ಸಾಲಮನ್ನಾ ವಿಷಯದಲ್ಲಿ ಕುಮಾರಸ್ವಾಮಿ ಹೂಡಿರುವ ಆಟಕ್ಕೆ ಕಾಂಗ್ರೆಸ್ ದಂಗಾಗಿದೆ!!
ಕುಮಾರಸ್ವಾಮಿ ನಿರೀಕ್ಷಣಾ ಜಾಮೀನು ಪಡೆದುಕೊಳ್ಳಲು ಸರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ತಾವು ಇರುವುದು ಕಾಂಗ್ರೆಸ್ಸಿಗರ ಮುಲಾಜಿನಲ್ಲಿಯೇ ವಿನ: ಕರ್ನಾಟಕದ ಜನರ ಮುಲಾಜಿನಲ್ಲಿ ಅಲ್ಲ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಮೇಲೆ ಬಂದಿರುವ ವಚನಭ್ರಷ್ಟ ಕಳಂಕವನ್ನು ನಯವಾಗಿ ಕಾಂಗ್ರೆಸ್ಸಿನ ಚಾಪೆಯೊಳಗೆ ತೂರಲು ಪ್ಲಾನ್ ಮಾಡಿಕೊಂಡಿದ್ದಾರೆ. ಇನ್ನೇನಿದ್ದರೂ ದೆಹಲಿ ಹೈಕಮಾಂಡ್ “ಎಸ್” ಹೇಳಿದರೆ ಸಾಲಮನ್ನಾ ಇದೆ, ಇಲ್ಲದಿದ್ದರೆ ತಾವು ಕೇವಲ ನಾಮಕಾವಸ್ತೆ ಮುಖ್ಯಮಂತ್ರಿ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಬಹುಮತ ಬರದೇ ಇರುವುದರಿಂದ ನಾವು ಸಾಲಮನ್ನಾ ಮಾಡಲು ಆಗುತ್ತಾ ಎಂದು ಕೇಳಿರುವ ದೇವೇಗೌಡರಿಗೆ ಮಗನ ಸಂಬಂಧವನ್ನು ಕಾಂಗ್ರೆಸ್ಸಿನೊಂದಿಗೆ ಕುದುರಿಸುವಾಗ ಇದೆಲ್ಲಾ ಹೊಳೆಯಲಿಲ್ಲವೇ ಎಂದು ರೈತರು ಕೇಳುತ್ತಿದ್ದಾರೆ. ಅಷ್ಟಕ್ಕೂ ಜೆಡಿಎಸ್ ಗೆ ಬಹುಮತ ಯಾವತ್ತಾದರೂ ಬರುತ್ತದೆ ಎಂದು ದೇವೆಗೌಡರ ಕುಟುಂಬ ಇವತ್ತಿಗೂ ಅಂದುಕೊಂಡಿದೆಯಲ್ಲ, ಅದೇ ದೊಡ್ಡ ಆಶ್ಚರ್ಯದ ವಿಷಯ. ರಾಜ್ಯದ ಒಟ್ಟು ವಿಧಾನಸಭಾ ಸ್ಥಾನಗಳಲ್ಲಿ ಅರ್ಥದಷ್ಟನ್ನು ಗೆಲ್ಲುವುದು ಬಿಡಿ, ಅರ್ಧದಷ್ಟು ಡೆಪಾಸಿಟ್ ಉಳಿದರೆ ಅದೇ ಜೆಡಿಎಸ್ ದೊಡ್ಡ ಸಾಧನೆ ಎಂದು ಆ ಪಕ್ಷದವರು ಸಂಭ್ರಮಿಸಬೇಕು ಎನ್ನುವ ಸ್ಥಿತಿ ಇದೆ. ಎಲ್ಲಾ ಕಡೆ ಡೆಪಾಸಿಟ್ ಉಳಿದರೆ ಅದೇ ಜೆಡಿಎಸ್ ಪಕ್ಷದ ಸ್ವರ್ಣಯುಗ ಎಂದು ಗೌಡರ ಕುಟುಂಬ ಪಟಾಕಿ ಹೊಡೆಯಬೇಕು ಎನ್ನುವ ವಾತಾವರಣ ಇದೆ. ಹಾಗಿರುವಾಗ ನಮಗೆ ಬಹುಮತ ಸಿಗುತ್ತದೆ, ಆವತ್ತು ಸಾಲಮನ್ನಾ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರೆ ” ಏಯ್, ನಮ್ಮ ಸಾಲ ಈ ಜನ್ಮದಲ್ಲಿ ಮನ್ನಾ ಆಗಲ್ಲ ಕಣಯ್ಯ, ಜೆಡಿಎಸ್ ಗೆ ರಾಜ್ಯದಲ್ಲಿ ಬಹುಮತ ಬರುವುದೂ ಒಂದೇ, ಚಂದ್ರಲೋಕದಲ್ಲಿ ನಾವು ಬೇಳೆ ಬೆಳೆಯುವುದೂ ಒಂದೇ” ಎಂದು ರೈತರು ಕಟ್ಟೆಯ ಮೇಲೆ ಕೂತು ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದಾರೆ.
ಚೆಂಡು ಈಗ ಕಾಂಗ್ರೆಸ್ ಅಂಗಳದಲ್ಲಿ…
ಜೆಡಿಎಸ್ ಕಳೆದ ಬಾರಿ ಗೆದ್ದಷ್ಟು ಸೀಟನ್ನು ಈ ಬಾರಿ ಗೆದ್ದಿಲ್ಲ. ಇನ್ನೊಂದೆಡೆ ಭಾರತೀಯ ಜನತಾ ಪಾರ್ಟಿ ಮೂರಂಕೆಯ ಸ್ಥಾನ ಪಡೆದುಕೊಂಡಿದೆ. ಬಿಜೆಪಿಯವರು ತಾವು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿದ್ದಾರೆ. ಬಿಎಸ್ ವೈ ಹಾಗೆ ನಡೆದುಕೊಂಡಿದ್ದರು ಕೂಡ. ಆದರೆ ಕಾಂಗ್ರೆಸ್ ಸುಪ್ರೀಂ ಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದಿತ್ತು. ಹಾಗಿರುವಾಗ ರೈತರ ಸಾಲಮನ್ನಾ ಮಾಡುವ ಪಕ್ಷದೊಂದಿಗೆ ನಾವು ಕೈಜೋಡಿಸಿ ಅನ್ನದಾತನನ್ನು ರಕ್ಷಿಸಬೇಕು ಎಂದು ದೇವೆಗೌಡರು ತೀರ್ಮಾನಿಸಬೇಕಿತ್ತು. ಆದರೆ ದೇವೇಗೌಡರಿಗೆ ತಮ್ಮ ಮಗ ಸಿಎಂ ಆಗುವ ಎದುರು ರೈತರ ಸಂಕಟ ಮುಖ್ಯವಾಗಿರಲಿಲ್ಲ. ಸದ್ಯ ದೊಡ್ಡಗೌಡರು ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಗನನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಮತ್ತು ಅದೇ ಕಾಲಕ್ಕೆ ಸಾಲಮನ್ನಾ ಆದರೆ ಕ್ರೆಡಿಟ್ ತಾವು ತೆಗೆದುಕೊಳ್ಳುವುದು ಆಗದಿದ್ದರೆ ಕಾಂಗ್ರೆಸ್ ತಲೆ ಮೇಲೆ ಹಾಕಿ ನೆಮ್ಮದಿಯಾಗಿ ಇರುವುದು. ಇಂತಹ ಸೂತ್ರ ಅಳವಡಿಸಿಕೊಂಡು ಆರಾಮವಾಗಿರುವ ದೇವೆಗೌಡರಿಗೆ ಈ ತಂತ್ರ ಐದು ತಿಂಗಳು ಬರಬಹುದು ಆದರೆ ಐದು ವರ್ಷ ಬರಲಿಕ್ಕಿಲ್ಲ ಎನ್ನುವುದು ಗೊತ್ತಿದೆ. ಅದಕ್ಕಾಗಿ ಅವರು ಮಗನಿಗೆ ಈಗಲೇ ನಿರೀಕ್ಷಣಾ ಜಾಮೀನು ಪಡೆದುಕೊ ಎಂದಿರುವುದು. ಈ ಮೂಲಕ ತಮಗೆ ಮನಸ್ಸಿದೆ, ಆದರೆ ಕಾಂಗ್ರೆಸ್ ಬಿಡುವುದಿಲ್ಲ ಎನ್ನುವ ಸಂದೇಶವನ್ನು ರಾಜ್ಯಕ್ಕೆ ವರ್ಗಾಯಿಸುವುದು. ಇದನ್ನು ಎಷ್ಟು ಬೇಗ ಕಾಂಗ್ರೆಸ್ ಅರ್ಥ ಮಾಡಿಕೊಳ್ಳುತ್ತೋ ಅಷ್ಟು ಆ ಪಕ್ಷಕ್ಕೆ ಒಳ್ಳೆಯದು. ಇಲ್ಲದೆ ಹೋದರೆ ಮುಂದಿನ ಲೋಕಸಭೆಯ ವೇಳೆಗೆ ಕಾಂಗ್ರೆಸ್ ಪರಿಸ್ಥಿತಿ ಹೇಗಾಗುತ್ತೆ ಎಂದರೆ ಖರ್ಗೆ, ಮೊಯಿಲಿ, ಮುನಿಯಪ್ಪ ಜೊತೆಗೆ ಉಳಿದ ಆರು ಎಂಪಿಗಳು ಕೂಡ ಡೆಪಾಸಿಟ್ ಉಳಿಸಿಕೊಳ್ಳಲು ಎದುಸಿರು ಬಿಡಬೇಕಾಗಬಹುದು.
ಜೆಡಿಎಸ್ ಗೆ ಯಾವತ್ತಿದ್ದರೂ ಕಾಂಗ್ರೆಸ್ಸೆ ಶತ್ರು….
ಅತ್ತ ಸಾಲಮನ್ನಾ ಆಗುವ ಮೊದಲೇ ಈ ಸರಕಾರ ಕೋಮಾಕ್ಕೆ ಹೋಗಬಹುದು ಎಂದು ಅರಿತಿರುವ ಕುಮಾರಸ್ವಾಮಿಯವರು ತಮ್ಮ ವೈಯಕ್ತಿಕ ವರ್ಚಸ್ಸನ್ನು ಅಧಿಕಾರ ಸ್ವೀಕರಿಸಿದ ದಿನಗಳೊಳಗೆ ರಿಪೇರಿ ಮಾಡಲು ಮುಂದಾಗಿದ್ದಾರೆ. ಜನತಾ ದರ್ಶನ ಈಗಾಗಲೇ ಶುರುವಾಗಿದೆ. ಗ್ರಾಮ ವಾಸ್ತವ್ಯ ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿದೆ. ಇನ್ನೇನಿದ್ದರೂ ಕಾಂಗ್ರೆಸಿನ ಮೇಲೆ ಸಾಲಮನ್ನಾದ ಜವಾಬ್ದಾರಿ ವರ್ಗಾಯಿಸಿ ಗೌಡರ ಕುಟುಂಬ ತಮ್ಮ ಇಮೇಜನ್ನು ಬಿಲ್ಡ್ ಮಾಡುವುದು ಮಾತ್ರ ಬಾಕಿ.
