ಮಂಗಳೂರಿನಲ್ಲಿ ಜನರೇ ಕಾಂಕ್ರೀಟ್ ಹಾಕಿ ಕಾರ್ಪೋರೇಟರ್, ಶಾಸಕರಿಗೆ ಮಂಗಳಾರತಿ ಎತ್ತಿದ್ದಾರೆ!!
ಮಂಗಳೂರು ದಕ್ಷಿಣದಲ್ಲಿ ಫ್ಲೆಕ್ಸ್ ಹಾಕುವುದರಲ್ಲಿ ಶಾಸಕ ಜೆ ಆರ್ ಲೋಬೋ ಅವರ ನೆಕ್ಟ್ ಇರುವವರು ಅವರದ್ದೇ ಪಕ್ಷದ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಎಸಿ ವಿನಯರಾಜ್. ಈಗ ಪಿವಿಎಸ್ ಬಳಿ ವಿನಯರಾಜ್ ಅವರು ತಕ್ಷಣ ಫ್ಲೆಕ್ಸ್ ಹಾಕಬೇಕಾಗಿದೆ. ಅದರಲ್ಲಿ ಅವರು ಹೀಗೆ ಬರೆಯಬೇಕು- ” ನನ್ನ ವಾರ್ಡ್ ಆಗಿರುವ ಕೋರ್ಟ್ ವಾಡರ್ಿನಲ್ಲಿ ನಾನು ಮಾಡಬೇಕಾಗಿರುವ ಕೆಲಸವನ್ನು ಸಾರ್ವಜನಿಕರು ತಮ್ಮದೇ ಖರ್ಚಿನಲ್ಲಿ ಪೊಲೀಸ್ ಅಧಿಕಾರಿಗಳ ಸಹಕಾರದಿಂದ ಮಾಡಿದ್ದಾರೆ. ನಿಜವಾಗಿ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಗೆ ನನ್ನ ಅಭಿನಂದನೆಗಳು. ಈ ಮೂಲಕ ಈ ವಾರ್ಡ್ ನ ಕಾರ್ಪೋರೇಟರ್ ಆಗಿರುವ ನಾನು ನಿಷ್ಟ್ರಯೋಜಕ ಎಂದು ನೀವೆ ಸಾಬೀತುಪಡಿಸಿದ್ದೀರಿ. ನನ್ನ ವಾರ್ಡಿನಲ್ಲಿ ಎಲ್ಲಿಯಾದರೂ ಸಣ್ಣ ಕಾಮಗಾರಿ ನಡೆದಾಗಲೂ ಅಲ್ಲಿ ನಿಂತು ಫೋಟೋ ತೆಗೆದು ಫೇಸ್ ಬುಕ್ ನಲ್ಲಿ ಹಾಕಿ ಮಿಂಚುತ್ತಿದ್ದವನು ನಾನು. ಈ ಬಾರಿ ಅಲ್ಲಿ ಹೋಗಿ ನಿಂತು ಫೋಟೋ ತೆಗೆಯೋಣವೆಂದರೆ ಈಗಾಗಲೇ ಎಲ್ಲಾ ಮಾಧ್ಯಮಗಳಲ್ಲಿ ಅದು ಸಾರ್ವಜನಿಕರ ಹಣದಲ್ಲಿ ಆದ ಕಾಮಗಾರಿ ಎಂದು ಪೊಲೀಸ್ ಕಮೀಷನರ್ ಅವರೇ ಹೇಳಿದ್ದಾರೆ.
ಜನ ಅಲ್ಲಿ ಬಸ್ ಸ್ಟಾಪಿನಲ್ಲಿ ನಿಲ್ಲಲು ಆಗದೇ ತೊಂದರೆ ಅನುಭವಿಸುತ್ತಿದ್ದರೂ ನಾನು ಅದನ್ನು ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಯಾಕೆಂದರೆ ನಾನು ಸರಕಾರಿ ಕಚೇರಿಗಳಿಗೆ ಕಲ್ಲು ಹೊಡೆದರೆ ಸಿಕ್ಕಿದಷ್ಟು ಪ್ರಚಾರ ಇದರಲ್ಲಿ ಸಿಗುವುದಿಲ್ಲ ಎಂದು ಅಂದುಕೊಂಡಿದ್ದೆ. ನಾನು ಮಾಡಬೇಕಾಗಿರುವ ಕೆಲಸವನ್ನು ಜನರೇ ಮುಂದೆ ನಿಂತು ಮಾಡಿರುವುದರಿಂದ ಮುಂದಿನ ಬಾರಿ ನಾನು ಅಲ್ಲಿ ಚುನಾವಣೆಗೆ ನಿಂತಾಗ ನನ್ನ ಸಾಧನೆಯ ಪಟ್ಟಿಯಲ್ಲಿ ನೀವು ಮಾಡಿದ ಕೆಲಸವನ್ನು ಹಾಕಲು ಆಗುವುದಿಲ್ಲ. ಇನ್ನು ಕುದ್ಮುಲ್ ರಂಗ್ ರಾವ್ ರಸ್ತೆಯಲ್ಲಿ ನಾನು ಹೋಗುವಾಗ ಪಿವಿಎಸ್ ಬಸ್ ಸ್ಟಾಪಿನತ್ತ ತಲೆ ತಿರುಗಿಸಿ ನೋಡುವಷ್ಟು ನೈತಿಕತೆ ನನಗೆ ಉಳಿಯುವುದಿಲ್ಲ. ಬಹುಶ: ಒಬ್ಬ ಕಾರ್ಪೋರೇಟರ್ ಗೆ ಇದಕ್ಕಿಂತ ಅವಮಾನ ಬೇರೆ ಇಲ್ಲ. ನಾನು ಕೇವಲ ಸುದ್ದಿಗೋಷ್ಟಿ ಮಾಡಿ ಸುಳ್ಳು ಸುಳ್ಳು ಹೇಳುವುದಕ್ಕೆ ಮಾತ್ರ ಸೀಮಿತ ಎಂದು ಜನರೇ ತೋರಿಸಿಕೊಟ್ಟಿದ್ದಾರೆ. ಇದರೊಂದಿಗೆ ಜನ ನನ್ನನ್ನು ಮಾತ್ರ ದೂರಿದರೆ ಅದು ತಪ್ಪಾಗುತ್ತದೆ. ಇದಕ್ಕೆ ನನ್ನ ಕ್ಷೇತ್ರದ ಶಾಸಕರಾದ ಜೆ ಆರ್ ಲೋಬೋ ಅವರು ಕೂಡ ಸಮಾನವಾಗಿ ದೋಷಿಗಳು. ಅವರು ಮಂಗಳೂರಿನಲ್ಲಿ ಸಿಕ್ಕಿದ ಕಡೆಗಳಲ್ಲಿ ಹೋರ್ಡಿಂಗ್ ನಿಲ್ಲಿಸಿ ಅಭಿವೃದ್ಧಿಯ ಹರಿಕಾರ ಎಂದು ಬರೆಸಿಕೊಂಡಿದ್ದಾರೆ. ಇಲ್ಲಿ ನೋಡಿದರೆ ನಗರದ ಹೃದಯಭಾಗದಲ್ಲಿ ಜನರೇ ತಾವು ಹಣ ಹಾಕಿ ಕಾಂಕ್ರೀಟ್ ಹಾಕಿದ್ದಾರೆ. ಶಾಸಕರಿಗೆ ಮತ್ತು ಕಾರ್ಪೋರೇಟರ್ ಗೆ ಹೇಳಿ ಪ್ರಯೋಜನವಿಲ್ಲ ಎಂದು ಜನ ಹೇಳುತ್ತಿದ್ದಾರೆ. ಅಲ್ಲಿ ನೋಡಿದರೆ ಪ್ಯಾಚ್ ಅಪ್ ಕಾಮಗಾರಿಗೆ ಪಾಲಿಕೆಯಲ್ಲಿ ಬಿಲ್ ಪಾಸ್ ಆಗುತ್ತಿದೆ. ಸುಮಾರು ನಾಲ್ಕು ಕೋಟಿ ರೂಪಾಯಿ ಹಣ ಇಲ್ಲಿಯ ತನಕ ಇದಕ್ಕೆ ತೆಗೆದಿಡಲಾಗಿದೆ ಎಂದು ಶಾಸಕರು ಹೇಳುತ್ತಾರೆ. ಆದರೆ ನನ್ನ ವಾರ್ಡಿನ ಈ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ. ಇದಕ್ಕಾಗಿ ಜನ ನನ್ನನ್ನು ಮಾತ್ರ ದೋಷಿಸಬಾರದು ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ, ಇಂತಿ ನಿಮ್ಮ ಎಸಿ ವಿನಯರಾಜ್” ಎಂದು ಬರೆದು ಫ್ಲೆಕ್ಸ್ ಹಾಕಿದರೆ ಒಳ್ಳೆಯದು. ಎಲ್ಲರಿಗೂ ವಿಷಯ ಗೊತ್ತಾಗುತ್ತದೆ.
