ರಥಬೀದಿ ವೆಂಕಟರಮಣ ದೇವಸ್ಥಾನವನ್ನು ದ್ವೀಪ ಮಾಡಿದ ಶಾಸಕ ಲೋಬೋ!
ನಾವು ಚಿಕ್ಕದಿರುವಾಗ ಎಪ್ರಿಲ್-ಮೇ ತಿಂಗಳ ಬೇಸಿಗೆ ರಜೆಯಲ್ಲಿ ಹೋಂ ವರ್ಕ್ ಎಂದು ಶಾಲೆಯಲ್ಲಿ ದಿನಕ್ಕೊಂದು ಮಗ್ಗಿ, ದಿನಕ್ಕೆರಡು ಇಂಗ್ಲೀಷ್ ಮತ್ತು ಕನ್ನಡ ಕಾಪಿ ಬರೆಯಲು ಟೀಚರ್ ಕೊಡುತ್ತಿದ್ದರು. ಅದನ್ನು ಜೂನ್ ಒಂದಕ್ಕೆ ಶಾಲೆ ಶುರುವಾಗುವಾಗ ಅವರಿಗೆ ತೋರಿಸಬೇಕಿತ್ತು. ಕೆಲವು ಮಕ್ಕಳು ಎರಡು ತಿಂಗಳಿಡಿ ಆಡುತ್ತಾ ಸಮಯ ವೇಸ್ಟ್ ಮಾಡಿ ರಜೆ ಮುಗಿಯಲು ಎರಡು ದಿನಗಳಿರುವಾಗ ಇಡೀ ದಿನ ಕುಳಿತು ಮಗ್ಗಿ, ಕಾಪಿ ಗೀಚಿ ಕಾಟಾಚಾರಕ್ಕೆ ಒಂದೇ ಉಸಿರಿನಲ್ಲಿ ಮುಗಿಸಿ ಟೀಚರ್ ಅವರಿಂದ ಸಹಿ ಪಡೆದು ತಾವು ಕೂಡ ರಜೆಯ ದಿನಗಳಲ್ಲಿ ಕಲಿಕೆ ತಪ್ಪಿಸಿಲ್ಲ ಎಂದು ಸಾಬೀತು ಪಡಿಸಲು ಹೋಗುತ್ತಿದ್ದರು. ಮಂಗಳೂರು ನಗರ ದಕ್ಷಿಣ ಶಾಸಕ ಜೆ ಆರ್ ಲೋಬೋ ಅವರು ಕೂಡ ಮಾಡುತ್ತಿರುವುದು ಅದನ್ನೇ.
ಚುನಾವಣೆ ಹತ್ತಿರ ಬಂದಾಗ ಹೋಂವರ್ಕ್…
ಜೆ ಆರ್ ಲೋಬೊ ಅವರು ಶಾಸಕರಾಗಿ ಬರೋಬ್ಬರಿ ನಾಲ್ಕು ವರ್ಷ ಒಂಭತ್ತು ತಿಂಗಳು ಆಗಿವೆ. ಅವರು ಒಂದು ನಗರ ಪ್ರದೇಶದ ಶಾಸಕರು. ಮಂಗಳೂರು ನಗರ ದಕ್ಷಿಣ ಎಂದರೆ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ರಾಜಧಾನಿ ಇದ್ದ ಹಾಗೆ. ಜಿಲ್ಲಾಧಿಕಾರಿ ಕಚೇರಿಯಿಂದ ಹಿಡಿದು ಪಾಲಿಕೆ ಕಟ್ಟಡವನ್ನು ಸೇರಿ ಬಹುತೇಕ ಸರಕಾರಿ ಕಚೇರಿಗಳು, ಜಿಲ್ಲಾ ಸರಕಾರಿ ಆಸ್ಪತ್ರೆಗಳನ್ನು ಒಳಗೊಂಡು ಸರ್ವಿಸ್ ಬಸ್ ಸ್ಟೇಂಡ್ ತನಕ ಇರುವುದು ಮಂಗಳೂರು ನಗರ ದಕ್ಷಿಣದಲ್ಲಿ. ಇಲ್ಲಿ ನೀವು ರಸ್ತೆಗಳ ಏನಾದರೂ ಕಾಮಗಾರಿ ಮಾಡಲು ಹೊರಡುವಾಗ ಆ ರಸ್ತೆಯ ಪ್ರಾಮುಖ್ಯತೆ, ಅದರ ಮೇಲೆ ನಿತ್ಯ ಎಷ್ಟು ಜನ ಹೋಗಿ ಬರುತ್ತಾರೆ, ಆ ರಸ್ತೆ ಎಲ್ಲೆಲ್ಲಿ ಕನೆಕ್ಟ್ ಆಗುತ್ತದೆ, ಯಾವ ಪ್ರಮುಖ ಕೇಂದ್ರಗಳು ಆ ರಸ್ತೆಯಿಂದ ಎಷ್ಟು ದೂರದಲ್ಲಿವೆ, ಆ ರಸ್ತೆಯ ಸನಿಹ ಇರುವ ಯಾವುದಾದರೂ ದೇವಸ್ಥಾನ, ಚರ್ಚ್, ಮಸೀದಿಯಲ್ಲಿ ರಸ್ತೆಯ ಕಾಮಗಾರಿ ಮುಗಿಯುವ ತನಕ ಏನಾದರೂ ಜಾತ್ರೆ, ಉತ್ಸವ ಇದೆಯಾ ಎಲ್ಲವನ್ನು ಪರಿಶೀಲಿಸಿ ನಂತರ ಆ ರಸ್ತೆಯ ಮೇಲೆ ಗುದ್ದಲಿ ಹೊಡೆಯಬೇಕು. ಅದ್ಯಾವುದೂ ನೋಡದೆ ನೇರವಾಗಿ ಆ ರಸ್ತೆಯನ್ನು ಬಂದ್ ಮಾಡಿ ಕಾಂಕ್ರೀಟಿಕರಣ ಮಾಡುತ್ತೇವೆ ಎಂದು ಹೊರಟು ವರ್ಷಗಳ ತನಕ ಹಾಗೆ ಬಿಟ್ಟರೆ ಏನಾಗುತ್ತದೆ ಎನ್ನುವುದು ಗೊತ್ತಿಲ್ಲದಷ್ಟು ಅಮಾಯಕರಲ್ಲ ನಮ್ಮ ಶಾಸಕ ಜೆಆರ್ ಲೋಬೊ. ಯಾಕೆಂದರೆ ಅವರು ಎಲ್ಲಿಂದಲೋ ಬಂದು ಇಲ್ಲಿ ಶಾಸಕರಾದವರಲ್ಲ. ಮೊನ್ನೆ ತನಕ ಪಾಲಿಕೆಯ ಕಮೀಷನರ್ ಆಗಿದ್ದರು. ನಿನ್ನೆಯಿಂದ ಶಾಸಕರಾಗಿದ್ದಾರೆ ಎನ್ನುವುಷ್ಟೇ ಬದಲಾವಣೆ. ಹುದ್ದೆ ಮಾತ್ರ ಬದಲು, ವ್ಯಕ್ತಿ ಸೇಮ್. ಅಂತವರೇ ಈಗ ನಾಲ್ಕು ಮುಕ್ಕಾಲು ವರ್ಷ ಏನೂ ಮಾಡದೆ ರಜೆ ಮುಗಿಯಲು ಬಂದಾಗ ಹೋಂವರ್ಕ್ ಮಾಡಲು ಒದ್ದಾಡುವ ಮಕ್ಕಳಂತೆ ವರ್ತಿಸುತ್ತಿದ್ದಾರೆ.
