“ಕೊಲೆ ಭಾಗ್ಯ” ಯೋಜನೆ ರಾಜ್ಯದ್ದು, ಕ್ರೆಡಿಟ್ ಮೋದಿಗೆ ಯಾಕ್ರೀ ಪ್ರಕಾಶ್ ರೈ!!
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಜ್ಞಾನೋದಯವಾಗಿದೆ. ಮುಗ್ಧ ಅಲ್ಪಸಂಖ್ಯಾತರನ್ನು ಉಳಿಸುವ ಗಡಿಬಿಡಿಯಲ್ಲಿ ಪಕ್ಷದ ಹೆಸರು ಹಾಳಾಗಿ ಅದು ಮೋರಿ ಸೇರುತ್ತಿರುವುದನ್ನು ಕಂಡು ಬಹುಶ: ಹೈಕಮಾಂಡ್ ನಿಂದ ಕಾಲ್ ಬಂದಿರಬೇಕು. ನಾವಿಲ್ಲಿ ರಾಹುಲ್ ಗಾಂಧಿಯವರು ಯಾವ ದೇವಸ್ಥಾನಗಳಿಗೆ ಹೋಗಿ ಅಡ್ಡ ಬೀಳಬೇಕೆಂದು ಲಿಸ್ಟ್ ಮಾಡುತ್ತಿದ್ದರೆ ನೀವು ಅಲ್ಲಿ ಹಿಂದೂಗಳ ವಿರುದ್ಧ ಹೋಗಿ ನಮ್ಮ ಮುಖಕ್ಕೆ ಮಸಿ ಬಳಿಯುತ್ತಿದ್ದೀರಾ ಎಂದು ದೆಹಲಿಯಿಂದ ಬಂದಿರುವ ಕರೆಗೆ ಸಿದ್ಧರಾಮಯ್ಯ ತಣ್ಣಗಾಗಿರುವಂತೆ ಕಾಣುತ್ತಿದ್ದಾರೆ. ಆದ್ದರಿಂದ ರಾಮಲಿಂಗಾ ರೆಡ್ಡಿ ರಾತ್ರೋರಾತ್ರಿ ಪ್ಲೇಟ್ ಚೆಂಜ್ ಮಾಡಿ ಎಲ್ಲಾ ಧರ್ಮದ ಮುಗ್ಧರನ್ನು ಕೂಡ ಹೊರತರುವ ಮಾತುಗಳನ್ನು ಆಡುತ್ತಿದ್ದಾರೆ.
ಗೌರಿ ಲಂಕೇಶ್ ಆಪ್ತರು ಬೈಯ್ದದ್ದು ಮೋದಿಗೆ…
ಒಂದೇ ತರಹದ ಕೇಸ್ ಒಬ್ಬ ಮುಸ್ಲಿಂ ಮತ್ತು ಒಬ್ಬ ಹಿಂದೂವಿನ ಮೇಲೆ ಬಿದ್ದರೆ ನಮ್ಮ ಕಾಂಗ್ರೆಸ್ ನಾಯಕರು ಯಾರೊಡನೆ ಹೇಗೆ ವರ್ತಿಸುತ್ತಾರೆ ಎನ್ನುವುದು ಈ ದೇಶದ ಸಂಘಟನೆಗಳ ಕಾರ್ಯಕರ್ತರಿಗೆ ಗೊತ್ತಿಲ್ಲದ್ದು ಏನಿಲ್ಲ. ಆದ್ದರಿಂದ ಎಲ್ಲಾ ಮುಗ್ಧರನ್ನು ಬಿಡುತ್ತೇವೆ ಎಂದು ಹೇಳಿ ಆಗಿರುವ ಡ್ಯಾಮೇಜ್ ಅನ್ನು ಸರಿ ಮಾಡಲು ಹೊರನೋಟಕ್ಕೆ ರೆಡ್ಡಿಯವರು ಹೇಳಿರಬಹುದಾದರೂ ಮುಂದೆ ಆಗುವ ವಾಸ್ತವಾಂಶ ಎಲ್ಲರಿಗೂ ತಿಳಿದೆ ಇದೆ. ಈ ನಡುವೆ ಗೌರಿ ಲಂಕೇಶ್ ಆಪ್ತರು ಸೇರಿ ಆಕೆಯ ಹತ್ಯೆಯ ಆರೋಪಿಗಳನ್ನು ಬಂಧಿಸಲಾಗಿಲ್ಲ ಎಂದು ಕೇಂದ್ರ ಸರಕಾರವನ್ನು ಬೈಯ್ದದ್ದೇ ಬೈಯ್ದದ್ದು. ರಾಜ್ಯದ ಕಾನೂನು ಮತ್ತು ಆಡಳಿತ ಯಾರ ಕೈಯಲ್ಲಿದೆ ಎಂದು ಗೊತ್ತಿಲ್ಲದ್ದ ಅಮಾಯಕರು ಅಲ್ಲಿರಲಿಲ್ಲ. ಗೌರಿ ಹತ್ಯೆಗೆ ಮತ್ತು ಆರೋಪಿಗಳನ್ನು ಹಿಡಿಯಲಾಗದಕ್ಕೆ ಯಾರನ್ನು ಬೈಯಬೇಕು ಎಂದು ತಿಳಿಯದಷ್ಟು ಮುಗ್ಧರು ಅಲ್ಲಿರಲಿಲ್ಲ. ಆದರೂ ಮೋದಿಯಿಂದ ಹಿಡಿದು ಪ್ರತಿಯೊಬ್ಬ ಬಿಜೆಪಿ ಮುಖಂಡನನ್ನು ಸಾರಾಸಗಟಾಗಿ ನಿಂದಿಸುವ ಕೆಲಸ ಅಲ್ಲಿದ್ದವರು ಮಾಡಿದ್ರು. ಪಕ್ಕದ ಕೇರಳದಿಂದ ತರಬೇತಿ ಹೊಂದಿ ಕರ್ನಾಟಕಕ್ಕೆ ಬಂದ ಉಗ್ರರು ಶಿವಮೊಗ್ಗದ ಗಾಜನೂರಿನ ಬಳಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿಶ್ವನಾಥ ಶೆಟ್ಟಿಯನ್ನು ಕೊಂದು ಬಿಸಾಡಿದನ್ನು ಅವರ್ಯಾರು ಮಾತನಾಡಿಲ್ಲ. ಪ್ರಶಾಂತ ಪೂಜಾರಿ ಹತ್ಯೆಯನ್ನು ಮಾಡಿದ ಹಂತಕರಿಗೆ ಶಿಕ್ಷೆಯಾಗುತ್ತಾ ಎಂದು ಅಲ್ಲಿ ಸೇರಿದ್ದ ಯಾರೂ ಕೇಳಿಲ್ಲ. ಮಡಿಕೇರಿಯ ಕುಟ್ಟಪ್ಪನನ್ನು ಕೊಂದು ಮೋರಿಗೆ ಬಿಸಾಡಿದ್ದು ಸರಿಯಾ ಎಂದು ಅಲ್ಲಿ ಬಂದಿದ್ದ ಜಿಗ್ನೇಶ್ ಮತ್ತು ಅವನ ಪಟಾಲಾಂ ಪ್ರಶ್ನಿಸಿಲ್ಲ. ಇಂತಹ ಎಷ್ಟೋ ಅಮಾಯಕರ ಕೊಲೆಗಳು ಕರ್ನಾಟಕದಲ್ಲಿ ಆಗುತ್ತಾ ಇದ್ದರೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ನಿಗೂಢವಾಗಿ ಸತ್ತಾಗ ಇವರ್ಯಾರು ಇಲ್ಲಿ ಬಂದಿಲ್ಲ. ಕರ್ನಾಟಕದ ಆಹಾರ ಇಲಾಖೆಯ ಐಎಎಸ್ ಅಧಿಕಾರಿ ಬೇರೆ ರಾಜ್ಯದಲ್ಲಿ ನಿಗೂಢವಾಗಿ ಸತ್ತಾಗಲೂ ಜಿಗ್ನೇಶ್ ಇಲ್ಲಿ ಬಂದಿರಲಿಲ್ಲ. ಸಿಮಿ ಸಂಘಟನೆ ಪಿಎಫ್ ಐ ಆಗುವಾಗಲೂ ಅಲ್ಲಿ ಸೇರಿದವರಿಗೆ ಏನೂ ಅನಿಸಿರಲಿಲ್ಲ.