ಕೇವಲ ಗುದ್ದಲಿ ಪೂಜೆಯಲ್ಲಿ ಬ್ಯುಸಿ..
ಕಳೆದ ಮೂರು ತಿಂಗಳುಗಳಿಂದ ಶಾಸಕ ಜೆ ಆರ್ ಲೋಬೋ ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಬಹುಶ: ಅವರು ಗುದ್ದಲಿ ಪೂಜೆ ಮಾಡದ ಜಾಗವೇ ಇಲ್ಲವೇನೋ ಎಂದು ಅನಿಸುತ್ತದೆ. ಅವರು ಶಿಲಾನ್ಯಾಸ ಮಾಡಿದ, ಕೈಯಲ್ಲಿ ಗುದ್ದಲಿ ಹಿಡಿದು ಬಗ್ಗಿ ಕ್ಯಾಮೆರಾಕ್ಕೆ ನೋಡುವ ಫೋಟೊ ಇಲ್ಲದ ದಿನಗಳೇ ಇಲ್ಲ. ಮಾಧ್ಯಮದವರು ಡೈಲಿ ಬೆಳಿಗ್ಗೆ ಅವರ ಕಚೇರಿಗೆ ಫೋನ್ ಮಾಡಿ ಇವತ್ತು ಎಲ್ಲಿ ಗುದ್ದಲಿ ಪೂಜೆ ಎಂದು ಕೇಳುವಷ್ಟು ಅದು ಕಾಮನ್ ಆಗಿದೆ. ಕಳೆದ ಐದು ವರ್ಷಗಳಲ್ಲಿ ಅವರು ಗುದ್ದಲಿ ಪೂಜೆ ಮಾಡಿದ್ದು ಮತ್ತು ಕಳೆದ ಮೂರು ತಿಂಗಳಲ್ಲಿ ಮಾಡಿದ ಗುದ್ದಲಿ ಪೂಜೆ ಒಟ್ಟು ಲೆಕ್ಕ ಹಾಕಿದಾಗ ನೋಡಿದರೆ ಕಳೆದ ಮೂರು ತಿಂಗಳಲ್ಲಿ ಮಾಡಿದ ಗುದ್ದಲಿ ಪೂಜೆಯೇ ಜಾಸ್ತಿ ಇದೆ. ಶಕ್ತಿನಗರದ ಕಾಮಗಾರಿಗೆ ಕುಲಶೇಖರ್ ದಲ್ಲಿ ಶಿಲಾನ್ಯಾಸ ಮಾಡುವುದರಿಂದ ಹಿಡಿದು ಎಲ್ಲಿಯೋ ಕೆಲಸ ಆಗಬೇಕಾಗಿರುವುದಕ್ಕೆ ಎಲ್ಲಿಯೋ ಗುದ್ದಲಿ ಪೂಜೆ ಮಾಡಿ ಅಲ್ಲಿನ ಜನರನ್ನು ಮಂಗ ಮಾಡುವಷ್ಟರ ಮಟ್ಟಿಗೆ ಅವರು ಬ್ಯುಸಿ ಆಗಿದ್ದಾರೆ. ಬಹುಶ: ನಿದ್ರೆಯಲ್ಲಿಯೂ ಗುದ್ದಲಿ ಪೂಜೆಯ ಕನಸು ಬೀಳುತ್ತಿದೆಯೇನೋ. ತಮ್ಮ ಕ್ಷೇತ್ರದಲ್ಲಿ ಅಷ್ಟು ಕೆಲಸ ಮಾಡಿದೆ, ಇಷ್ಟು ಮಾಡಿದೆ ಎಂದು ಎಲ್ಲಾ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿರುವ ಶಾಸಕರ ಕೆಲಸವನ್ನು ಪಿವಿಎಸ್ ಬಳಿ ಹೋದರೆ ಗೊತ್ತಾಗುತ್ತದೆ. ಅಂತಹ ಫೋಟೋಗಳನ್ನು ಇವತ್ತು ಪೋಸ್ಟ್ ಮಾಡಿದ್ದೇನೆ.
ಜನಪ್ರತಿನಿಧಿಗಳು ಮಾಡಲಿಲ್ಲ ಎಂದು ಸ್ಥಳೀಯ ನಾಗರಿಕರು ಶ್ರಮದಾನದ ಮೂಲಕ ಮಾಡಿಸಿದ ಕೆಲಸವನ್ನು ಗ್ರಾಮೀಣ ಪ್ರದೇಶದಲ್ಲಿ ನೋಡಿದ್ದೇವೆ. ಅದರೆ ನಗರ ಪ್ರದೇಶ ಅದರಲ್ಲಿಯೂ ಪಿವಿಎಸ್ ವೃತ್ತದ ಎದುರು ಜನ ತಾವೇ ಕೆಲಸ ಮಾಡಿ ಮಾದರಿ ಎನಿಸಿಕೊಂಡಿದ್ದಾರೆ ಎಂದರೆ ನೀವೆ ಅರ್ಥ ಮಾಡಿ.
