ಪೊಲೀಸ್ ಪೇದೆಗೆ ಹೊಡೆದ ಕಾಂಗ್ರೆಸ್ ಶಾಸಕಿ ವಿರುದ್ಧ ಪ್ರಕರಣ ದಾಖಲು!
ಶಿಮ್ಲಾ: ಕರ್ತವ್ಯ ನಿರತ ಪೊಲೀಸ್ ಮಹಿಳಾ ಪೇದೆಯ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಹಿಮಾಚಲ ಪ್ರದೇಶ ಕಾಂಗ್ರೆಸ್ ನಾಯಕಿ ಹಾಗೂ ಶಾಸಕಿ ಆಶಾಕುಮಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶಿಮ್ಲಾಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದ್ದು, ಈ ವೇಳೆ ಕಾಂಗ್ರೆಸ್ ಕಚೇರಿ ಒಳಪ್ರವೇಶಿಸಲು ಆಶಾ ಯತ್ನಿಸಿದ್ದು, ಆಗ ತಡೆದಿದ್ದೇನೆ. ಆದರೆ ಇದರಿಂದ ಕುಪಿತರಾದ ಶಾಸಕಿ ನನಗೆ ಹಲ್ಲೆ ಮಾಡಿದ್ದಾರಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೇದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೇದೆ ನೀಡಿದ ದೂರಿನ ಅನ್ವಯ ಆಶಾ ಕುಮಾರಿ ವಿರುದ್ಧ ಭಾರತೀಯ ದಂಡ ಸಂಹಿತೆ 353 ಮತ್ತು 332 (ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿ ಮೇಲೆ ಹಲ್ಲೆ ಮಾಡುವುದು ಅಪರಾಧ) ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಶಾ ಕುಮಾರಿ ಅವರ ಕ್ರಮವನ್ನು ಖಂಡಿಸಿದ್ದಾರೆ. ಶಾಸಕಿ ಆಶಾ ಕುಮಾರಿ ಮಾಡಿರುವುದು ಸರಿಯಲ್ಲ, ಇದು ಸಿಟ್ಟು ಹೊರಹೊಮ್ಮಿಸುವ ಕ್ರಮವಲ್ಲ. ಒಬ್ಬರ ಮೇಲೆ ಕೈ ಎತ್ತುವ ಹಕ್ಕು ಯಾರಿಗೂ ಇಲ್ಲ, ಇದು ಕಾಂಗ್ರೆಸ್ಸಿನ ಸಂಸ್ಕೃತಿಯೂ ಅಲ್ಲ” ಎಂದು ಹೇಳಿದ್ದಾರೆ.
ಈ ಕುರಿತು ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆಶಾ ಕುಮಾರಿ ಪೇದೆಯ ಕ್ಷಮೆ ಕೇಳಿದ್ದು, ನಾನು ಕಚೇರಿ ಪ್ರವೇಶಿಸುವಾಗ ಪೇದೆ ತಳ್ಳಿದ್ದಾರೆ. ಇದರಿಂದ ನನ್ನ ಕೋಪ ತಡೆದುಕೊಳ್ಳದೆ ಹೊಡೆದೆ. ಈ ಕುರಿತು ವಿಷಾದವಿದೆ” ಎಂದಿದ್ದಾರೆ.
Leave A Reply