ಮಂಗಳೂರು ದಕ್ಷಿಣದಲ್ಲಿ ಟಿಕೆಟ್ ಗಾಗಿ ಲೋಬೋ-ಐವನ್ ಸ್ಟ್ರಾಂಗ್ ಫೈಟ್!!
ಮಂಗಳೂರು ನಗರ ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ಸಿಗುತ್ತೆ ಎನ್ನುವುದರ ಅಂತಿಮ ನಿರ್ಧಾರ ಆಗಿಲ್ಲ ಎನ್ನುವುದು ಸದ್ಯ ಕಾಂಗ್ರೆಸ್ ಕಚೇರಿಯಿಂದ ಹೊರಗೆ ಬಂದಿರುವ ಮಾಹಿತಿ. ಅದಕ್ಕೆ ಕಾರಣ ಮೂಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಅಭಯಚಂದ್ರ ಜೈನ್ ಅವರೇ ಸ್ಪರ್ಧಿಸಲಿದ್ದಾರೆ ಎಂದು ಗ್ಯಾರಂಟಿಯಾಗಿರುವುದು. ಅಲ್ಲಿ ಅಭಯಚಂದ್ರ ಅವರ ಸ್ಥಾನಕ್ಕೆ ಬರಲು ಅರ್ಧ ಡಜನ್ ಕಾಂಗ್ರೆಸ್ಸಿಗರು ತಯಾರಾಗಿರುವುದರಿಂದ ಯಾರಿಗೆ ಕೊಟ್ಟರೂ ತಲೆನೋವು ಗ್ಯಾರಂಟಿ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಗೊತ್ತಿದೆ. ಆದ್ದರಿಂದ ಯಾರಿಗೂ ಕೊಡುವುದು ಬೇಡಾ, ನೀವೆ ಈ ಬಾರಿ ನಿಂತು ಬಿಡಿ ಎಂದು ಮೇಲಿನಿಂದ ಅಭಯರಿಗೆ ಸೂಚನೆ ಬಂದಿದೆ. ಆದ್ದರಿಂದ ಅಭಯಚಂದ್ರ ಜೈನ್ ಕಾಲಿಗೆ ಶೂಕಟ್ಟಿ ಪ್ರಚಾರಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಅದರ ನಡುವೆ ಸಿದ್ಧರಾಮಯ್ಯನವರು ಜಾತ್ಯಾತೀತ ಜನತಾದಳದಲ್ಲಿ ಇದ್ದಾಗ ಅವರ ಸಂಗಾತಿಯಾಗಿದ್ದ ಕಾಪುವಿನಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲುಂಡರೂ ಛಲ ಬಿಡದ ತಿವಿಕ್ರಮ ಐವನ್ ಡಿಸೋಜಾ ಅವರು ನಂತರ ಕಾಂಗ್ರೆಸ್ಸಿಗೆ ಸೇರಿಸಿ ಯಾರೊಂದಿಗೂ ಮನಸ್ತಾಪ ಮಾಡಿಕೊಳ್ಳದ ತಮ್ಮ ಗುಣದಿಂದಾಗಿ ಹಂತಹಂತವಾಗಿ ಮೇಲೇರುತ್ತಾ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದೇ ಕಾರಣದಿಂದಾಗಿ ಅವರಿಗೆ ವಿಧಾನ ಪರಿಷತ್ ಸ್ಥಾನ ಮಾತ್ರವಲ್ಲ, ಸರಕಾರಿ ಮುಖ್ಯ ಸಚೇತಕ ಹುದ್ದೆ ಕೂಡ ಅನಾಯಾಸವಾಗಿ ಒಲಿದಿದೆ. ಹಾಗೆ ಅಭಯಚಂದ್ರ ಜೈನ್ ಈ ಬಾರಿ ನಿಲ್ಲಲ್ಲ ಎಂದಾಗ ಸಿದ್ಧರಾಮಯ್ಯನವರ ಒಪ್ಪಿಗೆಯ ಮೇರೆಗೆ ಅವರು ಮೂಲ್ಕಿ-ಮೂಡಬಿದ್ರೆಯಲ್ಲಿ ಕೆಲಸ ಮಾಡುತ್ತಾ ಬರುತ್ತಿದ್ದರು. ಆದರೆ ಈಗ ಅಲ್ಲಿ ಟಿಕೆಟ್ ಪಡೆಯಲು ಸಿಕ್ಕಾಪಟ್ಟೆ ಫೈಟ್ ಇರುವುದರಿಂದ ನೀವು ಬೇರೆ ಕಡೆ ನೋಡಿ, ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಸಿದ್ಧರಾಮಯ್ಯನವರು ಹೇಳಿದ ನಂತರ ಐವನ್ ಡಿಸೋಜಾ ಮಂಗಳೂರು ನಗರ ದಕ್ಷಿಣದಿಂದ ಸ್ಪರ್ಧಿಸಲು ಅಣಿಯಾಗುತ್ತಿದ್ದಾರೆ.
