ನಾನು ಟಿವಿಯಲ್ಲಿ ಕುಳಿತು “ರಾಜ”ನ ಪರ ವಾದಿಸಿದ್ದೆ. ಈಗ!?
ಒಂದು ಊರಿನಲ್ಲಿ ಒಬ್ಬ “ರಾಜ” ಇದ್ದ. ಅವನು ಸಿಕ್ಕಾಪಟ್ಟೆ ದಕ್ಷತೆ ಮತ್ತು ಪ್ರಾಮಾಣಿಕತೆ ಹೆಸರಾಗಿದ್ದ. ಅವನು ಎಷ್ಟು ನಿಸ್ವಾರ್ಥಿಯಾಗಿ ಇದ್ದನೆಂದರೆ ಇಂತಹ ರಾಜ ನಮಗೂ ಇರಬೇಕು ಎಂದು ಬೇರೆ ಊರಿನ ಜನ ಬಯಸುತ್ತಿದ್ದರು. ಇವನ ರಾಜ್ಯದಲ್ಲಿ ಭ್ರಷ್ಟಾಚಾರದ ಸುಳಿವೇ ಇರುತ್ತಿರಲಿಲ್ಲ. ಇದರಿಂದ ಇವನ ಕೈಕೆಳಗಿನ ಮಂತ್ರಿಗಳಿಗೆ ಹಣ ಮಾಡಲು ಆಗುತ್ತಿರಲಿಲ್ಲ. ಅವನ ವಿರುದ್ಧ ಮಸಲತ್ತು ಮಾಡಿ ಅವನನ್ನು ಯುದ್ಧವೊಂದರಲ್ಲಿ ವಿರೋಧಿಗಳೊಂದಿಗೆ ಸೇರಿ ಸೋಲಿಸಿಬಿಟ್ಟರು. ರಾಜ ಆಸ್ಥಾನದಿಂದ ರಸ್ತೆಗೆ ಬಂದ. ಇವನ ಪರವಾಗಿ ಕೆಲವು ಹೃದಯವಂತರು ಮರುಗಿದರು. ಒಳ್ಳೆಯವರಿಗೆ ಕಾಲವಲ್ಲ ಎಂದು ಅವಲತ್ತುಕೊಂಡರು. ಇಂತಹ ರಾಜನನ್ನು ಪಡೆದುಕೊಳ್ಳಲು ನಮ್ಮ ಜನರು ಪುಣ್ಯ ಮಾಡಬೇಕು. ಹಾಗಿರುವಾಗ ಕುತಂತ್ರದಿಂದ ಅವನನ್ನು ಸೋಲಿಸಿ ರಸ್ತೆಗೆ ತರುವುದೇ ಎಂದು ವೇದಿಕೆಗಳಲ್ಲಿ ಬೊಬ್ಬೆ ಹಾಕಿದರು. ಇಂತಹ ರಾಜ ಮತ್ತೆ ಬೇಕು ಎಂದು ಹಠ ಹಿಡಿದರು. ಕೊನೆಗೆ ಇವರ ಪ್ರಯತ್ನ ಫಲಕೊಟ್ಟಿತು. ರಾಜನಿಗೆ ಮತ್ತೆ ತನ್ನ ಹಳೆ ಸಂಸ್ಥಾನ ಸಿಕ್ಕಿತು. ರಾಜ ಸಂತೋಷದಿಂದ ಪ್ರಜೆಗಳನ್ನು ಆಳಿ ನೆಮ್ಮದಿಯಿಂದ ಇದ್ದ ಎಂದು ನೀವು ಅಂದುಕೊಳ್ಳಬಹುದು. ಇಲ್ಲಿಗೆ ನೀವು ಕಥೆ ಮುಗಿಯಿತು ಎಂದುಕೊಂಡರೆ ಅದು ತಪ್ಪು. ಕಥೆ ಶುರುವಾಗುವುದೇ ಇಲ್ಲಿಂದ. ಆ ಕೆಲವು ಹೃದಯವಂತರ ಪ್ರಯತ್ನ, ಒತ್ತಡದಿಂದ ರಸ್ತೆಗೆ ಬಂದ ರಾಜನಿಗೆ ಮತ್ತೆ ಸಂಸ್ಥಾನ ಕೊಡಿಸಲು ಸಾಧ್ಯವಾಯಿತು. ಇದರ ನಂತರ ರಾಜನ ಜೀವನ ಕ್ರಮವೇ ಬದಲಾಯಿತು. ಯಾರೂ ಎಣಿಸಲಾಗದ ಬದಲಾವಣೆ ರಾಜನಲ್ಲಿ ಕಂಡು ಬಂದಿತ್ತು. ರಾಜ ಬದಲಾಗಿದ್ದ. ಯಾವ ರಾಜ ಒಂದು ಕಾಲದಲ್ಲಿ ಭ್ರಷ್ಟಾಚಾರದ ಹಣ ಕಂಡುಬಂದರೆ ಸಿಡಿದು ಬೀಳುತ್ತಿದ್ದನೊ ಈಗ ಅದೇ ರಾಜ ಭ್ರಷ್ಟಾಚಾರದ ಹಣದ ವಾಸನೆ ಹಿಡಿದು ಹೊರಟ. ರಾಜ ಹೀರೋನಿಂದ ವಿಲನ್ ಆಗಿದ್ದ. ತನ್ನ ರಾಜ್ಯದಲ್ಲಿ ಬರುವ ಹೊಯಿಗೆ ಬಜಾರ್, ಅಳಿವೆ ಬಾಗಿಲಿನಲ್ಲಿ ಅಕ್ರಮವಾಗಿ ಜೂಜಾಟ ಆಡಿಸಲು ನಿಂತ. ರಾಜನೇ ಖುದ್ದು ಮುಂದೆ ನಿಂತು ಜೂಜಾಟ ಆಡಿಸುತ್ತಿದ್ದರೆ ಪ್ರಜೆಗಳಾದರೂ ಏನು ಮಾಡಿಯಾರು?
ರಾಜ ಅಷ್ಟಕ್ಕೆ ಸುಮ್ಮನೆ ಕೂರುತ್ತಿರಲಿಲ್ಲ. ತನ್ನ ಬೇನಾಮಿ ಜೂಜಾಟ ಅಡ್ಡೆ ಬಿಟ್ಟು ಬೇರೆ ಎಲ್ಲಿಯಾದರೂ ಜೂಜಾಟ ನಡೆಯುತ್ತಿದ್ದರೆ ಅಲ್ಲಿ ಸಿಕ್ಕಿದ ಕಡೆ ರೇಡ್ ಮಾಡಿಸುತ್ತಿದ್ದ. ಅಲ್ಲಿ ಲಕ್ಷಗಟ್ಟಲೆ ಹಣವನ್ನು ಸೀಝ್ ಮಾಡುತ್ತಿದ್ದ. ಅಲ್ಲಿ ದಾಳಿ ಮಾಡಿದಾಗ 20 ಲಕ್ಷ ರೂಪಾಯಿ ಸಿಕ್ಕಿದೆ ಎಂದು ಇಟ್ಟುಕೊಳ್ಳಿ. ಆದರೆ ರಾಜ ತನ್ನ ಸರಕಾರಿ ಖಜಾನೆಗೆ 3 ಲಕ್ಷ ಮಾತ್ರ ತೋರಿಸುತ್ತಿದ್ದ. ಉಳಿದ ಹಣವನ್ನು ತನ್ನ ಖಾಸಗಿ ಕಡೆ ಸಾಗಿಸುತ್ತಿದ್ದ. ಅವನ ವ್ಯವಹಾರ ನೋಡಿದರೆ ಅಪ್ಪಟ ಖಳನಾಯಕನಂತೆ ಕಾಣುತ್ತಿದ್ದ. ಅವನನ್ನು ಹೊಗಳಿದ್ದ ಹೃದಯವಂತರು ಇವನೇನಾ ನಾವು ಆವತ್ತು ಹೊಗಳಿದ್ದು ರಸ್ತೆಯ ಮೇಲೆ ಇದ್ದವನಿಗೆ ಸಂಸ್ಥಾನ ಕೊಡಿಸಿದ್ದು ಎಂದು ಮತ್ತೆ ಬೇಸರ ಪಟ್ಟುಕೊಳ್ಳಲು ಶುರು ಮಾಡಿದರು. ಕಾಲ ಬದಲಾಗಿತ್ತು. ನಾವು ಒಬ್ಬ ವ್ಯಕ್ತಿಯನ್ನು ನಂಬಿ ಅವನ ಪರ ಮಾತನಾಡಲು ಹೋದರೆ ನಾಳೆ ಅವನು ಪ್ರಾಣಿಗಿಂತ ಕಡೆಯಾಗಿ ಹೋದರೆ ನಮ್ಮ ಹೋರಾಟದ ಫಲವೇನು ಎಂದು ಸಭ್ಯ ನಾಗರಿಕರು ಮಾತನಾಡಿಕೊಂಡರು. ಆದರೆ ರಾಜನಿಗೆ ಇದ್ಯಾವುದರ ಕ್ಯಾರೇ ಇರಲಿಲ್ಲ. ಆದರೆ ಒಂದು ಕಾಲದಲ್ಲಿ ಇವನು ಭ್ರಷ್ಟನಲ್ಲ ಎನ್ನುವ ಕಾರಣಕ್ಕೆ ಕೆಲವು ಕೈಕೆಳಗಿನ ಅಧಿಕಾರಿಗಳಿಂದ ಕುತಂತ್ರಕ್ಕೆ ಒಳಗಾಗಿದ್ದ. ಆದರೆ ಇವನು ಪರಮಭ್ರಷ್ಟ ಎಂದು ಇಡೀ ರಾಜ್ಯಕ್ಕೆ ಗೊತ್ತಾದ ನಂತರ ಅಕ್ಕಪಕ್ಕದ ರಾಜ್ಯಗಳ ಉಳಿದ ರಾಜರು ಇವನನ್ನು ಕಂಡರೆ ಅಸಹ್ಯಪಟ್ಟುಕೊಳ್ಳುವಂತಾಯಿತು.
