ಕಾವೇರಿ ದಡದಲ್ಲಿ ಕನ್ನಡ-ತಮಿಳುಗಳ ಬಲವಾದ ‘ಮೈಟ್ರೀ’!
ಮೊದಲ ಬಾರಿ ಕಲ್ಯಾಣಿ ಸ್ವಚ್ಛತೆಯ ಕಲ್ಪನೆ ನಾವು ಕಟ್ಟಿಕೊಂಡಾಗ ಅನೇಕರು ನಕ್ಕಿದ್ದರು. ಈ ದೇಶದಲ್ಲಿ ಈ ರೀತಿಯ ಚಟುವಟಿಕೆಗಳಿಗೆ ಬೆಲೆ ಇಲ್ಲವೆಂದಿದ್ದರು. ನಮ್ಮಲ್ಲಿ ಹರಿಯುತ್ತಿರುವುದು ಋಷಿ ರಕ್ತ ಎನ್ನುವಾಗ ನಕ್ಕು ಆಡಿಕೊಳ್ಳುತ್ತಿದ್ದರು. ಕೆಡವುವರ ನಡುವೆ ಕಟ್ಟುವ ಕೆಲಸಕ್ಕೆ ಹೆಚ್ಚಿನ ಬೆಲೆ ಇದೆ. ಎಲ್ಲವನ್ನು ಆಡಳಿತ ಯಂತ್ರವೇ ಮಾಡಬೇಕೆನ್ನುವುದು ಬ್ರಿಟೀಷರು ನಮಗೆ ಕಲಿಸಿಕೊಟ್ಟು ಹೋದ ಪಾಠ. ನಾವೀಗ ಬದಲಾಗಬೇಕಿದೆ. ನಮ್ಮ ಮನಸ್ಥಿತಿಯನ್ನು ಬದಲು ಮಾಡಿಕೊಳ್ಳಲೇಬೇಕಿದೆ. ಈ ನಿಟ್ಟಿನಲ್ಲಿಯೇ ಹೊಸ ತಾರುಣ್ಯದ ಮೇಲೆ ವಿಶ್ವಾಸವುಕ್ಕೇರೋದು.
ಕಾವೇರಿಗಾಗಿ ಗಲಾಟೆ ತೀವ್ರವಾಗಿದ್ದ ಹೊತ್ತದು. ತಮಿಳುನಾಡು, ಕರ್ನಾಟಕ ಗಳನ್ನು ತಾನು ಹರಿಯುವ ಮೂಲಕ ಬೆಸೆದಿದ್ದ ಕಾವೇರಿ ಅದೇ ಕಾರಣಕ್ಕೆ ಬೇರ್ಪಡಿಸಲೂ ಕಾರಣವಾಗಿದ್ದಳು. ಬೆಂಗಳೂರಿನ ಗಲ್ಲಿ-ಗಲ್ಲಿಗಳು ಬಿಕೋ ಎನ್ನುತ್ತಿದ್ದವು. ಅಲ್ಲಲ್ಲಿ ಟೈರು ಸುಟ್ಟ ರಸ್ತೆಗಳು. ಪ್ರತಿಭಟನೆಗೆ ಬೆಂಬಲ ಕೊಡದ ಮಂಗಳೂರಿಗರ ಮೇಲೆ ಅನೇಕರಿಗೆ ಕೋಪ. ‘ಅಲ್ಲಿ ಬಸ್ಸುಗಳು ಸುಟ್ಟವು ಇಲ್ಲಿ, ಅಂಗಡಿಗೆ ಬೆಂಕಿ’ ಈ ರೀತಿಯ ಸುದ್ದಿ ಸರ್ವರ್ ಸಾಮಾನ್ಯವಾಗಿತ್ತು. ಇವೆಲ್ಲದರ ನಡುವೆ ಕಾವೇರಿಯ ನೀರಿನ ಹರಿವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದನ್ನು ಯಾರೂ ಗಮನಿಸಿದಂತೆಯೇ ಇರಲಿಲ್ಲ.
ಕಳೆದ ಒಂದು ದಶಕದಲ್ಲಿ ಕಾವೇರಿಯ ಜಲಾನಯನ ಪ್ರದೇಶದಲ್ಲಿ ಮಳೆ ವಾಡಿಕೆಗಿಂತ ಅರ್ಧದಷ್ಟು ಕಡಿಮೆಯಾಗಿದೆ. ವಿಪರೀತ ಕಾಡಿನ ನಾಶ ಈ ದಶಕದಲ್ಲಿ ಆಗಿದೆ. ಕಾಫಿ ಎಸ್ಟೇಟುಗಳು ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಲೇ ಇದೆ. ವಿದ್ಯುತ್ ತಂತಿ ಎಳೆವ ನೆಪದಲ್ಲಿ ಮತ್ತಷ್ಟು ಮರಗಳ ಸಾವು. ಹೀಗೆಯೇ ಮುಂದುವರೆದರೆ ತಮಿಳುನಾಡಿನವರೆಗೂ ಸಾಗುವುದಿರಲಿ ಕಾವೇರಿ ತವರು ಮನೆ ಮಡಿಕೇರಿ ಬಿಟ್ಟು ಬರುವುದೂ ಕಷ್ಟವಾದೀತೇನೋ? ಹಾಗಂತಲೇ ಈ ಗಲಾಟೆಯ ನಡುವೆ ಕನ್ನಡ ಮತ್ತು ತಮಿಳಿಗರು ಸೇರಿ ಕಾವೇರಿ ತೀರದಲ್ಲಿ ಗಿಡನೆಟ್ಟು ಆಕೆ ತುಂಬಿ ಹರಿಯಲೆಂದು ಪ್ರಾರ್ಥನೆ ಸಲ್ಲಿಸುವ ಕಲ್ಪನೆ ಮಾಡಿಕೊಂಡಿದ್ದೆವು. ತಮಿಳು ಮಿತ್ರರೊಂದಿಗೆ ಮಾತುಕತೆಯೂ ನಡೆದಿತ್ತು. ಕಳೆದ ಅನೇಕ ವರ್ಷಗಳಿಂದ ದೇವಸ್ಥಾನಗಳ ಸ್ವಚ್ಛತೆ ಮಾಡುವ ತಮಿಳಿಗರ ತಂಡವೊಂದಿದೆ. ಸ್ವಚ್ಛತೆ ಅಂದರೆ ಬರಿಯ ಕಸ ಗುಡಿಸಿ ಕೈಮುಗಿದು ಹೊರಡುವುದಲ್ಲ; ಪ್ರಾಂಗಣದಿಂದ ಶುರುಮಾಡಿ ಗೋಪುರದವರೆಗೆ ಎಲ್ಲವನ್ನೂ ಆಮೂಲಾಗ್ರವಾಗಿ ಸ್ವಚ್ಛಗೊಳಿಸಿ ಕೊನೆಗೆ ಅಗತ್ಯವಿದ್ದೆಡೆ ಸುಣ್ಣ ಬಳಿದು ದೇವಾಲಯಕ್ಕೆ ಹೊಸ ರೂಪು ಕೊಡುವ ಅಪರೂಪದ ತಂಡವದು. ತಮಿಳುನಾಡಿನ ಗುಡಿಗಳನ್ನು ಸ್ವಚ್ಛ ಮಾಡುತ್ತಿದ್ದವರು ಒಮ್ಮೆ ಕರ್ನಾಟಕದ ಮುಳಬಾಗಿಲಿನ ಮಂದಿರ ಸ್ವಚ್ಛತೆಗೆ ಮುಂದಾದಾಗ ಯುವಾಬ್ರಿಗೇಡಿನ ಸಂಪರ್ಕಕ್ಕೆ ಬಂದರು. ಅವರೊಂದಿಗೆ ಕೈ ಜೋಡಿಸಿ ದುಡಿಯುವಾಗ ಗೊತ್ತಾಗಿದ್ದು ಅವರು ಅಸಾಧಾರಣ ಕೆಲಸಗಾರರು ಅಂತ. ನಮ್ಮ ನಡುವೆ ಭಾಷೆಯ ಭೇದ ಕಾಣಲಿಲ್ಲ, ಸಾಂಸ್ಕೃತಿಕ ಭಿನ್ನತೆಗಳು ಕಂಡು ಬರಲಿಲ್ಲ. ನಮ್ಮನ್ನು ಬೆಸೆದಿದ್ದು ಮುಳಬಾಗಿಲಿನ ದೇವಸ್ಥಾನ ಮಾತ್ರ. ಬೇರ್ಪಡಿಸುವ ಸಂಗತಿಗಳ ನಡುವೆಯೇ ಬೆಸೆಯುವ ಫೆವಿಕ್ವಿಕ್ ಹುಡುಕುವುದು ಬಹುಮುಖ್ಯ. ಅಂದೇ ಮತ್ತೊಮ್ಮೆ ಕಾವೇರಿ ತಟದಲ್ಲಿ ಸೇರುವ ನಿಶ್ಚಯ ಮಾಡಿದ್ದೆವು. ಎರಡು ರಾಜ್ಯಗಳ ನಡುವಣ ಬಾಂಧವ್ಯವನ್ನು ಬೆಸೆಯಲಿ ನಾವು ನೆಡುವ ಸಸಿ ಎಂಬ ಕಾರಣಕ್ಕೆ ‘ಮೈTree’ ಎಂಬ ಹೆಸರನ್ನು ಯೋಜನೆಗೆ ನಾಮಕರಣ ಮಾಡಲಾಯ್ತು.
ಮಳೆಗಾಲ ಹತ್ತಿರ ಬರುತ್ತಿದ್ದಂತೆ ಕೊಡಗಿನತ್ತ ಧಾವಿಸುವ ಚಡಪಡಿಕೆ ಶುರುವಾಗಿತ್ತು. ಅದಾಗಲೇ ಕಾವೇರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ಬಿಎಸ್ಎನ್ಎಲ್ನಿಂದ ಸ್ವಯಂ ನಿವೃತ್ತಿ ಪಡೆದ ಚಂದ್ರಮೋಹನ್ ಜೊತೆಯಾದರು. ಗಿಡ ನೆಡಲು ಜಾಗ ಅರಸುವ, ಗಿಡ ಪಡೆಯುವ, ಅದರ ರಕ್ಷಣೆಗೆ ಬೇಕಾದ ವ್ಯವಸ್ಥೆಯ ಎಲ್ಲಾ ಚಟುವಟಿಕೆಗಳು ಬಿರುಸಾಗಿ ನಡೆದವು. ತಮಿಳುನಾಡಿನ ಹುಡುಗರೂ ಕಾವೇರಿ ದಡದತ್ತ ಬರಲು ಉತ್ಸುಕರಾಗಿಯೇ ಸಿದ್ಧರಾದರು. ಆಗಲೇ ಚಂದ್ರಮೋಹನ್ ಗಿಡ ನೆಡುವುದರೊಂದಿಗೆ ಕುಶಾಲನಗರ ಭಾಗದ ಕಾವೇರಿಯನ್ನು ಸಾಂಕೇತಿಕವಾಗಿ ಸ್ವಚ್ಛಗೊಳಿಸೋಣವೆಂದು ಅಳುಕಿನಿಂದಲೇ ಕೇಳಿದರು. ಅಳುಕು ಸಹಜವೇ. ನದಿಯ ಸ್ವಚ್ಛತೆ ಅಂದರೆ ಸಲೀಸು ಕೆಲಸವೇನಲ್ಲ. ಗಿಡನೆಟ್ಟು ಫೋಟೋಗೆ ಪೋಸು ಕೊಡುವವರು ಬಹಳ. ಹಾಗೆ ಬರುವವರು ನದಿ ಸ್ವಚ್ಛತೆಗೆ ಕೈ ಹಾಕಬಲ್ಲರೇ ಎಂಬ ಹೆದರಿಕೆ ಅವರಿಗೆ ಇದ್ದೇ ಇತ್ತು. ಅವರಿಗೆ ರಾಜ್ಯಾದ್ಯಂತ 80ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಿದ, ಕಪಿಲೆಯೊಳಗಿನ ಕೊಳಕನ್ನು ತೆಗೆದು ಶುದ್ಧಗೊಳಿಸಿದ ತಂಡವಿದು ಎಂಬ ಅರಿವಿರಲಿಲ್ಲ ಅಷ್ಟೇ.
