ಕರೋನಾ ಬಗ್ಗೆ ಯಾರೂ ಕೂಡ ಹೆದರುವ ಅಗತ್ಯ ಇಲ್ಲ ಎಂದು ಯಾವ ದೊಡ್ಡ ವೈದ್ಯರು ಎಷ್ಟೇ ಹೇಳಿದರೂ ಜನ ಸುಲಭವಾಗಿ ನಂಬುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಅದು ಅಪ್ಪಟ ಸಾಂಕ್ರಾಮಿಕ ರೋಗ. ಅದರೊಂದಿಗೆ ಮಂಗಳೂರಿನವರಿಗೆ ಹೊಸ ಹೆದರಿಕೆ ಹುಟ್ಟಿದೆ. ಅದೇನೆಂದರೆ ದುಬೈಯಿಂದ ಬಂದಿದ್ದ ವ್ಯಕ್ತಿಯಲ್ಲಿ ಕರೋನಾದ ಲಕ್ಷಣಗಳು ಪತ್ತೆಯಾಗಿದ್ದ ಕಾರಣದಿಂದ ಆತನನ್ನು ವೆನ್ ಲಾಕ್ ಆಸ್ಪತ್ರೆಯ ಕರೋನಾ ಚಿಕಿತ್ಸಾ ವಿಶೇಷ ಘಟಕದಲ್ಲಿ ಸೇರ್ಪಡೆ ಮಾಡಲಾಗಿತ್ತು. ಆ ಮನುಷ್ಯ ಭಾನುವಾರ ವೆನ್ ಲಾಕ್ ನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಒಂದು ವೇಳೆ ಆ ವ್ಯಕ್ತಿಯಲ್ಲಿ ಕರೋನಾ ವೈರಸ್ ಇದೆ ಎಂದಾದರೆ ಆತ ಜೀವಂತ ಅಟಂಬಾಂಬ್ ಇದ್ದ ಹಾಗೆ. ಆತ ನಡೆದಾಡುತ್ತಲೇ ಒಂದಿಷ್ಟು ಜನರಿಗೆ ಸೋಂಕನ್ನು ತಗಲಿಸುತ್ತಾ ಹೋದರೆ ಅದು ಇನ್ನಷ್ಟು ಡೇಂಜರ್. ಹಾಗಾದರೆ ಒಬ್ಬ ವ್ಯಕ್ತಿ ಕರೋನಾ ನಿಗಾದಲ್ಲಿ ಇದ್ದಾಗ ಅವನನ್ನು ಹಾಗೆ ಓಡಿ ಹೋಗಲು ಬಿಟ್ಟಿರುವುದಾದರೂ ಹೇಗೆ? ಯಾಕೆಂದರೆ ನಾನು ಅಂತವರನ್ನು ಕೈದಿಯಾಗಿ ನೋಡಬೇಕು ಎಂದು ಹೇಳುವುದಿಲ್ಲ. ಆದರೆ ಅವರ ಮೇಲೆ ಒಂದು ಕಣ್ಣು ಇಡಬೇಕಾಗಿರುವುದು ಆಸ್ಪತ್ರೆಯ ಜವಾಬ್ದಾರಿ. ನಮ್ಮೆಲ್ಲರ ನಸೀಬಿಗೆ ಆ ಮನುಷ್ಯ ಅವರ ಮನೆಯಲ್ಲಿಯೇ ಹೋಗಿ ಕುಳಿತಿದ್ದರು. ಅದರಿಂದ ಜಿಲ್ಲಾಡಳಿತಕ್ಕೆ ವಿಷಯ ಗೊತ್ತಾಗಿ ಅವರನ್ನು ಮನವೊಲಿಸಿ ಮತ್ತೆ ವೆನ್ ಲಾಕ್ ಗೆ ಕರೆದುಕೊಂಡು ಬರಲಾಗಿದೆ. ಇದರಿಂದ ಮಂಗಳೂರು ಒಮ್ಮೆ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು. ಯಾಕೆಂದರೆ ಆ ವ್ಯಕ್ತಿ ಯಾರೆಂದು ಯಾರಿಗೂ ಗೊತ್ತಿಲ್ಲ, ವೈದ್ಯರಿಗೆ ಮತ್ತು ಜಿಲ್ಲಾಧಿಕಾರಿಗಳ ವಲಯಕ್ಕೆ ಬಿಟ್ಟು. ಆದರೆ ಒಂದು ವೇಳೆ ಆತ ತಾನು ಆಸ್ಪತ್ರೆಗೆ ಬರುವುದೇ ಇಲ್ಲ ಎಂದು ಹಠ ಮಾಡಿದ್ದಲ್ಲಿ ಇನ್ನಷ್ಟು ತೊಂದರೆಯನ್ನು ಜಿಲ್ಲಾಡಳಿತ ಅನುಭವಿಸಬೇಕಾಗಿತ್ತು.
