಯಂಗ್ಯ ಭರಿತ ಮೊನಚು ಮಾತುಗಳಿಂದ ಚುಚ್ಚುತ್ತ ಮಾತಿನುದ್ದಕ್ಕೂ ಮೆರೆದಾಡಿಬಿಡುತ್ತಾರೆ. ಚುನಾವಣೆಯ ಫಲಿತಾಂಶ ಅರಿಯಲು ನೀವು ಮೋದಿಯ ಭಾಷಣಗಳನ್ನು ಹತ್ತಿರದಿಂದ ಗಮನಿಸಿದರೆ ಸಾಕು, ಯಾವ ಎಕ್ಸಿಟ್ ಪೋಲೂ ಬೇಕಿಲ್ಲ.
ಎಬಿಪಿ ನ್ಯೂಸ್ ವರದಿ ಸುಳ್ಳಾಗಿರಲಿಲ್ಲ. ಆದರೆ ಪರಿಪೂರ್ಣ ಸತ್ಯವೂ ಅಲ್ಲ. ಆರಂಭದಲ್ಲಿ ಅವರೆಲ್ಲರ ಪ್ರಕಾರ ಬಿಜೇಪಿಯ ಗೆಲುವು ನಿಶ್ಚಯವಾಗಿತ್ತು. ಕಾಲಕ್ರಮದಲ್ಲಿ ಅದು ಕಡಿಮೆಯಾಗುತ್ತ ಬಂದು ಕಾಂಗ್ರೆಸ್ಸು ಮತ್ತು ಬಿಜೇಪಿಗಳ ನಡುವೆ ಸಮಾನ ಕದನವಿತ್ತು. ವಾಸ್ತವವಾಗಿ ಅದು ಉಲ್ಟಾ. ಆರಂಭದಲ್ಲಿ ಮೋದಿ ಪಾಳಯದ ವಿರುದ್ಧ ಜನಾಕ್ರೋಶ ಘನೀಭವಿಸಿತ್ತು. ಬರು ಬರುತ್ತ ಅದನ್ನು ಕಡಿಮೆ ಮಾಡುವಲ್ಲಿ ಮೋದಿ-ಶಾಹ್ ಜೋಡಿ ಯಶಸ್ವಿಯಾಯ್ತು. ಚುನಾವಣೆಗೆ ಟಿಕೇಟ್ ಹಂಚುವಲ್ಲಿಯೇ ಎಡವಟ್ಟು ಮಾಡಿಕೊಂಡಿತು ಕಾಂಗ್ರೆಸ್ಸು. ಯಾವಾಗಲೂ ಹಾಗೆಯೇ. ಗೆಲ್ಲುವುದು ಖಾತ್ರಿಯಿದೆ ಎಂದೆನಿಸಿದಾಗ ಆಕಾಂಕ್ಷಿಗಳು ಹೆಚ್ಚುತ್ತಾರೆ. ಎಲ್ಲರಿಗೂ ಸಮಾಧಾನ ಮಾಡುವುದು ಸುಲಭದ ಕೆಲಸವಲ್ಲ.ಹಾರ್ದಿಕ್ ಪಟೇಲ್ನೊಂದಿಗಿನ ಸಂಬಂಧವೂ ಸಾಕಷ್ಟು ತೊಂದರೆಗೀಡುಮಾಡಿತು. ಗುಜರಾತಿನಿಂದ ಹೊರಗೆ ಬಲುವಾಗಿ ಸದ್ದು ಮಾಡಿದ್ದ ಕಾಂಗ್ರೆಸ್ಸು ನೆಲ ಮಟ್ಟದಲ್ಲಿ ಎಲ್ಲ ಶಕ್ತಿಯನ್ನು ಕಳೆದುಕೊಂಡಿತು. ಪ್ರಚಾರಕ್ಕೆ ಜನ ಸಿಗದಾದರು. ಆಗ ಕಾಂಗ್ರೆಸ್ಸಿಗೆ ಸೋಲು ರಾಚಲಾರಂಭಿಸಿತು. ಹಾಗಂತ ಮೋದಿಯವರಿಗೆ ಗೆಲುವಿನ್ನೂ ಖಾತ್ರಿಯಾಗಿರಲಿಲ್ಲ. ಅವರು ಹುಚ್ಚಾಪಟ್ಟೆ ಪ್ರವಾಸ ಮಾಡಿದರು. ಈ ವಯಸ್ಸಿನಲ್ಲೂ ಅವರ ಜನಾಕರ್ಷಣೆಯ ರೀತಿ ಮೆಚ್ಚುವಂಥದ್ದೇ.
