“ಚುನಾವಣೆ” ಹತ್ತಿರ ಬರುವಾಗ ಮಂಗಳೂರಿನ ರಸ್ತೆಗಳಿಗೆ ಹೊಸಬಟ್ಟೆ ಭಾಗ್ಯ!!
ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಷ್ಟು ವರ್ಷ ಹಳೆಯ ಹರಿದ ರಗ್ಗು ಹೊದ್ದು ಮಲಗಿದ್ದಂತೆ ಕಾಣುತ್ತಿದ್ದ ರಸ್ತೆಗಳು ಒಮ್ಮಿಂದೊಮ್ಮೆಲೆ ಹೊಸ ಬಟ್ಟೆ ಹೊಲಿಸಲು ಅಳತೆಗೆ ನಿಂತ ಮುದುಕನಂತೆ ಕಾಣುತ್ತಿವೆ. ಚುನಾವಣೆಗಳ ಸ್ಟೈಲೆ ಹಾಗೆ. ಐದು ವರ್ಷಗಳ ಹಿಂದೆ ಭಾರತೀಯ ಜನತಾ ಪಾರ್ಟಿಯ ಸರಕಾರ ಇದ್ದಾಗ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಂಗಳೂರಿಗೆ ಬಿಡುಗಡೆ ಆಗಿದ್ದ ನೂರು ಕೋಟಿ ರೂಪಾಯಿಗಳ ಅನುದಾನದಲ್ಲಿ ಹೆಚ್ಚಿನ ಕೆಲಸ ಆಗದೇ ಹಣ ಹಿಂದಕ್ಕೆ ಹೋಗಿದೆ. ನಾಲ್ಕೂವರೆ ವರ್ಷ ತೆಪ್ಪಗೆ ತೊನ್ನು ಆದಂತೆ ಮಲಗಿದ್ದ ರಸ್ತೆಗಳಿಗೆ ಈಗ ಕಾಂಕ್ರೀಟ್ ಭಾಗ್ಯ ಕೊಡಲು ಮಂಗಳೂರು ದಕ್ಷಿಣ ಶಾಸಕ ಜೆ ಆರ್ ಲೋಬೋ ಹೊರಟಿದ್ದಾರೆ. ಹಾಗೆ ಆರು ತಿಂಗಳಿನಿಂದ ಅಲ್ಲಲ್ಲಿ ನಡುಬಗ್ಗಿಸಿ ಗುದ್ದಲಿ ಹಿಡಿದು ಶಿಲಾನ್ಯಾಸ ಮಾಡುವ ಫೋಸ್ ಕೊಡುತ್ತಿದ್ದಾರೆ. ಮಾತನಾಡಿದ್ರೆ ಆ ರಸ್ತೆಗೆ ಇಷ್ಟು ಕೋಟಿ, ಈ ರಸ್ತೆಗೆ ಇಷ್ಟು ಕೋಟಿ ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಇವರು ನಾಲ್ಕು ಮುಕ್ಕಾಲು ವರ್ಷ ಮುಟ್ಟದ ರಸ್ತೆಗಳು ಅರ್ಜೆಂಟ್ ಮುಹೂರ್ತ ಸಿಕ್ಕಿರುವ ಕಾರಣ ಆದಷ್ಟು ಬೇಗ ಮದುವೆ ಆಗಬೇಕು ಎನ್ನುವಾಗ ಮನೆಯವರು ಮಾಡುವ ಗಡಿಬಿಡಿಯಂತೆ ಶಿಲಾನ್ಯಾಸಕ್ಕೆ ಒಳಗಾಗುತ್ತಿವೆ. ಈಗ ಗುದ್ದಲಿ ಬಿದ್ದ ರಸ್ತೆಗಳ ಮೇಲೆ ಅಂತಿಮವಾಗಿ ತೆಂಗಿನ ಕಾಯಿ ಒಡೆಯುವುದು ಯಾವಾಗ ಎನ್ನುವುದು ಯಾರಿಗೂ ಗೊತ್ತಿರಲಿಕ್ಕಿಲ್ಲ.