ಮಂಗಳೂರಿನ ಸರ್ಕೂಟ್ ಹೌಸಿನಲ್ಲಿ ನಡೆದಿತ್ತು ಗೌಪ್ಯ ಸಭೆ…
ಇನ್ನು ಇತ್ತೀಚೆಗೆ ರಾಹುಲ್ ಗಾಂಧಿ ಮಂಗಳೂರಿಗೆ ಬಂದಾಗ ಅಭಯಚಂದ್ರ ಜೈನ್ ಹಾಗೂ ಐವನ್ ಡಿಸೋಜಾ ಅವರನ್ನು ಕರೆದು ಗೌಪ್ಯವಾಗಿ ಮಾತನಾಡಿದ್ದಾರೆ. ಒಂದು ವೇಳೆ ಅಭಯರಿಗೆ ಟಿಕೆಟ್ ಕೊಟ್ಟರೆ ತಮ್ಮ ಅಭ್ಯಂತರವಿಲ್ಲ. ಅವರು ಬೇಡಾ ಎಂದರೆ ನಂತರದ ಆಯ್ಕೆ ತಾನೇ ಇರಲಿ ಎಂದು ಐವನ್ ಹೇಳಿದ ಮಾತಿಗೆ ರಾಹುಲ್ ಗಾಂಧಿ ಅಭಯರ ಅಭಿಪ್ರಾಯ ಕೇಳಿದ್ದಾರೆ. ತಾವು ಬೇಡಾ ಎಂದರೆ ರಾಹುಲ್ ಗಾಂಧಿ ತಕ್ಷಣ ಐವನ್ ಡಿಸೋಜಾ ಅವರಿಗೆ ನೀವೆ ನಿಲ್ಲಿ ಎನ್ನಬಹುದು ಎಂದು ಹೆದರಿದ ಅಭಯಚಂದ್ರರು ತಾವೇ ನಿಲ್ಲುವುದಾಗಿ ರಾಹುಲ್ ಅವರಿಗೆ ಒಪ್ಪಿಗೆ ಸೂಚಿಸಿದ್ದಾರೆ. ಹಾಗಾದರೆ ನೀವು ಬೇರೆಡೆ ನಿಲ್ಲುವ ಐಡಿಯಾ ಇದೆಯಾ ಎಂದ ರಾಹುಲ್ ಗಾಂಧಿಯವರಿಗೆ “ನೀವು ಒಪ್ಪಿಗೆ ಸೂಚಿಸಿದರೆ ಮಂಗಳೂರು ದಕ್ಷಿಣದಿಂದ ನಿಲ್ಲುತ್ತೇನೆ” ಎಂದು ಐವನ್ ಹೇಳಿದ್ದಾರೆ. ಅದಕ್ಕೆ ರಾಹುಲ್ ನೋಡೋಣ, ಅಂತಿಮ ಪಟ್ಟಿ ತಮ್ಮ ಮುಂದೆ ಬಂದಾಗ ಕರೆಸುತ್ತೇನೆ ಎಂದಿದ್ದಾರೆ. ಅಲ್ಲಿಗೆ ಜೆ ಆರ್ ಲೋಬೋ ಅವರಿಗೆ ಟಿಕೆಟ್ ಗ್ಯಾರಂಟಿ ಅಲ್ಲ ಎನ್ನುವ ಸಂದೇಶ ಸರ್ಕೂಟ್ ಹೌಸಿನಿಂದ ಹೊರಗೆ ಹೋಗಿದೆ. ಅದರ ನಂತರ ಐವನ್ ಡಿಸೋಜಾ ಅವರು ರಾಹುಲ್ ಗಾಂಧಿ ರೋಸಾರಿಯೋ ಚರ್ಚ್ ಗೆ ಆಗಮಿಸಿದಾಗ ಬಿಷಪರ ಪಕ್ಕದಲ್ಲಿ ನಿಂತು ಫೋಟೋ ತೆಗೆಸುವ ತನಕ ತಮ್ಮ ಸ್ಪರ್ಧೆಯನ್ನು ಖಚಿತಪಡಿಸಿದ್ದಾರೆ.