ಮೇ 20 ರ ಬೆಳಿಗ್ಗೆ 6 ಗಂಟೆಗೆ ಕುಶಾಲನಗರದ ಸೇತುವೆಯ ಬಳಿಯಲ್ಲಿರುವ ಕಾವೇರಿ ಮಾತೆಯ ಮೂತರ್ಿಗೆ ಪೂಜೆ ಸಲ್ಲಿಸಿ, ಆರತಿಗೈದು ಆಶೀವರ್ಾದ ಪಡೆದೇ ನದಿಯತ್ತ ಹೊರಟೆವು. ಒಂದೆರಡು ದಿನದ ಹಿಂದೆಯೇ ಬಿದ್ದ ಮಳೆಯಿಂದ ನೀರು ಕೆಸರು ಬಣ್ಣಕ್ಕೆ ತಿರುಗಿತ್ತು. ಅಕ್ಕಪಕ್ಕದಲ್ಲಿ ಬಿದ್ದಿದ್ದ ಪಾಲಿಥೀನ್ ಕವರ್ಗಳನ್ನು ಸಂಗ್ರಹಿಸುತ್ತಿದ್ದಾಗಲೇ ಕೆಸರಿನೊಳಗೆ ಹೂತ ಬಟ್ಟೆಯ ಚೀಲಗಳು, ಮಡಕೆಗಳು, ಮನೆಯ ಗಲೀಜನ್ನು ತುಂಬಿ ಬಿಸಾಡಿದ ಕವರುಗಳು, ಶವ ಸಂಸ್ಕಾರದ ನಂತರ ಹೂ ತುಂಬಿ ಎಸೆದ ಚೀಲಗಳು, ಪ್ಯಾಂಟು-ಶರ್ಟ್-ಸೀರೆಗಳು ಎಲ್ಲವೂ ಸಿಗಲಾರಂಭಿಸಿದವು. ಹಾಗೆಯೇ ಮುಂದಕ್ಕೆ ಸಾಗಿ ಸೇತುವೆಯ ಅಡಿಯುದ್ದಕ್ಕೂ ನೀರೊಳಗೆ ಕೈ ಹಾಕಿದರೆ ಸಾಕು ಏನಾದರೂ ಸಿಗುತ್ತಿತ್ತು. ಒಂದರ್ಧಗಂಟೆಯ ಕೆಲಸ ಅಂದುಕೊಂಡೆವು ನೋಡ ನೊಡುತ್ತಲೇ ಪ್ರತೀ ಕಾರ್ಯಕರ್ತನೂ ಕೆಲಸದಲ್ಲಿ ಮಗ್ನನಾಗಿಬಿಟ್ಟ. ನೀರೊಳಗೆ ಕೈ ಹಾಕಿ ಏನಾದರೂ ಹುಡುಕಿ ದಡದತ್ತ ಎಸೆಯಲಾರಂಭಿಸಿದ. ಹೀಗೆ ಸಂಗ್ರಹಿಸಿದ ವಸ್ತುಗಳು ನಾಲ್ಕಾರು ಟ್ರ್ಯಾಕ್ಟರು ತುಂಬುವಷ್ಟಾಗಿತ್ತು. ಅಷ್ಟರೊಳಗೆ ಮೂರು ತಾಸು ಸರಿದೇ ಹೋಗಿತ್ತು. ಹಾಗಂತ ಕೆಲಸ ಮುಗಿದಿರಲಿಲ್ಲ. ಈ ದಡವೂ ಭೂ ಮೇಲ್ಮೈಯಿಂದ ಕನಿಷ್ಠ 50 ಅಡಿ ಕೆಳಗಿತ್ತು. 25ಕ್ಕೂ ಹೆಚ್ಚು ಮೆಟ್ಟಿಲುಗಳು ಮತ್ತು ಕೊನೆಯ 20 ಅಡಿ ಮಣ್ಣಿನ ದಿಬ್ಬವನ್ನು ಏರಿಕೊಂಡು ಸಂಗ್ರಹಿಸಿದ್ದ ಕಸ ಬಿಸಾಡುವ ಕೆಲಸ ಆಗಲೇಬೇಕಿತ್ತು.
