ಶಾಸಕರು ತಲೆ ಕೆಳಗೆ ಕಾಲು ಮೇಲೆ ಮಾಡಿದರೂ ಕಂದಾಯ ಸಂಗ್ರಹಣೆ ಹೆಚ್ಚಳ ಆಗುವುದಿಲ್ಲ!
Posted On October 26, 2020

ನನ್ನ ಬಳಿ RTI ದಾಖಲೆ ಇದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಂದು ವಿಷಯದ ಮೇಲೆ ಯಾವ ದಾಖಲೆಯೂ ಇಲ್ಲ ಎನ್ನುವುದೇ ನನ್ನ ಬಳಿ ಇರುವ ದಾಖಲೆ. ಗೊಂದಲವಾಯಿತಾ. ಹೌದು. ನೀವು ಯಾವುದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ನೀವೆ ಒಂದು ಸ್ವಂತ ಕಚೇರಿಯನ್ನು ಹೊಂದಿದ್ದರೆ ಆ ಕಚೇರಿಯಲ್ಲಿ ಏನೇನು ಉಪಕರಣಗಳು ಉದಾಹರಣೆಗೆ ಎಷ್ಟು ಕಂಪ್ಯೂಟರ್, ಪ್ರಿಂಟರ್ ಮತ್ತು ಅದಕ್ಕೆ ಸಂಬಂಧಪಟ್ಟವು ಏನೆನಿವೆ ಎನ್ನುವುದರ ಬಗ್ಗೆ ಒಂದು . Inventory list ಇರುತ್ತದೆ. ಒಂದು ಸಂಸ್ಥೆ ಎಷ್ಟು ಶಿಸ್ತುಬದ್ಧವಾಗಿ ಇದೆ ಎನ್ನುವುದಕ್ಕೆ ಆಯಾ ಕಂಪೆನಿಯ Inventory list ನೋಡಿದರೆ ಗೊತ್ತಾಗಿಬಿಡುತ್ತದೆ. ಇದು ಖಾಸಗಿ ಸಂಸ್ಥೆಗಳ ವಿಷಯವಾಯಿತು. ಆದರೆ ನಮ್ಮ ಮನಪಾ ಸರಕಾರಿ ಸಂಸ್ಥೆಯಲ್ವಾ? ಸರಕಾರಿ ಕೆಲಸ ಎಂದರೆ ದೇವರ ಕೆಲಸ ಎನ್ನುವಂತಹ ಮಾತಿದೆ. ಹಾಗೆ ಸರಕಾರಿ ಸಂಸ್ಥೆಯಲ್ಲಿ ಇರುವ ವಸ್ತುಗಳೆಲ್ಲವೂ ದೇವರ ವಸ್ತುಗಳು ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಂದುಕೊಂಡಿರುತ್ತಾರೋ ಏನೋ. ಆದ್ದರಿಂದ ಅಲ್ಲಿರುವ ವಸ್ತುಗಳನ್ನು ದೇವರೇ ಕಾಪಾಡಬೇಕು ಎನ್ನುವ ಮನೋಭಾವ ನಮ್ಮ ಅಧಿಕಾರಿಗಳದ್ದು.
ಕಂಪ್ಯೂಟರ್ ಒಂದು ಬೇಕು ಎಂದು ಪಾಲಿಕೆ ಬಯಸಿದ ತಕ್ಷಣ ಕಂಪ್ಯೂಟರ್ ಬಂದು ಬೀಳುತ್ತದೆ. ಹೇಗೂ ಹಣದ ಚಿಂತೆ ಇಲ್ಲವಲ್ಲ. ಅದೇ ಒಂದು ಮಧ್ಯಮ ವರ್ಗ ದವರು ಒಂದು ಹೊಸ ಕಂಪ್ಯೂಟರ್ ಖರೀದಿಸಬೇಕೆಂದರೆ ಹತ್ತು ಸಾರಿ ಯೋಚಿಸುತ್ತಾರೆ. ಖರೀದಿಸಿದ ತಕ್ಷಣ ಅದನ್ನು ದೇವರಂತೆ ನೋಡುತ್ತಾರೆ. ಆದರೆ ಪಾಲಿಕೆಯ ವಸ್ತುಗಳು ಯಾರಪ್ಪನ ಆಸ್ತಿ. ಬೇಕು ಎಂದಾಗ ಬರುತ್ತದೆ. ಬೇಡಾ ಎಂದಾಗ ಮೂಲೆಗೆ ಬಿಸಾಡಿದರೂ ಯಾರು