ಸೆಂಟ್ರಲ್ ಮಾರ್ಕೆಟ್ ನಿರ್ಮಾಣದಲ್ಲಿ ರಾಜಕೀಯ ಬೇಡಾ, ಅನಿವಾರ್ಯವಾದರೆ ಕೋರ್ಟಿಗೆ!!
ಮಂಗಳೂರಿನಲ್ಲಿ ಇರುವವರಿಗೆ ಸೆಂಟ್ರಲ್ ಮಾರುಕಟ್ಟೆ ಹೊಸದಲ್ಲ. ಹೆಸರಿಗೆ ತಕ್ಕಂತೆ ದೂರದಿಂದ ನೋಡುವಾಗಲೇ ಅದು ಮಾರ್ಕೆಟ್ ಎಂದು ಯಾರಿಗಾದರೂ ಗೊತ್ತೆ ಆಗುತ್ತಿತ್ತು. ಆ ಸೆಂಟ್ರಲ್ ಮಾರುಕಟ್ಟೆಗೆ ಹೊಸ ಸ್ವರೂಪ ಕೊಡಲು ಸದ್ಯ ಮುಹೂರ್ತ ಕೂಡಿಬಂದಿರುವಂತೆ ಕಾಣುತ್ತಿದೆ. ಅದರೊಂದಿಗೆ ಅದರ ತಂಗಿಯಂತಿರುವ ಪಕ್ಕದ ಮೀನು ಮಾರುಕಟ್ಟೆಯನ್ನು ಈಗಾಗಲೇ ಕೆಡವಿ ಬೀಳಿಸಲು ಆದೇಶ ಕೂಡ ಇದೆ. ಆದ್ದರಿಂದ ಎರಡು ಕೂಡ ಹೊಸದಾಗಿ ಒಟ್ಟಿಗೆ ನಿರ್ಮಿಸಿದರೆ ಮಂಗಳೂರಿನ ಹೃದಯಭಾಗಕ್ಕೆ ಹೊಸಕಳೆ ಬರುವುದು ನಿಜ. ನೀವು ಸೆಂಟ್ರಲ್ ಮಾರುಕಟ್ಟೆ ಮತ್ತು ಪಕ್ಕದ ಮೀನು ಮಾರುಕಟ್ಟೆಯನ್ನು ಯಾವ ಭಾಗದಲ್ಲಿ ನಿಂತು ಕಣ್ಣೆತ್ತಿ ನೋಡಿದರೂ ಅದು ಅಪಾಯಕಾರಿಯಾಗಿ ಆಗಿಯೇ ಕಾಣುತ್ತದೆ. ಅದರಲ್ಲಿಯೂ ಅಲ್ಲಿ ಒಳಗೆ ವ್ಯಾಪಾರ ಮಾಡುವ ಅನೇಕ ವ್ಯಾಪಾರಿಗಳ ಪಾಡು ಮಳೆಗಾಲದಲ್ಲಿ ಯಾರಿಗೂ ಬೇಡಾ. ಈ ಬಗ್ಗೆ ಅನೇಕ ಬಾರಿ ಪಾಲಿಕೆಗೆ, ಸಂಬಂಧಪಟ್ಟವರಿಗೆ ದೂರನ್ನು ಅವರು ನೀಡಿದ್ದಾರೆ. ಆದರೆ ಏನೂ ಆಗಿರಲಿಲ್ಲ. ಯಾಕೆಂದರೆ ಆ ಎರಡೂ ಮಾರುಕಟ್ಟೆಗಳಲ್ಲಿ ಒಂದು ಮುಟ್ಟಿದರೆ ಇನ್ನೊಂದು ಬೀಳುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು.
