ಪಾಕಿಸ್ತಾನದಿಂದ ಹಣ ಪಡೆದ ಆರೋಪ, ಗೀಲಾನಿ ಪುತ್ರನಿಗೆ ಎನ್ಐಎ ಸಮನ್ಸ್
ಶ್ರೀನಗರ: ಉಗ್ರ ಚಟುವಟಿಕೆಗೆ ಪ್ರೋತ್ಸಾಹ ನೀಡಲು ಪಾಕಿಸ್ತಾನದಿಂದ ಹಣ ಪಡೆದ ಆರೋಪದಲ್ಲಿ ಹುರ್ರಿಯತ್ ಮುಖ್ಯಸ್ಥ ಸಯ್ಯದ್ ಶಾ ಗೀಲಾನಿ ಕುಟುಂಬಕ್ಕೆ ಮತ್ತೆ ರಾಷ್ಟ್ರೀಯ ತನಿಖಾ ಸಂಸ್ಥೆ ಶಾಕ್ ನೀಡಿದೆ.
ಪಾಕಿಸ್ತಾನದಿಂದ ಹಣ ಪಡೆದ ಆರೋಪದಲ್ಲಿ ಗೀಲಾನಿಯ ಕಿರಿಯ ಪುತ್ರ ನಾಸೀಂ ಗೀಲಾನಿಗೆ ಎನ್ಐಎ ಸಮನ್ಸ್ ಜಾರಿಗೊಳಿಸಿದೆ. ಅಲ್ಲದೆ ವಿಚಾರಣೆಗಾಗಿ ದೆಹಲಿಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ಉಲ್ಲೇಖಿಸಿದೆ.
ಶ್ರೀನಗರದ ಶೇರ್ ಏ ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾಸೀಂ ಗೀಲಾನಿ ಸಹ ಪಾಕಿಸ್ತಾನದಿಂದ ಹಣ ಪಡೆದ ಆರೋಪ ಎದುರಿಸುತ್ತಿದ್ದು, ಮುಂದಿನ ವಾರವೇ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ.
ಈಗಾಗಲೇ ನಾಸೀಂ ಹಾಗೂ ಈತನ ಅಣ್ಣ ನಯೀಮ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಎರಡು ಬಾರಿ ವಿಚಾರಣೆ ನಡೆಸಿದೆ. ಈಗ ಮೂರನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಕಳೆದ ಮೇ ತಿಂಗಳಿನಿಂದಲೂ ಕಾಶ್ಮೀರದಲ್ಲಿ ಉಗ್ರರಿಂದ ಹಣ ಪಡೆದು ಉಗ್ರ ಚಟುವಟಿಕೆಗೆ ನೀಡಿದ ಆರೋಪದಲ್ಲಿ ಸೈಯದ್ ಶಾ ಗೀಲಾನಿ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಜೂನ್ ನಿಂದ ಹಲವರನ್ನು ತನಿಖೆಗೆ ಒಳಪಡಿಸುತ್ತಿದೆ. ಇದೇ ಪ್ರಕರಣದಲ್ಲಿ ಕಳೆದ ನವೆಂಬರ್ ಏಳರಂದು 9 ಜನರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರಲ್ಲದೆ, 36.5 ಕೋಟಿ ರೂಪಾಯಿ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದರು.
Leave A Reply