ಇಲ್ಲಿ ಇಲ್ಲ, ಖೈಬರ್ ಪಾಸ್ ನಲ್ಲಿ ಎಲ್ಲ..
ಬೇಕಾದರೆ ನೀವು ಒಮ್ಮೆ ಪಿವಿಎಸ್ ಬಿಲ್ಡಿಂಗ್ ಮುಂದೆ ಇರುವ ಕುದ್ಮುಲ್ ರಂಗರಾವ್ ಹೆಣ್ಮಕ್ಕಳ ಹಾಸ್ಟೆಲ್ ಹೊರಗಿನ ಬಸ್ ಸ್ಟಾಪ್ ನೋಡಿ. ಅಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಲ್ಲಿ. ಆಗ ಪರಿಸ್ಥಿತಿ ಅರಿವಾಗುತ್ತದೆ. ಜನರಿಗೆ ಅಲ್ಲಿ ಹೋಗಲು ಸರಿಯಾದ ಫುಟ್ ಪಾತ್ ಇಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲ. ಫುಟ್ ಪಾತ್ ಗಳ ಫೋಟೋ ನೋಡಿ. ಒಬ್ಬರು ಕೆಎಎಸ್ ಅಧಿಕಾರಿಯಾಗಿ ಇದ್ದವರು ಶಾಸಕರಾದರೆ ಇಂತಹುದ್ದೆಲ್ಲ ಸೂಕ್ಷ್ಮ ಎಲ್ಲಾ ಗೊತ್ತಿರುತ್ತೆ ಎಂದು ಜನ ಅಂದುಕೊಂಡಿದ್ದರು. ಕಾಂಕ್ರೀಟ್ ರಸ್ತೆಯ ಅಂಚುಗಳನ್ನು ಹಾಗೆ ಬಿಟ್ಟರೆ ಜನರಿಗೆ ಎಷ್ಟು ತೊಂದರೆಯಾಗುತ್ತದೆ ಎಂದು ಗೊತ್ತಿಲ್ಲದಷ್ಟು ದಡ್ಡರು ನಮ್ಮನ್ನು ಆಳುತ್ತಾರಲ್ಲ ಎನ್ನುವುದೇ ಜನರಿಗೆ ಬೇಸರವಾಗಿದೆ. ಇಲ್ಲಿ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ಬಸ್ಸುಗಳು ಬಂದು ನಿಲ್ಲುತ್ತವೆ. ಹಾಗಿರುವಾಗ ಈ ಪ್ರದೇಶ ಹೇಗಿರಬೇಕಿತ್ತು. ಅದು ಬಿಟ್ಟು ಜನರೇ ತಮಗೆ ಅನುಕೂಲವಾಗುವ ಹಾಗೆ ಕೆಲಸ ಮಾಡುವುದಾದರೆ ಕಾರ್ಪೋರೇಟರ್ ಯಾಕೆ, ಶಾಸಕರು ಯಾಕೆ, ಫ್ಲೆಕ್ಸ್ ಹಾಕುವುದಕ್ಕಾ?
ಇಲ್ಲಿ ಒಳಚರಂಡಿ, ಫುಟ್ ಪಾತ್ ಮಾಡಲಾಗದ ಕಾರ್ಪೋರೇಟರ್ ವಿನಯರಾಜ್ ಹಾಗೂ ಶಾಸಕ ಜೆಆರ್ ಲೋಬೋ ಅವರು ಅಲ್ಲಿ ಪಕ್ಕದಲ್ಲಿಯೇ ವಾಹನಗಳು ಓಡಾಡದ ಖೈಬರ್ ಪಾಸ್ ರಸ್ತೆಯಲ್ಲಿ ಲಕ್ಷಾಂತರ ರೂಪಾಯಿ ಹಾಕಿ ಡ್ರೈನೇಜ್ ಮಾಡುತ್ತಿದ್ದಾರೆ. ಬಹುಶ: ಅಲ್ಲಿ ಕೆಲಸ ಮಾಡಿಸಿದರೆ “ಅನುಕೂಲ” ಜಾಸ್ತಿ ಇರಬೇಕು!
Leave A Reply