ಸೆಂಟ್ರಲ್ ಮಾರುಕಟ್ಟೆ ಚಿನ್ನದ ಮೊಟ್ಟೆ ಇಡುವ ಕೋಳಿ ಗುತ್ತಿಗೆದಾರರಿಗೆ!!

ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯ ಹೊರಗೆ ಮಂಗಳವಾರ ವ್ಯಾಪಾರಿಗಳು ಸೇರಿ ಪ್ರತಿಭಟನೆ ಮಾಡಿದ್ದಾರೆ. ಈ ಮೂಲಕ ಪಾಲಿಕೆಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ ಹೊಸ ರೀತಿಯ ಸವಾಲು ಮುಂದಿನ ದಿನಗಳಲ್ಲಿ ಉದ್ಭವಿಸಿದೆ. ಹಿಂದಿನ ಕಾಲದಲ್ಲಿ ಮೈಸೂರಿನ ಒಡೆಯರ್ ಗಳು ಹೇಗೆ ತಮ್ಮ ಸಂಸ್ಥಾನದಲ್ಲಿ ಉತ್ತಮ ರೀತಿಯ ಮಾರುಕಟ್ಟೆಗಳನ್ನು ಕಟ್ಟಿದ್ದರೋ ಅದೇ ರೀತಿಯಲ್ಲಿ ಇಡೀ ರಾಜ್ಯದಲ್ಲಿ ಸರಕಾರದಿಂದ ಕಟ್ಟಲ್ಪಟ್ಟ ಆಕರ್ಷಣೀಯ ಮಾರುಕಟ್ಟೆ ಕಟ್ಟಡ ಎಂದರೆ ಅದು ನಮ್ಮ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಾಗಿತ್ತು.
ನಾಲ್ಕು ದಶಕಗಳಿಗೂ ಮೊದಲು ನಮ್ಮ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ನೋಡಲು ಚೆನ್ನಾಗಿತ್ತು. ಆದರೆ ಕಟ್ಟಿದ ಬಳಿಕ ಆ ಮಾರುಕಟ್ಟೆ ಬಂಗಾರದ ಮೊಟ್ಟೆ ಇಡುವ ಕೋಳಿಯಾಗಿ ಪರಿವರ್ತನೆಯಾಯಿತೇ ವಿನ: ಆ ಮಾರುಕಟ್ಟೆಯನ್ನು ಚೆನ್ನಾಗಿ ಇಡುವ ವಿಷಯದಲ್ಲಿ ಯಾರಿಗೂ ಗಮನವೇ ಇಲ್ಲವಾಯಿತು. ಮಳೆ ಬಂದರೆ ಒಳಗೆ ನೆರೆ ಉಂಟಾಗುತ್ತಿತ್ತು. ಸರಿಯಾದ ಮೂಲಭೂತ ವ್ಯವಸ್ಥೆ ಇಲ್ಲವೇ ಇಲ್ಲ. ವ್ಯಾಪಾರಿಗಳು ಇದರಿಂದ ಆಕ್ರೋಶಿತಗೊಂಡು ಸಂಬಂಧಪಟ್ಟವರಿಗೆ ದೂರುಕೊಡುವ ಕೆಲಸ ಮಾಡುತ್ತಿದ್ದರು. ನಾವು ಬಾಡಿಗೆ ಕೊಡುತ್ತಿದ್ದೇವೆ. ಸರಿಯಾದ ಸೌಕರ್ಯ ಕೊಡಿ ಎಂದು ದಂಬಾಲು ಬೀಳುತ್ತಿದ್ದರು. ಅಸಂಖ್ಯಾತ ಗ್ರಾಹಕರು ಮಾರುಕಟ್ಟೆ ಒಳಗೆ ಕಾಲಿಡಲು ಆಗದೇ ಹೊರಗೆ ಗಾಡಿಗಳಲ್ಲಿ ಮಾರುತ್ತಿದ್ದವರಿಂದ ತರಕಾರಿ, ಹಣ್ಣುಹಂಪಲು ಖರೀದಿಸಿ ಹೋಗುತ್ತಿದ್ದರು. ಇದರಿಂದ ಒಳಗೆ ವ್ಯಾಪಾರ ಮಾಡುತ್ತಿದ್ದವರಿಗೆ ನಷ್ಟವಾಗುತ್ತಿತ್ತು. ಇತ್ತೀಚೆಗೆ ಕಟ್ಟಡಗಳಿಂದ ತೇಪೆ ಬಿದ್ದು ಹೋಗುತ್ತಿತ್ತು. ಅದು ವ್ಯಾಪಾರಿಗಳ ಮೈಮೇಲೆ ಬಿದ್ದದ್ದು ಉಂಟು. ಆದ್ದರಿಂದ ಸೆಂಟ್ರಲ್ ಮಾರುಕಟ್ಟೆ ಹೇಗೆ ಆಗಿದೆ ಎಂದರೆ 40 ವರ್ಷ ಪ್ರಾಯದಲ್ಲಿ ಕೂದಲು ಬಿಳಿಯಾಗಿ ಕೆಲವರು ಮುದಿಯಾದಂತೆ ಕಾಣುತ್ತಾರಲ್ಲ, ಹಾಗೆ ಆಗಿ ಹೋಯಿತು. ಮುದುಕಿಯ ಮುಖಕ್ಕೆ ಬಣ್ಣ ಹಚ್ಚಿದರೆ ಹೇಗೆ ಕಾಣುತ್ತಾರೋ ಹಾಗೆ ಸ್ವಲ್ಪ ಸುಣ್ಣಬಣ್ಣ ಬಳಿಯುವ ಪ್ರಯತ್ನದಿಂದ ಸೆಂಟ್ರಲ್ ಮಾರುಕಟ್ಟೆ ಯಂಗ್ ಲುಕ್ ಗೆ ಬರುವ ಚಾನ್ಸೇ ಇರಲಿಲ್ಲ. ಅಂತಿಮವಾಗಿ ಅದನ್ನು ಕೆಡವಿ ಪೂರ್ಣ ಪ್ರಮಾಣದಲ್ಲಿ ನಂತರ ಹೊಸ ಕಟ್ಟುವುದು ಮಾತ್ರ ಉಳಿದ ಏಕೈಕ ಪರಿಹಾರವಾಗಿತ್ತು. ಆದರೆ ಫಂಡ್. ಪಾಲಿಕೆಯ ಬಳಿ ಇರುವ ಹಣದಲ್ಲಿ ಸೆಂಟ್ರಲ್ ಮಾರುಕಟ್ಟೆಯನ್ನು ಕಟ್ಟುವಂತೆ ಇರಲೇ ಇಲ್ಲ. ಆದ್ದರಿಂದ ದೊಡ್ಡ ಅನುದಾನಕ್ಕೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಆಪತ್ ಭಾಂದವದಂತೆ ಬಂದದ್ದು ಸ್ಮಾರ್ಟ್ ಸಿಟಿ ಫಂಡ್. ಆ ಹಣದಲ್ಲಿ ಸದ್ಯ ರೂಪುರೇಶೆ ಹಾಕಿ ಪಾಲಿಕೆ ಕುಳಿತುಕೊಂಡಿದೆ. ಆದರೆ ಮೊದಲಿಗೆ ಅಲ್ಲಿ ಇರುವ ವ್ಯಾಪಾರಿಗಳನ್ನು ಅಲ್ಲಿಂದ ಕಳುಹಿಸಬೇಕಾಗಿತ್ತು. ಆದರೆ ತಾತ್ಕಾಲಿಕ ವ್ಯವಸ್ಥೆ ಆಗದೇ ಅಲ್ಲಿಂದ ಹೋಗಲು ಯಾರೂ ತಯಾರಿರಲಿಲ್ಲ. ಈಗ ಲೇಡಿಗೋಶನ್ ಆಸ್ಪತ್ರೆಯ ಸನಿಹದಲ್ಲಿ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲಿಗೆ ಹೋಗಲು ವ್ಯಾಪಾರಸ್ಥರು ತಯಾರಿಲ್ಲ. ಅವರು ಬೇಕಾದರೆ ಆ ಪಾಳು ಬಿದ್ದಿರುವ ಕಟ್ಟಡದಲ್ಲಿ ವ್ಯಾಪಾರ ಮಾಡಲು ಸಿದ್ಧರಿದ್ದಾರೆ. ಆ ಕಟ್ಟಡವನ್ನು ಎನ್ ಐಟಿಕೆ ಅನ್ ಫಿಟ್ ಫಾರ್ ಯೂಸ್ ಎಂದು ಪ್ರಮಾಣಪತ್ರ ನೀಡಿದೆ. ಇನ್ನು ಮಾರುಕಟ್ಟೆ ಹೆಸರಿನಲ್ಲಿ ಅಲ್ಲಿ ಯೂನಿಯನ್ ಆಫೀಸುಗಳಿವೆ. ಅದು ಕೂಡ ಶುದ್ಧ ತಪ್ಪು.
