ಪದ್ಮಾವತ್ ಬಿಡುಗಡೆಯಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ ಕ್ಷತ್ರೀಯ ಮಹಿಳೆಯರು!
ಜೈಪುರ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ರಣವೀರ್ ಕಪೂರ್, ದೀಪಿಕಾ ಪಡುಕೋಣೆ ನಟಿಸಿರುವ ಪದ್ಮಾವತ್ ಚಿತ್ರ ವಿವಾದ, ಸಮಸ್ಯೆಗಳಿಂದ ಮುಕ್ತಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಆರಂಭದಿಂದಲೂ ಹಲವು ಗೊಂದಲ, ಅಡ್ಡಗಾಲು ಆವರಿಸಿದ್ದು, ಚಿತ್ರದ ಹೆಸರು ಘೋಷಣೆಯಾಗುತ್ತಲೇ ವಿವಾದ ಆರಂಭವಾಯಿತು.
ಬಳಿಕ ಚಿತ್ರ ವಿಳಂಬವಾಯಿತು, ಕಳೆದ ವರ್ಷದ ಡಿಸೆಂಬರ್ 1ರಂದು ಬಿಡುಗಡೆಗೆ ಸಿದ್ಧವಾಯಿತಾದರೂ ರಜಪೂತರ ವಿರೋಧದಿಂದ ಮುಂದೂಡಲಾಯಿತು. ಕೊನೆಗೆ ಹೆಸರು ಬದಲಾಯಿಸಿಕೊಂಡು ಜನವರಿ ಅಂತ್ಯಕ್ಕೆ ಬಿಡುಗಡೆಗೆ ಸಿದ್ಧವಾಗಿರುವ ಬೆನ್ನಲ್ಲೇ ಈಗ ಮತ್ತೊಂದು ಕಂಟಕ ಎದುರಾಗಿದೆ.
ಹೌದು, ಪದ್ಮಾವತ್ ಚಿತ್ರ ಬಿಡುಗಡೆಯಾದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಜೈಪುರದ ಚಿತ್ತೋರ್ ಗಡದ ಕ್ಷತ್ರೀಯ ಮಹಿಳೆಯರು ಎಚ್ಚರಿಕೆಯೊಡ್ಡಿದ್ದು, ಚಿತ್ರತಂಡದಲ್ಲಿ ಆತಂಕ ಮೂಡಿಸಿದೆ.
ಚಿತ್ತೋರ್ ಗಡದಲ್ಲಿ ಆಯೋಜಿಸಿದ್ದ ಸರ್ವಸಮಾಜದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಪದ್ಮಾವತ್ ಚಿತ್ರದ ವಿರುದ್ಧ ಹಂತ ಹಂತಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು. ಅಲ್ಲದೆ ಹಾಗೊಂದು ವೇಳೆ ಚಿತ್ರ ಬಿಡುಗಡೆಗೊಳಿಸಿದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕ್ಷತ್ರೀಯ ಮಹಿಳೆಯರು ಎಚ್ಚರಿಸಿದ್ದರು. ಸುಮಾರು ಜನರನ್ನೊಳಗೊಂಡ ಸಭೆಯಲ್ಲಿ ನಗರದ ಶ್ರೀಮಂತ ಮನೆತನದ 100ಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು.
ಅಷ್ಟೇ ಅಲ್ಲ, ಚಲನಚಿತ್ರದ ವಿರುದ್ಧ ಜನವರಿ 17ರಂದು ಚಿತ್ತೋರ್ ಗಡ ವ್ಯಾಪ್ತಿಯ ಎಲ್ಲ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ರಜಪೂತ್ ಕರ್ಣಿ ಸೇನಾ ಸಂಘಟನೆಯ ವಕ್ತಾರ ವೀರೇಂದ್ರ ಸಿಂಗ್ ತಿಳಿಸಿದರು.
ರಜಪೂತರ ರಾಣಿ ಪದ್ಮಾವತಿಯನ್ನು ಅಲ್ಲಾವುದ್ದೀನ್ ಖಿಲ್ಜಿ ಜತೆ ಆತ್ಮೀಯವಾಗಿ ಇರುವ ದೃಶ್ಯಗಳಿದ್ದು, ಇದರಿಂದ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ. ಹಾಗಾಗಿ ಚಿತ್ರ ಬಿಡುಗಡೆಗೊಳಿಸಬಾರದು ಎಂಬುದು ರಜಪೂತ ಸಂಘಟನೆಗಳ ಒತ್ತಾಯವಾಗಿದೆ.
ಮೊದಲು ಪದ್ಮಾವತಿ ಎಂದು ಚಿತ್ರದ ಹೆಸರು ನಿಗದಿಗೊಳಿಸಲಾಗಿತ್ತು. ಆದರೆ ವಿರೋಧದ ಹಿನ್ನೆಲೆಯಲ್ಲಿ ಚಿತ್ರದ ಹೆಸರನ್ನು ಪದ್ಮಾವತ್ ಎಂದು ಹೆಸರು ಬದಲಾಯಿಸಿದ್ದಲ್ಲದೆ, ಹಲವು ಮಾರ್ಪಾಡು ಮಾಡಿದ್ದ ಸೆನ್ಸಾರ್ ಮಂಡಳಿ ಜನವರಿ 25ರಂದು ಬಿಡುಗಡೆಗೆ ತಿಳಿಸಿತ್ತು. ಆದರೆ ಈಗ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿರುವುದರಿಂದ ಚಿತ್ರ ಬಿಡುಗಡೆಯಾಗುವುದೇ ಎಂಬ ಅನುಮಾನ ಕಾಡುವಂತಾಗಿದೆ.
Leave A Reply