ವಿಮಾನದ ಸಮಯಕ್ಕಿಂತಲೂ ಮಂಗಳೂರಿನ ಬಸ್ಸುಗಳ ವೇಳಾಪಟ್ಟಿ ನಿಖರ!
ಒಂದೊಂದು ಸೆಕೆಂಡಿಗೆ ಮಂಗಳೂರಿನ ಬಸ್ಸುಗಳ ನಡುವೆ ಗಲಾಟೆ ಆಗುತ್ತದೆ!
ಮಂಗಳೂರಿನಲ್ಲಿ ಇರುವ ಸಿಟಿ ಬಸ್ಸುಗಳ ಚಾಲಕರ ಮತ್ತು ನಿರ್ವಾಹಕರ ನಡುವೆ ನಡೆಯುವ ಸಾಮಾನ್ಯ ಮಾತುಕತೆ ಯಾವುದು ಗೊತ್ತೆ? ಆ ಬಸ್ಸು 11.46 ನಿಮಿಷಕ್ಕೆ ಲಾಲ್ ಭಾಗಿಗೆ ಬಂತು. ಈ ಬಸ್ಸು 11.47 ಕ್ಕೆ ಲೇಡಿಹೀಲ್ ಕ್ರಾಸ್ ಆಯಿತು. ನಾವು ಉರ್ವಾ ಸ್ಟೋರ್ ಗೆ 11.49ಕ್ಕೆ ಮುಟ್ಟ ಬೇಕಾಗಿತ್ತು. ಇದನ್ನು ಬಸ್ ನಲ್ಲಿ ಪ್ರಯಾಣಿಸುವ ಅನೇಕ ಜನ ಕೇಳಿಸಿಕೊಂಡಿರಬಹುದು.
ಆದರೆ ಈಗ ಇದಕ್ಕಿಂತಲೂ ಸೂಕ್ಷ್ಮವಾಗಿ ಮಾತುಕತೆಗಳು ನಡೆಯುತ್ತವೆ. ಅದೇನೂ ಗೊತ್ತಾ? ಬಿ ಬಸ್ಸು ಬೆಳಿಗ್ಗೆ 8 ಗಂಟೆ 16 ನಿಮಿಷ 26 ಸೆಕೆಂಡಿಗೆ ಸ್ಟೇಟ್ ಬ್ಯಾಂಕ್ ಬಿಡಬೇಕಿತ್ತು ಮಾರಾಯಾ. ಆದರೆ ಅವನು 8 ಗಂಟೆ 17 ನಿಮಿಷಕ್ಕೆ ಅಲ್ಲಿಂದ ಬಿಟ್ಟ ಕಾರಣ ಅದರ ಹಿಂದಿನ ಬಸ್ಸಿಗೆ ತುಂಬಾ ಕಷ್ಟವಾಯಿತು. ನಾವು ಒಂದು ಮಾಡುವ, ಅವನಿಗೆ ಬುದ್ಧಿ ಕಲಿಸೋಣ. ನಾವು ಇವತ್ತು ಸುರತ್ಕಲ್ ನಿಂದ ಮಧ್ಯಾಹ್ನ 2 ಗಂಟೆ 15 ನಿಮಿಷ 17 ಸೆಕೆಂಡಿಗೆ ಬಿಡೋಣ, ಆಗ ಅವನಿಗೆ ಗಣೇಶ್ ಪುರದಿಂದ ಕಾಟಿಪಳ್ಳಕ್ಕೆ ಹೋಗಿ ಸುರತ್ಕಲ್ ಗೆ ಬರುವಾಗ 2 ಗಂಟೆ 16 ನಿಮಿಷ ದಾಟುತ್ತದೆ. ಅವನಿಗೆ ಆಗ ಕಷ್ಟವಾಗುತ್ತದೆ. ಹಾಗೆ ಆಗಬೇಕು ಅವನಿಗೆ, ನಿನ್ನೆ ಅವನಿಗೆ ಜೋರು ಮಾಡಿದ್ದೇನೆ. 13 ಸೆಕೆಂಡು ಲೇಟ್ ಮಾಡಿದ್ದಾನೆ. ಬುದ್ಧಿ ಬೇಡ್ವಾ ಅವನಿಗೆ. ಅವನೇನು ಹೊಟ್ಟೆಗೆ ಅನ್ನ ತಿನ್ತಾನಾ, ಬೇರೆ ತಿನ್ತಾನಾ. ಹೀಗೆ ಮಾತುಕತೆ ನಡೆಯುತ್ತೆ.