ಕೊಲೆಯಾಗುವ ಪ್ರತಿ ಹಿಂದೂ ಪರಿವಾರದ ಮುಖಂಡನಾ….
ಇನ್ನು ಒಬ್ಬ ಹಿಂದೂ ಹತ್ಯೆಯಾದ ಕೂಡಲೇ ಮಾಧ್ಯಮಗಳು ಮೊದಲು ಬರೆಯುವುದು ಬಿಜೆಪಿಯ ಕಾರ್ಯಕರ್ತ ಹತನಾದ, ವಿಶ್ವ ಹಿಂದೂ ಪರಿಷತ್ ಮುಖಂಡ ಕೊಲೆಗೀಡಾದ, ಬಜರಂಗದಳ ಪ್ರಮುಖನನ್ನು ಕೊಲೆ ಮಾಡಲಾಯಿತು ಹೀಗೆ. ಇದನ್ನು ಮೊದಲು ನಿಲ್ಲಿಸಬೇಕು ಎಂದದ್ದು ಚಕ್ರವರ್ತಿ ಸೂಲಿಬೆಲೆ. ಹಡೆದವ್ವನ ಶಾಪ ಪುಸ್ತಕದ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದ ಅವರು, ಯಾವುದೇ ಒಬ್ಬ ಹಿಂದೂ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಒಂದಲ್ಲ ಒಂದು ಸಲ ಸಂಘ ಪರಿವಾರದ ಸಂಪರ್ಕಕ್ಕೆ ಬಂದಿರುತ್ತಾನೆ. ಹಾಗಿರುವಾಗ ಒಂದು ಸಲ ಶಾಖೆಗೆ ಹೋದ ವ್ಯಕ್ತಿಯನ್ನು ಕೂಡ ಸಂಘ ಪರಿವಾರಕ್ಕೆ ಜೋಡಿಸುವ ಮೂಲಕ ಇದು ಸಂಘ ಪರಿವಾರ ಮತ್ತು ಪಿಎಫ್ ಐ ಜಗಳ ಎಂದೇ ಬಿಂಬಿತವಾಗುತ್ತಿದೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಮೊದಲು ಪಿಎಫ್ ಐ ಕಾರ್ಯಕರ್ತರ ಮೇಲಿರುವ ಸುಮಾರು 175 ಕೇಸುಗಳನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಇನ್ನು ಕಳೆದ ನಾಲ್ಕುವರೆ ವರ್ಷಗಳಲ್ಲಿ ಸುಮಾರು 350 ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಂಡು “ಮುಗ್ಧ” ಅಲ್ಪಸಂಖ್ಯಾತರನ್ನು ರಕ್ಷಿಸಿದೆ ಎಂದು ಹೇಳಿದರು.
ಲೋಕಸಭೆಯ ಚುನಾವಣೆಗೆ ಸರಿಯಾಗಿ ದೇಶದಲ್ಲಿ ವಿಧ್ವಂಸಕಾರಿ ಕೃತ್ಯಗಳನ್ನು ನಡೆಸಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್ ಡಿಎ ಸರಕಾರಕ್ಕೆ ಕೆಟ್ಟ ಹೆಸರು ತರಲು ಒಂದು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ ಚಕ್ರವರ್ತಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾರತದ ಶತ್ರುರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು. ತೈಲ ಉತ್ಪಾದಿಸುವ ರಾಷ್ಟ್ರದ ಮುಖಂಡರೊಂದಿಗೆ ಮಾತುಕತೆ, ಭಾರತ-ಚೀನಾ ಗಡಿಯ ದೋಖ್ಲಾಂ ನಲ್ಲಿ ವಿಷಮ ಪರಿಸ್ಥಿತಿ ಇರುವಾಗ ಅಲ್ಲಿನ ರಾಯಭಾರಿಯೊಡನೆ ಮಾತುಕತೆ, ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಪಾಕಿಸ್ತಾನದ ಹೈಕಮೀಷನರ್ ಜೊತೆಯಲ್ಲಿ ನಮ್ಮ ಕಾಂಗ್ರೆಸ್ ಮುಖಂಡರ ಮಾತುಕತೆ ಏನನ್ನು ಸೂಚಿಸುತ್ತದೆ ಎಂದು ಸೂಲಿಬೆಲೆ ಪ್ರಶ್ನಿಸಿದ್ದಾರೆ.
