ವಾರ್ಡ್ ಕಮಿಟಿ ಕಾಟಾಚಾರಕ್ಕೆ ಮಾಡಿದ್ದು ಗೊತ್ತಾದರೆ ಜಾತಕ ಇಲ್ಲಿಯೇ ಬಿಚ್ಚಲಾಗುವುದು!!

ನನ್ನ ಜನ್ಮದಿನಕ್ಕೆ ಶುಭ ಹಾರೈಸಿದ ಎಲ್ಲ ಹಿತೈಷಿಗಳಿಗೆ, ಸನ್ಮಿತ್ರರಿಗೆ ಧನ್ಯವಾದಗಳು. ಎಂದಿನಂತೆ ನಿಮ್ಮ ಹಾರೈಕೆ ನನ್ನ ಜೊತೆ ಇರುತ್ತೆ ಎನ್ನುತ್ತಾ ಇವತ್ತಿನ ಸಂಚಿಕೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಅರವತ್ತು ವಾರ್ಡುಗಳಲ್ಲಿ ಆದಷ್ಟು ಶೀಘ್ರದಲ್ಲಿ ವಾರ್ಡ್ ಕಮಿಟಿಗಳು ಅಸ್ತಿತ್ವಕ್ಕೆ ಬರಲಿವೆ ಎನ್ನುವುದು ತಿಳಿದುಬಂದಿದೆ. ಇದು ಪಾಲಿಕೆಯ ಮೊದಲ ಪರಿಷತ್ ಸಭೆಯಲ್ಲಿ ಮಂಜೂರಾಗಿದೆ. ಲೆಕ್ಕಕ್ಕಿಂತ ಹೆಚ್ಚು ಬಹುಮತ ಬಂದಿರುವ ಭಾರತೀಯ ಜನತಾ ಪಾರ್ಟಿ ಈ ಬಾರಿಯೂ ವಾರ್ಡ್ ಕಮಿಟಿಯನ್ನು ಪಾಲಿಕೆಯಲ್ಲಿ ಜಾರಿಗೆ ತರದೇ ಇದ್ದಿದ್ದರೆ ಮುಂದಿನ ಬಾರಿ ಚುನಾವಣೆಗೆ ಹೋಗುವಾಗ ಶಾಸಕ ಅಭ್ಯರ್ಥಿಗಳಿಗೆ ತೋರಿಸಲು ಮುಖ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.
ಇದೇ ವಿಷಯವನ್ನು ಹಿಡಿದು ಕಾಂಗ್ರೆಸ್ ಜನರ ಬಳಿಗೆ ಹೋಗುತ್ತಿತ್ತು. ಹಾಗಂತ ಕಾಂಗ್ರೆಸ್ ಏನೂ ಸಾಚಾರಲ್ಲ. ಆದರೆ ಈಗ ಪಾಲಿಕೆ, ರಾಜ್ಯ ಮತ್ತು ರಾಷ್ಟ್ರ ಎಲ್ಲಿಯೂ ಅಧಿಕಾರದಲ್ಲಿ ಇಲ್ಲದೇ ಇರುವುದರಿಂದ ಅವರಿಗೆ ಆರೋಪ ಮಾಡುವುದು ಸುಲಭ. ಹಾಗಂತ ಬಿಜೆಪಿ ವಾರ್ಡ್ ಕಮಿಟಿ ಘೋಷಣೆ ಮಾಡಿದ ಕೂಡಲೇ ಸತ್ಯ ಹರಿಶ್ಚಂದ್ರನ ಮೊಮ್ಮೊಕ್ಕಳಂತೆ ವರ್ತಿಸುವುದೂ ಬೇಡಾ. ಯಾಕೆಂದರೆ ಇದು ಯಾವಾಗಲೋ ಆಗಬೇಕಿತ್ತು. ಸುಪ್ರೀಂಕೋರ್ಟ್ ನಿರ್ದೇಶನ ಕೂಡ ಇತ್ತು. ಕೊನೆಗೂ ಈಗ ಆಗಿದೆ. ಹಾಗಂತ ಕಾಟಾಚಾರಕ್ಕೆ ಕಮಿಟಿ ಮಾಡಿ ಆಯಾ ವಾರ್ಡಿನ ಕಾರ್ಪೋರೇಟರ್ ಗಳು, ಶಾಸಕರು ತಾವು ಜನರ ಕಣ್ಣಿಗೆ ಮಣ್ಣೆರೆಚಲು ಹೋದರೆ ವಾರ್ಡ್ ಕಮಿಟಿಯ ಉದ್ದೇಶ ಈಡೇರುವುದು ಇಲ್ಲ. ಮೊತ್ತ ಮೊದಲಿಗೆ ಏನು ಮಾಡಬೇಕು ಎಂದರೆ ಮಾಧ್ಯಮಗಳು ಈ ವಾರ್ಡ್ ಕಮಿಟಿಯ ಬಗ್ಗೆ ಜನರ ಪಾಲ್ಗೊಳ್ಳುವಿಕೆಯ ಕುರಿತು ಜಾಗೃತಿ ಮೂಡಿಸಬೇಕು. ಬೇಕಾದರೆ ಪಾಲಿಕೆಯ ಕಡೆಯಿಂದ ಪ್ರತಿ ವಾರ್ಡ್ ಮಟ್ಟದಲ್ಲಿ ಸಭೆಯನ್ನು ಕರೆಯಲಿ. ಅಲ್ಲಿ ಆ ವಾರ್ಡಿನ ನಾಗರಿಕರನ್ನು ಕರೆದು ಅಭಿಪ್ರಾಯ ಸಂಗ್ರಹಿಸಲಿ. ಅವರಲ್ಲಿ ವಾರ್ಡ್ ಕಮಿಟಿಯ ನಿಯಮದಂತೆ ಯಾವ ಅರ್ಹತೆಯನ್ನು ಹೊಂದಿರುವವರನ್ನು ಸದಸ್ಯರನ್ನಾಗಿ ಮಾಡಬೇಕೋ ಅಂತವರನ್ನು ಗುರುತಿಸಿ ವಾರ್ಡ್ ಕಮಿಟಿಯಲ್ಲಿ ಸೇರಿಸಲಿ. ಒಂದು ಪಾರದರ್ಶಕ ವಾರ್ಡ್ ಕಮಿಟಿ ಪ್ರತಿ ವಾರ್ಡಿನಲ್ಲಿಯೂ ರಚನೆಯಾಗಲಿ. ಅದು ಬಿಟ್ಟು ವಾರ್ಡ್ ಕಮಿಟಿ ಮಾಡಬೇಕು ಎನ್ನುವ ಕಾರಣಕ್ಕೆ ಕಾರ್ಪೋರೇಟರ್ ಗಳು ತಮ್ಮ ಸಂಜೆಯ ಪಾನಕ ಗೋಷ್ಟಿಯಲ್ಲಿ ಸೇರುವ ಗೆಳೆಯರನ್ನು ಸೇರಿಸಿಯೋ ಅಥವಾ ತನ್ನ ಹೆಂಡತಿಯ ತಮ್ಮನ ಮಗ ಎಂದೋ, ತಂಗಿಯ ಗಂಡ ಎಂದೋ ಲೆಕ್ಕ ಭರ್ತಿಗೆ ಜನರನ್ನು ಸೇರಿಸಿ ಕಮಿಟಿ ಮಾಡಿದರೆ ಅದರಿಂದ ಪ್ರಯೋಜನವಿಲ್ಲ. ಅದರ ಬದಲಿಗೆ ಪ್ರತಿ ವಾರ್ಡಿನಲ್ಲಿ ಆಸಕ್ತ ನಿವೃತ್ತ ಇಂಜಿನಿಯರ್, ನಿವೃತ್ತ ಸರಕಾರಿ ನೌಕರ ಹೀಗೆ ಆ ಕಮಿಟಿಯಲ್ಲಿ ಇರಲು ಅರ್ಹತೆ ಇರುವವರನ್ನು ಸೇರಿಸಿ ಕಮಿಟಿ ಮಾಡಬೇಕು. ಅಷ್ಟಕ್ಕೂ ಈ ವಾರ್ಡ್ ಕಮಿಟಿ ಆದ ಮೇಲೆ ಹಣ ಮಾಡುವುದಕ್ಕಾಗಿಯೇ ಕಾರ್ಪೋರೇಟರ್ ಆದವರು ತಮ್ಮ ಟಾರ್ಗೆಟ್ ತಲುಪುವುದು ಕಷ್ಟ. ಒಂದು ಕಾಲದಲ್ಲಿ ಬೈಟು ಕಾಫಿ ಕುಡಿಯುತ್ತಿದ್ದವರು ಕಾರ್ಪೋರೇಟರ್ ಆದ ಬಳಿಕ ಐಷಾರಾಮಿ ಕಾರಲ್ಲಿ ಬಂದು ಓಶಿಯನ್ ಪರ್ಲ್ ಹೋಟೇಲಿನಲ್ಲಿ ಫ್ಯಾಮಿಲಿಯೊಂದಿಗೆ ಮಜಾ ಉಡಾಯಿಸಿದ್ದನ್ನು ಕಂಡವ ನಾನು. ಯಾರು ಈಗ ಮೊದಲ ಬಾರಿಗೆ ಕಾರ್ಪೋರೇಟರ್ ಆಗಿದ್ದಾರೋ ಅವರು ಈಗ ಹೇಗಿರುತ್ತಾರೆ ನಂತರ ಮರಳನ್ನು ಅನ್ನದಲ್ಲಿ ಕಲಿಸಿ ತಿಂದು ಸೂರ್ಯಕಿರಣಗಳಂತೆ ಹೊಳೆಯಲು ಶುರುವಾಗುತ್ತಾರೆ ಎನ್ನುವುದನ್ನು ಕಣ್ಣಂಚಿನಲ್ಲಿ ನೋಡಿದರೆ ತಿಳಿಯುವಷ್ಟು ಶಕ್ತಿ ನನಗಿದೆ. ಮೊದಲ ಬಾರಿಗೆ ಪಾಲಿಕೆ ಹತ್ತುವಾಗ ಎಷ್ಟು ಮೆಟ್ಟಿಲು ಇದೆ ಎಂದು ಗೊತ್ತಿಲ್ಲದವರು ಕೂಡ ನಂತರ ಕೆಲವು ಪ್ಲಾಟುಗಳನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡವರ ಹೆಸರು ನನ್ನ ಬಾಯಲ್ಲಿಯೇ ಇದೆ. ಕಾರ್ಪೋರೇಟರ್ ಆದ ತಕ್ಷಣ ಇವರು ಮೊದಲು ನೋಡುವುದೇ ತಮ್ಮ ವಾರ್ಡಿನಲ್ಲಿ ಯಾವ ಬಿಲ್ಡಿಂಗ್ ಮೇಲೆ ಬರುತ್ತದೆ ಎನ್ನುವುದು. ಅಲ್ಲಿ ಬಿಲ್ಡರ್ ಬಳಿ ಹೋಗಿ ನಿಮ್ಮ ವಸತಿ ಸಮುಚ್ಚಯದ ಎದುರು ಇರುವ ತೋಡನ್ನು ನೆನಪಿಸುತ್ತಾರೆ. ಕೂಡಲೇ ವ್ಯಾಪಾರಿ ಬಿಲ್ಡರ್ “ನಿಜವಾಗಿ ನೋಡಿದರೆ ಅದನ್ನು ನಾನೇ ಮಾಡಬೇಕು. ನಾನು ಕೈ ಹಾಕಿದರೆ ಅದಕ್ಕೆ ಏಳೇಟು ಲಕ್ಷ ಆಗುತ್ತದೆ. ಹತ್ತು ಕೂಡ ಆಗಬಹುದು. ನಿಮಗೆ 3 ಲಕ್ಷ ಕೊಡುತ್ತೇನೆ. ಪಾಲಿಕೆ ಕಡೆಯಿಂದ ಮಾಡಿಸಿ. ನನಗೂ ಲಾಭ. ನಿಮಗೂ ಲಾಭ” ಎಂದು ಆಸೆ ತೋರಿಸುತ್ತಾನೆ. ಅಲ್ಲಿಗೆ ಕಾರ್ಪೋರೇಟರ್ ವಿಧಿವತ್ತಾಗಿ ಗುಂಡಿಗೆ ಬಿದ್ದರು ಎಂದೇ ಅರ್ಥ. ಇನ್ನೊಂದು