ಯಾವೆಲ್ಲಾ ರಸ್ತೆಗಳನ್ನು ಶಾಸಕರು ಬಂದ್ ಮಾಡಿದ್ದಾರೆ…
ಕೊಡಿಯಾಲ್ ತೇರು ಅಥವಾ ಮಂಗಳೂರು ರಥೋತ್ಸವ ಎಂದೇ ಪ್ರಖ್ಯಾತವಾಗಿರುವ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವ ಇದೇ ಜನವರಿ 20 ರಿಂದ ಆರು ದಿನಗಳ ಪರ್ಯಾಂತ ನಡೆಯಲಿದೆ. ಮಂಗಳೂರು ಸಹಿತ ಜಿಲ್ಲೆಗಳ ವಿವಿಧ ಭಾಗಗಳಿಂದ ಭಕ್ತಾದಿಗಳು ಅಲ್ಲಿಗೆ ಬರುತ್ತಾರೆ. ನಿತ್ಯ ಅಸಂಖ್ಯಾತ ಜನ ಬರುವ ಕಾರ್ಯಕ್ರಮ ಇದಾಗಿರುವುದರಿಂದ ಮತ್ತು ದೇವಸ್ಥಾನ ನಗರದ ಮಧ್ಯ ಭಾಗದಲ್ಲಿ ಇರುವುದರಿಂದ ಮುಂದಿನ ಆರು ದಿನ ಇಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ವಿವಿಧ ಭಾಗಗಳಿಂದ ವಾಹನಗಳಲ್ಲಿ ಜನ ಬರುತ್ತಾರೆ. ಆದರೆ ವಿಷಯ ಏನೆಂದರೆ ರಥಬೀದಿ ವೆಂಕಟರಮಣ ದೇವಸ್ಥಾನ ಅಕ್ಷರಶ: ದ್ವೀಪದಂತೆ ಆಗಿದೆ. ದ್ವೀಪ ಎಂದ ಕೂಡಲೇ ನೀರಿನಿಂದ ಆವೃತ್ತವಾದದ್ದಲ್ಲ. ನಾಲ್ಕು ಕಡೆಯಿಂದ ಬರುವ ಪ್ರಮುಖ ರಸ್ತೆಗಳನ್ನು ಅಗೆದು ಹಾಕಿ ಜನರು ದೇವಸ್ಥಾನಕ್ಕೆ ಹೋಗುವುದು ಹೇಗೆ ಎಂದು ಯೋಚನೆ ಮಾಡುವಂತಹ ಪರಿಸ್ಥಿತಿಯನ್ನು ಸೃಷ್ಟಿಸುವುದು. ಬೇಕಾದರೆ ನೋಡಿ, ಮಣ್ಣಗುಡ್ಡೆ ಕಡೆಯಿಂದ ಬರುವ ಜನರಿಗೆ ಅಳಕೆ ಸೇತುವೆ ಒಡೆದು ಹಾಕಿ ಆ ರಸ್ತೆಯನ್ನು ಬಂದ್ ಮಾಡಿದ್ದಾರೆ. ಈ ಕಡೆ ಗಣಪತಿ ಹೈಸ್ಕೂಲ್ ಕಡೆಯಿಂದ ಬರುವ ವಾಹನಗಳಿಗೆ ಜಿಎಚ್ ಎಸ್ ರಸ್ತೆಯನ್ನು ಬಂದ್ ಮಾಡಿದ್ದಾರೆ. ಮೈದಾನ ಒಂದನೇ ಮತ್ತು ಎರಡನೇ ಕ್ರಾಸ್ ರಸ್ತೆ, ಕೊನೆಗೆ ರಾಘವೇಂದ್ರ ಮಠ ರಸ್ತೆಯನ್ನು ಬಂದ್ ಮಾಡಿದ್ದಾರೆ. ಇನ್ನೆಲ್ಲಿಂದ ದೇವಸ್ಥಾನಕ್ಕೆ ಬರುವುದು. ಈಗ ದೇವಸ್ಥಾನಕ್ಕೆ ಬರಲೇಬೇಕಾದವರು ವಿಟಿ ರಸ್ತೆಯ ಮೂಲಕವೋ ಅಥವಾ ಮಹಮ್ಮಾಯ ದೇವಸ್ಥಾನ ಇರುವ ಅಗಲ ಕಿರಿದಾದ ರಸ್ತೆಯ ಮೂಲಕ ಒಳಗೆ ಬರಬೇಕು. ನೀವು ಮಂಗಳೂರಿನ ಯಾವ ಭಾಗದಿಂದ ಬರುವವರಾಗಿದ್ದರೂ ಸುತ್ತಿ ಬಳಸಿ ಇದೇ ರಸ್ತೆಯಿಂದ ಒಳಗೆ ಬರಬೇಕಾಗಿದೆ.