ಚರ್ಚೆಯಾದದ್ದು ಶೇಣವ ಹೇಳಿಕೆ…
ಇಂತಹ ಯೋಚಿಸಬಲ್ಲ ಅನೇಕ ಅಂಶಗಳು ಕಾರ್ಯಕ್ರಮದಲ್ಲಿ ಇದ್ದರೂ ಆವತ್ತಿನಿಂದ ಇವತ್ತಿನ ತನಕ ಹೆಚ್ಚು ಚರ್ಚೆಯಲ್ಲಿ ಬಂದಿರುವುದು ವಿಹಿಂಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಹೇಳಿಕೆ. ಬಶೀರ್ ಹತ್ಯೆಯಾದಾಗ ಮಾಧ್ಯಮಗಳನ್ನು ಸೇರಿಕೊಂಡು ಎಲ್ಲರೂ ಅಮಯಾಕ ಬಶೀರ್ ಹತ್ಯೆಯಾಯಿತು ಎನ್ನುತ್ತಾರೆ, ಒಬ್ಬ ಅಮಾಯಕ ದೀಪಕ್ ರಾವ್ ಹತ್ಯೆಯಾಗುವುದಾದರೆ ಅದಕ್ಕೆ ಪ್ರತಿಯಾಗಿ ಬಶೀರ್ ಹತ್ಯೆಯಾದರೆ ಅದರಲ್ಲಿ ತಪ್ಪೇನು ಎಂದದ್ದೇ ವಿವಾದವಾಯಿತು. ನನ್ನ ಅಭಿಪ್ರಾಯ ಒಂದೇ, ಧರ್ಮ ಯಾವುದೇ ಇರಲಿ, ಅಮಾಯಕರ ಹತ್ಯೆ ಆದಾಗ ಅವರವರ ತಾಯಿಗೆ ಅದು ದೊಡ್ಡ ನೋವೇ. ಯಾವ ಧರ್ಮದ ತಾಯಿಯೇ ಆಗಿರಲಿ, ತನ್ನ ಮಗ ಹತ್ಯೆಯಾದಾಗ ಕೊಲೆಗಡುಕರಿಗೆ ಶಾಪ ಹಾಕಿಯೇ ಹಾಕುತ್ತಾರೆ. ಒಂದು ಕೊಲೆಗೆ ಮತ್ತೊಂದು ಕೊಲೆ ಪ್ರತೀಕಾರ ಆಗಬಾರದು. ಧರ್ಮ ಯಾವುದೇ ಇರಲಿ, ತಲವಾರು ಬೀಸಿದಾಗ ಹೊರಗೆ ಬರುವ ರಕ್ತಕ್ಕೆ ಒಂದೇ ಬಣ್ಣ. ಕೊಲೆ ಮಾಡುವವರಿಗೆ ಯಾವುದೇ ಜಾತಿ, ಧರ್ಮ ಇರುವುದಿಲ್ಲ. ಕೊಲೆಯಾದವರಿಗೆ ಮಾತ್ರ ಧರ್ಮದ ಲೇಪನ. ಇನ್ನು ಕೆಲವು ದಿನಗಳಲ್ಲಿ ಅಲ್ಪಸಂಖ್ಯಾತ “ಮುಗ್ಧ”ರು ಎಲ್ಲಾ ಹೊರಗೆ ಬಂದರೆ ಇನ್ನಷ್ಟು ಕೊಲೆಗಳು ನಡೆಯಬಹುದು. ನುಡಿದಂತೆಯೇ ನಡೆದಿದ್ದೇವೆ ಎಂದು ಹೇಳುತ್ತಿರುವ ರಾಜ್ಯ ಕಾಂಗ್ರೆಸ್ ಇನ್ನು ಕೆಲವು ಭರವಸೆಗಳು ಮಾತ್ರ ಬಾಕಿ ಇದೆ ಎನ್ನುತ್ತಿದೆ. ಬಹುಶ: ಅಧಿಕಾರದಿಂದ ಇಳಿಯುವ ಮೊದಲು ಸಿದ್ಧರಾಮಯ್ಯ ಘೋಷಿಸಲಿರುವ ಕೊನೆಯ ಭಾಗ್ಯ “ಕೊಲೆ ಭಾಗ್ಯ”!
Leave A Reply