ಇನ್ನು ಕರೋನಾದ ಸರಿಯಾದ ಮಾಹಿತಿ ಯಾರಿಗೂ ಇಲ್ಲ ಎನ್ನುವುದು ನೂರಕ್ಕೆ ನೂರರಷ್ಟು ನಿಜ. ಹಾಗಂತ ಕರೋನಾ ಬಂದವರೆಲ್ಲರೂ ಸಾಯುತ್ತಾರೆ ಎಂದರ್ಥವಲ್ಲ. ನೂರಕ್ಕೆ ಮೂರು ಮಂದಿ ಮಾತ್ರ ಮೃತರಾಗುತ್ತಾರೆ. ಹಾಗಾದರೆ ಇಷ್ಟು ಹೆದರಿಕೆಯ ವಾತಾವರಣ ಯಾಕೆ ಎಂದು ನಿಮಗೆ ಅನಿಸಬಹುದು. ಹೆದರಿಕೆ ಯಾಕೆಂದರೆ ಆ ಮೂವರಲ್ಲಿ ನಾವು ಒಬ್ಬರಾಗುತ್ತೇವಾ ಎನ್ನುವುದು ಕೆಲವರ ಆತಂಕ. ನಿಮಗೆ ಮೊದಲೇ ಯಾವುದಾದರೂ ಕಾಯಿಲೆ ಇದ್ದಲ್ಲಿ ಆಗ ಈ ಕರೋನಾ ವೈರಸ್ ನಿಮ್ಮ ದೇಹವನ್ನು ಪ್ರವೇಶಿಸಿದ್ದಲ್ಲಿ ಆಗ ಹಿಂದಿನ ಕಾಯಿಲೆ ಉಲ್ಬಣಗೊಳ್ಳಲು ಈ ವೈರಸ್ ನೇರ ಪಾತ್ರ ವಹಿಸುತ್ತದೆ. ನಿಮ್ಮ ದೇಹ ರೋಗ ನಿಯಂತ್ರಣ ಶಕ್ತಿಯನ್ನು ಹೊಂದಿಲ್ಲದೇ ಇದ್ದ ಕಾರಣ ನಿಮ್ಮ ಸಾವು ಸಂಭವಿಸುತ್ತದೆ. ಅದು ಬಿಟ್ಟು ನೀವು ಆರೋಗ್ಯಶಾಲಿಯಾಗಿದ್ದಲ್ಲಿ ಈ ಕಾಯಿಲೆ ನಿಮ್ಮ ದೇಹ ಪ್ರವೇಶಿಸಿ ಕೆಲವು ದಿನ ಇದ್ದು ನಂತರ ಹೋಗುತ್ತದೆ. ಹಾಗಾದರೆ ಮೂರು ಸಾವಿರ ಜನ ಚೀನಾದಲ್ಲಿ ಸಾಯಲು ಕಾರಣವೇನು? ಕಾರಣ ಅಲ್ಲಿ ಒಂದು ಲಕ್ಷ ಜನರಿಗೆ ಈ ಕಾಯಿಲೆ ಬಂದಿದೆ ಮತ್ತು ಇದಕ್ಕೆ ಸೂಕ್ತ ಮದ್ದು ಇಲ್ಲ. ಸಾಂಕ್ರಾಮಿಕ ರೋಗವಾಗಿರುವುದರಿಂದ ಹರಡಿದೆ. ಶೀತ ಪ್ರದೇಶವಾದ ಕಾರಣ ಅಲ್ಲಿ ಅದಕ್ಕೆ ಅನುಕೂಲಕರ ವಾತಾವರಣ ಸಿಕ್ಕಿದೆ.