ಕೆಲಸಕ್ಕಿಂತ ಶಿಲಾನ್ಯಾಸ ಮಾಡುವುದರಲ್ಲಿಯೇ ಆಸಕ್ತಿ…
ಒಂದು ರಸ್ತೆಯನ್ನು ಎಳೆದು ಎರಡೆರಡು ವರ್ಷ ರಿಪೇರಿ, ಕಾಂಕ್ರೀಟಿಕರಣ ಮಾಡಿದ ಇತಿಹಾಸ ಇರುವುದು ಮಂಗಳೂರು ನಗರ ದಕ್ಷಿಣದ ಶಾಸಕರಿಗೆ. ಒಂದು ರಸ್ತೆಗೆ ಎರಡು ಸಲ ಗುದ್ದಲಿ ಪೂಜೆ, ಶಿಲಾನ್ಯಾಸ ಇವರು ಮಾಡಿಸುತ್ತಾರೆ. ಒಂದನ್ನು ರಾಜ್ಯ ಸಚಿವರನ್ನು ಕರೆಸಿ ಮಾಡುತ್ತಾರೆ. ಸಚಿವರು ಶಿಲಾನ್ಯಾಸ ಮಾಡಿ ಬೆಂಗಳೂರಿಗೆ ಹೋದ ನಂತರ ಕೆಲಸ ಬೇಗ ಪ್ರಾರಂಭವಾಗುತ್ತದೆಯಲ್ಲ, ಅದೂ ಇಲ್ಲ. ನಂತರ ಒಂದು ವರ್ಷದ ಬಳಿಕ ಶಾಸಕ ಲೋಬೋ ಅವರು ತಾವೇ ಮತ್ತೆ ಅದೇ ರಸ್ತೆಗೆ ಶಿಲಾನ್ಯಾಸ ಮಾಡುತ್ತಾರೆ. ಬಳಿಕ ಆ ರಸ್ತೆಯನ್ನು ಮರೆತುಬಿಡುತ್ತಾರೆ. ನಂತರ ಆರು ತಿಂಗಳ ಬಳಿಕ ಕೆಲಸ ಆರಂಭಿಸುತ್ತಾರೆ. ಅದನ್ನು ಅಲ್ಲಿಗೆ ಅರ್ಧಕ್ಕೆ ನಿಲ್ಲಿಸುತ್ತಾರೆ. ಅಂತಹ ರಸ್ತೆಗಳಲ್ಲಿ ಗಣಪತಿ ಹೈಸ್ಕೂಲ್ ರಸ್ತೆ ಪ್ರಮುಖವಾದದ್ದು. ಇನ್ನು ಭವಂತಿ ರಸ್ತೆಯ ವಿಷಯಕ್ಕೆ ಬರೋಣ. ಇದು ಸರಿಯಾಗಿ ನೋಡಿದರೆ ಬಿಜೆಪಿ ಆಡಳಿತದಲ್ಲಿ ಪ್ರಾರಂಭಗೊಂಡ ರಸ್ತೆ. ಇದರ ಕಾಮಗಾರಿ ಮುಗಿಸಲು ಇನ್ನು ಲೋಬೋ ಸಾಹೇಬ್ರಿಗೆ ಸಾಧ್ಯವಾಗಿಲ್ಲ. ರೂಪವಾಣಿ ಟಾಕೀಸ್ ತನಕ ಕಾಮಗಾರಿ ಮಾಡಿ ನಿಲ್ಲಿಸಲಾಗಿದೆ. ಅದರ ನಂತರ ಕೆಲಸ ಮುಂದುವರೆದಿಲ್ಲ. ಇವರು ಇದನ್ನು ನೆಹರೂ ಮೈದಾನದ ಎದುರಿನ ಲೇಡಿಗೋಶನ್ ಆಸ್ಪತ್ರೆಯ ತನಕ ಕಾಂಕ್ರೀಟಿಕರಣ ಮಾಡಬೇಕಿತ್ತು. ಮಾಡಿಲ್ಲ. ಸೆಂಟ್ರಲ್ ಮಾರುಕಟ್ಟೆಯಿರುವ ಆ ರಸ್ತೆಯನ್ನು ನೋಡಿದರೆ ಲೋಬೊ ಅವರು ಮಂಗಳೂರಿಗೆ ತಂದಿರುವ ಕೋಟಿಗಳನ್ನು ಎಣಿಸಲು ಕ್ಯಾಲ್ಕುಲೇಟರ್ ಬೇಕಾಗುತ್ತದೆ ಎಂದು ಹೇಳುತ್ತಾ ಬರುತ್ತಿರುವ ಅವರ ಬೆಂಬಲಿಗರಿಗೆ ವಾಸ್ತವ ಗೊತ್ತಾಗುತ್ತದೆ.
