
ಅರವಿಂದ ಕೇಜ್ರಿವಾಲ್ ಅವರಿಗೆ ಮೂರನೇ ಬಾರಿ ದೆಹಲಿ ಗದ್ದುಗೆ ಸಿಕ್ಕಿರುವುದರಿಂದ ಅವರನ್ನು ಜನ ಪೂರ್ಣ ಪ್ರಮಾಣದಲ್ಲಿ ಒಪ್ಪಿದ್ದಾರೆ ಎಂದು ಸಾಬೀತಾಗಿದೆ. ಅವರು ಕಳೆದ ಬಾರಿ 70 ರಲ್ಲಿ 67 ಗೆದ್ದಾಗ ಜನ ಆಮ್ ಆದ್ಮಿಗೆ ಒಂದು ಅವಕಾಶ ಕೊಡೋಣ ಎಂದು ಅಂದುಕೊಂಡು ಕೊಟ್ಟಿದ್ದರು. ಅದರ ಮೊದಲು ಬಿಡಿ, ರಾಜಕೀಯದ ವಿಪ್ಲಲವಾಗಿತ್ತು. ಆದರೆ ಈ ಬಾರಿ ಒಂದು ವೇಳೆ 60 ಕ್ಕಿಂತ ಕಡಿಮೆ ಸೀಟು ಬಂದಿದ್ದರೂ ಅದು ಅರವಿಂದ್ ಕೇಜ್ರಿವಾಲ್ ಅವರಿಗೆ ಹಿನ್ನಡೆಯಂದೇ ಪರಿಗಣಿಸಲಾಗುತ್ತಿತ್ತು. ಯಾಕೆಂದರೆ ಜನರು ಒಮ್ಮೆ ನೋಡೋಣ ಎಂದು ಕೊಟ್ಟರೆ ಎರಡನೇ ಬಾರಿ ನೋಡಿ ಆಯಿತು, ಒಕೆ ಎಂದುಕೊಂಡು ಕೊಡುತ್ತಾರೆ. ಮೋದಿ ವಿಷಯದಲ್ಲಿಯೂ ಲೋಕಸಭೆಯಲ್ಲಿ ಹಾಗೆ ಆಗಿತ್ತು. ಅದರೊಂದಿಗೆ ಐದು ವರ್ಷದಲ್ಲಿ ಇಷ್ಟು ಮಾಡಿದ್ದೇವೆ, ಎಲ್ಲವೂ ಮಾಡಲು ಸಾಧ್ಯವಾಗಲಿಲ್ಲ ಎಂದು ಮೋದಿಯವರು ವಿನಂತಿಸಿಕೊಂಡ ಕಾರಣ ಜನ ಅದಕ್ಕೆ ಒಪ್ಪಿದ್ದರು. ಆದರೆ ದೆಹಲಿಯಂತಹ 70 ವಿಧಾನಸಭಾ ಕ್ಷೇತ್ರಗಳನ್ನು ಮಾತ್ರ ಹೊಂದಿರುವ ರಾಜ್ಯದಲ್ಲಿ ಐದು ವರ್ಷಗಳಲ್ಲಿ ಆಗಿಲ್ಲ ಎಂದು ಹೇಳಿದರೆ ಜನ ಒಪ್ಪುವ ಸ್ಥಿತಿಯಲ್ಲಿ ಇರುವುದಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಕೇಂದ್ರ ಸರಕಾರದ ಹೃದಯವಾಗಿರುವ ದೆಹಲಿ ಕೇಂದ್ರಾಡಳಿತ ಪ್ರದೇಶ. ಜನ ತಲೆ ಎತ್ತಿದರೆ ಮೋದಿ, ಶಾ ಮತ್ತು ಬಿಜೆಪಿ ಸಚಿವರು ಕಾಣುತ್ತಾರೆ. ಕೇಂದ್ರದಲ್ಲಿರುವ ಸರಕಾರಕ್ಕೆ ಮತ ಕೊಟ್ಟು ಗೆಲ್ಲಿಸಿದರೆ ಅಭಿವೃದ್ಧಿ ಸುಲಭ ಸಾಧ್ಯ ಎಂದು ಜನ ಅಂದುಕೊಳ್ಳುವ ಸಾಧ್ಯತೆ ಇತ್ತು. ಪಕ್ಕದಲ್ಲಿಯೇ ಬೆಂಕಿ ಉರಿಯುವಾಗ ಬೆಣ್ಣೆ ಹರಡಿ ಯಾರೂ ವ್ಯಾಪಾರಕ್ಕೆ ಇಳಿಯಲ್ಲ. ಆದರೆ ಅರವಿಂದ ಕೇಜ್ರಿವಾಲ್ ರಿಸ್ಕ್ ತೆಗೆದುಕೊಂಡರು. ಅವರು ರಾಜಕೀಯದಲ್ಲಿ ಮೊದಲ ಅರ್ಥ ಮಾಡಿಕೊಂಡ ಪಾಠವೆಂದರೆ ಜನ ಮೋದಿಯವರನ್ನು ಬೈದರೆ ಸಹಿಸಲ್ಲ. ತಮ್ಮ ಮೊದಲ ಎರಡು ವರ್ಷ ಮೋದಿ ಕುಳಿತುಕೊಂಡರೂ, ನಿಂತರೂ ಟೀಕಿಸುತ್ತಿದ್ದ ಅರವಿಂದರಿಗೆ ಜನರ ನಾಡಿ ಮಿಡಿತ ಅರ್ಥವಾಯಿತು. ನಂತರ ಮೂರು ವರ್ಷ ಅವರು ಮೋದಿ ಕಡೆ ತಲೆ ಹಾಕಿ ಮಲಗಲೇ ಇಲ್ಲ. ಹಾಗಂತ ಕೇಂದ್ರವನ್ನು ಟೀಕಿಸಿಲ್ಲ ಎಂದಲ್ಲ. ಅಮಿತ್ ಶಾ ಹೆಗಲ ಮೇಲೆ ಬಂದೂಕ್ ಇಟ್ಟು ಒಂದಿಷ್ಟು ಟೀಕೆ ಟಿಪ್ಪಣಿ ನಡೆಯುತ್ತಿದ್ದವು. ಆದರೆ ಅದನ್ನೇ ಇಡೀ ದಿನ ಮಾಡಲೇ ಇಲ್ಲ. ಎರಡನೇಯದಾಗಿ ಕೇಜ್ರಿವಾಲ್ ಅರ್ಥ ಮಾಡಿಕೊಂಡ ಪಾಠವೆಂದರೆ ತಾವು ಹಿಂದೂ ಮತ್ತು ರಾಷ್ಟ್ರೀಯವಾದಿ ಎರಡೂ ಕೂಡ ಎನ್ನುವುದನ್ನು ಜನರಿಗೆ ಅರ್ಥ ಮಾಡಿಸಲು ಪ್ರಯತ್ನ ಪಟ್ಟಿದ್ದು. ಹನುಮಂತನ ದೇವಸ್ಥಾನದಲ್ಲಿ ಹನುಮಾನ್ ಚಾಲೀಸ ಓದಿ ಹೊರಗೆ ಬಂದು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದ ಕೇಜ್ರೀವಾಲ್ ಬಗ್ಗೆ ಜನರಿಗೆ ಹೊಸ ಕುತೂಹಲ ಸೃಷ್ಟಿಯಾಗಿತ್ತು. ಮೂರನೇಯದಾಗಿ ಅರವಿಂದ ಕೇಜ್ರಿವಾಲ್ ಅರ್ಥ ಮಾಡಿಕೊಂಡ ಇನ್ನೊಂದು ವಿಷಯವೇನೆಂದರೆ ದೆಹಲಿಯ ಜನರಿಗೆ ಭಾರತ-ಪಾಕಿಸ್ತಾನದ ನಡುವಿನ ಸಂಬಂಧಕ್ಕಿಂತ ರಸ್ತೆ, ನೀರು, ವಿದ್ಯುತ್ ಸಮರ್ಪಕವಾಗಿ ಬೇಕಿದೆ. ಈ ಮೂರು ವಿಷಯಗಳ ನಡುವೆ ತನ್ನ ಚುನಾವಣಾ ರಣತಂತ್ರ ಹೆಣೆದ ಕೇಜ್ರಿಗೆ ಒಂದು ವಿಷಯ ಗ್ಯಾರಂಟಿ ಇತ್ತು. ಅದೇನೆಂದರೆ ಬಿಜೆಪಿ ಚುನಾವಣೆಯ ಸಂದರ್ಭದಲ್ಲಿ ಹಿಂದೂ ಮತ ಬ್ಯಾಂಕ್ ಒಟ್ಟು ಮಾಡಲು ಏನಾದರೂ ಮಾಡಬಹುದು. ಬಹುಶ: ಕೇಜ್ರಿವಾಲ್ ಚುನಾವಣೆಯ ಕೊನೆಯ ದಿನಗಳಲ್ಲಿ ಗಂಭೀರ ರಾಜಕೀಯ ಮಾಡದೇ ಎಡವಿದ್ದರೆ ಇಷ್ಟೊತ್ತಿಗಾಗಲೇ ಅವರು ಮಾಜಿ ಆಗಿಬಿಡುತ್ತಿದ್ದರು. ಆದರೆ ಅರವಿಂದ್ ಪಕ್ಕದಲ್ಲಿ ಅಷ್ಟೊತ್ತಿಗಾಗಲೇ ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಬಂದು ನಿಂತಿದ್ದರು. 2014 ರಲ್ಲಿ ಮೋದಿಯವರನ್ನು ಸಂಸತ್ತಿನಲ್ಲಿ ಪ್ರತಿಷ್ಟಾಪಿಸಿದ ಹಲವು ಅಂಶಗಳಲ್ಲಿ ಪಿಕೆ ಫ್ಯಾಕ್ಟರ್ ಕೂಡ ಒಂದು. ಅದೇ ತಂತ್ರವನ್ನು ಕೇಜ್ರಿವಾಲ್ ಗೆ ಹೇಳಿಕೊಟ್ಟ ಪಿಕೆ ಬಿಜೆಪಿ ತಪ್ಪು ಹೇಳಿಕೆಯೊಂದನ್ನು ಕೊಡಲು ಕಾಯುತ್ತಿದ್ದರು. ದೇಶದ್ರೋಹಿಗಳಿಗೆ ಗೋಲಿ ಹೊಡೆಯಿರಿ, ಕೇಜ್ರಿವಾಲ್ ಭಯೋತ್ಪಾದಕ ಎಂಬ ಹೇಳಿಕೆ ಬಿಜೆಪಿ ಪಾಳಯದಿಂದ ಬಾಣಗಳಂತೆ ಆಮ್ ಆದ್ನಿ ಡೇರೆಗೆ ಅಪ್ಪಳಿಸುತ್ತಿದ್ದಂತೆ ಕೇಜ್ರಿವಾಲ್ ಅದನ್ನು ಸಹನಚಿತ್ತರಾಗಿ ಸ್ವೀಕರಿಸಿ ” ಹೇಳಿ ದೆಹಲಿ ವಾಸಿಗಳೇ ನಾನು ಭಯೋತ್ಪಾದಕನಾ?” ಎಂದು ಪ್ರಶ್ನಿಸಿದರು. ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಮಹಿಳೆಯರಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟ ಕೇಜ್ರಿಗೆ ಅದೇ ಮಹಿಳೆಯರು ” ನೀನು ನಮ್ಮ ಮನೆಮಗ” ಎಂದರು. ಅಲ್ಲಿಗೆ ಅರವಿಂದ ಅರ್ಧ ಜಯ ಸಾಧಿಸಿ ಆಗಿತ್ತು. ಫ್ರೀ ನೀರು, ವಿದ್ಯುತ್ ಬಳಸುತ್ತಿದ್ದ ಜನ ಅದಕ್ಕೆ ಒಗ್ಗಿದ್ದು, ಉತ್ತಮ ಮೂಲಭೂತ ಸೌಕರ್ಯ, ಶಾಲೆಗಳಿಗೆ ಮನಸೋತು ಅರವಿಂದ್ ಕೇಜ್ರಿವಾಲ್ ಗೆ ಜೈ ಎಂದಾಗಿತ್ತು. ಶಹೀನಾಭಾಗ್, ಜೆಎನ್ ಯು ವಿಷಯ ಬಂದಾಗ ಮುಸುಕೆಳೆದು ಮಲಗಿದಂತೆ ಮಾಡಿದ ಕೇಜ್ರಿವಾಲ್ ವಿವಾದಗಳಿಗೂ ತಮಗೂ ಸಂಬಂಧವೇ ಇಲ್ಲ ಎಂದು ತೋರಿಸಿಕೊಟ್ಟರು. ಆದ್ದರಿಂದ ಎದುರಿಗೆ ಹಿಮಾಲಯ ಇದ್ದರೂ ಕೇಜ್ರಿ ತಮ್ಮ ಭತ್ತಳಿಕೆಯಲ್ಲಿದ್ದ ಮೋದಿ-ಶಾ ರಾಜಕೀಯ ತಂತ್ರಗಳನ್ನೇ ಅವರಿಗೆ ತಿರುಗಿಸಿ ಎಸೆದುಬಿಟ್ಟರು. ರಾಷ್ಟ್ರೀಯತೆ ಬೇಕು ಅದಕ್ಕೆ ಮೋದಿಗೆ ಮತ ಕೊಟ್ಟಿದ್ದೇವೆ. ಏಳಕ್ಕೆ ಏಳು ಲೋಕಸಭಾ ಸ್ಥಾನ ಗೆಲ್ಲಿಸಿಕಳುಹಿಸಿದ್ದೇವೆ. ದೆಹಲಿಯ ವಿಷಯ ಬಂದಾಗ ನಮಗೆ ನಮ್ಮ ಮನೆಮಗನೇ ಇರಲಿ ಎಂದು ಜನ ಮೋದಿಗೆ ಹೇಳಿಬಿಟ್ಟರು. ಮೂರರಿಂದ ಎಂಟು ಸ್ಥಾನಕ್ಕೆ ಏರಿದ ಖುಷಿಯಲ್ಲಿ ಬಿಜೆಪಿ ಪಾಳಯ ಕಾಂಗ್ರೆಸ್ಸಿಗೆ ಕಿಂಡಲ್ ಮಾಡುತ್ತಾ ತನ್ನ ಸೋಲನ್ನು ಅರಗಿಸಿಕೊಳ್ಳುತ್ತಿದೆ!
- Advertisement -
Trending Now
ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
Hanumantha Kamath
September 22, 2023
ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
Hanumantha Kamath
September 15, 2023
Leave A Reply