ಕಪಿಲ್ ಸಿಬಲ್ ಅಯೋಧ್ಯೆಯ ರಾಮಮಂದಿರದ ಬಗ್ಗೆ ಮಂಡಿಸಿದ ವಾದ ಗುಜರಾತಿನ ಬಿಜೇಪಿ ಪಾಳಯಕ್ಕೆ ವರದಾನವಾಯ್ತು. ಆರಂಭದಿಂದಲೂ ಹಿಂದುತ್ವದ ಕಾರ್ಡ್ ಬಳಸಿ ಕದನಕ್ಕಿಳಿದಿದ್ದ ಅವರಿಗೆ ಈಗ ನಿಜವಾದ ಹಿಡಿತ ದಕ್ಕಿತ್ತು. ಡಿಸೆಂಬರ್ ಆರರ ನಂತರ ಚುನಾವಣೆ ಇದ್ದದ್ದೂ ಸಾರ್ಥಕವೆನಿಸಿತ್ತು ಈಗ. ಅದರ ಹಿಂದು ಹಿಂದೆಯೇ ಮಣಿ ಶಂಕರ್ ಆಯ್ಯರ್ ಮೋದಿಯವರನ್ನು ನೀಚ ಎಂದು ಸಂಬೋಧಿಸಿದ್ದು ಕಾಂಗ್ರೆಸ್ಸಿನ ಪಾಲಿಗೆ ಶಾಪವಾಯ್ತು. ಮೋದಿ ತಮ್ಮ ಕೊನೆಯ ಭಾಷಣದಲ್ಲಿ ಈ ಅಂಶವನ್ನು ಉಲ್ಲೇಖಿಸುತ್ತ, ಇದು ಗುಜರಾತಿಗರಿಗೆ ಮಾಡಿದ ಅವಮಾನವೆಂದು ಮತ್ತೆ ಮತ್ತೆ ಉಲ್ಲೇಖಿಸಿ ‘ಗುಜರಾತಿ ಅಸ್ಮಿತೆ’ಯನ್ನು ಜಾಗೃತಗೊಳಿಸುವ ಪ್ರಯತ್ನ ಮಾಡುತ್ತಲೇ ಇದ್ದರು.ಕಪಿಲ್ ಸಿಬಲ್ ಮತ್ತು ಮಣಿಶಂಕರ್ ಅಯ್ಯರ್ ಇಡುಗಂಟಾಗಿ ದೊರೆಯದಿದ್ದರೆ ಈ ಬಾರಿಯ ಗುಜರಾತ್ ಚುನಾವಣೆ ಭಾಜಪಾಕ್ಕೆ ಸಲೀಸಾಗಿರಲಿಲ್ಲವೆನ್ನುವುದಂತೂ ಅಕ್ಷರಶಃ ಸತ್ಯ. ಇದು ಕರ್ನಾಟಕದ ಚುನಾವಣೆಗೆ ಹಿಡಿದ ಕೈಗನ್ನಡಿ. ಕಳೆದ ಆರೇಳು ತಿಂಗಳಿಂದೀಚೆಗೆ ಇಲ್ಲಿಯೂ ಮತ ಧ್ರುವೀಕರಣದ ಪ್ರಯಾಸ ನಡೆಯುತ್ತಲೇ ಇದೆ. ಆಳುವ ಪಕ್ಷ ಲಿಂಗಾಯತ, ವೀರಶೈವರ ನಡುವೆ ಬಿರುಕು ಮೂಡಿಸಿ ಒಂದೀಡೀ ಮತಬ್ಯಾಂಕನ್ನು ಒಡೆಯುವ ಹುನ್ನಾರ ನಡೆಸಿದ್ದರೆ ಅದಕ್ಕೆ ಪ್ರತಿಯಾಗಿ ಕೇಸರೀ ಪಾಳಯ ಮಾಲೆಗಳ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ನಿಮರ್ಿಸುತ್ತಿರುವ ಖೆಡ್ಡಾಕ್ಕೆ ಅನಾಯಾಸವಾಗಿ ಹೋಗಿ ಬೀಳುತ್ತಿದ್ದಾರೆ ಪ್ರತಿಪಕ್ಷಗಳ ಧುರೀಣರು. ಟಿಪ್ಪು ಜಯಂತಿ ಮುಖ್ಯಮಂತ್ರಿಗಳ ಮೊದಲ ದಾಳ. ಅನಂತ ಕುಮಾರ ಹೆಗಡೆ ಅದರ ಗುಂಗಿನಿಂದ ಇನ್ನೂ ಆಚೆಗೇ ಬಂದಿಲ್ಲ. ಪ್ರತಾಪ ಸಿಂಹ ಇದ್ದಕ್ಕಿದ್ದಂತೆ ಹನುಮ ಮಾಲೆಯತ್ತ ವಾಲಿಕೊಂಡಿದ್ದು ಕಾಂಗ್ರೆಸ್ಸಿಗೆ ಲಾಭವೇ ಆಯ್ತು. ಆತನನ್ನು ಜೈಲಿನಿಂದ ಬಿಡುಗಡೆಗೊಳಿಸಿದ ಮೇಲೆ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳ ಮುಖದಲ್ಲಿದ್ದ ಮಂದಹಾಸ ನೋಡಬೇಕಿತ್ತು. ಪ್ರತಾಪ್ ಸಿಂಹ ತಮ್ಮೊಂದಿಗ ಅಮಿತ್ ಶಾಹ್ರನ್ನೂ ಕಟಕಟೆಯಲ್ಲಿ ನಿಲ್ಲಿಸಿಕೊಂಡಿದ್ದರು. ಉಡುಪಿಯಲ್ಲಿ ನಡೆದ ಧರ್ಮ ಸಂಸತ್ತು ರಾಜ್ಯದ ಜನತೆಯ ಆಲೋಚನಾ ಪಥ ಬದಲಿಸಬೇಕಿತ್ತು; ಸಿದ್ದರಾಮಯ್ಯ ಚಂಪಾ ಬಳಸಿ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿಕೆ ಕೊಡಿಸಿಬಿಟ್ಟರು. ಪ್ರತಿ ಪಕ್ಷಗಳು ಧರ್ಮಸಂಸತ್ತಿನ ಲಾಭ ಪಡೆಯುವುದು ಬಿಟ್ಟು ಚಂಪಾ ಹೇಳಿಕೆಗೆ ಪ್ರತಿಕ್ರಿಯಿಸುತ್ತ ಉಳಿದುಬಿಟ್ಟವು. ಮತ್ತೊಮ್ಮೆ ಗೆದ್ದಿದ್ದು ಮುಖ್ಯಮಂತ್ರಿಗಳೇ.ಸಿದ್ದರಾಮಯ್ಯನವರನ್ನು ಈಗ ಎದುರಿಸಬೇಕಿರೋದು ಜಾತಿಯ ರಾಜಕಾರಣದ ಬಲದಿಂದಲ್ಲ. ಅವರು ಇಡಿಯ ರಾಜಕಾರಣವನ್ನು ಅದೇ ಆಧಾರದ ಮೇಲೇಯೇ ಮಾಡಿಕೊಂಡು ಬಂದಿರೋದು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರಿಗಳ ಸಾವು, ಶೂನ್ಯ ವಿಕಾಸ ಇವುಗಳನ್ನಿಟ್ಟುಕೊಂಡು ಹೋರಾಟ ಮಾಡಬೇಕು. ಭ್ರಷ್ಟಾಚಾರದಲ್ಲಿ ಹೆಸರು ಕೆಡಿಸಿಕೊಳ್ಳದ, ಜನರೊಂದಿಗೆ ಬೆರೆಯ ಬಲ್ಲ ನಾಯಕರು ಇದಕ್ಕೆ ಮುಂದೆ ನಿಂತರೆ ಒಳಿತು. ಆಗ ಮಾತ್ರ ಕರ್ನಾಟಕದಲ್ಲಿ ಹೊಸದೊಂದು ಅಲೆ ಕಾಣಲು ಸಾಧ್ಯ. ಇಲ್ಲವಾದಲ್ಲಿ ಮೋದಿ ಪಾಳಯಕ್ಕೆ ಇಲ್ಲಿ ನಿರೀಕ್ಷಿತ ಫಲಿತಾಂಶ ದಕ್ಕೋದು ಬಲು ಕಷ್ಟವೇ ಇದೆ. ಕಾಂಗ್ರೆಸ್ಸು ತನ್ನ ರಣನೀತಿಯನ್ನು ಬದಲಾಯಿಸಿಕೊಂಡಿದೆ. ಅದೀಗ ಹಿರಿಯರ ಪಕ್ಷವೆಂಬ ಹಣೆಪಟ್ಟಿ ಕಳಚಿಕೊಂಡು ತರುಣರ ಪಂಗಡ ಕಟ್ಟುವ ಪ್ರಯತ್ನದಲ್ಲಿದೆ. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಅವರಿಡುತ್ತಿರುವ ಒಂದೊಂದು ನಡೆಯೂ ಎಂಥವರನ್ನೂ ಯೋಚಿಸುವಂತೆ ಮಾಡಬಲ್ಲವು. ಹೀಗಿರುವಾಗ ಹುಚ್ಚುಚ್ಚಾಗಿ ರಂಪಾಟ ಮಾಡಿಕೊಳ್ಳುವುದನ್ನು ಬಿಟ್ಟು ಒಮ್ಮುಖವಾಗಿ ಎದುರಿಸುವ ಸವಾಲನ್ನು ಸ್ವೀಕರಿಸಬೇಕಷ್ಟೇ. ಒಟ್ಟಾರೆ ಗುಜರಾತಿನಲ್ಲಿ ಮಾಡಿದ ತಪ್ಪನ್ನು ಕನರ್ಾಟಕದಲ್ಲಿ ಮಾಡಬಾರದಷ್ಟೇ. ಏಕೆಂದರೆ ಎಲ್ಲಾ ಚುನಾವಣೆಗಳಿಗೂ ಕಪಿಲ್ ಸಿಬಲ್ ಮತ್ತು ಮಣಿಶಂಕರ್ ಅಯ್ಯರ್ರಂತಹ ಪುಣ್ಯಾತ್ಮರು ಸಹಾಯಕ್ಕೆ ಬರೋಲ್ಲ. ಏನಂತೀರಾ?
Leave A Reply