ಇನ್ನು ಭಾರತದಲ್ಲಿ ಈಗ ರೋಗ ಬಂದರೆ ಇನ್ನೊಂದು ಸಮಸ್ಯೆ ಇದೆ. ಈ ವೈರಸ್ ನಿಮ್ಮ ದೇಹವನ್ನು ಪ್ರವೇಶಿಸಿದೆ ಎಂದು ಗೊತ್ತಾಗಬೇಕಾದರೆ ಅದಕ್ಕೆ ಪರೀಕ್ಷೆ ಮಾಡಬೇಕಾಗುತ್ತದೆ. ನಿಮ್ಮ ಗಂಟಲಿನ ದ್ರವವನ್ನು ಲ್ಯಾಬ್ ಗೆ ಕಳುಹಿಸಬೇಕು. ಅಂತಹ ಲ್ಯಾಬ್ ನಮಗೆ ಹತ್ತಿರದಲ್ಲಿ ಇರುವುದು ಪುಣೆಯಲ್ಲಿ. ಅದರ ಬದಲು ಪ್ರತಿ ಜಿಲ್ಲಾ ಮಟ್ಟದಲ್ಲಿ ತಕ್ಷಣ ಒಂದೊಂದು ವ್ಯವಸ್ಥೆಯನ್ನು ಆಯಾ ರಾಜ್ಯ ಸರಕಾರಗಳು ಮಾಡಿದರೆ ಆಗ ಕೂಡಲೇ ಕಾಯಿಲೆಯನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಇನ್ನು ಒಂದನೇ ತರಗತಿಯಿಂದ 5 ನೇ ತರಗತಿಯವರೆಗಿನ ಮಕ್ಕಳಿಗೆ 16 ನೇ ಮಾರ್ಚ್ ಒಳಗೆ ಪರೀಕ್ಷೆಯನ್ನು ಮುಗಿಸಿಬಿಡುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ. ಅದರೊಂದಿಗೆ ಒಂಭತ್ತನೇ ತರಗತಿಯೊಳಗಿನ ಮಕ್ಕಳಿಗೆ 23 ಮಾರ್ಚ್ ಒಳಗೆ ಪರೀಕ್ಷೆ ಕೊನೆಗೊಳಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ. ಇದರ ಉದ್ದೇಶ ಏನೆಂದರೆ ಮಕ್ಕಳು ತಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕಡಿಮೆ ಹೊಂದಿರುವುದರಿಂದ ಈ ಕಾಯಿಲೆಗೆ ಬಲಿ ಬೀಳುವುದು ಸುಲಭ. ಆದ್ದರಿಂದ ಅವರಿಗೆ ಬೇಗ ಪರೀಕ್ಷೆ ಮುಗಿಸಿ ಮನೆಗೆ ಕಳುಹಿಸಿದರೆ ನಂತರ ಅವರ ಪೋಷಕರು ನೋಡಿಕೊಂಡಾರು ಎನ್ನುವುದು ಸರಕಾರದ ಉದ್ದೇಶ. ಇನ್ನು ಮಾರ್ಚ್ ಅಂತ್ಯದಲ್ಲಿ ಮದುವೆ ಸೀಸನ್ ಶುರುವಾಗುತ್ತದೆ. ಒಂದು ವೇಳೆ ಕಾಯಿಲೆ ಹರಡಲು ಶುರುವಾದರೆ ಸರಕಾರ ಕೂಡ ಮದುವೆಗಳನ್ನು ಸಿಂಪಲ್ ಆಗಿ ಮಾಡಿ ಮುಗಿಸಿ ಎಂದು ಆದೇಶಿಸಬಹುದು!
Leave A Reply