ಕೇಳುತ್ತಾರೆ. ಯಾವುದಕ್ಕಾದರೂ ಲೆಕ್ಕ ಇದೆಯಾ? ಒಂದು ವೇಳೆ ಒಂದು ಕಂಪ್ಯೂಟರ್ ಮನಪಾದಿಂದ ಎದ್ದು ಹೋಗಿ ಯಾವುದಾದರೂ ಅಧಿಕಾರಿಯ ಅಥವಾ ಸಿಬ್ಬಂದಿಯ ಮನೆಯಲ್ಲಿ ಕುಳಿತುಕೊಂಡರೂ ಯಾರಿಗೂ ಗೊತ್ತಾಗುವುದಿಲ್ಲ. ಕಂಪ್ಯೂಟರ್ ಸಂಬಂಧಿ ವಿಷಯಗಳನ್ನು ನೋಡಿಕೊಳ್ಳಲು ಮೆಲ್ವಿನ್ ಎನ್ನುವವರನ್ನು ಇನ್ ಚಾರ್ಜ ಆಗಿ ನೇಮಿಸಲಾಗಿದೆ. ಅದರಂತೆ ಯಾವ ತಾರೀಕಿಗೆ ಯಾವ ಕಂಪೆನಿಯ ಎಷ್ಟು ಕಂಪ್ಯೂಟರ್ ಬಂದಿದೆ ಎನ್ನುವ ದಾಖಲೆ ಅವರ ಬಳಿ ಇರಬೇಕಿತ್ತು. ಅದು ಇದೆಯಾ ಎಂದು ನಾನು ಮಾಹಿತಿ ಹಕ್ಕಿನಲ್ಲಿ ಪ್ರಶ್ನೆ ಕೇಳಿದೆ. ನನಗೆ ಇಲ್ಲಾ ಎನ್ನುವ ಉತ್ತರ ಬಂದಿದೆ. ಸಾಮಾನ್ಯವಾಗಿ ಪ್ರಕ್ರಿಯೆ ಹೇಗಿರುತ್ತೆ ಎಂದರೆ ಯಾವುದಾದರೂ ಒಂದು ವಿಭಾಗದವರಿಗೆ ಕಂಪ್ಯೂಟರ್ ಬೇಕೆಂದಾಗ ಅದನ್ನು ಪೂರೈಕೆ ಮಾಡಲಾಗುತ್ತದೆ. ಅದರ ನಂತರ ಆ ವಿಭಾಗದಿಂದ ಸಂಬಂಧಪಟ್ಟ ಜವಾಬ್ದಾರಿ ಇರುವವರು invoice ತೆಗೆದುಕೊಳ್ಳಬೇಕು. ಆದರೆ ಅಂತಹ ಯಾವ ದಾಖಲೆ ಪ್ರಕ್ರಿಯೆ ಪಾಲಿಕೆಯಲ್ಲಿ ನಡೆಯುವುದಿಲ್ಲ. ಬೇಕೆಂದಾಗ ಬಂದು ಬೀಳುತ್ತದೆ, ಅಲ್ಲಿ ಬೇಡ ಎನಿಸಿತಾ, ಮನೆಗೆ ತೆಗೆದುಕೊಂಡು ಉಪಯೋಗಿಸಿ ಎನ್ನುವುದೇ ಮನಪಾ ಅಧಿಕಾರಿಗಳ ಸೂತ್ರದಂತೆ ಕಾಣುತ್ತದೆ. ಅಷ್ಟಕ್ಕೂ ಇವರು ಆರಾಮವಾಗಿ ಕಂಪ್ಯೂಟರ್ ತರಿಸಿಕೊಳ್ಳುತ್ತಾರಲ್ಲ, ಹಣ ಯಾರದ್ದು? ನಮ್ಮದಲ್ವಾ?
ಮೊನ್ನೆ ಮನಪಾದಲಿ ಶಾಸಕರು ಅಧಿಕಾರಿಗಳಿಗೆ ಕಂದಾಯ ಸಂಗ್ರಹಣೆ ಹೆಚ್ಚಿಸಲು ಹೇಳಿ ಹೋಗಿದ್ದಾರೆ. ಕಾರಣ ಮನಪಾದಲ್ಲಿ ಬರಿ ಇಂಜಿನಿಯರಿಂಗ್ ವಿಭಾಗದಲ್ಲಿ ಆದ ಕೆಲಸದ ಬಾಕಿ ಪೇಮೆಂಟ್ 100 ಕೋಟಿಯಷ್ಟು ಇದೆ. ಅದರೊಂದಿಗೆ ಮೊದಲು ಪ್ರತಿ ತಿಂಗಳು 150 ಕೆಲಸಗಳು ಸ್ಯಾಂಕ್ಷನ್ ಆಗಲು ಬರುತ್ತಿದ್ದುವು ಈಗ ದಿವಾಕರ್ ಮೇಯರ್ ಅದ ಮೇಲೆ ತುಂಬಾ ಕಡಿಮೆ ಆಗಿದೆ. ಸ್ಯಾಂಕ್ಷನ್ ಆದ ತಕ್ಷಣ ಕೆಲಸ ಪ್ರಾರಂಭವಾಗುತ್ತದೆ ಸ್ಯಾಂಕ್ಷನ್ ಆಗದೆಯು ಕೆಲವು ಕಾಮಗಾರಿಗಳು ಅಧಿಕಾರಿಗಳ ಮತ್ತು ಕಾರ್ಪೊರೇಟ್ ಗಳ ಅಂಡರ್ ಸ್ಟಾಂಡ್ ನಲ್ಲಿ ಪ್ರಾರಂಭವಾಗುತ್ತದೆ. ಕಾಮಗಾರಿ ಹೇಗೆ ಮಾಡಲಿ, ಅದು ಕಳಪೆಯಾಗಿರಲಿ ಅಥವಾ ಬೇಕಾಬಿಟ್ಟಿ ಆಗಿರಲಿ ಆದ ಕೆಲಸಕ್ಕೆ ಹಣ ಕೊಡಬೇಕು ತಾನೆ. ಕೆಲಸ ಹೇಗೆ ಆಗಲಿ, ಹಣ ಮಾತ್ರ ಸರಿಯಾಗಿ ಕೊಡಬೇಕು. ಇಲ್ಲದಿದ್ದರೆ ಗುತ್ತಿಗೆದಾರ ಬಿಡುತ್ತಾನಾ. ಸದಸ್ಯರಿಗೆ, ಅಧಿಕಾರಿಗಳಿಗೆ ಪರ್ಸಂಟೇಜ್ ಕೊಟ್ಟು ಮಾಡಿಸಿದಲ್ಲವೇ? ಆದ್ದರಿಂದ ಗುತ್ತಿಗೆದಾರರಿಗೆ ಕೊಡಲು ಹಣ ಬೇಕು. ರಾಜ್ಯ ಸರಕಾರ ಕೊಡುತ್ತೆ ಎಂದು ಪ್ರತಿ ಬಾರಿ ಇವರು ತಟ್ಟೆ ಹಿಡಿದು ಕುಳಿತು ಕೊಂಡರೆ ಮರ್ಯಾದೆ ಹೋಗುವುದು ನಾಗರಿಕರದ್ದು ಅಲ್ಲವೇ. ತೆರಿಗೆ ಕಳ್ಳರು ಯಾರೊ, ಹೆಸರು ಹಾಳಾಗುವುದು ಇನ್ನಾರದ್ದೊ. ಅದಕ್ಕಾಗಿ ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಳ ಆಗಲೇಬೇಕಿದೆ. ಅಷ್ಟಕ್ಕೂ ಕಂದಾಯ ಹೆಚ್ಚಿಸುವುದು ಎಂದರೆ ಆದಾಯ ಹೆಚ್ಚಿಸುವುದುಅರ್ಥಾತ್ ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಳ ಮಾಡಬೇಕಾಗುವುದು. ಆದರೆ ತಲೆ ಕೆಳಗೆ ಕಾಲು ಮೇಲೆ ಮಾಡಿ ನಿಂತರೂ ಪಾಲಿಕೆಯ ತೆರಿಗೆ ಸಂಗ್ರಹಣೆ ಹೆಚ್ಚಳ ಆಗುವುದಿಲ್ಲ. ಮನಪಾಗೆ ಸಾಮಾನ್ಯವಾಗಿ ಮತ್ತು ಸಂಪ್ರದಾಯಬದ್ಧವಾಗಿ ಆದಾಯ ಬರುವುದು ಎಲ್ಲಿಂದ ಅಂದರೆ ಒಂದು ಸ್ವಯಂ ಆಸ್ತಿ ತೆರಿಗೆಯ ಮೂಲಕ, ಎರಡನೇಯದ್ದು ಹೋರ್ಡಿಂಗ್ಸ್ ನಲ್ಲಿ ಮತ್ತು ನೀರಿನ ಬಿಲ್ಲಿನಲ್ಲಿ. ಸ್ವಯಂ ಘೋಷಿತ ಆಸ್ತಿ ತೆರಿಗೆ ಮತ್ತು ಹೋರ್ಡಿಂಗ್ಸ್ ಬಗ್ಗೆ ಹೇಗೆ ಹಣ ಸೋರಿ ಹೋಗುತ್ತಿದೆ ಎಂದು ಈ ಹಿಂದೆ ಸಾಕಷ್ಟು ಹೇಳಿದ್ದೇನೆ. ಈಗ ನೀರಿನ ಬಿಲ್ಲಿನ ಬಗ್ಗೆ ಹೇಳುತ್ತೆನೆ. ಇಲ್ಲಿಯ ತನಕ ಪಾಲಿಕೆಗೆ ಬರಬೇಕಾಗಿರುವ ನೀರಿನ ಬಿಲ್ಲಿನ ಬಾಕಿ ಮೊತ್ತ ಎಷ್ಟು ಗೊತ್ತಾ?ಸುಮಾರು 100 ಕೋಟಿಯಷ್ಟು. ಅದು ಹೇಗೆ? ದಾಖಲೆ ಇದೆ. ಯಾರ್ಯಾರು ಹೇಗೆಗೆ ಮನಪಾಗೆ ಹಿಡಿಸಿದ್ದಾರೆ ಎನ್ನುವ ಜಾತಕ ಬಿಚ್ಚಿಡಲಿದೆನೆ.
- Advertisement -
Leave A Reply