ಟೀಕೆಗೆ ಮಣಿದ ಸರ್ಕಾರ, ಮುಗ್ಧ ಅಲ್ಪಸಂಖ್ಯಾತರು ಎಂಬುದನ್ನು ಮುಗ್ಧ ಜನರು ಎಂದು ತಿದ್ದುಪಡಿ
ಬೆಂಗಳೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ಮಾಡಿಕೊಂಡ ಎಡವಟ್ಟುಗಳು ಒಂದೆರಡಲ್ಲ. ಮೊದಲು ಸೀಮಿತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ಕಲ್ಪಿಸಿ ಉಗಿಸಿಕೊಂಡ ಬಳಿಕ ಯೋಜನೆ ಕೈಬಿಟ್ಟರು. ವಿಧಾನಸೌಧ ವಜ್ರ ಮಹೋತ್ಸವಕ್ಕೆ ಅಪಾರ ಹಣ ಖರ್ಚು ಮಾಡುವುದಾಗಿ ಘೋಷಿಸಿ, ಟೀಕೆಗಳು ವ್ಯಕ್ತವಾದ ಬಳಿಕ ಕಡಿಮೆ ಖರ್ಚಿನಲ್ಲಿ ಮಹೋತ್ಸವ ಆಚರಿಸಿದರು.
ಈಗ ಹಲವು ಗಲಾಟೆಗಳಲ್ಲಿ ಬರೀ ಅಲ್ಪಸಂಖ್ಯಾತರ ವಿರುದ್ಧವಷ್ಟೇ ದಾಖಲಾದ ಪ್ರಕರಣ ಕೈಬಿಡುವ ಸುತ್ತೋಲೆ ಹೊರಡಿಸಿ ಟೀಕೆಗೊಳಗಾದ ಬಳಿಕ ಮತ್ತೆ ತಮ್ಮ ತಪ್ಪು ತಿದ್ದಿಕೊಂಡಿದ್ದಾರೆ. ಆ ಮೂಲಕ ತಮ್ಮ ಸರ್ಕಾರ ಯೋಚನೆ ಮಾಡದೇ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹೌದು, ಟಿಪ್ಪು ಜಯಂತಿ, ಕಾವೇರಿ ಗಲಾಟೆ ವೇಳೆ ಹಲವು ಅಲ್ಪಸಂಖ್ಯಾತರ ವಿರುದ್ಧದ ಪ್ರಕರಣ ಹಿಂಪಡೆಯುವ ಕುರಿತು ಸರ್ಕಾರ ಹೊರಡಿಸಿದ ಸುತ್ತೋಲೆಯನ್ನು ತಿದ್ದುಪಡಿ ಮಾಡಲಾಗಿದೆ. ಸುತ್ತೋಲೆಯಲ್ಲಿದ್ದ, “ಮುಗ್ಧ ಅಲ್ಪಸಂಖ್ಯಾತರು” ಎಂಬ ಪದವನ್ನು ಕಿತ್ತುಹಾಕಿ, “ಮುಗ್ಧ ಜನರು” ಎಂದು ಬದಲಾಯಿಸಿದ್ದಾರೆ.
ಆದರೆ ಮೊದಲು ಮುಖ್ಯಮಂತ್ರಿಯವರ ನಿರ್ಧಾರವನ್ನು ಬೆಂಬಲಿಸಿದ್ದ ಗೃಹಸಚಿವ ಕೆ.ಜೆ.ಜಾರ್ಜ್ ಅವರು ಈಗ ಯೂ ಟರ್ನ್ ತೆಗೆದುಕೊಂಡಿದ್ದು, “ಹಿಂದೆ ಕಣ್ತಪ್ಪಿನಿಂದ ಸುತ್ತೋಲೆಯಲ್ಲಿ ಮುಗ್ಧ ಅಲ್ಪಸಂಖ್ಯಾತರು ಎಂದು ಮುದ್ರಣವಾಗಿತ್ತು. ಈಗ ಸುತ್ತೋಲೆಯನ್ನು ತಿದ್ದುಪಡಿ ಮಾಡಲಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ಮುಗ್ಧ ಜನರು ಎಂದು ಇರುವ ಸುತ್ತೋಲೆಯಲ್ಲಿ ಹಿಂದೂಗಳ ವಿರುದ್ಧದ ಪ್ರಕರಣಗಳನ್ನೂ ವಾಪಸ್ ತೆಗೆದುಕೊಳ್ಳಲಾಗುತ್ತದೆ ಎಂಬುದರ ಕುರಿತು ಸ್ಪಷ್ಟನೆ ಇಲ್ಲದಿರುವುದು ಅನುಮಾನ ಹುಟ್ಟಿಸಿದೆ. ಈ ಕುರಿತು ರಾಜ್ಯ ಸರ್ಕಾರವೇ ಮಾಹಿತಿ ನೀಡಬೇಕಾಗಿದೆ.
Leave A Reply