ತೆರಿಗೆ ಕಚೇರಿ ಉಳಿಯುವುದು ಪತ್ರಿಕಾ ಹೇಳಿಕೆ ಕೊಡುವುದರಿಂದ ಅಲ್ಲ!!
Posted On September 7, 2020
ಇವತ್ತು ನಾನು ಬರೆಯುತ್ತಿರುವ ವಿಷಯ ನೇರವಾಗಿ ಮಧ್ಯಮ ವರ್ಗದವರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದಕ್ಕಾಗಿ ಈ ವಿಷಯದಲ್ಲಿ ಯಾರೂ ಬೀದಿಗೆ ಇಳಿಯುತ್ತಿಲ್ಲ. ಹೆಚ್ಚೆಂದರೆ ಮೀಡಿಯಾದವರು ಕೇಳಿದರೆ ಎಸಿ ಕೋಣೆಯಲ್ಲಿ ಕುಳಿತು ಸೂಟ್ ಬೂಟ್ ಹಾಕಿಕೊಂಡು ಝೂಮ್ ನಲ್ಲಿ ಬಿಝಿ ಇರುವವರು ಒಂದು ಹೇಳಿಕೆ ಬಿಸಾಡಿ ತೃಪ್ತರಾಗುತ್ತಾರೆ. ಕರಾವಳಿ ಕರ್ನಾಟಕದಲ್ಲಿ ತೆರಿಗೆ ಕಟ್ಟುವ ಮಹಾನ್ ಜನರು ಅದಕ್ಕಿಂತ ಜಾಸ್ತಿ ಏನು ಮಾಡಲಾರರು ಎಂದು ದೆಹಲಿಯಲ್ಲಿ ಕುಳಿತಿರುವ ಕೇಂದ್ರ ಸರಕಾರಕ್ಕೂ ಗೊತ್ತಿದೆ. ಇಲ್ಲದಿದ್ದರೆ ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿ ಹೋಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೀಗೆ ಮಾಡುತ್ತಿರಲಿಲ್ಲ. ಅಷ್ಡಕ್ಕೂ ನಾನು ಬರೆಯುತ್ತಿರುವವರು ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿಯ ವಿಲೀನದ ಬಗ್ಗೆ.
ಹೌದು. ಮಂಗಳೂರಿನಲ್ಲಿಯೇ ಅಂದಾಜು ನಾಲ್ಕು ಲಕ್ಷ ಜನ ತೆರಿಗೆದಾರರಿದ್ದಾರೆ. ಅದರಲ್ಲಿ ಹತ್ತು ಶೇಕಡಾ ಜನ ಹೋರಾಟಕ್ಕೆ ಇಳಿದರೂ ಸ್ಥಳಾಂತರವಾಗಲಿರುವ ಕಚೇರಿ ಮತ್ತೆ ಮಂಗಳೂರಿನಲ್ಲಿ ಇಳಿಯಲಿದೆ. ಸುಮಾರು 2000 ವೃತ್ತಿಪರ ಲೆಕ್ಕಪರಿಶೋಧಕರ ನಮ್ಮಲ್ಲಿದ್ದಾರೆ. ಈ ಕಚೇರಿ ಅಲ್ಲಿಗೆ ಹೋದರೆ ಸಿಕ್ಕಾಪಟ್ಟೆ ಜನರಿಗೆ ತೊಂದರೆಯಾಗಲಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ತೆರಿಗೆದಾರರ ಸಮಸ್ಯೆ ಮಾತ್ರ ಅಲ್ಲ. ಈ ಪ್ರಧಾನ ಕಚೇರಿ ನಮ್ಮ ಜಿಲ್ಲೆ, ಉಡುಪಿ ಜಿಲ್ಲೆ ಮತ್ತು ಕಾರವಾರಕ್ಕೂ ಅನ್ವಯಿಸುತ್ತದೆ. ಇದರಿಂದ ಎಷ್ಟು ತೆರಿಗೆದಾರರಿಗೆ ತೊಂದರೆಯಾಗಲಿದೆ ಎನ್ನುವ ಅಂದಾಜು ಕೇಂದ್ರ ವಿತ್ತ ಸಚಿವರಿಗೆ ಇರಲಿಕ್ಕಿಲ್ಲ. ಇನ್ನು ಮಂಗಳೂರು ವಿಮಾನ, ರೈಲು ಮತ್ತು ಅತ್ಯುತ್ತಮ ರಸ್ತೆ ಮಾರ್ಗಗಳನ್ನು ಸಂಪರ್ಕಿಸುವ ನಗರವಾಗಿದೆ. ಮಂಗಳೂರಿನ ಹೃದಯಭಾಗದಲ್ಲಿರುವ ಅತ್ತಾವರದಲ್ಲಿ ಸದ್ಯ ಈ ಕಚೇರಿ ಇದೆ. ಹಿಂದೆ ಒಮ್ಮೆ ಡಿಕೆಶಿ ಅಕ್ರಮ ಆಸ್ತಿ ಮೇಲೆ ಇಡಿ ದಾಳಿ ಮಾಡಿದಾಗ ಮಂಗಳೂರಿನ ಕಾಂಗ್ರೆಸ್ಸಿಗರು, ಕಾರ್ಪೋರೇಟರ್ ಎಸಿ ವಿನಯರಾಜ್ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಕನ್ನಡಿ ಒಡೆದು ಹಾಕಿದ್ದರಲ್ಲ, ಅದೇ ಕಚೇರಿ. ಈಗ ಸ್ಥಳಾಂತರಗೊಳ್ಳುವ ಹಂತದಲ್ಲಿದೆ. ಸ್ಥಳಾಂತರ ಎಂದರೆ ಅತ್ತಾವರದಿಂದ ಹೆಚ್ಚೆಂದರೆ ಸುರತ್ಕಲ್ ಗೆ ಸ್ಥಳಾಂತರ ಆದರೆ ಬೇರೆ ವಿಷಯ. ಆದರೆ ಈಗ ಸ್ಥಳಾಂತರ ಆಗುತ್ತಿರುವುದು ಅತ್ತಾವರದಿಂದ ಪಣಜಿಗೆ. ಈಗಾಗಲೇ ಈ ಕಚೇರಿ ಇರುವ ರಸ್ತೆ ಉತ್ತಮವಾಗಿರಬೇಕು ಎನ್ನುವ ದೃಷ್ಟಿಯಿಂದ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಅವರು ಆ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಿದ್ದಾರೆ. ಈಗ ಶಿಫ್ಟ್ ಅಂತೆ. ಇನ್ನೊಂದು ವಿಷಯ ಏನೆಂದರೆ ಇಲ್ಲಿಂದ ಪಣಜಿಗೆ ಹೋಗಬೇಕಾದರೂ ತಕ್ಷಣ ಹೋಗಿ ಬರೋಣ ಎಂದರೆ ವ್ಯವಸ್ಥೆಯಾದರೂ ಇದೆಯಾ, ಅದು ಕೂಡ ಇಲ್ಲ. ನಮ್ಮಲ್ಲಿ ಮಂಗಳೂರು ಟು ಪಣಜಿಗೆ ನೇರ ರೈಲುಗಾಡಿಯೇ ಇಲ್ಲ. ಇನ್ನು ವಿಮಾನವಂತೂ ದೂರದ ಮಾತು. ಇನ್ನು ಬಸ್ಸಿನಲ್ಲಿ ಪಣಜಿಗೆ ಹೋಗಿಬರಲು ಒಂದು ದಿನವೀಡಿ ವ್ಯರ್ಥವಾಗುತ್ತದೆ. ಅಲ್ಲಿ ಕೆಲಸ ಇದ್ದಾಗ ಹೋಗಲು ಮತ್ತು ಮುಗಿಸಿ ನಂತರ ಪುನ: ಬರಲು ಎರಡು ರಾತ್ರಿಯೀಡಿ ಪ್ರಯಾಣ ಮಾಡಬೇಕಾಗುತ್ತದೆ. ಇದೆಲ್ಲ ಸಿಎ, ಟ್ಯಾಕ್ಸ್ ಕಟ್ಟುವವರಿಗೆ ಬೇಕಾ? ಇನ್ನು ರಾತ್ರಿಯೀಡಿ ಪ್ರಯಾಣ ಮಾಡಿ ಹೋಗಿ ಬೆಳಿಗ್ಗೆ ಹೋಟೇಲು, ರೂಂ ಎಂದು ಖರ್ಚು ಬೇರೆ. ಇನ್ನು ರೈಲಿನಲ್ಲಿ ಹೋದರೂ ಮಡಗಾಂನಲ್ಲಿ ಇಳಿದು ಅಲ್ಲಿಂದ ಹೊರಗೆ ಬಂದು ಬೇರೆ ಬಸ್ಸಿಗೆ ಕೈ ಅಡ್ಡ ತೋರಿಸಿ ಅಲ್ಲಿಂದ ಅದು ಬಸ್ ಸ್ಟ್ಯಾಂಡಿಗೆ ಬಂದು ಪಣಜಿಗೆ ಹೋಗುವ ಬಸ್ಸಿನಲ್ಲಿ ಕುಳಿತು ಅದು ಪಣಜಿಗೆ ಹೋಗಿ ಅಲ್ಲಿಂದ ಪ್ರಧಾನ ಆಯುಕ್ತರ ಕಚೇರಿಗೆ ಹೋಗಿ ಕೆಲಸ ಮುಗಿಸಿ ಮತ್ತೆ ಅದೇ ರೀತಿಯಲ್ಲಿ ಮಂಗಳೂರಿಗೆ ಬರುವಾಗ ಈ ತೆರಿಗೆ ಕಟ್ಟುವ ವಿಷಯವೇ ಬೇಡಾ ಎಂದು ಅನಿಸುತ್ತದೆ. ಒಬ್ಬ ತೆರಿಗೆದಾರನಿಗೆ ಇದಕ್ಕಿಂತ ಕಿರಿಕಿರಿ ಬೇರೆ ಇರಲಾರರು. ಒಂದು ವೇಳೆ ತೆರಿಗೆದಾರರ ಪರವಾಗಿ ಸಿಎ ಅಥವಾ ಅವರ ಪ್ರತಿನಿಧಿಗಳು ಹೋಗುವುದು ಎಂದಾದರೂ ಅವರ ಅಮೂಲ್ಯ ಶ್ರಮ, ಸಮಯ ಮತ್ತು ಹಣವೂ ವ್ಯರ್ಥ.