ಆದರೆ ಈಗ ಸಮಾಧಾನಕಾರಿ ಸಂಗತಿ ಎಂದರೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಾರುಕಟ್ಟೆಯನ್ನು ಹೊಸದಾಗಿ ನಿರ್ಮಿಸುವುದಕ್ಕೆ ರೂಪುರೇಶೆ ಸಿದ್ಧವಾಗಿದೆ. ಅಂದಾಜು 115 ಕೋಟಿ ತಯಾರಿದೆ. ಆದರೆ ಕೆಲವು ವ್ಯಾಪಾರಿಗಳು ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಅದಕ್ಕೆ ಯಾರ ಕುಮ್ಮಕಿದೆ ಎನ್ನುವುದು ಬೇರೆ ವಿಷಯ. ಆದರೆ ಸದ್ಯ ನ್ಯಾಯಲಯದ ಮೆಟ್ಟಿಲು ಹತ್ತಿದವರಿಗೆ ತಡೆಯಾಜ್ಞೆ ಸಿಕ್ಕಿದೆ. ಅದೇ ಗೆಲುವು ಎಂದು ಅವರು ಅಂದುಕೊಂಡಿದ್ದಾರೆ. ಅಂತಹ ಭ್ರಮೆ ಬೇಡಾ. ಯಾಕೆಂದರೆ ನಾಡಿದ್ದು ಮೇ 13 ಕ್ಕೆ ಈ ಬಗ್ಗೆ ವಿಚಾರಣೆಗೆ ಬರುವಾಗ ಸರಿಯಾದ ಮಾಹಿತಿಯನ್ನು ಪಾಲಿಕೆ ನ್ಯಾಯಾಲಯಕ್ಕೆ ಕೊಟ್ಟರೆ ಆ ತಡೆಯಾಜ್ಞೆ ತೆರವಾಗುತ್ತದೆ. ಆದರೆ ವಿಚಾರ ಇರುವುದು ಬೇರೆನೆ.
ಸೆಂಟ್ರಲ್ ಮಾರುಕಟ್ಟೆಯ ಒಳಗೆ ಅಧಿಕೃತವಾಗಿ ಇರುವುದೇ ಒಟ್ಟು 106 ಅಂಗಡಿಗಳು. ಅನಧಿಕೃತವಾಗಿ ಇರುವುದು ಸುಮಾರು 241 ಅಂಗಡಿಗಳು. ಅಲ್ಲಿ ಅನಧಿಕೃತವಾಗಿ ಇರುವ ಅಂಗಡಿಗಳ ದಾಖಲೆ ಪಾಲಿಕೆಯಲ್ಲಿ ಇಲ್ಲ, ಅದು ಬೇಕಾಗಿಯೂ ಇಲ್ಲ. ಹೊಸ ಮಾರುಕಟ್ಟೆ ಸಂಕೀರ್ಣ ಒಮ್ಮೆ ಕಟ್ಟಲು ಶುರುವಾದರೆ 3-4 ತಿಂಗಳಿನ ಒಳಗೆ ಸಂಪೂರ್ಣವಾಗುತ್ತದೆ. ಅದರ ನಂತರ ಈ ಅನಧಿಕೃತ ಅಂಗಡಿಗಳಿಗೆ ಅಲ್ಲಿ ಪ್ರವೇಶ ಸಿಗುವುದಿಲ್ಲ. ಅವರು ಅಕ್ಷರಶ: ಬೀದಿಗೆ ಬೀಳುತ್ತಾರೆ. ಅವರು ಈಗ ರಾಜಕೀಯ ನಾಯಕರ ಕೃಪೆಗೆ ಓಡಾಡಿಕೊಂಡಿದ್ದಾರೆ. ಅದಕ್ಕೆಲ್ಲಾ ಕಾರಣ ಯಾರು?
ಮೊದಲನೇಯದಾಗಿ ಮಾರುಕಟ್ಟೆಯ ಅಂಗಡಿಗಳ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರ. ಎರಡನೇಯದ್ದು ಹಿಂದೆ ಇದ್ದ ಪಾಲಿಕೆಯ ಆಡಳಿತ ಪಕ್ಷ. ಹಿಂದಿನ ಶಾಸಕರುಗಳು, ಪಾಲಿಕೆಯ ಕಮೀಷನರ್ ಹಾಗೂ ಅಧಿಕಾರಿಗಳು. ಅವರೆಲ್ಲರೂ ಗುತ್ತಿಗೆದಾರ ಅನಧಿಕೃತ ಅಂಗಡಿಗಳಿಗೆ ಅವಕಾಶ ಮಾಡಿಕೊಟ್ಟಾಗಲೂ ಸುಮ್ಮನೆ ಕುಳಿತುಕೊಂಡ ಕಾರಣ ಅಲ್ಲಿ ಅಧಿಕೃತ ಅಂಗಡಿಗಳಿಗಿಂತ ಅನಧಿಕೃತ ಅಂಗಡಿಗಳೇ ಜಾಸ್ತಿ ಇವೆ. ಈಗ ಕಷ್ಟಪಟ್ಟು ಹೊಸ ಮಾರುಕಟ್ಟೆ ಸಂಕೀರ್ಣ ಆಗುವ ಪ್ರಕ್ರಿಯೆ ಶುರುವಾಗಲಿದೆ. ಈಗ ಅಲ್ಲಿರುವ ಅಧಿಕೃತ ಅಂಗಡಿಯವರಿಗೆ ಲೇಡಿಗೋಶನ್ ಎದುರಿಗೆ ಇರುವ ಸರಕಾರದ ಖಾಲಿ ಜಾಗದಲ್ಲಿ ಚಪ್ಪರ ಹಾಕಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವ ಕೆಲಸ ನಡೆಯುತ್ತಿದೆ. ಆ ಜಾಗ ಈ ಮೊದಲು ಬೀದಿಬದಿ ವ್ಯಾಪಾರಿಗಳಿಗಾಗಿ ಮೀಸಲಾಗಿತ್ತು. ಆದರೆ ಬೀದಿಬದಿ ವ್ಯಾಪಾರಸ್ಥರು ಅಲ್ಲಿಗೆ ಹೋಗದೆ ಇದ್ದ ಕಾರಣ ಆ ಜಾಗ ಪಾಳು ಬಿದ್ದ ಪ್ರದೇಶದಂತೆ ಕಾಣುತ್ತಿತ್ತು. ಈಗ ಅಲ್ಲಿ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡುವ ಕೆಲಸ ಶುರುವಾಗುತ್ತಿದ್ದರೆ ಬೀದಿಬದಿ ವ್ಯಾಪಾರಸ್ಥರು ಪ್ರತಿಭಟನೆಗೆ ಇಳಿದಿದ್ದಾರೆ.
