50% ಡಿಸೌಂಟಿನಲ್ಲಿ ಮಾರಾಟ. ಸ್ಥಳ: ಮಂಗಳೂರು ಮಹಾನಗರ ಪಾಲಿಕೆ!!
ಎನ್ ಎಂಪಿಟಿ, ಎಂಸಿಎಫ್, ಅದಾನಿ ಇಂತಹ ಕಂಪೆನಿಗಳೆಲ್ಲ ಬಿಪಿಎಲ್ ಕಾರ್ಡ್ ವ್ಯಾಪ್ತಿಯಲ್ಲಿ ಬರುತ್ತದಾ ಅಥವಾ ಎಪಿಎಲ್ ಕಾರ್ಡ್ ಅಡಿಯಲ್ಲಿ ಬರುತ್ತದಾ ಎನ್ನುವ ಪ್ರಶ್ನೆ ಉದ್ಭವವಾಗುತ್ತಿದೆ. ಇದೇನೂ ಹೊಸ ಪ್ರಶ್ನೆ ಎಂದು ಕೇಳಬೇಡಿ. ಯಾಕೆಂದರೆ ಮಂಗಳೂರು ಮಹಾನಗರ ಪಾಲಿಕೆಗೆ ಈ ಬಗ್ಗೆ ಗೊಂದಲ ಇದೆ. ಅವರು ಸುಲಭವಾಗಿ ಯಾರಿಗೂ ಏನನ್ನೂ ಕೊಡುವುದಿಲ್ಲ. ಹಾಗಿರುವಾಗ ದೊಡ್ಡ ದೊಡ್ಡ ಕಂಪೆನಿಗಳಿಗೆ ನಮ್ಮ ಪಾಲಿಕೆಯವರು ತೋರುತ್ತಿರುವ ಪ್ರೀತಿ ನೋಡಿದರೆ ತುಂಬಾ ಆಶ್ಚರ್ಯವಾಗುತ್ತದೆ. ನೀವು ಮನೆಯಲ್ಲಿ ಉಪಯೋಗಿಸುವ ನೀರಿಗೆ ಪಾಲಿಕೆ ತಿಂಗಳಿಗೆ ಕನಿಷ್ಟ ದರ ಎಂದು ಅರವತ್ತೈದು ರೂಪಾಯಿ ಹಾಕುತ್ತದೆ. ಸರಿ ತಾನೇ? ಆ ಅರವತ್ತೈದು ರೂಪಾಯಿಗೆ ನಿಮಗೆ ಇಪ್ಪತ್ತು ಸಾವಿರ ಲೀಟರ್ ನೀರು ಬರುತ್ತದೆ. ಅದಕ್ಕಿಂತ ಜಾಸ್ತಿ ನೀರು ನೀವು ಉಪಯೋಗಿಸಿದರೆ ನಿಮಗೆ ಇಂತಿಷ್ಟು ಎಂದು ಹೆಚ್ಚು ಬಿಲ್ ಬರುತ್ತದೆ. ಆ ಬಗ್ಗೆ ಮೀಟರ್ ರೀಡಿಂಗ್ ನಲ್ಲಿ ಆಗುತ್ತಿರುವ ಗೊಂದಲದ ಬಗ್ಗೆ ಹಿಂದೆ ಬರೆದಿದ್ದೆ. ಇವತ್ತು ಆ ವಿಷಯ ಅಲ್ಲ. ಅದಕ್ಕಿಂತ ಒಂದು ಮುಷ್ಟಿ ದೊಡ್ದದಾಗಿರುವ ಸಂಗತಿ ಹೇಳುತ್ತೇನೆ.
