ಬುಟ್ಟಿಯಿಂದ ಕೊಳೆತ ಟೋಮೆಟೋ ಬಿಸಾಡುವ ಹಾಗೆ ಭ್ರಷ್ಟ ಅಧಿಕಾರಿಗಳನ್ನು ಬಿಸಾಡುವುದಿಲ್ಲ, ಯಾಕೆ?
ಒಂದು ಬುಟ್ಟಿಯಲ್ಲಿ ಫುಲ್ ಟೊಮೆಟೋ ಹಣ್ಣುಗಳಿವೆ. ಅದರಲ್ಲಿ ಎರಡು ಕೊಳೆತು ಹೋಗಿದೆ ಎಂದು ಇಟ್ಟುಕೊಳ್ಳೋಣ. ಆಗ ನೀವೆನೂ ಮಾಡುತ್ತೀರಿ ಮಕ್ಕಳೇ ಎಂದು ನಮಗೆ ಐದನೇ ತರಗತಿಯಲ್ಲಿ ಟೀಚರ್ ಪ್ರಶ್ನೆ ಕೇಳುತ್ತಿದ್ದರು. ಪ್ರಾರಂಭದಲ್ಲಿ ನಮಗೆ ಏನು ಉತ್ತರ ಕೊಡಬೇಕು ಎಂದು ಗೊತ್ತಾಗುತ್ತಿರಲಿಲ್ಲ. ನಂತರೇ ಟೀಚರ್ ಅವರೇ ಹೇಳುತ್ತಿದ್ದರು. ಆ ಎರಡು ಹಾಳಾಗಿರುವ ಟೊಮೆಟೋಗಳನ್ನು ಬಿಸಾಡಬೇಕು. ಏಕೆ ಎಂದು ಕೇಳಿದ್ದಕ್ಕೆ ಆ ಎರಡೂ ಟೋಮೆಟೋಗಳನ್ನು ಅದರಲ್ಲಿಯೇ ಇಟ್ಟರೆ ಅವು ಉಳಿದ ಟೋಮೆಟೊಗಳನ್ನು ಹಾಳು ಮಾಡುತ್ತವೆ. ಈ ವಿಷಯವನ್ನು ನಾವು ನೀವು ಇವತ್ತಿಗೂ ಮರೆತಿಲ್ಲ. ಯಾಕೆಂದರೆ ಇದು ನಮ್ಮಲ್ಲಿ ಇರಬೇಕಾದ ಸಾಮಾನ್ಯ ಜ್ಞಾನ. ಆದರೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಡಳಿತ ಮಾಡುವವರಿಗೆ, ಅಧಿಕಾರಿಗಳಿಗೆ ಇಷ್ಟು ಸಾಮಾನ್ಯ ಜ್ಞಾನ ಇಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅದು ಏನು ಎಂದು ಇವತ್ತು ಹೇಳುತ್ತೇನೆ.
ಈ ಬುಟ್ಟಿಯಲ್ಲಿರುವ ಟೋಮೆಟೊಗಳನ್ನು ಪಾಲಿಕೆಯಲ್ಲಿರುವ ಸಿಬ್ಬಂದಿಗಳಿಗೆ ಹೋಲಿಸಿ. ಇಬ್ಬರು ಸಿಬ್ಬಂದಿಗಳು ಭ್ರಷ್ಟಾಚಾರ ಮಾಡುತ್ತಾ ಕೊಳೆತು ಹೋಗಿದ್ದಾರೆ ಎಂದು ಅಂದುಕೊಳ್ಳಿ. ಆಗ ಸಾಮಾನ್ಯ ಜ್ಞಾನ ಎಂದರೆ ಕೊಳೆತಿರುವ ಅಧಿಕಾರಿಗಳನ್ನು ಅಲ್ಲಿಂದ ಎತ್ತಂಗಡಿ ಮಾಡಬೇಕು. ಆದರೆ ಪಾಲಿಕೆ ಏನು ಮಾಡುತ್ತದೆ ಎಂದರೆ ಇಡೀ ಟೋಮೆಟೋ ಬುಟ್ಟಿಯನ್ನು ಮೇಲೆ ಕೆಳಗೆ ಮಾಡುತ್ತದೆ ಮತ್ತು ಹಾಗೆ ಪುನ: ಇಡುತ್ತದೆ. ಇದರಿಂದ ಏನಾದರೂ ಪ್ರಯೋಜನ ಇದೆಯಾ ಎಂದು ನೀವು ಯೋಚಿಸಿ. ಹಾಳಾದ ಟೋಮೆಟೋಗಳು ಅಂದರೆ ಅಧಿಕಾರಿಗಳು ಅಲ್ಲಿಯೇ ಉಳಿದ ಹಾಗೆ ಆಗಲಿಲ್ಲವಾ?
ಡಾಟಾ ಎಂಟ್ರಿ ಮಾಡುವವರು ಸಿಂಪಲ್ ಟಾರ್ಗೆಟ್..
ನಮ್ಮ ಪಾಲಿಕೆಯಲ್ಲಿ 35 ಜನ ಡಾಟಾ ಎಂಟ್ರಿ ಮಾಡುವವರು ಇದ್ದಾರೆ. ಅವರದ್ದು ಏನು ಕೆಲಸ ಎಂದರೆ ಜನನ, ಮರಣ ಪ್ರಮಾಣಪತ್ರ, ಉದ್ದಿಮೆ ಪರವಾನಿಗೆ ಪತ್ರ ಮಾಡುವುದು, ರಿನಿವಲ್ ಮಾಡುವುದು ಇಂತಹುದೇ ಅನೇಕ ಕೆಲಸಗಳಿರುತ್ತವೆ. ಇವರು ಪಾಲಿಕೆಯ ಖಾಯಂ ಸಿಬ್ಬಂದಿಯಲ್ಲ. ಹೊರಗುತ್ತಿಗೆಯ ಮೇಲೆ ನೇಮಕವಾದವರು. ಈ ವರ್ಷ ಯಾರಿಗೆ ಗುತ್ತಿಗೆ ಸಿಕ್ಕಿದೆಯೋ ಅವರು ತಮಗೆ ಬೇಕಾದ ಮೂವತ್ತೈದು ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳಬಹುದು. ಮುಂದಿನ ವರ್ಷ ಅದೇ ಗುತ್ತಿಗೆದಾರರಿಗೆ ಗುತ್ತಿಗೆ ಸಿಗದಿದ್ದರೆ ಬೇರೆ ಬಂದವರು ಇವರನ್ನೇ ಕೆಲಸಕ್ಕೆ ಇಡುತ್ತಾರೆ ಎನ್ನುವ ಗ್ಯಾರಂಟಿ ಇಲ್ಲ. ಆದ್ದರಿಂದ ಈ ಡಾಟ್ರಾ ಎಂಟ್ರಿಯವರು ಉದ್ಯೋಗ ಭದ್ರತೆ ಇಲ್ಲದ ಸವಾಲನ್ನು ಅನುಭವಿಸುತ್ತಿರುತ್ತಾರೆ. ಇತ್ತೀಚೆಗೆ ಪಾಲಿಕೆಯ ಕಾಯಂ ಸಿಬ್ಬಂದಿಯೊಬ್ಬರ ಮೇಲೆ ಭ್ರಷ್ಟಾಚಾರದ ಕಂಪ್ಲೇಂಟ್ ಬಂತು. ಆಗ ಉನ್ನತ ಅಧಿಕಾರಿಗಳು ಏನು ಮಾಡಬೇಕು ಎಂದರೆ ಯಾರ ಮೇಲೆ ದೂರು ಬಂದಿದೆಯೋ ಅವರಿಗೆ ನೋಟಿಸ್ ಕೊಟ್ಟು ಅವರನ್ನು ಕರೆದು ವಿಚಾರಣೆ ಮಾಡಿ ನಂತರ ಟ್ರಾನ್ಸಫರ್ ಮಾಡುವುದಾದರೆ ಮಾಡಬೇಕು. ಆದರೆ ಪಾಲಿಕೆಯಲ್ಲಿ ಏನು ಮಾಡಿದರು ಎಂದರೆ ದೂರು ಬಂದ ಸಿಬ್ಬಂದಿಯ ಜೊತೆಗೆ ಈ 35 ಮಂದಿ ಡಾಟಾ ಎಂಟ್ರಿ ಸಿಬ್ಬಂದಿಗಳನ್ನು ಕೂಡ ಪಾಲಿಕೆಯ ಒಳಗೆ ಬೇರೆ ಬೇರೆ ವಿಭಾಗಗಳಿಗೆ ಆಂತರಿಕ ವರ್ಗಾವಣೆ ಮಾಡಲಾಗಿದೆ. ಇದರ ಅಗತ್ಯ ಏನಿತ್ತು ಎನ್ನುವುದು ಪ್ರಶ್ನೆ. ಯಾಕೆಂದರೆ ಇದರಿಂದ ಭ್ರಷ್ಟಾಚಾರ ಕಡಿಮೆ ಆಗಿದೆಯಾ ಎಂದು ನೋಡಿದರೆ ಬಿಲ್ ಕುಲ್ ಇಲ್ಲ.