ತುಲನೆ ಮಾಡಿದರೆ ಐವನ್ ಡಿಸೋಜಾ ಅವರಿಗೆ ಲೋಬೋ ಅವರಿಗಿಂತ ಹೆಚ್ಚಿನ ವರ್ಚಸ್ಸು ಇದೆ. ಯಾರೊಂದಿಗೂ ಬೆರೆಯಬಲ್ಲ ಐವನ್ ಅವರು ತಮ್ಮ ನಗುಮುಖದಿಂದಲೇ ಜನರನ್ನು ಆಕರ್ಷಿಸಬಲ್ಲರು. ಪರಿಚಯ ಇರಲಿ, ಬಿಡಲಿ ಅವರು ಹೆಗಲ ಮೇಲೆ ಕೈ ಹಾಕಿದ್ರು ಅಂದರೆ ಕಾರ್ಯಕರ್ತ ಜೈಕಾರ ಹಾಕುವುದು ಮಾತ್ರ ಬಾಕಿ. ಅವರನ್ನೇ ಬೆಂಬಲಿಸುವ ಅನೇಕ ಕಾಂಗ್ರೆಸ್ ಕಾರ್ಪೋರೇಟರ್ ಗಳು ಮಂಗಳೂರು ದಕ್ಷಿಣದಲ್ಲಿದ್ದಾರೆ. ಅದಕ್ಕೆ ಕಾರಣ ಐವನ್ ತಮ್ಮ ಶಾಸಕರ ನಿಧಿಯಿಂದ ಕೇಳಿದ ತಕ್ಷಣ ಅನುದಾನ ಬಿಡುಗಡೆ ಮಾಡಿರುವುದು. ಅದರೊಂದಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅತೀ ಹೆಚ್ಚು ಹಣ ತಂದು ಹಂಚಿದ ಹೆಗ್ಗಳಿಕೆ ಅವರಿಗಿದೆ. ರಿಕ್ಷಾ ಯೂನಿಯನ್ ಗಳ ಗೌರವಾಧ್ಯಕ್ಷರಾಗಿ ಅನೇಕ ಆಟೋ ಪಾರ್ಕ್ ಗಳ ಅಭಿವೃದ್ಧಿಗೆ ಅವರು ಹಣ ಬಿಡುಗಡೆ ಮಾಡಿದ್ದಾರೆ. ಅವರು ಗೌರವಾಧ್ಯಕ್ಷರಾಗಿರುವ ಸಂಘಟನೆಗಳು ಹಲವು ಮಂಗಳೂರು ದಕ್ಷಿಣದಲ್ಲಿವೆ. ಕೈಸ್ತರ ಅಭಿವೃದ್ಧಿ ನಿಗಮದ ರಚನೆಯ ಬಗ್ಗೆ ಅವರು ಬೆನ್ನು ಬಿಡದೆ ಕೆಲಸ ಮಾಡಿದ್ದಾರೆ. ಅವರ ಮೇಲೆ ಕುಡ್ಸೆಂಪ್ ನಲ್ಲಿ ಹಣ ತಿಂದಿರುವ ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲ. ಬಿಷಪ್ ಅವರೊಂದಿಗಿನ ಆತ್ಮೀಯ ಒಡನಾಟ ಅವರಿಗೆ ಪ್ಲಸ್ ಪಾಯಿಂಟ್.
ಈ ಬಾರಿ ಲೋಬೋ ಹಿಂದೆ ಕೊಲಾಸೋ ಅವರು ನಿಂತಿಲ್ಲ…
ಮತ್ತೊಂದೆಡೆ ಕಳೆದ ಬಾರಿ ಜೆ ಆರ್ ಲೋಬೋ ಅವರು ಗೆಲ್ಲಬೇಕೆಂದು ಆರ್ಥಿಕವಾಗಿ ಸಂಪನ್ಮೂಲ ಹರಿಸಿದವರು ಅನಿವಾಸಿ ಭಾರತೀಯ ರೊನಾಲ್ಡ್ ಕೊಲಾಸೊ. ಅವರು ಈ ಬಾರಿ ಲೋಬೋ ಅವರೊಂದಿಗೆ ಮುನಿಸಿಕೊಂಡಿರುವುದರಿಂದ ಲೋಬೋ ಅವರಿಗೆ ಹಿನ್ನಡೆಯಾಗಿದೆ. ಕೊಲಾಸೊ ಅವರು “ಸರ್ವರೀತಿಯಿಂದಲೂ” ಮಾಡಿದ ಪ್ರಯತ್ನದಿಂದ ಕಳೆದ ಬಾರಿ ಲೋಬೋ ಅವರಿಗೆ ಗೆಲುವು ಕಷ್ಟವಾಗಿರಲಿಲ್ಲ. ಅದರೊಂದಿಗೆ ರೋಶನ್ ಬೇಗ್ ಅವರೊಂದಿಗೆ ಮುನಿಸು, ಅನೇಕ ಕಾಂಗ್ರೆಸ್ ಕಾರ್ಪೋರೇಟರ್ ಗಳೊಂದಿಗೆ ಅಸಮಾಧಾನ ಲೋಬೊ ಅವರಿಗೆ ಅಪ್ಪಿತಪ್ಪಿ ಟಿಕೆಟ್ ಕೊಟ್ಟರೂ ಗೆಲುವು ಕಷ್ಟ ಎನ್ನುವ ರಿಪೋರ್ಟ್ ಕೇಂದ್ರಕ್ಕೆ ಹೋಗಿದೆ. ರಾಹುಲ್ ಗಾಂಧಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ!
Leave A Reply