ಹಿಂದೆ ಒಮ್ಮೆ ಹುಬ್ಬಳ್ಳಿಯ ಮತ್ತು ಅಕ್ಕಪಕ್ಕದ ಜಿಲ್ಲೆಯವರಿಗೂ ಇಂತಹುದೇ ಸವಾಲು ಎದುರಾಗಿತ್ತು. ಅವರ ಕಚೇರಿಯನ್ನು ಕೂಡ ಅಲ್ಲಿಂದ ಸ್ಥಳಾಂತರಿಸಿ ಗೋವಾದೊಂದಿಗೆ ವಿಲೀನ ಮಾಡುವ ಪ್ರಕ್ರಿಯೆಗೆ ಹಿಂದಿನ ಕೇಂದ್ರ ಸರಕಾರ ಮುಂದಾಗಿತ್ತು. ಆಗ ನೋಡಬೇಕಿತ್ತು, ಸಿಕ್ಕಾಪಟ್ಟೆ ಪ್ರತಿಭಟನೆ ನಡೆದು ಸಿಎಗಳು, ಉದ್ಯಮಿಗಳು ಬೀದಿಗೆ ಇಳಿದು ಹೋರಾಟಕ್ಕೆ ಮುಂದಾಗಿದ್ದರು. ಜನಪ್ರತಿನಿಧಿಗಳು ಈ ಬಗ್ಗೆ ಕೇಂದ್ರದೊಂದಿಗೆ ಮಾತನಾಡಿ ನಂತರ ಆ ಪ್ರಸ್ತಾವ ಕೈಬಿಡಲಾಗಿತ್ತು ಮತ್ತು ಅಷ್ಟೇ ಅಲ್ಲ, ಹುಬ್ಬಳ್ಳಿ ತೆರಿಗೆ ಆಯುಕ್ತರ ಕಚೇರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಗೌರವ ಪ್ರಾಪ್ತಿಯಾಗಿತ್ತು. ಆದರೆ ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ ನ ಪದಾಧಿಕಾರಿಗಳಲ್ಲಿದ್ದಷ್ಟು ಹುಮ್ಮಸ್ಸು ಯಾಕೆ ನಮ್ಮ ಚೆಂಬರ್ ನಲ್ಲಿಲ್ಲ. ಯಾರೂ ಪ್ರತಿಭಟನೆ ಮಾಡದಿದ್ದರೂ ಸಂಸದ ನಳಿನ್ ಕುಮಾರ್ ಕಟೀಲ್ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಕೊರೊನಾದಿಂದ ಆಸ್ಪತ್ರೆಯಲ್ಲಿ ಮಲಗಿದ್ದರೂ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಮೇಲ್ ಮಾಡಿದ್ದಾರೆ. ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ವಿತ್ತ ಸಚಿವೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ಈ ಕಚೇರಿ ಕೇವಲ ಸಂಸದರಿಗೆ ಮಾತ್ರ ಅಗತ್ಯ ಅಲ್ಲ. ಜನಶಕ್ತಿ ಒಟ್ಟಾಗಬೇಕು. ನಾವು ಸೋಶಿಯಲ್ ಮೀಡಿಯಾಗಳಲ್ಲಿ ಎಷ್ಟು ಒಳಗೆ ನುಗ್ಗಿದ್ದೇವೆ ಎಂದರೆ ಅಲ್ಲೊಂದು ಲೈಕ್ , ಕಮೆಂಟ್ ಮಾಡಿದ ತಕ್ಷಣ ಪ್ರತಿಭಟನೆ ಆಯಿತು ಎಂದೇ ಅಂದುಕೊಂಡಿದ್ದೇವೆ!!
- Advertisement -
Leave A Reply