ಪಾಲಿಕೆ ಕಾಂಗ್ರೆಸ್ಸ್, ಶಾಸಕ ಕಾಂಗ್ರೆಸ್, ಇನ್ನೇನೂ ಬೇಕಿತ್ತು…
ಈಗ ಅದು ಕೂಡ ಶಾಸಕರು ಕಾಂಗ್ರೆಸ್ಸಿನವರು. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇರುವುದು ಕಾಂಗ್ರೆಸ್ ಆಡಳಿತ. ಅಲ್ಲಿ ನೋಡಿದರೆ ಕ್ರಿಯಾಶೀಲ ಮೇಯರ್ ಎಂದು ಮಾಧ್ಯಮಗಳ ತಮ್ಮ ಆಪ್ತರಿಂದ ಕರೆಸಿಕೊಳ್ಳುವ ಕವಿತಾ ಸನಿಲ್ ಮೇಯರ್ ಕುರ್ಚಿಯಲ್ಲಿ ಇದ್ದಾರೆ. ಇಷ್ಟು ಬಂಗಾರದ ಅವಕಾಶ ಇರುವಾಗ ಲೋಬೋ ಅವರು ಮಾಡಿಲ್ಲ ಎಂದರೆ ಅವರಿಗೆ ಹೇಳಲು ಯಾವ ನೆಪ ಉಳಿದಿದೆ ಹೇಳಿ.
ಇನ್ನು ಯಾರಾದರೂ ಕೇಳಿದರೆ ಅದನ್ನು ಸ್ಮಾರ್ಟ್ ಸಿಟಿ ಫಂಡ್ ನಲ್ಲಿ ಮಾಡುತ್ತೇವೆ ಎಂದು ಹೇಳಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಾರು. ಹಾಗಾದರೆ ಇವರು ತಾನು ರಾಜ್ಯ ಸರಕಾರದಿಂದ ಅಷ್ಟು ತಂದೆ, ಇಷ್ಟು ತಂದೆ ಎಂದು ಹೇಳುವ ಹಣ ಎಲ್ಲಿಗೆ ಹೋಯಿತು? ಯಡಿಯೂರಪ್ಪ ಕೊಟ್ಟ ನೂರು ಕೋಟಿ ಇವರು ಖರ್ಚು ಮಾಡದೇ ಹಿಂದಕ್ಕೆ ಹೋಗಿದೆ. ಹೀಗಿರುವಾಗ ಇವರು ಮತ್ತೆ ತರುವುದು ಯಾಕೆ? ತಂದು ಯಾವ ರಸ್ತೆಗೆ ಸುರಿದಿದ್ದಾರೆ? ಇನ್ನು ಶ್ರೀನಿವಾಸ ಥಿಯೇಟರ್ ಅಂದರೆ ಹಳೆ ಬಾಲಾಜಿ ಟಾಕೀಸ್ ಇರುವ ರಸ್ತೆಗೆ 11.25 ಕೋಟಿ ರೂಪಾಯಿ ಯಾವಾಗ ಬಂದಿದೆ, ಹಾಗಾದರೆ ರಸ್ತೆ ಯಾಕೆ ಇನ್ನು ವರ್ಷಗಳಿಂದ ಪೂರ್ಣಗೊಂಡಿಲ್ಲ ಶಾಸಕರೇ? ಈಗ ಚುನಾವಣೆ ಕೂಗಳತೆಯ ದೂರದಷ್ಟು ಇರುವಾಗ ನೀವು ಅಳಕೆ ಸೇತುವೆಯನ್ನು ಒಡೆದಿದ್ದೀರಿ. ಓಕೆ, ಸೇತುವೆ ಹೊಸತು ಆಗಬೇಕು ನಿಜ, ಸೇತುವೆ ಒಡೆದು ಹೊಸ ಸೇತುವೆ ನೀವು ಕಟ್ಟುವುದಕ್ಕೆ ನನ್ನ ವಿರೋಧ ಇಲ್ಲ. ಆದರೆ ಹಣ ಬಂದು ಮೂರು ವರ್ಷ ಆಗಿ ಕಾಮಗಾರಿ ಪ್ರಾರಂಭವಾಗಿ ಮುಗಿದು ಹೋಗಬೇಕಾದ ಸಮಯದಲ್ಲಿ ನೀವು ಸೇತುವೆಯನ್ನು ಈಗ ಒಡೆದು ಹಾಕಿದ್ದೀರಿ. ಇನ್ನು ಅಲ್ಲಿ ಬೇರೆ ಬೇರೆ ಪೈಪುಗಳ ಕೆಲಸ ಆಗಿ ಅದು ಇದು ಮುಗಿಯುವಾಗ ಅದೆಷ್ಟು ವರ್ಷಗಳು ಬೇಕಾಗುತ್ತದೆ ಎನ್ನುವುದು ದೇವರಿಗೆ ಗೊತ್ತು. ಒಂದು ವೇಳೆ ಈ ಭಾಗದ ಜನರಿಗೆ ನ್ಯಾಯಾಲಯದ ರಸ್ತೆಯ ಕಾಂಕ್ರಿಟಿಕರಣ ಎರಡು ವರ್ಷದಿಂದ ಆಗಿಲ್ಲ ಎಂದು ಗೊತ್ತಾದರೆ ನಾಳೆಯಿಂದ ನಿದ್ರೆ ಬರಲಿಕ್ಕಿಲ್ಲ. ಇಷ್ಟಕ್ಕೆ ಮುಗಿಯಲಿಲ್ಲ.
ಈ ಕುದ್ರೋಳಿಯಿಂದ ಮಣ್ಣಗುಡ್ಡೆಗೆ ಹೋಗುವ ರಸ್ತೆ ಇದೆಯಲ್ಲ, ಅದು ಮಂಗಳೂರಿನ ಪ್ರಪ್ರಥಮ ಸೈಕಲ್ ಟ್ರಾಕ್ ರಸ್ತೆ ಆಗಬೇಕು ಎಂದು ಹಣ ಬಿಡುಗಡೆಯಾಗಿತ್ತು. ಅಲ್ಲಿ ಈಗ ದುರ್ಬಿನ್ ಹಿಡಿದು ಹುಡುಕಿದರೂ ಟ್ರಾಕ್ ಕಾಣ್ತಾ ಇಲ್ಲ. ಕೇವಲ ರಸ್ತೆಗಳ ಬಗ್ಗೆ ಮಾತನಾಡಿದರೆ ಅದು ಮುಗಿಯದ ಅಧ್ಯಾಯ. ಹಾಗಿರುವಾಗ ಲೋಬೋ ಅವರು ತಮ್ಮ ಅವಧಿಯ ಅತೀ ದೊಡ್ಡ ಸಾಧನೆ ಎನ್ನುವಂತೆ ಕಾಂಕ್ರೀಟ್ ರಸ್ತೆಗಳ ಬಗ್ಗೆ ಘಂಟೆಗಟ್ಟಲೆ ಮಾತನಾಡುತ್ತಾರೆ. ನಾನು ಈಗ ಬರೆದದ್ದು ಬರಿ ಸ್ಯಾಂಪಲ್. ಇಷ್ಟು ರಸ್ತೆಗಳ ಅವಸ್ಥೆ ಹೀಗಿದೆ ಎಂದು ಸಂಕ್ಷೀಪ್ತವಾಗಿ ಹೇಳಿದ್ದೇನೆ. ಈ ಸೈಡ್ ರೀಲ್ ಗೆ ಉತ್ತರ ಲೋಬೋ ಅವರ ಬಳಿ ಇದೆಯಾ? ಸಿನೆಮಾ ಇನ್ನೂ ಬಾಕಿಯಿದೆ!!
Leave A Reply