ಸಿದ್ಧರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ನಿಲ್ಲುವಾಗ ಅವರನ್ನು ಸೋಲಿಸಲು ಅಲ್ಲಿನ ಜೆಡಿಎಸ್ ಅಭ್ಯರ್ಥಿಯಾಗಿದ್ದ ಜಿಟಿ ದೇವೇಗೌಡರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಜಿಟಿ ದೇವೆಗೌಡರನ್ನು ಸೋಲಿಸಲು ಸಿದ್ಧರಾಮಯ್ಯ ಮತ್ತು ಟೀಮ್ ಮಾಡಿದ ತಂತ್ರ, ಕೊಟ್ಟ ಕಾಟ ಕಡಿಮೆಯೇನಲ್ಲ. ಅದನ್ನೇಲ್ಲ ಎದುರಿಸಿ ಜಿಟಿ ದೇವೇಗೌಡರು ಗೆದ್ದಿದ್ದಾರೆ. ಸಿದ್ಧರಾಮಯ್ಯನವರ ಹಣಬಲ, ತೋಳ್ಬಲ, ಜಾತಿ ಬಲ, ಅಧಿಕಾರದ ಬಲ ಎಲ್ಲವನ್ನು ಎದುರಿಸಿ ಗೆಲ್ಲುವುದು ಹುಡುಕಾಟದ ಮಾತಲ್ಲ. ಅಂತಹ ಪರಿಸ್ಥಿತಿ ಈಗ ಗೆದ್ದಿರುವ ಎಲ್ಲಾ ಜೆಡಿಎಸ್ ಶಾಸಕರದ್ದು ಕೂಡ. ಈಗ ಗೆದ್ದಿರುವ 37 ಜನ ಜೆಡಿಎಸ್ ಶಾಸಕರು ಕಾಂಗ್ರೆಸ್ಸಿನ ಅಭ್ಯರ್ಥಿಗಳನ್ನು ಬೆವರು ಸುರಿಸಿ ಸೋಲಿಸಿಯೇ ವಿಧಾನಸಭೆ ಪ್ರವೇಶಿಸಿರುವುದು. ಅವರಲ್ಲಿ ಒಬ್ಬರನ್ನಾದರೂ ಕುಮಾರಸ್ವಾಮಿ ಅಥವಾ ದೇವೇಗೌಡರು ಕೇಳಿ ಕಾಂಗ್ರೆಸ್ಸಿನೊಂದಿಗೆ ಸಂಬಂಧ ಕುದುರಿಸಿದ್ದರಾ? ಇಲ್ಲವೇ ಇಲ್ಲ. ಆವತ್ತು ಕಾಂಗ್ರೆಸ್ಸನ್ನು ಸೋಲಿಸಲು ನಿದ್ದೆ ಬಿಟ್ಟಿದ್ದ ಜೆಡಿಎಸ್ ಶಾಸಕರಿಗೆ ಈಗ ಪ್ರತಿಯೊಂದಕ್ಕೂ ಕಾಂಗ್ರೆಸ್ಸಿನ ಹೈಕಮಾಂಡ್ ಅನ್ನು ಕೇಳುವ ಪರಿಸ್ಥಿತಿ.
ಇಲ್ಲಿಯ ತನಕ ಕುಮಾರಸ್ವಾಮಿಯವರಿಗೆ ಬೆಂಗಳೂರಿನ ಪದ್ಮನಾಭನಗರಕ್ಕೆ ಹೋಗಿ ಆರ್ಶೀವಾದ ಕೇಳಿ ಬಂದರೆ ಸಾಕಿತ್ತು. ಇನ್ನು ಮುಂದೆ ಜನಪಥ-10ರ ಹೊರಗೆ ನಿಂತು ಬಾಗಿಲು ತೆರೆಯುವುದನ್ನು ಕಾಯಬೇಕು. ಸ್ವಾಭಿಮಾನವೊಂದು ಸತ್ತು ಹೋದರೆ ಹೀಗೆ ಆಗುವುದು!
Leave A Reply