ಬಂಟ್ವಾಳದಲ್ಲಿ ಎಸ್ ಡಿಪಿಐಯಿಂದ ನಾಮಪತ್ರ ಹಿಂದಕ್ಕೆ, ಇಷ್ಟಾಗಿಯೂ ಗೆಲ್ಲದಿದ್ದರೆ ಅದು ಕಾಂಗ್ರೆಸ್ ಹಣೆಬರಹ!
ಕೊನೆಗೂ ಕಾಂಗ್ರೆಸ್ ಸಮಾಧಾನದ ನಿಟ್ಟುಸಿರುಬಿಟ್ಟಿದೆ. ಬಂಟ್ವಾಳ ವಿಧಾನಸಭಾ ಚುನಾವಣೆಯಲ್ಲಿ ಎಸ್ ಡಿಪಿಐ ತನ್ನ ಅಭ್ಯರ್ಥಿಯಿಂದ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದೆ. ಇದು ಕಾಂಗ್ರೆಸ್ ನಲ್ಲಿ ಖುಷಿಯ ವಾತಾವರಣ ಉಂಟು ಮಾಡಿದ್ದರೂ ಅದು ಮೇಲ್ನೋಟಕ್ಕೆ ಮಾತ್ರ, ಇದರಿಂದ ಕಾಂಗ್ರೆಸ್ಸಿಗೆ ನಷ್ಟವಾಗುವ ಸಾಧ್ಯತೆಗಳೇ ಹೆಚ್ಚು ಎನ್ನುವುದು ಕಾಂಗ್ರೆಸ್ ರಾಜಕೀಯ ಪಂಡಿತರ ಅನಿಸಿಕೆ. ಅದು ಹೇಗೆ?
ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಎಂಟನೇ ಬಾರಿ ಬಿ ರಮಾನಾಥ್ ರೈ ಅವರು ಕಣಕ್ಕೆ ಇಳಿಯುತ್ತಿದ್ದಾರೆ. ಇತ್ತ ಭಾರತೀಯ ಜನತಾ ಪಾರ್ಟಿಯಿಂದ ರಾಜೇಶ್ ನೈಕ್ ಎರಡನೇ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅತ್ತ ನಿನ್ನೆಯವರೆಗೆ ಸ್ಪರ್ಧಿಸುತ್ತೇವೆ ಎಂದು ಹೇಳುತ್ತಿದ್ದ ಎಸ್ ಡಿಪಿಐ ಎನ್ನುವ ಪಕ್ಷ ತನ್ನ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡಿದೆ. ಈ ಮೂಲಕ ಕಬ್ಬಿಣದ ಕಡಲೆ ಆಗುವ ಸಾಧ್ಯತೆ ಇದ್ದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಬ್ಬಿಣವನ್ನು “ಕಾಯಿಸಿ” ತನಗೆ ಬೇಕಾದ ರೂಪಕ್ಕೆ ತಂದುಕೊಂಡಿರುವುದು ಸದ್ಯದ ಬೆಳವಣಿಗೆ. ಮೊನ್ನೆ ನಾಮಪತ್ರ ಸಲ್ಲಿಸುವ ದಿನ ಎಸ್ ಡಿಪಿಐ ಅಭ್ಯರ್ಥಿ ರಿಯಾಜ್ ಫರಂಗಿಪೇಟೆ ನೂರಾರು ಬೆಂಬಲಿಗರೊಂದಿಗೆ ಪಾದಯಾತ್ರೆ ನಾಮಪತ್ರ ಸಲ್ಲಿಸಿದ್ದರು. ಇತ್ತ ರಾಜೇಶ್ ನೈಕ್ ಅಸಂಖ್ಯಾತ ಹಿತೈಷಿಗಳೊಂದಿಗೆ 15 ಕಿಮೀ ಪಾದಯಾತ್ರೆ ಮಾಡಿ ದಾಖಲೆ ನಿರ್ಮಿಸಿದ್ದರು. ಇದೆರಡನ್ನು ನೋಡಿದ ಕಾಂಗ್ರೆಸ್ ಈ ಬಾರಿ ನಾವು ಗೆಲ್ಲಬೇಕಾದರೆ ಅಲ್ಪಸಂಖ್ಯಾತ ಮತಗಳು ಸಾರಾಸಗಟಾಗಿ ತಮ್ಮ ಕಡೆ ಒಲಿಯಬೇಕು, ಅದಕ್ಕಾಗಿ ಎಸ್ ಡಿಪಿಐ ಅಭ್ಯರ್ಥಿ ಕಣದಲ್ಲಿ ಇಳಿಯಬಾರದು ಎಂದು ನಿರ್ಧರಿಸಿಬಿಟ್ಟಿದೆ. ಅದಕ್ಕಾಗಿ ರಮಾನಾಥ್ ರೈ ಅವರು ಏನಾದರೂ “ಪ್ರಯತ್ನ” ಮಾಡಿದರಾ? ಗೊತ್ತಿಲ್ಲ. ಆದರೆ ಎಸ್ ಡಿಪಿಐ ಬಂಟ್ವಾಳ ಅಭ್ಯರ್ಥಿಯಾಗಿದ್ದ ರಿಯಾಜ್ ಫರಂಗಿಪೇಟೆ ಹೇಳುವ ಪ್ರಕಾರ ಜಾತ್ಯಾತೀತ ಪಕ್ಷ ಗೆಲ್ಲಬೇಕಾದ ಕಾರಣ ನಾವು ಹಿಂದಕ್ಕೆ ಸರಿಯುವುದು ಅನಿವಾರ್ಯ ಎನ್ನುತ್ತಿದ್ದಾರೆ.