ಕೇಳಿದರೆ ರಸ್ತೆಗಳು ಅಭಿವೃದ್ಧಿ ಮಾಡುವುದು ಬೇಡ್ವಾ?
ನೀವು ಅಭಿವೃದ್ಧಿಗೆ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟುತ್ತಾರೆ. ನಾನು ಅಭಿವೃದ್ಧಿ ಹೆಸರಿನಲ್ಲಿ ಇವರು ಮಾಡುವ ದೊಂಬರಾಟಕ್ಕೆ ವಿರೋಧಿ ವಿನ: ನಿಜವಾದ ಅಭಿವೃದ್ಧಿಗೆ ವಿರೋಧಿಯಲ್ಲ. ದಕ್ಷಿಣದ ಶಾಸಕರು ಮತ್ತು ಮಹಾನಗರ ಪಾಲಿಕೆ ಒಮ್ಮೆ ಒಂದು ರಸ್ತೆಗೆ ಕೈ ಹಾಕಿದರೆ ಅದು ಆರು ತಿಂಗಳಿಗೆ ಮುಗಿಯುವ ಬದಲು ಮೂರು ವರ್ಷ ತೆಗೆದುಕೊಳ್ಳುತ್ತದೋ ಎಂದು ಅನಿಸುತ್ತದೆ. ಅದಕ್ಕೆ ಸಾಕ್ಷಿಯಾಗಿ ಕೋರ್ಟ್ ರಸ್ತೆ ನಮ್ಮ ಎದುರಿಗೆ ಇದೆ.
ಅದರ ಬದಲು ಇವರು ಹಂತಹಂತವಾಗಿ ಬೇರೆ ಬೇರೆ ರಸ್ತೆಗಳಿಗೆ ಬೇರೆ ಬೇರೆ ಸಮಯದಲ್ಲಿ ಕೈ ಹಾಕಿದರೆ ಸಮಸ್ಯೆ ಇರುತ್ತಿರಲಿಲ್ಲ. ಜಿಎಚ್ ಎಸ್ ರಸ್ತೆಗೆ ಎರಡು ವರ್ಷ ಮೊದಲು ಕೆಸರುಕಲ್ಲು ಹಾಕಿ ಈಗ ಕೆಲಸ ಪ್ರಾರಂಭಿಸಿದ್ದಾರೆ. ಅದಕ್ಕೆ ನಾನು ಹೇಳುವುದು, ರಜೆ ಮುಗಿಯುವಾಗ ಹೋಂವರ್ಕ್ ಮಾಡಲು ಕುಳಿತರೆ ಒಳ್ಳೆಯ ವಿದ್ಯಾರ್ಥಿ ಅನ್ನಲ್ಲ, ಅದರ ಬದಲು ಟೀಚರಿಗೆ ತೋರಿಸಲು ಕಾಟಾಚಾರಕ್ಕೆ ಬರೆಯುತ್ತಿರುವ ಪೋಕರಿ ಎನ್ನುತ್ತಾರೆ!!
Leave A Reply