ನಿಮ್ಮ ಇಷ್ಟದ ಬ್ಯಾಂಕುಗಳಲ್ಲಿ ಹಣ ಕಟ್ಟುವಂತಿಲ್ಲ!!
ನೀವು ಈ ಗಾದೆ ಕೇಳಿರಬಹುದು. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು. ಆದರೆ ನಮ್ಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕೂಸು ಹುಟ್ಟಿ ನಾಲ್ಕು ತಿಂಗಳ ಮೇಲಾದರೂ ಇನ್ನು ಅದಕ್ಕೆ ಕುಲಾವಿ ಹೊಲಿದಿಲ್ಲ. ಆದ್ದರಿಂದ ಯೋಜನೆ ಒಳ್ಳೆಯದು ಇದ್ದರೂ ಅದಕ್ಕೆ ಪೂರಕ ಸೌಲಭ್ಯಗಳಿಲ್ಲದೆ ಅದು ಸೊರಗುತ್ತಿದೆ. ಯಾವ ಯೋಜನೆ ಅದು?
ನಮ್ಮ ಪಾಲಿಕೆಗೆ ಖಜಾನೆ-2 ತಂತ್ರಾಶ ಮಂಜೂರಾಗಿದೆ. ಕೇಂದ್ರದ ಈ ಯೋಜನೆ ಪಾಲಿಕೆಗೆ ಬಂದದ್ದು ಕಳೆದ ವರ್ಷದ ಅಕ್ಟೋಬರ್ ನಲ್ಲಿ. 24/10/2017 ಕ್ಕೆ ಸರಕಾರದಿಂದ ಆದೇಶ ಬಂದಿತ್ತು. ಇದನ್ನು ಅನುಷ್ಟಾನಕ್ಕೆ ತರಬೇಕಾಗಿತ್ತು. ಒಂದೂವರೆ ತಿಂಗಳು ಬಿಟ್ಟು 15/12/2017 ಕ್ಕೆ ಪಾಲಿಕೆಗೆ ಮತ್ತೊಂದು ಸುತ್ತೋಲೆ ಬಂತು. ವಿಷಯ ಏನೆಂದರೆ ನೀವು ಇನ್ನು ಯಾವುದೇ ತೆರಿಗೆ, ಬಿಲ್ ಅನ್ನು ಕಟ್ಟಬೇಕಾದರೆ ಪಾಲಿಕೆಯಿಂದ ಒಂದು ಚಲನ್ ತೆಗೆದುಕೊಳ್ಳಬೇಕು. ಅದನ್ನು ತುಂಬಿ ಹತ್ತಿರದ ಬ್ಯಾಂಕಿಗೆ ಹೋಗಬೇಕು. ಅಲ್ಲಿ ಹಣ ಕಟ್ಟಬೇಕು. ಹತ್ತಿರದ ಬ್ಯಾಂಕು ಎಂದರೆ ಮನಪಾದ ಕಟ್ಟಡದಲ್ಲಿಯೇ ಇರುವ ಕಾರ್ಪೋರೇಶನ್ ಬ್ಯಾಂಕಿಗೆ ಹೋಗುವಂತಿಲ್ಲ. ನಿಮಗೆ ಆಶ್ಚರ್ಯವಾಗಬಹುದು. ಚಲನ್ ಒಂದನೇ ಮಹಡಿಯಲ್ಲಿ ತೆಗೆದುಕೊಂಡು ನೆಲ ಮಹಡಿಯಲ್ಲಿರುವ ಕಾರ್ಪೋರೇಶನ್ ಬ್ಯಾಂಕಿಗೆ ಹೋಗಿ ಹಣ ಕಟ್ಟಿದರೆ ಮುಗಿಯಿತು ಎಂದು ನೀವು ಅಂದುಕೊಳ್ಳಬಹುದು. ವಿಷಯ ಇರುವುದೇ ಇಲ್ಲಿ. ನೀವು ಹಣ ಕಟ್ಟಬೇಕಾಗಿರುವುದು ರಾಜ್ಯ ಸರಕಾರ ಫಿಕ್ಸ್ ಮಾಡಿದ ಯಾವುದಾದರೂ ಐದು ಬ್ಯಾಂಕುಗಳಲ್ಲಿ ಒಂದು ಬ್ಯಾಂಕಿನಲ್ಲಿ.
ಯಾವ ಬ್ಯಾಂಕುಗಳು ಅವು…
ರಾಜ್ಯ ಸರಕಾರ ತನಗೆ ಖುಷಿಯಿರುವ ಐದು ಬ್ಯಾಂಕುಗಳನ್ನು ಪಟ್ಟಿ ಮಾಡಿದೆ. ಅವು ಯಾವುದೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಮತ್ತು ಸಿಂಡೀಕೇಟ್ ಬ್ಯಾಂಕ್. ಈಗ ನೀವು ಕೇಳಬಹುದು. ನಮಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಚಲನ್ ತೆಗೆದುಕೊಂಡ ತಕ್ಷಣ ಮೂಗಿನ ಕೆಳಗೆ ಕಾಣಿಸುವುದು ಕಾರ್ಪೋರೇಶನ್ ಬ್ಯಾಂಕ್. ಹಾಗಿರುವಾಗ ಅಲ್ಲಿಗೆ ಹೋಗದೆ ಈ ಮೇಲಿನ ಬ್ಯಾಂಕುಗಳನ್ನು ಎಲ್ಲಿಗೆ ಹುಡುಕಿ ಹೋಗುವುದು ಎಂದು ನಿಮಗೆ ಅನಿಸಬಹುದು. ಆದರೆ ಇಲ್ಲಿ ವಿಷಯ ಎನೆಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೆಯಲ್ಲ, ಬೆಂಗಳೂರಿನಲ್ಲಿ, ಅಲ್ಲಿ ಬಿಬಿಎಂಪಿ ಕಟ್ಟಡದ ಪಕ್ಕದಲ್ಲಿ ಈ ಮೇಲಿನ ಬ್ಯಾಂಕುಗಳು ಇರಬಹುದು ಅಥವಾ ಇದರಲ್ಲಿ ಯಾವುದಾದರೂ ಒಂದೆರಡು ಬ್ಯಾಂಕುಗಳು ಇರಬಹುದು. ಆದ್ದರಿಂದ ಅವರು ಈ ಬ್ಯಾಂಕುಗಳಲ್ಲಿ ಹಣ ಕಟ್ಟಬೇಕು ಎಂದು ಸುತ್ತೋಲೆ ಹೊರಡಿಸಿರುತ್ತಾರೆ. ಆದರೆ ನಮ್ಮ ಗ್ರಹಚಾರಕ್ಕೆ ಈ ಮೇಲಿನ ಬ್ಯಾಂಕುಗಳು ನಮ್ಮ ಪಾಲಿಕೆಯ ಆಸುಪಾಸಿನಲ್ಲಿ ಇಲ್ಲ. ಇರುವುದು ಕಾರ್ಪೋರೇಶನ್ ಬ್ಯಾಂಕು. ಅಲ್ಲಿ ಕಟ್ಟಲು ಅವಕಾಶ ಇಲ್ಲ. ಆದ್ದರಿಂದ ನಿಯಮ ಮಾಡುವವರು ಮೊದಲು ನೋಡಬೇಕಾಗಿರುವುದು ರಾಜ್ಯದ ಎಲ್ಲಾ ಜನರ ಅನುಕೂಲವೇ ವಿನ: ಕೇವಲ ಬಿಬಿಎಂಪಿಯಲ್ಲಿ ಚಲನ್ ತೆಗೆದುಕೊಳ್ಳುವವರ ಅನುಕೂಲ ಅಲ್ಲ. ಬೆಂಗಳೂರಿನ ರೂಲ್ಸ್ ಅಲ್ಲಿನ ಜನರಿಗೆ ಓಕೆ. ಆದರೆ ನಮಗೆ ಯಾಕೆ ಶಿಕ್ಷೆ? ಆದ್ದರಿಂದ ಆದೇಶದ ಸುತ್ತೋಲೆ ಬರೆಯುವಾಗ ಏನು ಮಾಡಬೇಕು ಎಂದರೆ ಚಲನ್ ತೆಗೆದುಕೊಂಡು ಅದನ್ನು ಪಾಲಿಕೆಯ ಕಟ್ಟಡದ ಅತ್ಯಂತ ಸನಿಹದಲ್ಲಿರುವ ಯಾವುದೇ ಬ್ಯಾಂಕಿನಲ್ಲಿ ಕಟ್ಟಬಹುದು ಎಂದು ಹೇಳಿದ್ದಲ್ಲಿ ಎಲ್ಲಾ ಜನರಿಗೆ ಅನುಕೂಲವಾಗುತ್ತಿತ್ತು.
ಪ್ರಿಂಟರ್ ಗೆ ಗತಿ ಇಲ್ಲ..
