ನಾನು ಹೇಳಿದ ಪಾಯಿಂಟ್ ಗಳನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳದಿದ್ದರೆ ನನಗೇನೂ ನಷ್ಟವಿಲ್ಲ!
ನಾನು ನಿನ್ನೆ ಹೇಳಿದ ಪಾಯಿಂಟ್ ಅನ್ನು ಭಾರತೀಯ ಜನತಾ ಪಾರ್ಟಿಯವರು ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸುತ್ತಾರೋ, ಇಲ್ಲವೋ. ಒಟ್ಟಿನಲ್ಲಿ ಯಾರಾದರೂ ಅದನ್ನು ಸಂಬಂಧಪಟ್ಟವರಿಗೆ “ಸಂತೋಷ”ದಿಂದ ಕಳುಹಿಸಿಕೊಟ್ಟರೆ ಅಷ್ಟೇ ಸಾಕು. ಸರಕಾರಿ ಆಸ್ಪತ್ರೆಗಳಲ್ಲಿಯೇ ಶಾಸಕರು, ಸಚಿವರು, ಅಧಿಕಾರಿಗಳು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ನಿಯಮ ಜಾರಿಗೆ ತಂದರೆ ಕೆಮ್ಮಿಗೆ ಸಿಂಗಾಪುರ, ಶೀತಕ್ಕೆ ದುಬೈ ಮತ್ತು ತಲೆನೋವಿಗೆ ಅಮೇರಿಕಾಕ್ಕೆ ಹೋಗುವ ಕೆಲಸ ಜನಪ್ರತಿನಿಧಿಗಳಿಗೆ ಉಳಿಯುತ್ತದೆ. ಅವರ ಬಿಲ್ ನಮ್ಮ ಬೊಕ್ಕಸದಿಂದ ಕೊಡುವುದು ಕೂಡ ನಿಲ್ಲುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಒಳ್ಳೆಯ ಸೌಲಭ್ಯಗಳು, ಯಂತ್ರೋಪಕರಣಗಳು, ವೈದ್ಯರು ಬಂದು ಕೂರಬೇಕಾಗುತ್ತದೆ. ಉದಾಹರಣೆಗೆ ನೀವು ನೋಡಿರಬಹುದು, ಒಂದು ಊರಿಗೆ ಸಿಎಂ ಅಥವಾ ಪಿಎಂ ಬರುತ್ತಾರೆ ಎಂದರೆ ಆ ಹಳ್ಳಿಗೆ ಹೋಗುವ ರಸ್ತೆಗಳು ಮೊದಲ ಬಾರಿಗೆ ಡಾಮರು ಕಾಣುತ್ತವೆ. ಅಲ್ಲಿ ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಾರೆ ಎಂದರೆ ಅಲ್ಲಿ ಅವರು ಉಳಿದುಕೊಳ್ಳುವ ಮನೆಗೆ ಶೌಚಾಲಯ ಬರುತ್ತದೆ. ಕರೆಂಟ್ ಕನೆಕ್ಷನ್ ಕೊಡಲಾಗುತ್ತದೆ. ಊರಿಗೆ ಊರೇ ಸಿಂಗಾರಗೊಂಡು ಒಂದು ದಿನದ ಮಟ್ಟಿಗಾದರೂ ಚೆಂದ ಕಾಣುತ್ತದೆ. ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ಹಾಗೆ ಮಾಡಲಾಗುವುದಿಲ್ಲ. ಅಲ್ಲಿನ ಶಾಸಕರಿಗೆ, ಸಚಿವರಿಗೆ ಮುಂದಿನ ವಾರ ಜ್ವರ ಬರುತ್ತೆ ಆವತ್ತು ಆಸ್ಪತ್ರೆಯಲ್ಲಿ ಒಂದು ದಿನ ಎಲ್ಲಾ ಸರಿ ಮಾಡಿ ಇಡೋಣ ಎಂದು ಹೇಳಲು ಆಗುವುದಿಲ್ಲ. ಆದ್ದರಿಂದ ಶಾಸಕರಿಗೆ, ಸಚಿವರಿಗೆ ಕಾಯಿಲೆ ಬರುತ್ತೋ ಬಿಡುತ್ತೋ ಆಸ್ಪತ್ರೆ ಚೆನ್ನಾಗಿ ವರ್ಷವೀಡಿ ಇರಲೇಬೇಕು. ಲಾಭ ಯಾರಿಗೆ, ಸಾಮಾನ್ಯ ಜನರಿಗೆ. ಇಂತಹ ನಿಯಮ ಮಾಡಿದ ಬಿಜೆಪಿ ಮತ್ತು ಅಮಿತ್ ಶಾ, ಮೋದಿ ನೂರು ವರ್ಷ ಚೆನ್ನಾಗಿರಲಿ ಎಂದು ಜನ ಹಾರೈಸುತ್ತಾರೆ. ಇಷ್ಟಾಗಿಯೂ ಶಾಸಕರು, ಸಚಿವರು ನಾವು ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತೇವೆ ಎಂದು ಹಟ ಮಾಡಿದರೆ ಅವರ ಕಾಯಿಲೆಯ ಬಗ್ಗೆ ವರದಿ ತರಿಸಿ ಅದು ಯಾಕೆ ಸರಕಾರಿ ಆಸ್ಪತ್ರೆಯಲ್ಲಿ ಇಲ್ಲ ಎಂದು ನೋಡಿ ಸರಕಾರ ಮುಂದಿನ ಕ್ರಮ ತೆಗೆದಕೊಳ್ಳಬೇಕು ಮತ್ತು ಇಂತಿಂತಹ ಶಾಸಕರು, ಸಚಿವರು ನಿಯಮ ಉಲ್ಲಂಘಿಸಿ ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ ಎಂದು ಮಾಧ್ಯಮದಲ್ಲಿ ಸುದ್ದಿಯಾದರೆ ಮುಂದಿನ ಬಾರಿ ಜನರೇ ತೀರ್ಮಾನಿಸುತ್ತಾರೆ.
ಇನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗೆ ಸೇರಿಸಿದರೆ ಮಾತ್ರ ಅವು ಕೂಡ ಅಭಿವೃದ್ಧಿಯಾಗುತ್ತವೆ. ಒಂದು ವೇಳೆ ಶಾಸಕರಿಗೆ, ಸಚಿವರಿಗೆ ಮಕ್ಕಳಿಲ್ಲ ಅಥವಾ ಮಕ್ಕಳು ಕಲಿತು ದೊಡ್ಡವರಾಗಿದ್ದಾರೆ ಎಂದರೆ ಮೊಮ್ಮೊಕ್ಕಳನ್ನು ಸೇರಿಸಲಿ ಅಥವಾ ತಮ್ಮ ಹತ್ತಿರದ ಬಂಧುವಿನ ತಂಗಿಯ, ತಮ್ಮನ ಮಕ್ಕಳನ್ನು ಸೇರಿಸಲಿ ಹಾಗೆ ಮಾಡಿದರೂ ಆಗಬಹುದು. ತಮ್ಮ ದೊಡ್ಡಪ್ಪನೋ, ಚಿಕ್ಕಪ್ಪನೋ, ಮಾವನೋ ಶಾಸಕನಾಗಿದ್ದರೆ ಅವರಿಂದ ತಮ್ಮ ಸ್ವಾರ್ಥದ, ವೈಯಕ್ತಿಕ ಕೆಲಸ ಮಾಡಿಸಿಕೊಳ್ಳುವ ಸಂಬಂಧಿಗಳು ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಆಗಲ್ವಾ?