ಮಂಗಳೂರಿನ ಕೇಂದ್ರ ಮಾರುಕಟ್ಟೆಯ ನಿರ್ಮಾಣಕ್ಕೆ ಈ ಹಿಂದೆ ಎಂಟು ವರ್ಷಗಳಿಂದ ಪ್ರಯತ್ನ ಆಗುತ್ತಿತ್ತು. ಆದರೆ ಬೇಕಾಗುವ ಅನುದಾನ ದೊಡ್ಡದಾಗಿರುವುದರಿಂದ 115 ಕೋಟಿ ಎಲ್ಲಿಂದ ತರುವುದು ಎನ್ನುವ ಪ್ರಶ್ನೆಯೇ ಇಲ್ಲಿಯ ತನಕ ಎದ್ದು ನಿಂತಿತ್ತು. ಆದರೆ ಈಗ ಸ್ಮಾರ್ಟ್ ಸಿಟಿ ಅನುದಾನ ಇರುವುದರಿಂದ ಚಿಂತೆ ಇಲ್ಲ. ಆದರೆ ಇಲ್ಲಿ ರಾಜಕೀಯ ತರುವ ಕೆಲಸ ಯಾರೂ ಮಾಡಬಾರದು. ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಕಮ್ಯೂನಿಸ್ಟರು ಇಲ್ಲಿ ರಾಜಕೀಯ ಕೆಸರೆರೆಚಾಟ ಮಾಡಿದರೆ ಮಂಗಳೂರಿಗೆ ಮುಂದಿನ ದಿನಗಳಲ್ಲಿ ನಿರ್ಮಾಣ ಆಗಲಿರುವ ಹೊಸ ಮಾರುಕಟ್ಟೆ ಸಂಕೀರ್ಣ ಕನಸಾಗಿಯೇ ಉಳಿಯಲಿದೆ. ಇಲ್ಲಿ ಸಂಸದರೂ, ಪಾಲಿಕೆಯ ವ್ಯಾಪ್ತಿಯ ಎರಡೂ ಶಾಸಕರು ಹಾಗೂ ಜಿಲ್ಲೆಯ ಉಳಿದ ಶಾಸಕರುಗಳು ಕೂಡ ಹಸ್ತಕ್ಷೇಪ ಮಾಡದೇ ನಿಯಮ ಪ್ರಕಾರವೇ ನಡೆದರೆ ಒಳ್ಳೆಯದು. ನಮ್ಮ ತೆರಿಗೆಯ 115 ಕೋಟಿ ಹಣದಿಂದ ಮಾರ್ಕೆಟ್ ಕಟ್ಟುವುದರಿಂದ ನಿಯಮ ಮೀರಿ ಜನಪ್ರತಿನಿಧಿಗಳು ಏನಾದರೂ ಇಲ್ಲಿ ಆಟ ಆಡಿದರೆ ಜನರ ಪರವಾಗಿ ನ್ಯಾಯಾಲಯದ ಮೆಟ್ಟಲು ಹತ್ತುವ ಅನಿವಾರ್ಯತೆ ಬಂದರೆ ನಾನು ಹಿಂಜರಿಯುವುದಿಲ್ಲ, ಹುಶಾರ್!!
Leave A Reply