ಇವನ ರಾಜ್ಯದಲ್ಲಿ ಒಮ್ಮೆ ಸಾಂಕ್ರಾಮಿಕ ರೋಗ ಹರಡಿತ್ತು. ಆಗ ಒಂದು ಕಡೆ ಆನ್ ಲೈನ್ ಗ್ಯಾಂಬ್ಲಿಂಗ್ ಅವ್ಯವಹಾರ ನಡೆಯುತ್ತಿತ್ತು. ಅದು ಈ ರಾಜನ ಕಣ್ಣಿಗೆ ಬಿತ್ತು. ಅಲ್ಲಿ 40 ಲಕ್ಷ ಪತ್ತೆಯಾಯಿತು. ಇವನು ತನ್ನ ಸರಕಾರಿ ಖಜಾನೆಗೆ 18 ಲಕ್ಷ ಎಂದು ತೋರಿಸಿದ. ಇಂತಹುದು ಒಂದೆರಡಲ್ಲಾ. ಹಲವಾರು ಇದೆ. ನಾನು ಇಷ್ಟು ಬರೆದ ನಂತರ ನಾನು ಯಾರ ಬಗ್ಗೆ ಬರೆಯುತ್ತಿದ್ದೇನೆ ಎಂದು ನಿಮಗೆ ಕುತೂಹಲ ಜಾಸ್ತಿಯಾಗುತ್ತಿರಬಹುದು. ಇಲ್ಲಿ ನಾನು ಒಬ್ಬ “ರಾಜ”ನ ಕಥೆ ಎಂದು ಹೇಳುತ್ತಿದ್ದೆನಲ್ಲ, ರಾಜನ ಎದುರು ನೀವು ಸಬ್ ಇನ್ಸಪೆಕ್ಟರ್ ಎಂದು ಸೇರಿಸಿ ಓದಿ. ರಾಜ್ಯ ಮತ್ತು ಸಂಸ್ಥಾನ ಇದ್ದ ಕಡೆ ಪೊಲೀಸ್ ಸ್ಟೇಶನ್ ಎಂದು ಓದಿ. ರಸ್ತೆ ಇದ್ದ ಕಡೆ ಟ್ರಾಫಿಕ್ ಡಿಪಾರ್ಟಮೆಂಟ್ ಎಂದು ಓದಿ. ಒಂದು ಕಾಲದ ದಕ್ಷ ಸಬ್ ಇನ್ಸಪೆಕ್ಟರ್ ನೌ ಭ್ರಷ್ಟಾಚಾರಿ ಪರವಾಗಿ ನಮ್ಮ ಕುಡ್ಲ ವಾಹಿನಿಯಲ್ಲಿ ಕುಳಿತು ಅವರನ್ನು ಟ್ರಾಫಿಕಿಗೆ ಬೇಡಾ ಎಂದು ಅವರ ಪರವಾಗಿ ಮಾತನಾಡಿದವರು ನಾನು ಮತ್ತು ಪತ್ರಕರ್ತ ಜಿತೇಂದ್ರ ಕುಂದೇಶ್ವರ. ಇವತ್ತು ಅದೇ ಎಸ್ ಐ ಪರಮ ಭ್ರಷ್ಟನಾಗಿದ್ದಾರೆ. ನಾವು ಟಿವಿ ವಾಹಿನಿಯಲ್ಲಿ ಕುಳಿತು ಗಂಟಲು ಕಿರುಚಿದ್ದೇ ಬಂತು. ಅದಕ್ಕೆ ಹೇಳಿದ್ದು ಯಾರನ್ನು ನಂಬುವುದು? ಈಗ ಪುನ: ಮೇಲಿನಿಂದ ಓದಿ. ಕಾಲಾಯ ತಸ್ಮೈ ನಮ:::
Leave A Reply