ಶಾಂತಿ ಬೀಡು ಕರ್ನಾಟಕವನ್ನು, ಕಾಂಗ್ರೆಸ್ ಅಶಾಂತಿಯ ಬೀಡು ಮಾಡಿದೆ: ಯೋಗಿ ಆದಿತ್ಯನಾಥ್
ಬೆಂಗಳೂರು: ಶಾಂತಿ ಸುವ್ಯವಸ್ಥೆಗೆ ಹೆಸರಾಗಿದ್ದ ಕರ್ನಾಟಕ ಕಳೆದ ನಾಲ್ಕು ವರ್ಷದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿ, ಕಾಂಗ್ರೆಸ್ ಭಾರತಕ್ಕೆ ಸಮಸ್ಯೆಯಾಗಿ ಕಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 10 ತಿಂಗಳಲ್ಲಿ ಒಂದೂ ಕೋಮು ಗಲಭೆ ನಡೆದಿಲ್ಲ. ಆದರೆ ಕರ್ನಾಟದಲ್ಲಿ ಇದುವರೆಗೆ 20 ಕ್ಕಿಂತ ಹೆಚ್ಚು ಹಿಂದೂಗಳ ಹತ್ಯೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ಡಿಜಿಟಲ್ ಇಂಡಿಯಾ, ಸ್ಟಾಟ್ ಅಪ್, ಸ್ಟ್ಯಾಂಡ್ ಅಪ್ ಯೋಜನೆಯಿಂದ ಎಲ್ಲ ವರ್ಗದ ಯುವಕರಿಗೆ ಭಾರಿ ಉಪಯೋಗವಾಗುತ್ತಿದೆ. ಅದನ್ನು ಕರ್ನಾಟಕದ ಯುವಕರಿಗೆ ತಲುಪಿಸಬೇಕು, ಕೇಂದ್ರದ ಪ್ರತಿ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕರ್ನಾಟಕ ಸರ್ಕಾರ ವಿಫಲವಾಗಿದೆ ಎಂದು ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನೀಡಿದ್ದು ಅಟಲ್ ಜೀ..
ಐಟಿ, ಬಿಟಿ ಖ್ಯಾತಿಯ ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೀಡಿದವರು ಅಟಲ್ ಬಿಹಾರಿ ವಾಜಪೇಯಿ. ಪ್ರಸ್ತುತ ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಮಾನ್ಯತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ. ಆದರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಮಾನ ಮರ್ಯಾದೆ ಹಾಳು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಘೋರಖನಾಥ, ಮಂಜುನಾಥ, ಆದಿಚುಂಚನಗಿರಿಯ ಬೈರವನಾಥ ಎಲ್ಲರೂ ಒಂದೇ..!
ಸೀತಾ ಮಾತೆಯನ್ನು ಹುಡುಕಲು ಭಗವಾನ್ ಶ್ರೀರಾಮಚಂದ್ರನಿಗೆ ಸಹಾಯ ಮಾಡಿದ ಹನುಮಂತ ಜನ್ಮಿಸಿದ ಪುಣ್ಯ ಭೂಮಿ ಕರ್ನಾಟಕ. ನಮ್ಮ ಘೋರಕನಾಥ್ ಪೀಠ ಕರ್ನಾಟಕದೊಂದಿಗೆ ಸಂಬಂಧವನ್ನು ಹೊಂದಿದೆ. ಕರ್ನಾಟಕದ ಮಂಜುನಾಥನೆ ಘೋರಕಪುರದ ಘೋರಕನಾಥ, ಇನ್ನು ಆದಿ ಚುಂಚನಗಿರಿಯ ಬೈರವನಾಥನೂ ಘೋರಕನಾಥನ ರೂಪವೇ. ನಾವೆಲ್ಲರೂ ಒಂದೇ ಎಂದು ಹೇಳಿದರು.
ನರೇಂದ್ರ ಮೋದಿ ಸರ್ಕಾರ ದೇಶಾದ್ಯಂತ ನೂತನ ಯೋಜನೆಗಳ ಮೂಲಕ ಸರ್ವ ಜನಾಂಗದ ಅಭಿವೃದ್ಧಿ ಮಾಡುತ್ತಿದೆ. ಅದರಿಂದಲೇ ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಗುಜರಾತ್ ಇಂದು ಅಭಿವೃದ್ಧಿ ಮೂಲಕ ರಾಷ್ಟ್ರಾದ್ಯಂತ ಗಮನಸೆಳೆದು, 6ನೇ ಬಾರಿ ವಿಜಯ ಸಾಧಿಸಿದೆ.
ಮಹಿಳಾ ಸಬಲೀಕರಣದ ವಿರೋಧಿ ಕಾಂಗ್ರೆಸ್..!
ಕಾಂಗ್ರೆಸ್ ಮಹಿಳಾ ಸಬಲೀಕರಣದ ವಿರೋಧಿ ಎಂಬುದು ಪದೇ ಪದೆ ಸಾಬೀತಾಗುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ಮುಸ್ಲಿಂ ಮಹಿಳೆಯರಿಗೆ ಪೀಡಕವಾಗಿರುವ ತ್ರಿವಳಿ ತಲಾಖ್ ಮಸೂದೆ ಜಾರಿಗೆ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್ ಗೆ ಜನಸಾಮಾನ್ಯರು ಸಬಲೀಕರಣವಾಗುವುದು ಇಷ್ಟವಿಲ್ಲ. ಆದ್ದರಿಂದಲೇ ಮುಸ್ಲಿಂ ಮಹಿಳೆಯರಿಗೆ ಅನುಕೂಲವಾದ ತ್ರಿವಳಿ ತಲಾಖ್ ಮಸೂದೆಯನ್ನು ವಿರೋಧಿಸಿ ಮಹಿಳಾ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಧಕ್ಕೆ ತಂದಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
Leave A Reply