ಬ್ಯಾಂಕಿನ ವಿಷಯ ಆಯಿತು. ಈಗ ಚಲನ್ ತೆಗೆದುಕೊಳ್ಳುವ ವಿಷಯಕ್ಕೆ ಬರೋಣ. ಈ ಚಲನ್ ತೆಗೆದುಕೊಳ್ಳಬೇಕಾದರೆ ನೀವು ಯಾವ ತೆರಿಗೆ, ಬಿಲ್ ಕಟ್ಟಬೇಕು ಎಂದುಕೊಂಡಿದ್ದಿರೋ ಆ ವಿಭಾಗಕ್ಕೆ ಹೋಗಿ ಅಲ್ಲಿ ಚಲನ್ ಸ್ವೀಕರಿಸಬೇಕು. ಅದಕ್ಕಾಗಿ ಪ್ರತಿ ವಿಭಾಗದಲ್ಲಿ ಕಂಪ್ಯೂಟರ್, ಪ್ರಿಂಟರ್, ಚಲನ್ ಮಾಡಲು ಪ್ರಿಂಟ್ ಶೀಟ್ ತಯಾರಾಗಿ ಇರಬೇಕು. ಪ್ರಿಂಟರ್ ಬಿಡಿ, ನಮ್ಮ ಪಾಲಿಕೆಯ ಹೆಚ್ಚಿನ ವಿಭಾಗಗಳಲ್ಲಿ ಕಂಪ್ಯೂಟರ್ ಗಳೇ ಇಲ್ಲ. ಇದ್ದ ಕಂಪ್ಯೂಟರ್ ಗಳು ಕೂಡ ಕಚೇರಿ ಕೆಲಸಕ್ಕೆ ಇವೆ ಬಿಟ್ಟರೆ ಅದರಿಂದ ಚಲನ್ ತೆಗೆಯಲು ಕಷ್ಟಸಾಧ್ಯ. ಈ ವ್ಯವಸ್ಥೆ ಮೊನ್ನೆ ಎಪ್ರಿಲ್ 1 ರಿಂದ ಜಾರಿಗೆ ಬಂದಿದೆ. ಆದರೂ ಇಲ್ಲಿಯ ತನಕ ಅದಕ್ಕೆ ಕಂಪ್ಯೂಟರ್ಸ್, ಪ್ರಿಂಟರ್ಸ್ ಬಂದಿಲ್ಲ. ಇದರೊಂದಿಗೆ ಆಗಲೇಬೇಕಾದ ಮತ್ತೊಂದು ಸುಧಾರಣೆ ಏನೆಂದರೆ ನಮ್ಮ ಪಾಲಿಕೆಯಲ್ಲಿ ಒಂದು ಸ್ಪೆಶಲ್ ಕೌಂಟರ್ ತೆರೆಯದೇ ಇರುವುದು. ಈ ಸ್ಪೆಶಲ್ ಕೌಂಟರ್ ನಿಂದ ಏನು ಉಪಯೋಗ ಎಂದರೆ ನಿಮಗೆ ಚಲನ್ ಬೇಕಾದ್ದಲ್ಲಿ ಯಾವುದೇ ವಿಭಾಗಕ್ಕೆ ಅಲೆಯುವ ಅಗತ್ಯ ಇರುವುದಿಲ್ಲ. ಈ ವಿಮಾನ ನಿಲ್ದಾಣದಲ್ಲಿ ನೀವೆ ಹೋಗಿ ಸ್ಲಿಪ್ ತೆಗೆಯುವ ವ್ಯವಸ್ಥೆ ತರಹ ಇದು ಕೆಲಸ ಮಾಡಬೇಕು. ನೀವೆ ಹೋಗುವುದು ಆ ಕಂಪ್ಯೂಟರ್ ಪರದೆಯ ಮೇಲೆ ಇರುವ ಆಯ್ಕೆಯನ್ನು ಒತ್ತಿ ಚಲನ್ ತೆಗೆದುಕೊಂಡು ಹೊರಗೆ ಬರುವುದು. ಯಾರಿಗಾದರೂ ಈ ಬಗ್ಗೆ ಜ್ಞಾನ ಅಥವಾ ಮಾಹಿತಿಯ ಕೊರತೆ ಇದ್ದರೆ ಚಲನ್ ತೆಗೆದುಕೊಡಲು ಒಬ್ಬ ಸಿಬ್ಬಂದಿ ನೇಮಿಸಿದರೆ ಆಯಿತು, ಪಾಲಿಕೆ ಇದೆಲ್ಲಾ ಮಾಡುತ್ತಾ? ಆದ್ದರಿಂದ ಖಜಾನೆ-2 ಏನೋ ಬಂದಿದೆ. ನಾವು ಕಂಪ್ಯೂಟರ್, ಪ್ರಿಂಟರ್ ಇಲ್ಲದೆ ಆಕಾಶ ನೋಡಬೇಕಿದೆ!!
Leave A Reply