ಕುಶಾಲನಗರದ ಕಾರ್ಯಕರ್ತರೊಂದಷ್ಟು ಜನ ಮುಂದೆ ಬಂದು ಈ ಕಸ ಇಲ್ಲಿಯೇ ಇರಲಿ ಇದಕ್ಕೆ ಬೆಂಕಿ ಹಚ್ಚಿ ವಿಲೇವಾರಿ ಮಾಡುತ್ತೇವೆಂದು ಉತ್ಸಾಹದಿಂದಲೇ ಮಾತನಾಡುತ್ತಿದ್ದರು. ಯಾಕೋ ನಮಗೆ ಸರಿ ಎನಿಸಲಿಲ್ಲ. ಕಷ್ಟಪಟ್ಟು ನೀರಿನಿಂದೆತ್ತಿ ಬಿಸಾಡಿದ ಈ ಕಸ ಒಂದೇ ಮಳೆಗೆ ಮತ್ತೆ ನೀರಿಗೆ ಸೇರಿಕೊಳ್ಳುವ ಎಲ್ಲಾ ಅಪಾಯವೂ ಇದ್ದುದರಿಂದ ಅದನ್ನು ಕಾವೇರಿ ತಾಯಿಯ ಪ್ರತಿಮೆಯಡಿ ಒಯ್ದು ತಲುಪಿಸುವುದೇ ಸೂಕ್ತ ಎಂದು ನಿಶ್ಚಯಿಸಲಾಯಿತು. ಅದರೊಟ್ಟಿಗೆ ನಿಜವಾದ ಯುವಾಬ್ರಿಗೇಡಿನ ಸಾಹಸ ಶುರುವಾಯಿತು. ಹೆಣವನ್ನೊಯ್ಯಲು ಬಿದಿರ ಬೊಂಬುಗಳನ್ನು ಕಟ್ಟುವಂತೆ ಕಟ್ಟಿ ಕಸದ ಚಟ್ಟ ಸಿದ್ಧಪಡಿಸಲಾಯಿತು. ಅದರ ಮೇಲೆ ದಡದ ಬದಿಯಲ್ಲಿ ಬಿದ್ದಿದ್ದ ತಗಡಿನ ಶೀಟುಗಳನ್ನು ಹಾಸಿ ಕಸವೆಂಬ ಹೆಣವನ್ನು ಅದರ ಮೇಲೆ ತುಂಬಲಾಯಿತು. ಪ್ರತೀ ಬಾರಿಯೂ ಅರ್ಧ ಟ್ರ್ಯಾಕ್ಟರಿಗಾಗುವಷ್ಟು ಕಸ ತುಂಬಿಕೊಂಡು ಹದಿನೈದಿಪ್ಪತ್ತು ಕಾರ್ಯಕರ್ತರು ಒಂದೊಂದೇ ಮಟ್ಟಿಲನ್ನೇರುವಾಗ ಸೇತುವೆಯುದ್ದಕ್ಕೂ ಸ್ಥಳೀಯರನೇಕರು ನಿಂತು ಆನಂದಿಸುತ್ತಿದ್ದರು! ಹಳೆಯ ಸೀರೆಗಳಲ್ಲಿ ಕಸ ತುಂಬಿಕೊಂಡು ಮೇಲೊಯ್ದು ಬಿಸಾಡಿದವರು ಕೆಲವರು. ಇನ್ನೂ ಕೆಲವರು ಮೆಟ್ಟಿಲುಗಳ ಮೇಲೆ ನಿಂತು ಕಸ ತುಂಬಿದ ಚೀಲಗಳನ್ನು ಕೈ ಬದಲಾಯಿಸಿ ಮೇಲೆ ತಲುಪಿಸಿದರು. ಓಹ್! ಸುಮಾರು ಒಂದೂವರೆ ತಾಸುಗಳ ನಿರಂತರ ಪ್ರಯಾಸ. ಕೊನೆಗೂ ದಡ ಕಸಮುಕ್ತವಾಯ್ತು. ಕಾಕತಾಳೀಯವೆಂಬಂತೆ ಮುನ್ಸಿಪಾಲಿಟಿಯ ಕಡೆಯಿಂದ ಎರಡೆರೆಡು ಟ್ಯ್ರಾಕ್ಟರುಗಳು ಬಂದು ನಿಂತಿದ್ದವು. ರಸ್ತೆ ಬದಿಯಲ್ಲಿ ನಮ್ಮದೇ ಅಜ್ಞಾನದಿಂದಾಗಿ ಕಾವೇರಿಯನ್ನು ಮಲಿನಗೊಳಿಸಿದ್ದ ಕಸ ಅಂಗಾತವಾಗಿ ಮಲಗಿಕೊಂಡು ಜನರನ್ನು ಹಂಗಿಸುತ್ತಿತ್ತು. ಅದೇ ವೇಳೆಗೆ ಕಾರಿನಿಂದಿಳಿದ ಟೈ ಕಟ್ಟಿಕೊಂಡು ಬಂದ ವ್ಯಕ್ತಿ ತನ್ನ ಕಾರಿನಿಂದ ನೀರಿಗೆಸೆಯಲು ಕಸ ತುಂಬಿದ ಚೀಲವೊಂದನ್ನು ಹೊರ ತೆಗೆದ ಅಷ್ಟೇ. ಅಲ್ಲೊಂದು ಮಿನಿ ಕದನವೇ ಶುರುವಾಯಿತು. ಆತ ಸದ್ದಿಲ್ಲದೇ ಕಾರು ಹತ್ತಿ ಹೊರಟುಬಿಟ್ಟ. ವಾಸ್ತವವಾಗಿ ನಮಗೆ ಬೇಕಿರೋದು ಇದೇ ಸಾಕ್ಷರತೆ. ಪ್ರಕೃತಿಗೆ ಪೂರಕವಾಗಿ ಬದುಕುವ ಸಾಕ್ಷರತೆ, ನೆಲ-ಜಲಗಳ ರಕ್ಷಣೆಯ ಸಾಕ್ಷರತೆ. ಅದಿಲ್ಲದೇ ಯಾವ ವಿಶ್ವವಿದ್ಯಾಲಯದ ಡಾಕ್ಟರೇಟ್ ಪಡೆದೂ ಏನುಪಯೋಗ?
ಬಿಡಿ. ಅಲ್ಲಿಂದ ಮುಂದೆ ನೂರೈವತ್ತಕ್ಕೂ ಹೆಚ್ಚಿನ ಗಿಡಗಳನ್ನು ಕಾವೇರಿ ತೀರದುದ್ದಕ್ಕೂ ನೆಟ್ಟು ಅದನ್ನುಳಿಸಿಕೊಳ್ಳುವ ಹೊಣೆಗಾರಿಕೆಯನ್ನು ಸ್ಥಳೀಯರಿಬ್ಬರಿಗೆ ವಹಿಸಿ ನದಿಯಲ್ಲಿ ಮೀಯುವ ವೇಳೆಗೆ ಸಾರ್ಥಕತೆಯ ಭಾವ ಮನಸ್ಸನ್ನು ಆವರಿಸಿಕೊಂಡಿತ್ತು. ಅಲ್ಲವೇ ಮತ್ತೆ? ಕೆಡವುವರ ನಡುವೆ ಕಟ್ಟುವ ಕೆಲಸಕ್ಕೆ ಹೆಚ್ಚಿನ ಬೆಲೆ ಇದೆ. ಎಲ್ಲವನ್ನು ಆಡಳಿತ ಯಂತ್ರವೇ ಮಾಡಬೇಕೆನ್ನುವುದು ಬ್ರಿಟೀಷರು ನಮಗೆ ಕಲಿಸಿಕೊಟ್ಟು ಹೋದ ಪಾಠ. ನಾವೀಗ ಬದಲಾಗಬೇಕಿದೆ. ನಮ್ಮ ಮನಸ್ಥಿತಿಯನ್ನು ಬದಲು ಮಾಡಿಕೊಳ್ಳಲೇಬೇಕಿದೆ. ಈ ನಿಟ್ಟಿನಲ್ಲಿಯೇ ಹೊಸ ತಾರುಣ್ಯದ ಮೇಲೆ ವಿಶ್ವಾಸವುಕ್ಕೇರೋದು. ರಾಜ್ಯಾದ್ಯಂತ ಕಳೆದ ಮೂರು ತಿಂಗಳಲ್ಲಿ ಯುವಾಬ್ರಿಗೇಡಿನ ತರುಣರೊಂದಿಗೆ ಸೇರಿಕೊಂಡ ಇತರೆ ಯುವಕರು ಪ್ರತೀ ಭಾನುವಾರ ಒಂದಿಲ್ಲೊಂದು ಕಲ್ಯಾಣಿ, ಬಾವಿ ಸ್ವಚ್ಛ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಲವೆಡೆ ಸ್ವಚ್ಛ ಮಾಡುತ್ತ ಮಾಡುತ್ತಲೇ ನೀರು ಜಿನುಗಿ ಸುತ್ತಲಿನ ಜನರ ಹುಬ್ಬೇರುವಂತಾಗಿದೆ. ಗದಗ್ನಲ್ಲಿ ಒಂದು ದಿನವೂ ಬಿಡದೇ ನೀವು ಲೇಖನ ಓದುವಾಗ ನೂರನೇ ದಿನದ ಕೆಲಸಕ್ಕೆ ಕೊನೆರಿ ಹೊಂಡಕ್ಕಿಳಿದಿರುತ್ತಾರೆ ತರುಣರು.
