ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯನವರಿಗೆ ರಕ್ತದಲ್ಲಿ ಪತ್ರ!
ಮಂಗಳೂರು: ದೇಶಾದ್ಯಂತ ಗೋಹತ್ಯೆ ನಿಷೇಧ, ಗೋವುಗಳ ರಕ್ಷಣೆ ಕುರಿತು ಒತ್ತಾಯ ಕೇಳಿ ಬರುತ್ತಿರುವ ಬೆನ್ನಲ್ಲೇ, ಭಾರತೀಯ ಗೋ ಪರಿವಾರ (ಬಿಜಿಪಿ) ಸಂಘಟನೆಯ ಸ್ವಯಂ ಸೇವಕರು ರಕ್ತದಲ್ಲಿ ಪತ್ರ ಬರೆಯುವ “ರಕ್ತಾಕ್ಷರ” ಅಭಿಯಾನ ಕೈಗೊಂಡಿದ್ದಾರೆ.
ಈ ಕುರಿತು ಸ್ವಯಂ ಸೇವಕರು ರಕ್ತದಲ್ಲಿ ಪತ್ರ ಬರೆದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸಲು ಅಭಿಯಾನ ಕೈಗೊಂಡಿದ್ದಾರೆ.
ದೇಶಾದ್ಯಂತ ಗೋಹತ್ಯೆ ಮಾಡುವುದನ್ನು ನಿಷೇಧ ಮಾಡುವಂತೆ ಗೋ ಪರಿವಾರ ಸಂಘಟನೆಯ 500 ಗೋ ರಕ್ಷಕರು ರಕ್ತದಲ್ಲಿ ಪತ್ರ ಬರೆಯುವ ಮೂಲಕ ರಕ್ತಾಕ್ಷರ ಅಭಿಯಾನ ಕೈಗೊಂಡಿದ್ದಾರೆ ಎಂದು ಬಿಜಿಪಿ ಸದಸ್ಯ ರವೀಶ್ ಭಟ್ ಮಾಹಿತಿ ನೀಡಿದ್ದಾರೆ.
ಒತ್ತಾಯ ಪೂರ್ವಕವಾಗಿ ಯಾರಿಂದಲೂ ಪತ್ರ ಬರೆಸಿಲ್ಲ. ಗೋರಕ್ಷಕರು ಸ್ವಯಂ ಪ್ರೇರಿತರಾಗಿ ಅಭಿಯಾನ ಕೈಗೊಂಡಿದ್ದು, ಇದರಲ್ಲಿ ಯಾರ ಒತ್ತಾಯವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುಮಾರು 500 ಗೋರಕ್ಷಕರ ದೇಹದ 3 ಎಂಎಲ್ ರಕ್ತ ಪಡೆದು, ಇಂಕಿನ್ ಪೆನ್ ತಯಾರಿಸಲಾಗಿದೆ. ಈ ಪೆನ್ ಗಳಿಂದಲೇ ಪತ್ರ ಬರೆಸಿದ್ದು, ತಜ್ಞರ ಸಲಹೆ ಸಹ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಅಭಯಾಕ್ಷರ ಎಂಬ ಮತ್ತೊಂದು ಸಹಿ ಅಭಿಯಾನ ಪ್ರಾರಂಭಿಸಲಾಗಿದ್ದು, ರಾಜ್ಯದಲ್ಲಿ 70 ಲಕ್ಷ ಜನ ಬೆಂಬಲ ಸೂಚಿಸಿದ್ದಾರೆ. ಇವರೆಲ್ಲರ ಸಹಿ ಸಂಗ್ರಹಿಸಿ ಕನಿಷ್ಠ ಒಂದು ಕೋಟಿ ಪತ್ರಗಳನ್ನು ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿ ಅವರಿಗೆ ರವಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
2017ರ ಮೇ 25ರಂದು ಕೇಂದ್ರ ಸರ್ಕಾರ ಗೋಹತ್ಯೆ ನಿಷೇಧದ ಕುರಿತು ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಮುಂದಿನ ನಡೆ ಕುತೂಹಲ ಕೆರಳಿಸಿದೆ.
Leave A Reply