ಬಹುಶ: ಇದನ್ನು ಗಮನವಿಟ್ಟು ಕೇಳಿದರೆ ನಿಮಗೆ ಆಶ್ಚರ್ಯ ಮತ್ತು ನಮ್ಮ ಬಸ್ಸಿನವರ ಬಗ್ಗೆ ವಿಚಿತ್ರ ಕುತೂಹಲ ಮೂಡಬಹುದು. ಈಗ ಅಂಕಿ ಸಂಖ್ಯೆಗಳಿಗೆ ಬರೋಣ. ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಇಲ್ಲಿಯ ವರೆಗೆ ಒಟ್ಟು 740 ಬಸ್ಸುಗಳಿಗೆ ಪರ್ಮಿಟ್ ಸಿಕ್ಕಿದೆ. ಇದರಲ್ಲಿ ಮಂಗಳೂರಿನಿಂದ ಉಡುಪಿ, ಕಾರ್ಕಳ ಕಡೆ ಹೋಗುವ ಬಸ್ಸುಗಳು ಕೂಡ ಸೇರಿವೆ. ಇನ್ನೂ ಇದರಲ್ಲಿ ಅಂದಾಜು 325 ಬಸ್ಸುಗಳು ಸಿಟಿ ಅಂದರೆ ನಗರ ಮತ್ತು ಗ್ರಾಮಾಂತರಕ್ಕೆ ಚಲಿಸುವ ರೂಟ್ ನಂಬ್ರ ಇರುವ ಸಿಟಿ ಬಸ್ಸುಗಳು. ಈ ಎರಡರ ನಡುವೆ ಒಂದಿಷ್ಟು ಒಗ್ಗರಣೆ ಹಾಕಲು 38 ನರ್ಮ್ ಬಸ್ಸುಗಳು ಕೂಡ ಇವೆ.
ಅನೇಕ ಬಾರಿ ನರ್ಮ್ ಬಸ್ಸುಗಳಿಗೂ ಈ ಸಿಟಿ ಬಸ್ಸುಗಳ ಚಾಲಕರ ನಡುವೆ ವಾಗ್ವಾದ ನಡೆಯುತ್ತದೆ. ಇದಕ್ಕೆ ಮುಖ್ಯ ಕಾರಣ ಸಿಟಿ ಬಸ್ಸಿನವರು ಹೇಳುವ ಪ್ರಕಾರ ನರ್ಮ್ ಬಸ್ಸಿನ ಚಾಲಕರಿಗೆ ಸಮಯದ ಪ್ರಜ್ಞೆ ಇಲ್ಲ. ಅವರು ಸರಕಾರಿ ನೌಕರಾಗಿರುವುದರಿಂದ ಅವರು ತಮಗೆ ಇಷ್ಟ ಬಂದಾಗ ಬಸ್ಸಿನಲ್ಲಿ ಕುಳಿತು ಕೊಳ್ಳುತ್ತಾರೆ. ಅವರಿಗೆ ದಿನಕ್ಕೆ ಎಂಟು ಟ್ರಿಪ್ ಮಾಡಿದರೆ ಸಾಕು. ಯಾವಾಗ ಬೇಕಾದರೂ ಮಾಡಬಹುದು. ಅದಕ್ಕೆ ಅವರು ಮಧ್ಯೆ ಮಧ್ಯೆದಲ್ಲಿ ತೂರಿ ಹೋಗಿ ನಮ್ಮ ಪ್ರಯಾಣಿಕರನ್ನು ಕಸಿಯುತ್ತಾರೆ ಎನ್ನುವ ಆರೋಪ ಹಾಕುತ್ತಾರೆ. ಆದರೆ ನರ್ಮ್ ಬಸ್ಸಿನವರು ಇದನ್ನು ನಿರಾಕರಿಸುತ್ತಾರೆ. ಅದರೊಂದಿಗೆ ನಮ್ಮ ಊರಿನ ಸಿಟಿ ಬಸ್ಸಿನವರು ಹಾಕುವ ಆರೋಪ ಎಂದರೆ ಆ ನರ್ಮ್ ಬಸ್ಸಿನಲ್ಲಿ ಇರುವ ಚಾಲಕ, ಕಂಡಕ್ಟರ್ ಗಳು ಘಟ್ಟದ ಮೇಲಿನವರು. ಅವರಿಗೆ ಇಲ್ಲಿನ ಟೈಮ್ ಹೇಗೆ ಗೊತ್ತಾಗಬೇಕು. ಒಂದಷ್ಟರ ಮಟ್ಟಿಗೆ ಇದು ನಿಜ ಕೂಡ. ಈ ಉತ್ತರ ಕರ್ನಾಟಕದ ಕಡೆ ಇರುವ ಸಿಟಿ ಬಸ್ಸಿನ ಚಾಲಕರಿಗೆ ತಾವು ಗಾಡಿ ಹತ್ತಿದ್ದೆ ಸಮಯ. ಅಲ್ಲಿನ ಚಾಲಕ, ನಿರ್ವಾಹಕರು ಬೆಳಿಗ್ಗೆ ಎದ್ದು ಹೊಟ್ಟೆ ತುಂಬಾ ತಿಂದು ಬೀಡಾ ಹಾಕಿ ಗಾಡಿ ಹತ್ತಿದರೆ ಅದೇ ಅವರ ಡ್ಯೂಟಿ. ಅವರಿಗೆ ಇಲ್ಲಿ ಸೆಕೆಂಡ್ ಲೆಕ್ಕಾಚಾರ ಕೇಳಿದರೆ ಟೆನ್ಷನ್ ಆಗದೆ ಇರುತ್ತದಾ?
Leave A Reply