ಮೊದಲ ಬಾರಿ ಕಲ್ಯಾಣಿ ಸ್ವಚ್ಛತೆಯ ಕಲ್ಪನೆ ನಾವು ಕಟ್ಟಿಕೊಂಡಾಗ ಅನೇಕರು ನಕ್ಕಿದ್ದರು. ಈ ದೇಶದಲ್ಲಿ ಈ ರೀತಿಯ ಚಟುವಟಿಕೆಗಳಿಗೆ ಬೆಲೆ ಇಲ್ಲವೆಂದಿದ್ದರು. ನಮ್ಮಲ್ಲಿ ಹರಿಯುತ್ತಿರುವುದು ಋಷಿ ರಕ್ತ ಎನ್ನುವಾಗ ನಕ್ಕು ಆಡಿಕೊಳ್ಳುತ್ತಿದ್ದರು. ಈಗ ನೋಡಿ. ಕೆರೆ ಸ್ವಚ್ಛತೆಗೆ ಜನ ಮುಂದೆ ಬಂದಿದ್ದಾರೆ, ಜಲಾಶಯಗಳ ಹೂಳೆತ್ತಲು ರೈತರು ಸರ್ಕಾರದ ಸೆರಗು ಬಿಟ್ಟಿದ್ದಾರೆ. ನದಿಗಳ ಕಾಯಕಲ್ಪಕ್ಕೆ ಮತ್ತೆ ಕೈ ಹಾಕಲಾಗುತ್ತಿದೆ. ಹೌದು. ನಮ್ಮ ಕನಸಿನ ಕರ್ನಾಟಕ ಹೀಗೇ ನಿರ್ಮಾಣವಾಗೋದು. ನಮ್ಮ ಕನಸುಗಳ ಅರ್ಧದಷ್ಟನ್ನು ಸಾಕಾರಗೊಳಿಸಲು ಸರ್ಕಾರವೇ ಬೇಕಿಲ್ಲ. ರಸ್ತೆ, ಸೇತುವೆ, ಮೂಲ ಸೌಕರ್ಯಗಳನ್ನು ಒದಗಿಸಲು ಜನಪ್ರತಿನಿಧಿಯ ಅಗತ್ಯವಿಲ್ಲ. ಬುದ್ಧಿವಂತರೊಂದಷ್ಟು ಜನ ಜಿಲ್ಲಾಧಿಕಾರಿ, ತಹಶೀಲ್ದಾರರ ಜೊತೆ ಸಂಪರ್ಕದಲ್ಲಿದ್ದರೆ ಸಾಕು. ಜನಪ್ರತಿನಿಧಿ ಬೇಕಿರೋದು ಅಸಾಧ್ಯವೆನಿಸುವ ಸವಾಲುಗಳುಳ್ಳ ಕೆಲಸ ಮಾಡಲು ಮಾತ್ರ. ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಇಂತಹ ಅನೇಕ ಕೆಲಸ ಮಾಡಬಲ್ಲ ಸಾಮಥ್ರ್ಯವುಳ್ಳ ನಾಯಕನನ್ನು ಆರಿಸುವುದಷ್ಟೇ ನಮ್ಮ ಬುದ್ಧಿ ಮತ್ತೆ.
ಓಹ್! ನೀರಿನಿಂದ ನಾಯಕನವರೆಗೆ ಬಂದುಬಿಟ್ಟೆವು. ಬೆಂಗಳೂರು ಒಂದು ಮಳೆಗೆ ಅಸ್ತವ್ಯಸ್ತಗೊಂಡಿದ್ದನ್ನು ನೋಡಿದಾಗ ನೀರನ್ನು ನಿರ್ವಹಿಸಲೂ ಜಾಗೃತ ನಾಯಕ ಅವಶ್ಯಕ ಎಂಬುದು ಎಂಥವನಿಗೂ ಅರಿವಾಗದಿರದು.
Leave A Reply