ಇವತ್ತು ವರಮಹಾಲಕ್ಷ್ಮಿ ವ್ರತ! ನೂರು ಗ್ರಾಂ ಸೇವಂತಿಗೆಗೆ 40 ರೂಪಾಯಿ!
ನೀವು ಅಂಗಡಿಯಲ್ಲಿ ಯಾವತ್ತಾದರೂ ನೂರು ಗ್ರಾಂ ಸಾಸಿವೆ ಖರೀದಿಸಿರಬಹುದು. ಹಾಗೆ ಮಾರುಕಟ್ಟೆಯಲ್ಲಿ ನೂರು ಗ್ರಾಂ ಹಸಿ ಮೆಣಸು ತೆಗೆದುಕೊಂಡಿರಬಹುದು. ಮನೆಯಲ್ಲಿ ಜನ ಕಡಿಮೆ ಇದ್ದರೆ ನೂರು ಗ್ರಾಂ ಬೆಣ್ಣೆ ತೆಗೆದುಕೊಂಡರೂ ತುಂಬಾ ಆಗುತ್ತದೆ. ಆದರೆ ನೀವು ಯಾವತ್ತಾದರೂ ನೂರು ಗ್ರಾಂ ಹೂವನ್ನು ಖರೀದಿಸಿದ್ದಿರಾ? ಮಂಗಳೂರಿನ ರಥಬೀದಿಯಲ್ಲಿರುವ ಹೂವಿನ ಮಾರುಕಟ್ಟೆಯಲ್ಲಿ ಸೇವಂತಿಗೆ ಬಿಡಿ ಹೂಗಳನ್ನು ನೂರು ಗ್ರಾಂ ಲೆಕ್ಕದಲ್ಲಿ ಮಾರಲಾಗುತ್ತಿದೆ. ಹೌದು, ಸ್ವಾಮಿ, ರೇಟ್ ಕೂಡ ಹಾಗೆ ಇದೆ. ನೂರು ಗ್ರಾಂ ಉದ್ದದ ಬಿಡಿ ಸೇವಂತಿಗೆಗೆ 40 ರೂಪಾಯಿ ಕೊಡಬೇಕಾಗುತ್ತದೆ.
ಹಿಂದೆ ಹೂವನ್ನು ಮಂಗಳೂರಿನಲ್ಲಿ ಮೊಳದ ಲೆಕ್ಕದಲ್ಲಿ ಮಾರಲಾಗುತ್ತಿತ್ತು. ಒಂದು ಮೊಳ ಬೇಕಾ, ಎರಡು ಮೊಳ ಬೇಕಾ ಎಂದು ವ್ಯಾಪಾರಿಗಳು ಕೇಳಿ ಆ ಪ್ರಕಾರ ಮೊಳ ಲೆಕ್ಕ ಹಾಕಿ ನಾಲ್ಕು ಹೂ ಹೆಚ್ಚಿಗೆ ಕಟ್ಟಿ ಕೊಡುತ್ತಿದ್ದರು. ಇನ್ನು ಮತ್ತೊಂದು ರೀತಿಯೆಂದರೆ ಮಾರು ಲೆಕ್ಕ ಹಾಕಿ ಹೂವು ಮಾರಲ್ಪಡುತ್ತಿದ್ದವು. ಈಗಲೂ ಈ ಎರಡು ಪ್ರಾಕಾರಗಳಲ್ಲಿ ಹೂವನ್ನು ಮಾರುವ ಕ್ರಮವಿದೆ. ಆದರೆ ಗ್ರಾಂ ಲೆಕ್ಕದಲ್ಲಿ ಬಹುಶ: ಪ್ರಥಮ ಬಾರಿಗೆ ಹೂಗಳನ್ನು ಮಾರಲಾಗುತ್ತಿದೆ. ನೂರು ಗ್ರಾಂಗೆ 40 ರೂಪಾಯಿ ಎಂದರೆ ಕಿಲೋಗೆ 400 ರೂಪಾಯಿಯಾಯಿತು. 