ಮೊದಲು ಹಳೆ ಭ್ರಷ್ಟರನ್ನು ಹೊರಗೆ ಹಾಕಿ, ಪಾಲಿಕೆ ಶುದ್ಧವಾಗುತ್ತದೆ…
ಈಗಾಗಲೇ ಪಾಲಿಕೆಯನ್ನು ನೀವು ಒಂದು ಸುತ್ತು ಹೋಗಿ ಬಂದರೆ ಹೆಚ್ಚಿನ ವಿಭಾಗಗಳಲ್ಲಿ ನೀವು ಹತ್ತು ಹದಿನೈದು ವರ್ಷಗಳಿಂದ ನೋಡಿಕೊಂಡು ಬಂದಿರುವ ಅಧಿಕಾರಿಗಳೇ ಟೆಂಟ್ ಹಾಕಿ ಕುಳಿತುಕೊಂಡು ಬಿಟ್ಟಿದ್ದಾರೆ. ಹಲವರ ಕುರ್ಚಿಗೆ ಬೇರು ಬಂದಿದೆ. ಕೆಲವರ ಕುರ್ಚಿಗೆ ಗೆದ್ದಲು ಹಿಡಿದಿದೆ. ಆದರೆ ಇವರದ್ಯಾರದ್ದೂ ಟ್ರಾನ್ಸಫರ್ ಆಗುತ್ತಿಲ್ಲ. ಕಾರಣ ಇವರಿಗೂ, ಆಡಳಿತ ಪಕ್ಷದ ಸದಸ್ಯರಿಗೂ, ಗುತ್ತಿಗೆದಾರರಿಗೂ ಅಪವಿತ್ರ ಮೈತ್ರಿ. ಎಲ್ಲರೂ ಸೆಟಲ್ ಮೆಂಟ್ ಆಧಾರದ ಮೇಲೆ ಒಬ್ಬರನ್ನು ಇನ್ನೊಬ್ಬರು ಬಿಟ್ಟುಕೊಟ್ಟಿಲ್ಲ. ಕಮೀಷನ್ ಕೂಡ ದಶಕಗಳಿಂದ ಅದೇ ಪರ್ಸಂಟೆಜ್ ಮೇಲೆ ಹೋಗುತ್ತಿದೆ. ಹೀಗೆ ಆಗಿರುವುದರಿಂದ ಪ್ರಾಮಾಣಿಕ ಅಧಿಕಾರಿಗಳಿಗೆ ಪಾಲಿಕೆಯಲ್ಲಿ ಜಾಗ ಇಲ್ಲದ ಹಾಗೆ ಆಗಿದೆ. ಹಾಗಾದರೆ ಇದನ್ನೆಲ್ಲ ಅನುಭವಿಸುತ್ತಿರುವವರು ಯಾರು? ಸಂಶಯವೇ ಇಲ್ಲ. ನಮ್ಮ ಜನಸಾಮಾನ್ಯರು!
Leave A Reply