ಎಸ್ ಡಿಪಿಐಯನ್ನೇ ದೂರ ಸರಿಸಿದ್ರು ರೈ….
ಅಷ್ಟಕ್ಕೂ ಈ ಜ್ಞಾನೋದಯ ಅವರಿಗೆ ಮೊದಲೇ ಯಾಕೆ ಆಗಿರಲಿಲ್ಲ ಎನ್ನುವುದು ಪ್ರಶ್ನೆ. ಜಾತ್ಯಾತೀತರು ಗೆಲ್ಲಬೇಕು, ಅದಕ್ಕಾಗಿ ನಾವು ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದೇವೆ ಎಂದು ಎಷ್ಟೇ ಎಸ್ ಡಿಪಿಐ ಹೇಳಿಕೊಂಡರೂ ಇದರ ಹಿಂದೆ ದೊಡ್ಡಮಟ್ಟದಲ್ಲಿ “ಆರ್ಥಿಕ” ಚಟುವಟಿಕೆಗಳು ವಿದೇಶದ ಮಟ್ಟದಲ್ಲಿ ನಡೆದಿರಬಹುದಾ ಎನ್ನುವ ಲೆಕ್ಕಾಚಾರ ಕೆಲವರಲ್ಲಿದೆ. ಯಾಕೆಂದರೆ ಕಳೆದ ಐದು ವರ್ಷಗಳಲ್ಲಿ ರಮಾನಾಥ ರೈ ವಿರುದ್ಧ ಬಿಜೆಪಿ ಒಂದು ಪ್ರತಿಭಟನೆ ಮಾಡಿದರೆ ಎಸ್ ಡಿಪಿಐ ಮೂರು ಪ್ರತಿಭಟನೆ ಮಾಡುತ್ತಿತ್ತು. ಇದರಿಂದ ರೈಗಳು ಎಷ್ಟು ಕಿರಿಕಿರಿ ಅನುಭವಿಸಿದರು ಎಂದರೆ ತಮ್ಮ ಸೌಹಾರ್ಧತೆಯ ಪಾದಯಾತ್ರೆಯಲ್ಲಿ ಎಸ್ ಡಿಪಿಐಗೆ ಆಹ್ವಾನವನ್ನೇ ನೀಡದೆ ಅವಮಾನ ಮಾಡಿಬಿಟ್ಟಿದ್ದರು. ರಮಾನಾಥ್ ರೈ ಅವರು ಕಳೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುತ್ತೇವೆ ಎಂದು ಮುಸ್ಲಿರಿಗೆ ಖುಷಿಯಾಗಲಿ ಎಂದು ನೀಡಿದ ಹೇಳಿಕೆಯನ್ನು ಐದು ವರ್ಷದಲ್ಲಿ ಮಾಡಿಲ್ಲ ಎಂದು ಹೆಚ್ಚು ಟೀಕಿಸಿದ್ದೇ ಈ ಎಸ್ ಡಿಪಿಐ. ಜಲೀಲ್ ಕರೋಪಾಡಿ, ಅಶ್ರಫ್ ಕಲಾಯಿ ಸಹಿತ ಕೆಲವು ಎಸ್ ಡಿಪಿಐ ಹಿತೈಷಿಗಳ ಹತ್ಯೆಯಾದಾಗ ರಮಾನಾಥ್ ರೈ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ನಕಲಿ ಜಾತ್ಯಾತೀತವಾದಿಗಳನ್ನು ಬೆಂಬಲಿಸಬೇಡಿ ಎಂದು ಕರೆ ಕೊಟ್ಟದ್ದೇ ಎಸ್ ಡಿಪಿಐ. ಇಷ್ಟಾಗಿಯೂ ಎಸ್ ಡಿಪಿಐ ಬಂಟ್ವಾಳದಲ್ಲಿ ರಾಜೇಶ್ ನೈಕ್ ಗೆಲ್ಲಬಾರದು ಎಂದರೆ ನಾವು ಸ್ಪರ್ಧಿಸಬಾರದು ಎನ್ನುತ್ತಿದೆ. ಈ ಮೂಲಕ ತಮ್ಮ ಶಕ್ತಿಯನ್ನು ಕಾಂಗ್ರೆಸ್ಸಿಗೆ ಮನವರಿಕೆ ಮಾಡಿಕೊಡುತ್ತಿದೆ.
