ನವಕರ್ನಾಟಕದ ಆಸೆ ತೋರಿಸುವ ಬಿಜೆಪಿಯವರು ಪ್ರಣಾಳಿಕೆಯಲ್ಲಿ ಅಳವಡಿಸಲೇಬೇಕಾದ ಅಂಶಗಳು!!

ಭ್ರಷ್ಟಾಚಾರ ನಿಲ್ಲಬೇಕು ಎಂದು ಹೆಚ್ಚಿನ ಭಾಷಣಕಾರರು ನವಕರ್ನಾಟಕದ ವೇದಿಕೆಯಲ್ಲಿ ನಿಂತು ಹೇಳಿದ್ರು. ನನ್ನ ಸರದಿ ಬಂದಾಗ ನಾನು ಕೇಳಿದ್ದ ಮೊದಲ ಪ್ರಶ್ನೆನೆ ಅದು, ಭ್ರಷ್ಟಾಚಾರ ನಿಲ್ಲಬೇಕು ಎಂದು ಹೇಳುವ ಎಷ್ಟು ಜನ ಲಂಚ ಕೊಡದೆ ನಿಮ್ಮ ಕೆಲಸ ಸರಕಾರಿ ಇಲಾಖೆಗಳಲ್ಲಿ ಮಾಡಿಸಿದ್ರಿ? ವೇದಿಕೆ ಮತ್ತು ಮೈಕ್ ಸಿಕ್ಕಿದ ತಕ್ಷಣ ಭ್ರಷ್ಟಾಚಾರ ನಿಲ್ಲಬೇಕು ಎಂದು ಹೇಳುವವರು ಕೇವಲ ಚಪ್ಪಾಳೆ ಗಿಟ್ಟಿಸಬಹುದೇ ವಿನ: ಬೇರೆ ಏನೂ ಮಾಡುವುದಿಲ್ಲ. ಅವರ ಕೆಲಸ ಆಗಬೇಕಾದರೆ ಅವರು ಕೂಡ ಹುಡುಕುವುದು ಯಾವುದಾದರೂ ಬ್ರೋಕರ್ ಅನ್ನೇ. ಅವನಿಗೆ ಇಂತಿಷ್ಟು ಕೊಟ್ಟು ಆ ಮೂಲಕ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ. ಒಂದು ವೇಳೆ ಇವರೇ ಹೋದರೂ ಹಣ ಕೊಟ್ಟೇ ಮಾಡಿಸಿ ತೆಪ್ಪಗೆ ಬಂದುಬಿಡುತ್ತಾರೆ. ಹೊರಗೆ ಬಂದ ಕೂಡಲೇ ಭ್ರಷ್ಟಾಚಾರ ನಿಲ್ಲಬೇಕು ಎನ್ನುತ್ತಾರೆ. ನಾಲ್ಕು ಜನ ಬಿಲ್ಡರ್ ಗಳು ನಾವು ಒಂದು ಪೈಸೆ ಕೂಡ ಲಂಚ ಕೊಡುವುದಿಲ್ಲ, ನಮ್ಮ ಕೆಲಸ ಯಾಕೆ ಆಗುವುದಿಲ್ಲ ಎಂದು ನೋಡಿಕೊಳ್ಳುತ್ತೇವೆ ಎಂದು ಪಾಲಿಕೆಯ ಕಾರಿಡಾರ್ ನಲ್ಲಿ ಆವಾಝ್ ಹಾಕಲಿ ನೋಡೋಣ, ಲಂಚ ತೆಗೆದುಕೊಳ್ಳುವವರು ಕೂಡ ಹೆದರುತ್ತಾರೆ. ಪಾಲಿಕೆಯ ಆರವತ್ತು ಸದಸ್ಯರಲ್ಲಿ ಕಮೀಷನ್ ತೆಗೆದುಕೊಳ್ಳದೆ ಕೆಲಸ ಮಾಡುವ ಕಾರ್ಪೋರೇಟರ್ ನ ಫೋಟೋ ಹಾಕಿ ಫ್ಲೆಕ್ಸ್ ಮಾಡಿ ರಸ್ತೆ ಬದಿಯಲ್ಲಿ ಹಾಕುವ ಸ್ಥಳೀಯ ಸಂಘಸಂಸ್ಥೆಗಳು ಇವರು ಕಮೀಷನ್ ಒಂದು ಪೈಸೆ ಕೂಡ ತೆಗೆದುಕೊಳ್ಳದೆ ಕಾಮಗಾರಿ ಒಳ್ಳೆಯದು ಮಾಡಿದ್ದಾರೆ ಎಂದು ಕೂಡ ಬರೆಯಬೇಕು. ಆಗ ಬೇರೆಯವರಿಗೆ ಸ್ಫೂರ್ತಿ ಬಂದು ನಮಗೂ ಕಮೀಷನ್ ಬೇಡಾ ಎಂದು ಹೇಳಬಹುದೇನೋ. ಬಿಜೆಪಿಯ ನವಕರ್ನಾಟಕ ನಿರ್ಮಾಣ ಆಗಬೇಕಾದರೆ ಭ್ರಷ್ಟಾಚಾರ ನಿಲ್ಲಬೇಕು ಎಂದು ಯಾರಾದರೂ ಹೇಳಿದರೆ ನೀನು ಲಂಚ ಕೊಡದೆ ಎಷ್ಟು ಕೆಲಸ ಮಾಡಿರುವೆ ಎಂದು ಕೇಳಿ ನೋಡಿ. ಅವನ ಎದೆಯಲ್ಲಿ ಸಾಸಿವೆ ಕುಟ್ಟಿದಂತೆ ಆಗದಿದ್ದರೆ ಕೇಳಿ.
ಇನ್ನು ಸರಕಾರಿ ಶಾಲೆ, ಕಾಲೇಜುಗಳು ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಅಭಿವೃದ್ಧಿಯಾಗಬೇಕು, ಆಗ ನವಕರ್ನಾಟಕ ನಿರ್ಮಾಣ ಆಗುತ್ತೆ ಎಂದು ಯಾರೋ ಹೇಳಿದರು. ಅದಕ್ಕೆ ನಾನು ಹೇಳಿದೆ- ಎಲ್ಲಿಯ ತನಕ ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವುದಿಲ್ಲವೋ ಅಲ್ಲಿಯ ತನಕ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಸರಕಾರಿ ಶಾಲೆ, ಕಾಲೇಜು ಅಭಿವೃದ್ಧಿಯಾಗುವುದಿಲ್ಲ. ಯಾಕೆಂದರೆ ನಮ್ಮ ಶಾಸಕರು, ಸಚಿವರು ಸರಕಾರಿ ಶಾಲೆಯ ಮುಖ ನೋಡುವುದೇ ವರ್ಷಕ್ಕೆ ಒಂದು ಸಲ ಶಾಲೆಯ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕರೆದಾಗ ಮಾತ್ರ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ದಶಕದ ಹಿಂದಿನ ಓಲ್ಡ್ ಡೈಲಾಗ್ ಹೇಳಿ ಅದಕ್ಕೆ ಮಕ್ಕಳಿಂದ ಚಪ್ಪಾಳೆ ಗಿಟ್ಟಿಸಿ ನಂತರ ಧೂಳು ಹಿಡಿದ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಕುಳಿತು ಹತ್ತಿರದ ಹೋಟೇಲಿನಿಂದ ತರಿಸಿದ ಕಾಫಿ ಕುಡಿದು ಅಂಬಡೆ ಒಂದು ಸಾಕು, ಎಣ್ಣೆದಲ್ವಾ ಎಂದು ಹೇಳಿ ಕೈ ತೊಳೆದು ಬಂದರೆ ಅದೇ ಶಾಸಕ ಅಥವಾ ಸಚಿವರು ಅದೇ ಶಾಲೆಗೆ ಹೋಗುವುದು ಮುಂದಿನ ವರ್ಷದ ವಾರ್ಷಿಕೋತ್ಸವಕ್ಕೆ. ಹಾಗಿರುವಾಗ ಶಾಲೆಗಳು ಹೇಗೆ ಅಭಿವೃದ್ಧಿಯಾಗುತ್ತವೆ. ಸರಕಾರ ಒಂದು ಕಾನೂನು ತಂದು ವೋಟಿಗೆ ನಿಂತ ವ್ಯಕ್ತಿ ಗೆದ್ದ ಕೂಡಲೇ ಅವನಿಗೆ ಶಾಸಕತ್ವದ ಪ್ರಮಾಣಪತ್ರ ಕೊಡಬೇಕಾದರೆ ಅವನು ತನ್ನ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿದ ದಾಖಲೆಯನ್ನು ವಿಧಾನಸೌಧದಲ್ಲಿರುವ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಬೇಕು ಎಂದು ಹೇಳಿ ನೋಡೋಣ, ಆಗ ಮೊದಲು ಆದೇಶ ಹೋಗುವುದೇ ಸರಕಾರಿ ಶಾಲೆಗಳ ಟೀಚರಿಗೆ ” ಪೇಂಟ್ ಹೊಡೆಸಿ”. ಅಂತಹ ಕಾನೂನು ಮಾಡದಿದ್ದರೆ ಯಾರೂ ಅಧಿಕಾರಕ್ಕೆ ಬಂದರೂ ಬರಿ ನಾಟಕವೇ ಆಗುತ್ತದೆ. ಮುಂದಿನ ಬಾರಿ ಅಧಿಕಾರಕ್ಕೆ ಬರುತ್ತೇವೆ ಎಂದು ಮುಂಡಾಸು ತಯಾರು ಮಾಡಿಕೊಂಡಿರುವ ಬಿಜೆಪಿಯವರಿಂದಲೇ ಈ ಅಭಿಯಾನ ಪ್ರಾರಂಭವಾಗಲಿ. ಅಮಿತ್ ಶಾ ತಮ್ಮ ಪ್ರಣಾಳಿಕೆಯಲ್ಲಿ ” ಹಮ್ ಸತ್ತಾ ಮೇ ಆಯೆತೋ ಹಮಾರಾ ಸಬಿ ಶಾಸಕ್ ಗಣ ಕಾ ಬಚ್ಚೇ ಲೋಗ್ ಸರಕಾರಿ ಶಾಲಾ ಮೇ ದಾಖಿಲ್ ಹೋಂಗೇ” ಎಂದು ಹೇಳಿ ನೋಡೋಣ. ಆಗುತ್ತಾ?
ಇನ್ನು ಕೆಲವರು ಸರಕಾರಿ ಆಸ್ಪತ್ರೆಗಳು ಅಭಿವೃದ್ಧಿಯಾಗಬೇಕು ಬಿಜೆಪಿ ಸರಕಾರ ಬಂದರೆ ಎನ್ನುವುದನ್ನು ಹೇಳಿದರು. ಅದಕ್ಕೂ ಮೇಲಿನದೇ ನಿಯಮ ಅನ್ವಯಿಸುತ್ತದೆ. ಯಾವುದೇ ಶಾಸಕ, ಸಚಿವ, ಸರಕಾರಿ ಅಧಿಕಾರಿ ಅಸ್ವಸ್ಥ ಆದರೆ ಅವನಿಗೆ ಮಂಗಳೂರು ಆದರೆ ವೆನ್ ಲಾಕ್ ಹಾಗೆ ಆಯಾಯಾ ಜಿಲ್ಲೆಯ ಸರಕಾರಿ ಆಸ್ಪತ್ರೆಗಳೇ ಚಿಕಿತ್ಸೆ ಕೊಡಬೇಕು ಎಂದು ಕಾನೂನು ತನ್ನಿ ನೋಡೋಣ, ಆಗ ಎಲ್ಲಾ ಸರಕಾರಿ ಆಸ್ಪತ್ರೆಗಳು ಕೂಡ ಹೊಸ ಬಟ್ಟೆ ತೊಟ್ಟು ತಯಾರಾಗುತ್ತವೆ. ಮಾಡ್ತಿರಾ ಅಮಿತ್ ಶಾ? ಕಾಂಗ್ರೆಸ್ ಅಂತೂ ಮಾಡಿಲ್ಲ, ಬಿಡಿ, ನೀವು ನಮಗೆ ನವಕರ್ನಾಟಕದ ಆಸೆ ತೋರಿಸುವವರು, ಇದನ್ನು ಪ್ರಣಾಳಿಕೆಯಲ್ಲಿ ಹಾಕಿಬಿಡಿ. ಮೊದಲು ಪ್ರಣಾಳಿಕೆ ಸಮಿತಿಯಲ್ಲಿ ಇರುವವರು ಸರಕಾರಿ ಶಾಲೆ ಅಥವಾ ಆಸ್ಪತ್ರೆಯ ಮುಖ ನೋಡಿದ್ದಾರಾ ಕೇಳಿ.
