ಅತ್ಯಂತ ಕ್ಲಿಷ್ಟಕರ ಯುದ್ಧದ ಗೆಲುವಿಗೆ 18 ವರ್ಷ ತುಂಬಿತು!
ಬಹುಶ: ಒಂದು ತಲೆಮಾರಿಗೆ ಆ ದಿನದ ರೋಮಾಂಚನದ ಅನುಭವ ಆಗಿರಲಿಕ್ಕಿಲ್ಲ. ಭರ್ತಿ 18 ವರ್ಷ. ನಮ್ಮ ವೀರ ಯೋಧರಲ್ಲಿ 490 ಜನ ತಮ್ಮ ಪ್ರಾಣವನ್ನು ಭಾರತಾಂಬೆಯ ಚರಣಕಮಲದಲ್ಲಿ ಅರ್ಪಿಸಿಬಿಟ್ಟಿದ್ದರು. ಯಾಕೆ ಈ ಯುದ್ಧ ತುಂಬಾ ಪ್ರಾಮುಖ್ಯತೆ ಪಡೆಯುತ್ತೆ ಎಂದರೆ ಅಲ್ಲಿನ ಪ್ರತಿಕೂಲ ಪರಿಸ್ಥಿತಿಯ ಕಾರಣದಿಂದ. ಕಾರ್ಗಿಲ್ ಯುದ್ಧ ನಡೆದದ್ದು ಒಂದು ಸಮತಟ್ಟಾದ ರಣಭೂಮಿಯಲ್ಲಿ ಅಲ್ಲ. ನಾವು ಸಾಮಾನ್ಯವಾಗಿ ಈ ಬಾಹುಬಲಿ ಅಥವಾ ರಾಜ ಮಹಾರಾಜರ ಆಧಾರಿತ ಸಿನೆಮಾಗಳನ್ನು ನೋಡುವಾಗ ಯುದ್ಧಗಳಾಗುತ್ತಲ್ಲ, ಆ ಶೈಲಿಯಲ್ಲಿ ಇಲ್ಲಿ ಯುದ್ಧ ಆಗಿಲ್ಲ. ಬಹುಶ: ಈ ಕಾರ್ಗಿಲ್ ಪ್ರದೇಶವನ್ನು ನಾವು ಹತ್ತಿರದಿಂದ ನೋಡಿದರೆ ಅದರ ಗಂಭಿರತೆ ಅರ್ಥವಾಗುತ್ತದೆ. ಬೇಕಾದರೆ ನಿಮಗೆ ಒಂದು ಕಾಲ್ಪನಿಕ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತೇನೆ.
ಒಬ್ಬ ವ್ಯಕ್ತಿ ಹತ್ತನೆ ಮಹಡಿಯ ಬಾಲ್ಕನಿಯಲ್ಲಿ ನಿಂತಿದ್ದಾನೆ ಎಂದು ಅಂದುಕೊಳ್ಳಿ. ಇನ್ನೊಬ್ಬ ವ್ಯಕ್ತಿ ಅದೇ ಕಟ್ಟಡದ ಒಂದನೇ ಮಹಡಿಯ ಬಾಲ್ಕನಿಯಲ್ಲಿ ನಿಂತಿದ್ದಾನೆ ಎಂದು ಅಂದುಕೊಳ್ಳಿ. ಇಬ್ಬರ ಕೈಯಲ್ಲಿ ಮಿಶಿನ್ ಗನ್ ಇದೆ. ಪರಸ್ಪರ ಶೂಟೌಟ್ ಮಾಡುತ್ತಿದ್ದಾರೆ ಎಂದು ಅಂದುಕೊಳ್ಳಿ. ಆಗ ಯಾರಿಗೆ ಗೆಲ್ಲುವು ಸಿಗುತ್ತದೆ, ಯಾರು ಸೋತು ಹತರಾಗುತ್ತಾರೆ ಎಂದು ನಿಮಗೆ ಅನಿಸುತ್ತದೆ. ಸಂಶಯವೇ ಇಲ್ಲ, ಮೇಲಿನ ಮಹಡಿಯವ ಸುಲಭವಾಗಿ ಗೆದ್ದುಬಿಡುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ನಡೆದಿತ್ತು ಕಾರ್ಗಿಲ್ ವಾರ್. ಪಾಕಿಸ್ತಾನ ಹತ್ತನೆ ಮಹಡಿಯಲ್ಲಿ ಇತ್ತು. ನಮ್ಮವರು ಒಂದನೇ ಮಹಡಿಯಲ್ಲಿ. ನಾವು ಕೆಳಗಿನಿಂದ ಮೇಲೆ ಹೋಗಿ ಅವರನ್ನು ಹೊಡೆದು ಆ ಜಾಗದಿಂದ ಅವರನ್ನು ಓಡಿಸಿ ನಂತರ ಅಲ್ಲಿ ವಿಜಯ ಪತಾಕೆ ಹಾರಿಸಬೇಕು. ಅದೇ ಪಾಕಿಸ್ತಾನಕ್ಕಾದರೆ ಭಾರತೀಯ ಯೋಧರು ಹತ್ತಿ ಮೇಲೆ ಬರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಆದ್ದರಿಂದ ಪಾಕಿಗಳಿಗೆ ಮೇಲೆ ನಿಂತು ನಮ್ಮೆಡೆ ಶೂಟ್ ಮಾಡುವುದು ಸುಲಭ.
ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಓರ್ವ ಯೋಧ ಹೇಳಿದ ಪ್ರಕಾರ ಭಾರತೀಯ ಸೈನಿಕರು ಪ್ರತಿ ದಿನ ಕತ್ತಲು ಆಗುವುದನ್ನೇ ಕಾಯುತ್ತಿದ್ದರು. ಕತ್ತಲಾಗುತ್ತಿದ್ದಂತೆ ತೆವಳಿಕೊಂಡು ಆದಷ್ಟು ಮೇಲೆ ಹೋಗಲು ಪ್ರಯತ್ನಿಸುತ್ತಿದ್ದರು. ಒಂದಿಷ್ಟು ಚಲನಕ್ರಿಯೆ ಜೋರಾಗಿ ನಡೆದರೆ ಮೇಲಿನಿಂದ ಪಾಕಿಗಳಿಗೆ ಸಂಶಯ ಬಂದು ನಮ್ಮತ್ತ ಗುಂಡು ಹಾರಿಸುತ್ತಿದ್ದರು. ಅಂತಹ ಹೊತ್ತಿನಲ್ಲಿ ಪಕ್ಕದ ಯೋಧ ಚೀರುತ್ತಾ ಪ್ರಾಣ ಬಿಟ್ಟದ್ದನ್ನು ನೋಡಿಯೂ ಏನು ಮಾಡಲಾಗದ ಸ್ಥಿತಿ. ಯಾಕೆಂದರೆ ಗುರಿ, ಪಕ್ಕದವನನ್ನು ಉಳಿಸುವುದಕ್ಕಿಂತ ದೇಶವನ್ನು ಕಾಪಾಡುವುದು. ಅದು ಸೈನಿಕನೊಬ್ಬನ ಕೆಚ್ಚು. ಕೇಳುತ್ತಾ ಇದ್ದರೆ ಮೈ ರೋಮಾಂಚನವಾಗಲ್ವಾ?
ಕಾರ್ಗಿಲ್ ಯುದ್ಧವನ್ನು “ಲಿಮಿಟೆಡ್ ವಾರ್” ಎಂದು ಉಲ್ಲೇಖಿಸಲಾಗುತ್ತದೆ. ಒಟ್ಟು 60 ದಿನಗಳ ತನಕ ನಡೆದ ಕದನವಿದು. ಅದರ ನಂತರ ಆಗಾಗ ಪಾಕಿಸ್ತಾನ ತನ್ನ ಸೋಲಿನ ನೋವನ್ನು ಮರೆಯಲು ಭಯೋತ್ಪಾದಕರನ್ನು ಗಡಿಯಾಚೆ ಕಳುಹಿಸಿ ನಮ್ಮ ದೇಶದ ಮೇಲೆ ಪರೋಕ್ಷ ಯುದ್ಧ ಸಾರುತ್ತಿದೆ. ಇದನ್ನು ಪ್ರಾಕ್ಸಿ ವಾರ್ ಎನ್ನುತ್ತೇವೆ. ಈಗಂತೂ ಅಮೇರಿಕಾ ನೇರವಾಗಿ ಪಾಕಿಸ್ತಾನವನ್ನು ಭಯೋತ್ಪಾದಕರ ಸ್ವರ್ಗ ಎನ್ನುವ ಮೂಲಕ ಜಾಗತಿಕವಾಗಿ ಪಾಕಿಸ್ತಾನದ ಮುಖವಾಡವನ್ನು ಕಳಚಿದೆ. ಈಗ ಒಂದು ವೇಳೆ ಯುದ್ಧ ನಡೆದರೂ ಚೀನಾ ಬಿಟ್ಟು ಬೇರೆ ದೇಶಗಳು ನಮ್ಮ ಬೆಂಬಲಕ್ಕೆ ನಿಲ್ಲಲಿವೆ. ಆದರೆ ಅದೇ ಹೊತ್ತಿನಲ್ಲಿ ಚೀನಾ ಇನ್ನೊಂದು ಭಾಗದಿಂದ ಆಕ್ರಮಣ ಮಾಡಿದರೆ ಏನು ಎನ್ನುವ ಚಿಂತನೆ ನಡೆಯುತ್ತಿದೆ. ಒಟ್ಟಿನಲ್ಲಿ ಕೇಂದ್ರ ಸರಕಾರ ಸಮರ್ಥ ಬೆಂಬಲ ನೀಡಿದರೆ ನಮ್ಮ ಯೋಧರು ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶರಣಾಗುವುದಿಲ್ಲ ಎನ್ನುವುದು ನೂರಕ್ಕೆ ನೂರು ನಿಜ
Leave A Reply