ಕಲಿಯುಗದ ಶ್ರವಣಕುಮಾರ..!
ಮಂಗಳೂರು_ ರಾಮಾಯಣದಲ್ಲಿ ಬರುವ ಶ್ರವಣ ಕುಮಾರನ ಕಥೆ ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ. ಕುರುಡರಾಗಿದ್ದ ತಂದೆ-ತಾಯಿಯ ಆಸೆ ತೀರಿಸಲು ಅವರನ್ನು ತಕ್ಕಡಿಯಲ್ಲಿ ಕುಳ್ಳಿರಿಸಿ ಹೆಗಲಲ್ಲಿ ಹೊತ್ತೊಯ್ದು ತೀರ್ಥಯಾತ್ರೆ ಮಾಡಿಸುವ ಮೂಲಕ ಆದರ್ಶ ಪುತ್ರ ಎನಿಸಿಕೊಂಡವ ಶ್ರವಣಕುಮಾರ. ಅಂತೆಯೇ ಆಧುನಿಕ ಕಾಲದಲ್ಲೂ ಒಬ್ಬ ಶ್ರವಣಕುಮಾರ ಮಂಗಳೂರಿನಲ್ಲಿದ್ದಾನೆ..ಆತ ತಾಯಿಗಾಗಿ ಮಾಡಿದ ಶ್ರಮ ನೋಡಿದ್ರೆ ಎಲ್ರೂ ಭೇಷ್ ಎನ್ನುವಂತಿದೆ…
ಇಂದಿನ ಈ ಆಧುನಿಕ ಕಾಲದಲ್ಲೂ ಶ್ರವಣಕುಮಾರನಂತಹ ಪುತ್ರರು ಇದ್ದಾರೆ ಎಂದರೆ ಅದು ನಂಬೋದು ಸ್ವಲ್ಪ ಕಷ್ಟವಾಗುತ್ತೆ. ಆದ್ರೆ ಈ ಮಾತಿಗೆ ಪೂರಕವಾಗಿ ಮಂಗಳೂರಿನಲ್ಲಿ ಒಬ್ಬ ವ್ಯಕ್ತಿ ಕಾಣಸಿಕ್ಕಿದ್ದಾರೆ. ಆಧುನಿಕ ಶ್ರವಣಕುಮಾರನೆಂದು ಗುರುತಿಸಿಕೊಂಡಿರುವ ಅವರು ತಮ್ಮ ತಾಯಿಯನ್ನು ತೀರ್ಥಯಾತ್ರೆಗೆ ಕರೆದೊಯ್ಯುತ್ತಿದ್ದಾರೆ. ಯಸ್ ಮೂಲತಃ ಮೈಸೂರಿನವರಾಗಿರುವ ಡಿ.ಕೃಷ್ಣಕುಮಾರ್ ಅವರೇ ಆಧುನಿಕ ಶ್ರವಣ ಕುಮಾರ. ಇವರು ತನ್ನ ತಾಯಿ ಚೂಡಾರತ್ನ ಅವರೊಂದಿಗೆ ಭಾರತ ಯಾತ್ರೆ ಮಾಡುತ್ತಿದ್ದಾರೆ. ಆ ಕಾಲದ ಶ್ರವಣಕುಮಾರ ತಂದೆ-ತಾಯಿಯನ್ನು ಹೊತ್ತು ತೀರ್ಥಯಾತ್ರೆ ಮಾಡಿಸಿದಂತೆ ಈ ಆಧುನಿಕ ಶ್ರವಣಕುಮಾರ ಬಜಾಜ್ ಚೇತಕ್ ಸ್ಕೂಟರ್ ನಲ್ಲಿ 70ರ ಹರೆಯದ ತನ್ನ ತಾಯಿಯನ್ನು ಕುಳ್ಳಿರಿಸಿ ಭಾರತ ದರ್ಶನ ಮಾಡಿಸುತ್ತಿದ್ದಾರೆ. ಚೂಡಾರತ್ನ ಅವರ ಪತಿ ದಕ್ಷಿಣಾಮೂರ್ತಿ ಅವರು ನಾಲ್ಕು ವರ್ಷಗಳ ಹಿಂದೆಯಷ್ಟೇ ಸ್ವರ್ಗಾಸ್ತರಾಗಿದ್ದು, ಅದುವರೆಗೆ ಪತಿ, ಮನೆ ಕುಟುಂಬವೆಂದಷ್ಟಕ್ಕೆ ಸೀಮಿತವಾಗಿದ್ದ ಅವರು ಇತ್ತೀಚೆಗೆ ಮಗನೊಂದಿಗೆ ಮಾತನಾಡುವ ವೇಳೆ ತಾನು ಬೇಲೂರು, ಹಳೆಬೀಡು ಕ್ಷೇತ್ರಗಳನ್ನು ನೋಡಿಲ್ಲ ಎಂದಿದ್ದರು. ಈ ಮಾತಿನಿಂದ ಬೇಸರಗೊಂಡ ಕೃಷ್ಣಕುಮಾರ್ ಆ ಕ್ಷಣವೇ ಮಾತೃ ಸೇವಾ ಸಂಕಲ್ಪ ಮಾಡಿದ್ದಾರೆ. ಅದಕ್ಕಾಗಿ ತಮ್ಮ ಕೆಲಸ ತೊರೆದು ಬಂದು ಸ್ಕೂಟರ್ ನಲ್ಲೆ ತನ್ನ ತಾಯಿಯನ್ನು ಕುಳ್ಳಿರಿಸಿ ಯಾತ್ರೆ ಆರಂಭಿಸಿದ್ದಾರೆ.
ಮೈಸೂರಿನಿಂದ ಆರಂಭಿಸಿ ಇದೀಗ ಹನ್ನೊಂದು ತಿಂಗಳಲ್ಲಿ 7 ರಾಜ್ಯಗಳಲ್ಲಿ ಸುತ್ತಾಡಿ 29 ಸಾವಿರಕ್ಕೂ ಅಧಿಕ ಕಿ.ಮೀ. ಪ್ರಯಾಣಿಸುವ ಮೂಲಕ ದಾಖಲೆ ಮಾಡಿದ್ದಾರೆ. ಇದೀಗ ಕರಾವಳಿ ಭಾಗಕ್ಕೆ ಆಗಮಿಸಿರುವ ಈ ತಾಯಿ-ಮಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಜೊತೆಗೆ ಕೇವಲ ತೀರ್ಥಕ್ಷೇತ್ರಗಳಷ್ಟೇ ಅಲ್ಲದೇ ಪ್ರತಿ ಊರುಗಳಲ್ಲಿ ತಾಯಿಯನ್ನು ಕರೆದೊಯ್ದು ತಾಣಗಳನ್ನು ತೋರಿಸುತ್ತಿದ್ದಾರೆ ಕೃಷ್ಣಕುಮಾರ್. ಇನ್ನು ತನ್ನ ಮಗನ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ಚೂಡಾರತ್ನ, ‘ತನ್ನ ಮನದ ಇಂಗಿತವನ್ನು ಅರಿತು ತನಗೆ ಭಾರತಯಾತ್ರೆ ಮಾಡಿಸುತ್ತಿದ್ದಾನೆ. ಇಂತಹ ಮಗನನ್ನು ಪಡೆದಿರುವುದು ನನಗೆ ಹೆಮ್ಮೆಯ ಸಂಗತಿ’ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ…
ಒಟ್ಟಿನಲ್ಲಿ ಈ ಆಧುನಿಕ ಕಾಲದಲ್ಲೂ ಇಂತಹ ಪುತ್ರಂದಿರು ಇದ್ದಾರೆ ಅನ್ನೋದಕ್ಕೆ ಇವರು ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಕೃಷ್ಣಕುಮಾರ್ ಪ್ರತಿಯೊಬ್ಬ ಮಕ್ಕಳಿಗೂ ಮಾದರಿಯಾಗಿದ್ದಾರೆ. ತನ್ನ ತಾಯಿಗಾಗಿ, ತಾಯಿಯ ಖುಷಿಗಾಗಿ ಹಂಬಲಿಸುತ್ತಿರುವ ಇವರು ನಿಜಕ್ಕೂ ಆಧುನಿಕ ಶ್ರವಣಕುಮಾರ. ಇಂತಹ ಮಗನನ್ನು ಪಡೆದ ಈ ತಾಯಿ ನಿಜಕ್ಕೂ ಧನ್ಯಳು.
Leave A Reply