ಕೈಗಾರಿಕೆಗಳ ಮಟ್ಟಿಗೆ ಇದು ಜುಜುಬಿ ಹಣ…
ನಾವು ಗೃಹಬಳಕೆಗೆ ಉಪಯೋಗಿಸುವ ನೀರಿಗೂ ದೊಡ್ಡ ದೊಡ್ಡ ಸಂಸ್ಥೆಗಳು ತಮ್ಮ ಉತ್ಪಾದನೆಗೆ ಬಳಸುವ ನೀರಿಗೂ ವ್ಯತ್ಯಾಸವಿದೆ. ಕೈಗಾರಿಕೆಗಳು ಉತ್ಪಾದಿಸುವ ವಸ್ತುಗಳು ವ್ಯವಹಾರಿಕ ಲಾಭವನ್ನು ಹೊಂದಿರುತ್ತದೆ. ಆದ್ದರಿಂದ ನಮ್ಮ ಪಾಲಿಕೆ ಅಂತಹ ಕೈಗಾರಿಕೆಗಳಿಗೆ ಕೊಡುವ ನೀರಿಗೆ ಸಹಜವಾಗಿ ದರವನ್ನು ಹೆಚ್ಚು ಮಾಡಬೇಕು. ಅಂತಹ ಕೈಗಾರಿಕೆಗಳಿಗೆ ಕೊಡುವ ನೀರಿಗೆ ಒಂದು ಸಾವಿರ ಲೀಟರ್ ಗೆ ಎಷ್ಟಿರಬೇಕು ಎನ್ನುವುದು ನಿಮ್ಮ ಅಭಿಪ್ರಾಯ.ಬೇಕಾದರೆ ಸಿಂಪಲ್ ಲಾಜಿಕ್ ನೋಡೋಣ. ಉದಾಹರಣೆಗೆ ನೀವು ಒಂದು ಅಂಗಡಿಗೆ ಹೋಗಿ ಒಂದು ಲೀಟರ್ ನೀರು ಸೀಲ್ಡ್ ಬಾಟಲಿಯಲ್ಲಿ ತೆಗೆದುಕೊಂಡಾಗ ಅದಕ್ಕೆ ಇಪ್ಪತ್ತು ರೂಪಾಯಿ ಕೊಡಬೇಕಾಗುತ್ತದೆ. ಹಾಗೆ ಲೆಕ್ಕ ಹಾಕಿದರೆ ಕೈಗಾರಿಕೆಗಳಿಗೆ ನಮ್ಮ ಪಾಲಿಕೆ ಪೂರೈಸುವ ನೀರಿಗೆ ಕ್ಯಾಲ್ಕುಲೇಟರ್ ಸಾಕಾಗಲಿಕ್ಕಿಲ್ಲ. ಆದ್ದರಿಂದ ನಾವು ಆ ರೀತಿಯಲ್ಲಿ ಲೆಕ್ಕ ಹಾಕಲು ಆಗುವುದಿಲ್ಲ. ಹೋಗಲಿ, ಕಡಿಮೆ ಎಂದರೆ ಒಂದು ಸಾವಿರ ಲೀಟರ್ ನೀರಿಗೆ ನಮ್ಮ ಪಾಲಿಕೆ ಎಂಸಿಎಫ್, ಎನ್ ಎಂಪಿಟಿ, ಅದಾನಿಯಂತಹ ಕೈಗಾರಿಕೆಗಳಿಗೆ ಎಷ್ಟು ದರ ನಿಗದಿಪಡಿಸಿರಬಹುದು ಎಂದು ಹೇಳಿ ನೋಡೋಣ. ನೀವು ಎಷ್ಟು ಕಡಿಮೆ ಯೋಚಿಸಿದರೂ ಅದಕ್ಕಿಂತ ಕಡಿಮೆನೆ ಇದೆ. ಪಾಲಿಕೆ ಒಂದು ಸಾವಿರ ಲೀಟರ್ ನೀರನ್ನು ದೊಡ್ಡ ದೊಡ್ಡ ಕಮರ್ಶಿಯಲ್ ಕೈಗಾರಿಕೆಗೆ ಪೂರೈಸಬೇಕಾಗಿರುವುದು ಸಾವಿರ ಲೀಟರ್ 52 ರೂಪಾಯಿಗೆ. ಬರಿ 52 ರೂಪಾಯಿಗೆ ಒಂದು ಸಾವಿರ ಲೀಟರ್ ನೀರಾ ಎಂದು ನೀವು ಕೇಳಬಹುದು. ಹೌದು. ನಿಮಗೆ ಆಶ್ಚರ್ಯವಾಗುತ್ತಾ ಇರಬಹುದು. ಆದರೆ ಅದಕ್ಕಿಂತ ಆಶ್ಚರ್ಯದ ಇನ್ನೊಂದು ವಿಷಯವನ್ನು ನಿಮಗೆ ಹೇಳುತ್ತಿದ್ದೇನೆ. ಅದೇನೆಂದರೆ ನಮ್ಮ ಪಾಲಿಕೆ ಸಾವಿರ ಲೀಟರ್ ಗೆ 52 ರೂಪಾಯಿಯನ್ನು ಕೂಡ ಪಡೆಯುತ್ತಿಲ್ಲ. ಇವರು ಕೈಗಾರಿಕೆಗೆ ಪೂರೈಸುವ ಸಾವಿರ ಲೀಟರ್ ನೀರಿಗೆ ತೆಗೆದುಕೊಳ್ಳುವುದು ಕೇವಲ 26 ರೂಪಾಯಿ ಮಾತ್ರ. ಆಶ್ಚರ್ಯವಾಯಿತಾ?
ಈ ನಷ್ಟ ತುಂಬುವವರ್ಯಾರು…
ಹೌದು. ಇಷ್ಟು ಕಡಿಮೆ ದರಕ್ಕೆ ವರ್ಷಕ್ಕೆ ಕೋಟ್ಯಾಂತರ ರೂಪಾಯಿ ಲಾಭ ಮಾಡುವ ಕಂಪೆನಿಗಳಿಗೆ ನೀರು ಕೊಡುವುದು ಸರಿಯಾ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡುತ್ತಾ ಇರಬಹುದು. ಇದು ಪತ್ತೆಯಾದದ್ದು 2016-17 ರ ಅಡಿಟ್ ವರದಿಯಲ್ಲಿ. ಆ ವರದಿಯನ್ನು ನಾನು ಮಾಹಿತಿ ಹಕ್ಕಿನಲ್ಲಿ ಕೇಳಿ ತೆಗೆದುಕೊಂಡ ಬಳಿಕ ಇಂತಹ ಒಂದು ಸತ್ಯ ಬಯಲಿಗೆ ಬಂದಿದೆ.
ಕೊಡುವುದೇ ಅಷ್ಟು ಕಡಿಮೆ ದರಕ್ಕೆ. ಅದೇ ಕಡಿಮೆ. ಇವರು ಅದರ ಅರ್ಧ ರೇಟಿಗೆ ನೀರು ಮಾರುತ್ತಿದ್ದಾರೆ. ಇದು ಅಡಿಟ್ ಮಾಡಿದ ನಂತರ ಬಹಿರಂಗವಾಗಿದೆ. ಇದರಿಂದ ಆದ ನಷ್ಟ ಎಷ್ಟು ಗೊತ್ತಾ? ಬರೋಬ್ಬರಿ ವರ್ಷಕ್ಕೆ ಹೆಚ್ಚು ಕಡಿಮೆ ಒಂದೊಂದು ಕೈಗಾರಿಕೆಯಿಂದ 37 ಲಕ್ಷ ರೂಪಾಯಿ ಆದಾಯ ಪಾಲಿಕೆಯಿಂದ ಸೋರಿ ಹೋಗುತ್ತಿದೆ. ಅದು ಕೂಡ 2011 ರಿಂದ. ಅಂದರೆ ವರ್ಷಕ್ಕೆ ಮೂವತ್ತೇಳು ಲಕ್ಷದಂತೆ ಇಲ್ಲಿಯ ತನಕ ಒಂದೊಂದು ಸಂಸ್ಥೆ ಕೊಡಬೇಕಾಗಿರುವ ನೀರಿನ ಬಾಕಿ ಎಷ್ಟು ಅಂತ ಲೆಕ್ಕಾ ಮಾಡಿದ್ದೀರಾ?
ಒಟ್ಟು ಹದಿನಾಲ್ಕು ಕಂಪೆನಿಗಳಿಂದ ಹೀಗೆ ನಿರಂತರ ನಷ್ಟ ಸಂಭವಿಸಿದೆ. ಇದರಿಂದ ಪಾಲಿಕೆಗೆ ಒಂದು ಕೋಟಿ 44 ಲಕ್ಷ, 22 ಸಾವಿರದ 942 ರೂಪಾಯಿ ಬರಬೇಕಾಗಿದ್ದ ಮೊತ್ತ ಬಂದಿಲ್ಲ. ಬಾಳ, ಚೇಳಾರಪದವು, ಉಳ್ಳಾಲ ನಗರ ಪಂಚಾಯತ್, ಮೂಲ್ಕಿ ನಗರಸಭೆ ಈ ಭಾಗದಲ್ಲಿರುವ ಬೃಹತ್ ಮತ್ತು ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ನೀರಿನ ಪೂರೈಕೆ ನಿಲ್ಲದಂತೆ ನಮ್ಮ ಪಾಲಿಕೆ ಹೆಚ್ಚೆಚ್ಚು ಜಾಗೃತೆ ವಹಿಸುತ್ತದೆ. ಎಷ್ಟೋ ಬಾರಿ ನೀರಿನ ಕೊರತೆ ಉಂಟಾದಾಗ ಜನಸಾಮಾನ್ಯರು ಉಪಯೋಗಿಸುವ ನೀರನ್ನು ಜಾಗ್ರತೆಯಾಗಿ ಕಡಿಮೆ ಉಪಯೋಗಿಸಿ ಎಂದು ಹೇಳಲಾಗುತ್ತದೆ ಬಿಟ್ಟರೆ ಕೈಗಾರಿಕೆಗಳು ನೀರಿಲ್ಲದೆ ಒಂದು ದಿನ ಬಂದ್ ಆದರೆ ಊರೇ ಮುಳುಗಿತು ಎನ್ನುವ ರೀತಿಯಲ್ಲಿ ನಮ್ಮ ಪಾಲಿಕೆಯ ಅಧಿಕಾರಿಗಳು ವರ್ತಿಸುತ್ತಾರೆ. ಅದೇ ಅಂತಹ ಕೈಗಾರಿಕೆಗಳಿಂದ ಸರಿಯಾಗಿ ಬಿಲ್ ವಸೂಲಿ ಮಾಡಿ ಎಂದರೆ 52 ರೂಪಾಯಿ ತೆಗೆದುಕೊಳ್ಳುವ ಕಡೆ 26 ರೂಪಾಯಿ ತೆಗೆದುಕೊಳ್ಳುತ್ತವೆ. ಇಂತವರನ್ನು ಇಟ್ಟುಕೊಂಡರೆ ಊರು ಉದ್ಧಾರ ಆಗುತ್ತದಾ? ಬ್ರಾಂಡ್ ಮಂಗಳೂರಿನಲ್ಲಿ ನಮ್ಮ ಪತ್ರಿಕೋದ್ಯಮದ ಜವಾಬ್ದಾರಿಯ ಬಗ್ಗೆ ಇವತ್ತು ಬರೆಯಬೇಕಿತ್ತು. ಈ ನೀರಿನ ಗೋಲ್ ಮಾಲ್ ಗೆ ಸಂಬಂಧಪಟ್ಟ ದಾಖಲೆಗಳು ಎದುರಿಗೆ ಇದ್ದಾಗ ಬೇರೆ ವಿಷಯ ನೆನಪಾಗಲಿಲ್ಲ, ನಾಳೆ ಆ ವಿಷಯ ಬರೆಯುತ್ತೇನೆ!
Leave A Reply