ಹಿಂದೂ ಮತಗಳು ಒಟ್ಟಾಗಲಿವೆ…
ಬಂಟ್ವಾಳದಲ್ಲಿ ಸುಮಾರು 90 ಸಾವಿರದಷ್ಟು ಅಲ್ಪಸಂಖ್ಯಾತ ಮತಗಳಿವೆ. ಅದರಲ್ಲಿ 60 ಸಾವಿರ ಮುಸಲ್ಮಾನ ಮತದಾರರು. ಅದರಲ್ಲಿ ಇಪ್ಪತ್ತು ಸಾವಿರದಷ್ಟು ಮತಗಳನ್ನು ಎಸ್ ಡಿಪಿಐ ಪಡೆದುಕೊಂಡರೂ ಅದು ಕಾಂಗ್ರೆಸ್ಸಿಗೆ ಸಂಕಷ್ಟ ತರುತ್ತಿತ್ತು. ಹೀಗಿರುವಾಗ ಎಸ್ ಡಿಪಿಐ ಸ್ಪರ್ಧೆ ಕಾಂಗ್ರೆಸ್ಸಿಗೆ ಅರಗಿಸಲಾಗದೆ ಹಿಂದಿನಿಂದ ಏನಾದರೂ ಮೈತ್ರಿ ಮಾಡಿಕೊಂಡಿರುವ ಸಾಧ್ಯತೆ ಹೆಚ್ಚು ಎನ್ನುವ ಅಭಿಪ್ರಾಯ ರಾಜಕೀಯ ವಿಶ್ಲೇಷಕರದ್ದು. ಆದರೆ ಕಾಂಗ್ರೆಸ್ಸಿಗರೇ ಹೇಳುವ ಪ್ರಕಾರ ಹೀಗೆ ಮಾಡಿರುವುದರಿಂದ ಮಲಗಿದ್ದ ಹಿಂದೂ ಮತದಾರರನ್ನು ಎಬ್ಬಿಸುವ ಕೆಲಸ ಎಸ್ ಡಿಪಿಐ ಮಾಡಿದೆ. ಎಸ್ ಡಿಪಿಐ ಸ್ಪರ್ಧಿಸುವುದಿಲ್ಲ ಎಂದ ಕೂಡಲೇ ಗೆಲುವು ಕಷ್ಟವಿದೆ ಎಂದುಕೊಳ್ಳುವ ಹಿಂದೂ ಮತದಾರ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವ ಕೆಲಸ ಮಾಡುವ ಸಾಧ್ಯತೆ ಇದೆ. ಯಾಕೆಂದರೆ ಹಿಂದೆಲ್ಲ ಎಸ್ ಡಿಪಿಐ ಸ್ಪರ್ಧಿಸುತ್ತದೆ ಎಂದ ಕೂಡಲೇ ಹೇಗೂ ಮತ ವಿಭಜನೆಯಿಂದಾಗಿ ನಾವು ಗೆಲ್ಲುತ್ತೇವೆ ಎಂದುಕೊಳ್ಳುತ್ತಿದ್ದ ಹಿಂದೂ ಮತದಾರ ಮತ ಹಾಕುವುದನ್ನೇ ನಿರ್ಲಕ್ಷಿಸುತ್ತಿದ್ದ. ಆದರೆ ಈಗ ಹಾಗಲ್ಲ. ತನ್ನ ಒಂದು ಮತ ಕೂಡ ಪ್ರಾಮುಖ್ಯತೆ ಪಡೆದುಕೊಳ್ಳುತ್ತೆ ಎಂದ ಕೂಡಲೇ ಅವನು ತಾನು ಮತ ಹಾಕುತ್ತಾನೆ ಮತ್ತು ಇತರರಿಗೂ ಸ್ವಯಂಪ್ರೇರಿತನಾಗಿ ಮತ ಹಾಕಲು ವಿನಂತಿಸುತ್ತಾನೆ. ಇದರಿಂದ ನಷ್ಟವಾಗುವುದು ಕಾಂಗ್ರೆಸ್ಸಿಗೆ. ಒಟ್ಟಿನಲ್ಲಿ ಕಾಂಗ್ರೆಸ್ ಮತ್ತು ಎಸ್ ಡಿಪಿಐ ಏನೋ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿವೆ ಎನ್ನುವುದು ಬಂಟ್ವಾಳದಿಂದ ಕೇಳಿಬರುತ್ತಿರುವ ಮಾತು!!
Leave A Reply