ರಾಜಸ್ಥಾನದಲ್ಲಿ ಪದ್ಮಾವತ್ ಸಿನಿಮಾ ಬಿಡುಗಡೆಯಾಗಲ್ಲ ಎಂದ ಸಿಎಂ
ಜೈಪುರ: ಸಂಜಯ್ ಲೀಲಾ ಬನ್ಸಾಲಿಯ ವಿವಾದಿತ ಪದ್ಮಾವತ್ ಚಿತ್ರ ಬಿಡುಗಡೆಗೆ ಸೆನ್ಸಾರ್ ಮಂಡಳಿ ದಿನಾಂಕ ನಿಗದಿಪಡಿಸಿದರು ಸಹ ಬಿಡುಗಡೆಗೆ ಮಾತ್ರ ವಿರೋಧ ವ್ಯಕ್ತವಾಗುತ್ತಲೇ ಇದೆ.
ಯು/ಎ ಸರ್ಟಿಫಿಕೇಟ್ ನೀಡಿ ಜನವರಿ 25ರಂದು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಪಡಿಸಿದರೂ ರಜಪೂತರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ರಾಜಸ್ಥಾನ ಸಿಎಂ ವಸುಂಧರಾ ರಾಜೆ ಅವರು ಸಹ ಸಿನಿಮಾ ಬಿಡುಗಡೆಗೊಳಿಸಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಸಿನಿಮಾ ಬಿಡುಗಡೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ರಾಣಿ ಪದ್ಮಿನಿ ತ್ಯಾಗದ ಸಂಕೇತ, ಅವರು ರಾಜ್ಯದ ಹೆಮ್ಮೆ. ರಾಣಿ ಪದ್ಮಿನಿ ನಮಗೆ ಪರೀ ಪುಸ್ತಕದ ಒಂದು ಅಧ್ಯಾಯವಲ್ಲ, ನಮ್ಮ ಗೌರವದ ಪ್ರತೀಕ. ಹಾಗಾಗಿ ಪದ್ಮಿನಿಯ ಗೌರವಕ್ಕೆ ಧಕ್ಕೆ ತರಲು ನಾವು ಬಿಡುವುದಿಲ್ಲ. ಆದ್ದರಿಂದ ರಾಜ್ಯದಲ್ಲಿ ಸಿನಿಮಾ ಬಿಡುಗಡೆಗೊಳಿಸಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಸಿನಿಮಾದಲ್ಲಿ ಪದ್ಮಿನಿಯನ್ನು ವಿಕ್ಷಿಪ್ತವಾಗಿ ಹಾಗೂ ವಾಸ್ತವಕ್ಕೆ ವಿರುದ್ಧವಾಗಿ ಚಿತ್ರಿಸಲಾಗಿದೆ ಎಂದು ತಿಳಿದುಬಂದಿದೆ. ಇದರಿಂದ ಸಮುದಾಯದವರ ಭಾವನೆಗೆ ಧಕ್ಕೆಯಾಗುತ್ತದೆ. ಹಾಗಾಗಿ ರಾಜ್ಯದ ಯಾವುದೇ ಸಿನಿಮಾ ಮಂದಿರದಲ್ಲೂ ಚಿತ್ರ ಬಿಡುಗಡೆಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರಂಭದಿಂದಲೂ ಸಿನಿಮಾಗೆ ವಿರೋಧ ವ್ಯಕ್ತವಾಗಿತ್ತು. ಅದರಲ್ಲೂ ರಜಪೂತರು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು. ಮೊದಲು ಡಿಸೆಂಬರ್ 1ರಂದು ಸಿನಿಮಾ ಬಿಡುಗಡೆಗೆ ತೀರ್ಮಾನ ಮಾಡಲಾಗಿತ್ತಾದರೂ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಈಗ ಸೆನ್ಸಾರ್ ಮಂಡಳಿ ದಿನಾಂಕ ನಿಗದಿಪಡಿಸಿದರೂ ವಿರೋಧ ಮಾತ್ರ ನಿಂತಿಲ್ಲ.
Leave A Reply