100 ಗ್ರಾಂಗೆ ಎಷ್ಟು ಸೇವಂತಿಗೆ ಬರುತ್ತದೆ ಎಂದು ಲೆಕ್ಕ ಹಾಕಿದರೆ 16 ರಿಂದ 18 ಬಿಡಿ ಹೂಗಳು ಬರುತ್ತವೆ. ಈ ಚೂಡಿ ಪೂಜೆಯನ್ನು ಮಾಡುವ ಮುತ್ತೈದೆಯರಿಗೆ ಚೂಡಿ ಕಟ್ಟಲು ಬಿಡಿ ಹೂಗಳಿದ್ದರೆ ಸುಲಭ. ಆದ್ದರಿಂದ ಅವರು ಹೀಗೆ ಬಿಡಿ ಹೂಗಳಿಗೆ ಮೊರೆ ಹೋಗುತ್ತಾರೆ. ಸಾಮಾನ್ಯವಾಗಿ ಈ ರೀತಿ ಬೇರೆ ಬೇರೆ ಐದು ಜಾತಿಯ ಹೂಗಳನ್ನು ಬಿಡಿಬಿಡಿಯಾಗಿ ತೆಗೆದುಕೊಂಡು ಮನೆಗೆ ಹೋದರೆ 12 ರಿಂದ 14 ಚೂಡಿಗಳನ್ನು ಕಟ್ಟಿ ಪೂಜಿಸಲಾಗುತ್ತದೆ. ಇನ್ನೂ ಜೀನಿಯಾ ಎನ್ನುವ ಜಾತಿಯ ಹೂಗಳನ್ನು ಕೂಡ ತೂಕ ಮಾಡಿ ಮಾರಲಾಗುತ್ತಿದೆ. ಆದರೆ ಅದನ್ನು ಕಾಲು ಕಿಲೋಗಿಂತ ಕಡಿಮೆ ಕೊಡುವುದಿಲ್ಲ ಎನ್ನುವುದು ಅಂಗಡಿ ಮಾಲೀಕರ ಹಟ. ಬೇಕಾದರೆ ಕನಿಷ್ಟ ಕಾಲು ಕಿಲೋವನ್ನಾದರೂ ತೆಗೆದುಕೊಳ್ಳಿ, ಅದಕ್ಕಿಂತ ಕಡಿಮೆ ಕೊಟ್ಟರೆ ನಮಗೆ ಅಸಲಾಗುವುದಿಲ್ಲ ಎನ್ನುವುದು ಅವರ ನಿಲುವು. ಹಾಗಾದರೆ ಕಾಲು ಕಿಲೊ ಕೊಡಿ ಎಂದು ನೀವು ಹೇಳಿದಿರೋ ನಿಮ್ಮ ಪರ್ಸ್ ಹಗುರವಾಯಿತು ಎಂದೇ ಅರ್ಥ. ಕಾಲು ಕಿಲೋ ಜೀನಿಯಾಗೆ ಭರ್ಥಿ ನೂರು ರೂಪಾಯಿ ಬೆಲೆ ಇದೆ.
ಮಧ್ಯಮ ವರ್ಗದ ಹೆಣ್ಣುಮಕ್ಕಳಿಗೆ ಇದು ನಿಜಕ್ಕೂ ಕೈಗೆಟುಕುವುದು ಕಷ್ಟ. ಬಜೆಟ್ ಲೆಕ್ಕದಲ್ಲಿ ಈ ಬಾರಿಯ ವರಮಹಾಲಕ್ಷ್ಮಿ ಪೂಜೆಯನ್ನು ಮಾಡುತ್ತೀರಿ ಎಂದು ನೀವು ಹೊರಟರೆ ನಿಮ್ಮ ಪರ್ಸ್ ನಲ್ಲಿ ಗಾಂಧೀ ಮುಖಬೆಲೆಯ ನೋಟುಗಳನ್ನು ಇಟ್ಟುಕೊಂಡು ಹೊರಡಿ. ಅಂದ ಹಾಗೆ ಇಷ್ಟು ಬೆಲೆಯ ಹೂಗಳನ್ನು ತೆಗೆದುಕೊಂಡೇ ಯಾವುದೇ ದೇವರ ಪೂಜೆ ಮಾಡಬೇಕಾಗಿಲ್ಲ. ಮನಸ್ಸಿನಲ್ಲಿ ದೇವರ ಬಗ್ಗೆ ಭಯ, ಭಕ್ತಿ ಇದ್ದರೆ ಸಾಕು ಎಂದು ಅಂದುಕೊಳ್ಳುತ್ತೀರಾ, ಅದು ನಿಮಗೆ ಬಿಟ್ಟಿದು.
ಆದರೆ ಶ್ರಾವಣ ಮಾಸದ ಈ ಶುಭಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮವನ್ನು ಯಾವುದೇ ಕಾರಣಕ್ಕೂ ಹೂಗಳಿಲ್ಲದೆ ಆಚರಿಸಲು ಸಾಧ್ಯವಿಲ್ಲ ಎನ್ನುವುದು ಹೂ ವ್ಯಾಪಾರಿಗಳಿಗೆ ಗೊತ್ತು. ಅದಕ್ಕೆ ಅವರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕರ್ನಾಟಕದಿಂದ ಹೂಗಳನ್ನು ಆಮದು ಮಾಡಿಕೊಂಡಿದ್ದಾರೆ. ಗುರುವಾರ ಸಂಜೆ ಆರು ಗಂಟೆಯೊಳಗೆ ಹೆಚ್ಚಿನ ಕಡೆ ಹೂಗಳು ಖಾಲಿಯಾಗಿವೆ. ಹಲವು ಕಡೆ ಈ ಹತ್ತು, ಇಪ್ಪತ್ತು ರೂಪಾಯಿಗಳಿಗೆ ತರಕಾರಿಗಳನ್ನು ಪಾಲು ಮಾಡಿ ಕುಳಿತು ಉತ್ತರ ಕರ್ನಾಟಕದ ಗೌಡರು ಸೆಂಟ್ರಲ್ ಮಾರುಕಟ್ಟೆ ಹೊರಗೆ ವ್ಯಾಪಾರ ಮಾಡುತ್ತಾರಲ್ಲ, ಹಾಗೆ ಗುಲಾಬಿ ಸಹಿತ ಕೆಲವು ಹೂಗಳನ್ನು 20 ರೂಪಾಯಿ ಕಟ್ಟು ಮಾಡಿ ಮಾರುತ್ತಿದ್ದ ದೃಶ್ಯ ಕಂಡುಬರುತ್ತಾ ಇತ್ತು. ಒಟ್ಟಿನಲ್ಲಿ ಚೀಲ ತುಂಬಾ ಹೂಗಳನ್ನು ತುಂಬಿಸಿ ನೀವು ಕೊಟ್ಟ ಚೌಕಾಶಿ ಹಣಕ್ಕೆ ಹೂ ಮಾರಿ ಸಂತೃಪ್ತಿಗೊಳ್ಳುತ್ತಿದ್ದ ಹಿಂದಿನ ಕಾಲವೆಲ್ಲಿ, ಬೇಕಾದರೆ ನೂರು ಗ್ರಾಂಗೆ ನಲ್ವತ್ತು ರೂಪಾಯಿ ಕೊಡಿ, ಇಲ್ಲದಿದ್ದರೆ ಬೇಡಾ ಎಂದು ಬೇರೆ ಗಿರಾಕಿಗಳತ್ತ ಮುಖ ಮಾಡುವ ಇವತ್ತಿನ ವ್ಯಾಪಾರಿಗಳು ಎಲ್ಲಿ.
Leave A Reply