ಈಗ ವಿಷಯ ಇರುವುದು ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣವಾಗಲಿರುವುದು ಕೇವಲ ಅಧಿಕೃತ ಅಂಗಡಿಗಳಿಗೆ ಮಾತ್ರ. ಆದರೆ ಈಗ ಸೆಂಟ್ರಲ್ ಮಾರುಕಟ್ಟೆ ಒಳಗೆ ಇರುವುದು 105 ಅಧಿಕೃತ ಅಂಗಡಿಗಳು. ಉಳಿದ 245 ಅನಧಿಕೃತ ಅಂಗಡಿಗಳು ದಾಖಲೆಯಲ್ಲಿ ಇಲ್ಲ. ಅವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡುವ ಅನಿವಾರ್ಯತೆ ಪಾಲಿಕೆಯಲ್ಲಿ ಇಲ್ಲ. ಈಗ ಅಂತವರೇ ಪ್ರತಿಭಟನೆ ಮಾಡುತ್ತಿರುವುದು.
ಪ್ರತಿ ಬಾರಿ ಆ ಅಂಗಡಿಗಳ ಶುಲ್ಕ ವಸೂಲಿ ಮಾಡುವ ಗುತ್ತಿಗೆಯನ್ನು ಯಾರಾದರೂ ವಹಿಸಿಕೊಳ್ಳುತ್ತಾರೆ. ಪಾಲಿಕೆ ನಿಗದಿಪಡಿಸಿದ ದರಕ್ಕಿಂತ ಒಂದಿಷ್ಟು ಹೆಚ್ಚು ಬಿಡ್ ಮಾಡಿದರೆ ಆ ಗುತ್ತಿಗೆ ಆ ವ್ಯಕ್ತಿಗೆ ಕೊಡಲಾಗುತ್ತದೆ. ನಂತರ ಆ ವ್ಯಕ್ತಿ ತನಗೆ ಬೇಕಾದ ರೀತಿಯಲ್ಲಿ ಅಲ್ಲಿ ಅನಧಿಕೃತ ಅಂಗಡಿಗಳಿಗೆ ಜನ್ಮ ನೀಡುತ್ತಾ ಹೋಗುತ್ತಾನೆ. ಎಲ್ಲಿಯ ತನಕ ಅಂದರೆ ಸೆಂಟ್ರಲ್ ಮಾರುಕಟ್ಟೆಯ ಪ್ರವೇಶದಲ್ಲಿ ಇರುವ ಎರಡು ಪತ್ರಿಕೆ, ಊದುಬತ್ತಿಯ ಅಂಗಡಿಗಳು ಕೂಡ ಅನಧಿಕೃತವೇ ಆಗಿದೆ. ಲೆಕ್ಕ ಪ್ರಕಾರ ಅವು ಲಾರಿಯಿಂದ ತಂದ ಗೋಣಿಗಳನ್ನು ಇಳಿಸಿ ಹೋಗಲು ಮಾಡಿದ್ದ ವ್ಯವಸ್ಥೆಯಾಗಿತ್ತು. ನಂತರ ಅದನ್ನು ಕೂಡ ಅಂಗಡಿ ಮಾಡಿ ಕೊಡಲಾಗಿದೆ. ಮೊನ್ನೆ ಮಾರ್ಚ್ ನಲ್ಲಿ ಕೊರೊನಾ ಲಾಕ್ ಡೌನ್ ಆಗುವ ಮೊದಲು ಮುಂದಿನ ವರ್ಷದ ವರೆಗೆ ಟ್ರೇಡ್ ಲೈಸೆನ್ಸ್ ನವೀಕರಣ ಮಾಡಲಾಗಿದೆ. ಆದ್ದರಿಂದ ಈಗ ನಮಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲೇ ಬೇಕು ಎನ್ನುವುದು ವ್ಯಾಪಾರಿಗಳ ಆಗ್ರಹ. ಒಂದು ವೇಳೆ ಜೋರು ಮಳೆಗೆ ಕಟ್ಟಡ ಬಿದ್ದು ಜೀವಹಾನಿ ಆದರೆ ಆಗ ಹೊಸ ವರಸೆ ಶುರುವಾಗುತ್ತದೆ!
Leave A Reply