ಇನ್ನು ವಾರ್ಡ್ ಕಮಿಟಿ. ಹಮ್ ಜೀತ್ ಗಯೇ ತೋ ಹರ್ ಏಕ್ ಪಾಲಿಕಾ ಮೇ ವಾರ್ಡ್ ಕಮಿಟಿ ಬನಾಯೇಂಗೇ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹೇಳಲಿ. ಈ ಬಾರಿ ಹೇಳುವುದು ಮಾತ್ರವಲ್ಲ, ಮಾಡಿ ತೋರಿಸಬೇಕು. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಇಪ್ಪತ್ತು ಸದಸ್ಯರಿದ್ದಾರೆ. ಅವರು ವಾರ್ಡ್ ಕಮಿಟಿ ಆಗುವ ತನಕ ನಾವು ಅಖಂಡ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ನಾಳೆನೆ ಘೋಷಿಸಲಿ. ಹಾಗೆ ಮಾಡಲು ಬಿಜೆಪಿಯ ರಾಷ್ಟ್ರೀಯ ನಾಯಕರು ಸೂಚನೆ ಕೊಡಲಿ. ” ಆಪ್ ಲೋಗ್ ಉಪವಾಸ್ ಮೇ ಬೈಟಿಯೇ ವಾರ್ಡ್ ಕಮಿಟಿ ಹೋನೆ ತಕ್” ಎಂದು ಅಮಿತ್ ಶಾ ಹೇಳಲಿ. ಬಿಜೆಪಿ ಸದಸ್ಯರು ಈ ವಿಷಯದಲ್ಲಿ ಬಾಯಿಗೆ ಅವಲಕ್ಕಿ ಹಾಕಿ ಕುಳಿತುಕೊಂಡ ಕಾರಣ ಇವತ್ತಿಗೂ ಪಾಲಿಕೆಯಲ್ಲಿ ವಾರ್ಡ್ ಕಮಿಟಿ ಆಗಿಲ್ಲ. ಮತ್ತೆ ಹೇಳ್ತಿನಿ, ಕಾಂಗ್ರೆಸ್ ವಾರ್ಡ್ ಕಮಿಟಿ ಮಾಡೋದಿಲ್ಲ ಎನ್ನುವುದು ಗ್ಯಾರಂಟಿ. ಆದರೆ ಬಿಜೆಪಿ ಸದಸ್ಯರು “ಪಾರ್ಟಿ ವಿದ್ ಡಿಫರೆನ್ಸ್” ಅಲ್ವಾ, ಫೆಭ್ರವರಿ ಒಂದರಿಂದ ವಾರ್ಡ್ ಕಮಿಟಿ ಆಗುವ ತನಕ ಉಪವಾಸ ಎಂದು ಸುದ್ದಿಗೋಷ್ಟಿ ಇವತ್ತು ಮಾಡಲಿ, ನವಕರ್ನಾಟಕ ಕಾಣಲು ಶುರುವಾಗುತ್ತದೆ.