ಇನ್ನು ಮಂಗಳೂರಿನ ಮುಖ್ಯ ವಿಷಯಕ್ಕೆ ಬರೋಣ. ದೊಡ್ಡ ಹರಿವಾಣ ತಮ್ಮ ಎದುರಿಗೆ ಇಟ್ಟು ಒಂದು ತುತ್ತು ಬಡಿಸಿದರೆ ಸಾಕು ಎಂದು ಯಾರಾದರೂ ಹೇಳಿದರೆ ನೀವು ಏನು ಹೇಳುತ್ತೀರಿ, ಒಂದು ಸೌಟು ಅನ್ನ, ಪದಾರ್ಥಕ್ಕೆ ಇಷ್ಟು ದೊಡ್ಡ ಹರಿವಾಣ ಯಾಕೆ ಮಾರಾಯ, ತಲೆಗಿಲೆ ಕೆಟ್ಟಿದೆಯಾ ಎನ್ನಲ್ವಾ? ಹಾಗೆ ತುಂಬೆ ಹೊಸ ಅಣೆಕಟ್ಟಿನ ಪರಿಸ್ಥಿತಿ. ಏಳು ಮೀಟರ್ ಎತ್ತರ ಕಟ್ಟಿಸಿ ಕೇವಲ ಐದು ಮೀಟರ್ ನೀರು ನಿಲ್ಲಿಸುತ್ತಿರಿ ಎಂದರೆ ಇಷ್ಟು ಕೋಟಿ ಖರ್ಚು ಮಾಡಿದ್ದು ಯಾಕೆ ಎಂದು ಬುದ್ಧಿಯಿದ್ದವರು ಕೇಳಲ್ವಾ? ನಿರಾಶ್ರಿತರಿಗೆ ಪರಿಹಾರಧನ ಕೊಡಲು ಸಮಯ ಇಲ್ಲ ಎಂದು ನೀರು ಕಡಿಮೆ ನಿಲ್ಲಿಸಲು ತೀರ್ಮಾನಿಸುವ ಪಾಲಿಕೆಯವರೇ ನಿಮ್ಮ ಯಾರದಾದರೂ ಜಾಗ ಅಲ್ಲಿದ್ದರೆ ಮತ್ತು ಅವರಿಗೆ ಅತ್ತ ಅದನ್ನು ಉಪಯೋಗಿಸಲು ಕೂಡ ಅಲ್ಲ, ಇತ್ತ ಅದನ್ನು ಹಾಗೆ ಬಿಡಲು ಕೂಡ ಅಲ್ಲ ಎನ್ನುವ ಪರಿಸ್ಥಿತಿ ಬಂದಾಗ ಪರಿಸ್ಥಿತಿ ಅರ್ಥವಾಗುತ್ತದೆ. ಈ ಬಾರಿ ಮಂಗಳೂರು ದಕ್ಷಿಣ, ಉತ್ತರದ ಶಾಸಕರಿಗೆ ಇದನ್ನು ಮಾಡಲು ಪುರುಸೊತ್ತು ಇಲ್ಲದೆ ಇದ್ದ ಕಾರಣ ಮುಂದೆ ಬರುವವರು ಇದನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಕೆಲಸ ಮುಗಿಸಬೇಕು. ಇಲ್ಲದಿದ್ದರೆ ಪ್ರತಿ ಬಾರಿ ಬೇಸಿಗೆ ಬಂದಾಗ ಅಥವಾ ನಮ್ಮ ಮಂಗಳೂರಿಗೆ ನೀರನ್ನು ಪೂರೈಸುವ ಪೈಪುಗಳು ಒಡೆದಾಗ ಪಾಲಿಕೆಯ ಕಾರಿಡಾರ್ ನಲ್ಲಿ ಕುಳಿತು ” ನೀರಿನ ಸಮಸ್ಯೆಗೆ ಏನಾದರೂ ಮಾಡಬೇಕು” ಎಂದು ಚರ್ಚಿಸುವುದು ನಿಲ್ಲುತ್ತದೆ. ಹಣ ಇದ್ದೂ ಕೊಡಲು ಹಿಂದೇಟು ಹಾಕುವ ಪಾಲಿಕೆಗೆ ಇನ್ನೇನೂ ಜನ ಶಾಪ ಹಾಕುವುದು ಮಾತ್ರ ಬಾಕಿ.
ಇನ್ನು ಕ್ರೀಡಾಪಟುಗಳು ಮಂಗಳೂರಿನಲ್ಲಿ ಸಾಕಷ್ಟು ಜನರಿದ್ದಾರೆ. ವೇಟ್ ಲಫ್ಟಿಂಗ್ ನಿಂದ ಹಿಡಿದು ಕ್ರಿಕೆಟ್ ತನಕ, ಚೆಸ್ ನಿಂದ ಹಿಡಿದು ಕಬಡ್ಡಿಯ ತನಕ ಪ್ರತಿಭಾವಂತರಿದ್ದಾರೆ. ಆದರೆ ಅವರಿಗೆ ಜೀವನಕ್ಕೆ ಏನು ಎನ್ನುವ ಪ್ರಶ್ನೆ ಬಂದಾಗ ಚೆಸ್ ಕೂಡ ಮರೆತು