ಡಿಲೀಂಗ್ ಏನೆಂದರೆ ಬಿಲ್ಡರ್ ತನ್ನ ಕಟ್ಟಡ ಮೇಲೆಳುವ ರಸ್ತೆಯಲ್ಲಿ ಕಾಂಕ್ರೀಟಿಕರಣ ಮಾಡಿಸುವುದು. ಅದನ್ನು ಪಾಲಿಕೆ ಮಾಡಿಸಿದ ಕೂಡಲೇ ಬಿಲ್ಡರ್ ನ ಫ್ಲಾಟ್ ಖರೀದಿಸುವವರ ಕಣ್ಣು ಸಹಜವಾಗಿ ಅರಳಿ ಹೆಚ್ಚು ಹಣಕ್ಕೆ ಸೇಲ್ ಆಗುತ್ತದೆ. ಸುಲಭವಾಗಿ ಗ್ರಾಹಕರು ಬರುತ್ತಾರೆ. ಅಲ್ಲಿಗೆ ಕಾರ್ಪೋರೇಟರ್ ಕೂಡ ಖುಷ್. ಅವನ ಕಿಸೆ ಕೂಡ ದಪ್ಪವಾಗುತ್ತದೆ. ಜೊತೆಗೆ ಅದೇ ತೋಡಿನ ಬಳಿ ಗುದ್ದಲಿಪೂಜೆ ಮಾಡಿಸುವಾಗ ನಿಂತು ಫೋಟೋ ತೆಗೆದು ಪೇಪರ್ ನಲ್ಲಿ ಹಾಕಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಸಿ ಬಿಲ್ಡಪ್ ತೆಗೆದುಕೊಳ್ಳುತ್ತಾನೆ. ಅಭಿವೃದ್ಧಿಯ ಹರಿಕಾರ ಎನಿಸಿಕೊಳ್ಳುತ್ತಾನೆ. ಅವನ ಒಟ್ಟಿಗೆ ಫೋಟೋಗೆ ನಿಂತವರೂ ಖುಷ್. ಇಂತಹುದು ನಾನು ತುಂಬಾ ನೋಡಿದ್ದೇನೆ. ವಾರ್ಡ್ ಕಮಿಟಿಯ ಆರಂಭದಲ್ಲಿಯೇ ಅಪಸ್ವರ ಎತ್ತುತ್ತಿದ್ದೇನೆ ಅಂದುಕೊಳ್ಳಿ. ಎಲ್ಲವೂ ಮುಗಿದ ಮೇಲೆ ಹೇಳಲು ನಾನು ಹಳೆ ಸಿನೆಮಾಗಳಲ್ಲಿ ಕೊನೆಯಲ್ಲಿ ಬರುವ ಪೊಲೀಸ್ ಅಲ್ಲ. ಮೊದಲೇ ಹೇಳಿದ್ದೇನೆ. ಇನ್ನೇನೂ ಕಾರ್ಪೋರೇಟರ್ ಗಳು ತಿನ್ನಲು ಕುಳಿತುಕೊಳ್ಳುವ ಹೊತ್ತು. ಗಂಜಿ ಉಂಡರೂ ಪರವಾಗಿಲ್ಲ. ನಿಯತ್ತಾಗಿ ಕಾರ್ಪೋರೇಟರ್ ಆಗಿರುತ್ತೇನೆ ಎಂದು ಅಂದುಕೊಂಡರೆ ನಾನೇ ಶಹಬ್ಬಾಷ್ ಎಂದು ಇಲ್ಲಿಯೇ ಬರೆಯುತ್ತೇನೆ. ಇಲ್ಲದಿದ್ರೆ ನನಗೆ ಎಂದಿನಂತೆ ಯಾವ ಹಂಗೂ ಇಲ್ಲ. ಹಿಂದೆನೂ ಭ್ರಷ್ಟಾಚಾರಕ್ಕೆ ಕೈ ಹಾಕಿದವರ ಹೆಸರು ಹಾಕಿ ದಾಖಲೆ ಹಿಡಿದು ಬರೆದಿದ್ದೇನೆ. ಉಳಿದದ್ದು ನಿಮಗೆ ಬಿಟ್ಟ ವಿಷಯ
Leave A Reply