ಹೋಗುತ್ತದೆ, ಕಬಡ್ಡಿಯಲ್ಲಿ ಎಷ್ಟು ಜನ ಒಂದು ಟೀಮ್ ನಲ್ಲಿ ಇರುತ್ತಾರೆ ಎನ್ನುವುದು ಕೂಡ ಮರೆತುಹೋಗುತ್ತದೆ. ಅಂತವರಿಗೆ ಜೀವನಕ್ಕೆ ಭದ್ರತೆ ಕೊಟ್ಟರೆ ಅವರು ಮಂಗಳೂರಿನ ಹೆಸರನ್ನು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಬಲ್ಲರು. ಅದರೊಂದಿಗೆ ಅವರು ಭಾಗವಹಿಸುವ ಅನೇಕ ಸ್ಪರ್ಧೆಗಳಿಗೆ ಹೋಗಲು, ಬರಲು, ತಂಗಲು ತಗಲುವ ಖರ್ಚು ಕೂಡ ಕೊಡಬೇಕು. ಅವರಿಗೆ ಪ್ರತಿಯೊಂದಕ್ಕೆ ಶಾಸಕ, ಸಚಿವರ ಮನೆಬಾಗಿಲು ತಟ್ಟುವಂತೆ ಮಾಡಬಾರದು. ಇಲ್ಲದಿದ್ದರೆ ಇಡೀ ದಿನ ಆಟವಾಡಿದರೆ ಮುಂದೆ ಜೀವನಕ್ಕೆ ಏನು ಮಾಡ್ತೀಯಾ ಎಂದು ಪೋಷಕರು ಹೇಳಿ ಸಂಜೆಯಾಗುತ್ತಿದ್ದಂತೆ ಪುಸ್ತಕ ಹಿಡಿದು ಕುಳ್ಳಿರಿಸಿಬಿಡುತ್ತಾರೆ. ಶಟಲ್ ಬ್ಯಾಟ್ ಮನೆಯ ಮೂಲೆ ಸೇರುತ್ತದೆ. ಹಾಗೆ ಆಗದ ರೀತಿಯಲ್ಲಿ ಮುಂದಿನ ಶಾಸಕರು ನೋಡಬೇಕು. ಮೀನಿನ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಚೀಲ ಮಾರುತ್ತಿದ್ದ ವೇಟ್ ಲಿಫ್ಟರ್ ಒಬ್ಬರ ಕಥೆ ಆಗಾಗ ಮಾಧ್ಯಮಗಳಲ್ಲಿ ಬಂದದ್ದನ್ನು ನೀವು ನೋಡಿರಬಹುದು. ಕೊನೆಯದಾಗಿ ಮಂಗಳೂರಿಗೆ ಯಾವುದೇ ಕೈಗಾರಿಕೆ ಅಥವಾ ಉದ್ದಿಮೆ ಬರಲಿ, ಅದರಲ್ಲಿ ಸ್ಥಳೀಯರಿಗೆ ಕೆಲಸ ಗ್ಯಾರಂಟಿ ಕೊಡಬೇಕು. ಎಂ ಆರ್ ಪಿಎಲ್ ಬರುವಾಗ ಜಾಗ ಕಳೆದುಕೊಂಡ ಅನೇಕರಿಗೆ ಸರಿಯಾದ ಉದ್ಯೋಗಾವಕಾಶ ಸಿಕ್ಕಿಲ್ಲ ಎನ್ನುವ ಕೂಗು ಇನ್ನೂ ಇದೆ.
ನನಗೆ ಮಾತನಾಡಲು ಅವಕಾಶ ಸಿಕ್ಕಿದಾಗ ಸಭಾಂಗಣ ಅರ್ಧಕರ್ಧ ಖಾಲಿಯಾಗಿದ್ದು ಒಂದಿಷ್ಟರ ಮಟ್ಟಿಗೆ ಬೇಸರವಾಗಿತ್ತು. ಕಾರ್ಯಕ್ರಮದಲ್ಲಿ ಬರುವ ಜನ ತಮ್ಮ ಮಾತು ಮುಗಿದ ತಕ್ಷಣ ಸೀದಾ ಕೆಳಗಿಳಿದು ಹೊರಗೆ ಹೋಗುವುದು ಯಾವತ್ತೂ ಸಭ್ಯತೆ ಅಲ್ಲ. ಅದರ್ಥ ಅವರು ಮಾತ್ರ ಬ್ಯುಸಿ, ಉಳಿದವರು ಕೆಲಸ ಇಲ್ಲ ಎನ್ನುವ ಕಾರಣಕ್ಕೆ ಕುಳಿತುಕೊಂಡಿದ್ದಾರೆ ಎಂದು ಅವರು ತಿಳಿದುಕೊಂಡಿದ್ದಾರಾ? ಹಾಗಾದರೆ ಅವರದ್ದು ಮಾತ್ರ ಅಭಿಪ್ರಾಯ, ಚಿಂತನೆ, ಉಳಿದವರದ್ದು?!!
Leave A Reply