ಆಯುಕ್ತರೇ, ಮಧ್ಯಾಹ್ನ ಮೂರುವರೆಗೆ ಒಂದು ಅನಿರೀಕ್ಷಿತ ಭೇಟಿ ಕೊಡಿ….
Posted On December 8, 2020
ನೀವು ಮಧ್ಯಾಹ್ನ ಮೂರು ಗಂಟೆಯ ನಂತರ chair ಗೆ ಫೆವಿಕಾಲ್ ಹಾಕಿ ಕುಳಿತುಕೊಳ್ಳಬೇಕು ಎಂದು ಹೇಳುವುದೊಂದೇ ಬಾಕಿ. ಅದು ಬಿಟ್ಟು ಬೇರೆ ಯಾವ ರೀತಿಯಲ್ಲಿ ಹೇಳಬೇಕೊ ಆ ರೀತಿಯಲ್ಲಿ ಹೇಳಲಾಗಿದೆ. ಆದರೆ ಕ್ಲಾಸಿಗೆ ಬಂಕ್ ಹೊಡೆದು ಊರುರು ಸುತ್ತುವ ಪುಂಡ ಹುಡುಗರಂತೆ ಇವರ್ಯಾರು ಯಾರ ಮಾತನ್ನು ಕೂಡ ಕೇಳುವುದಿಲ್ಲ. ಅವರಿಗೆ ಗೊತ್ತಿದೆ, ನಮಗೆ ಯಾರೂ ಏನು ಮಾಡಲು ಸಾಧ್ಯವಿಲ್ಲ. ನಾನು ಈ ಮಾತುಗಳನ್ನು ಹೇಳುತ್ತಿರುವುದು ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ಬಗ್ಗೆ. ಹೇಗೆ ತರಗತಿಯಲ್ಲಿ ಗುರುಗಳನ್ನು ಕ್ಯಾರೆ ಮಾಡದ ಸ್ಟೂಡೆಂಟ್ಸ್ ಇರುತ್ತಾರೊ ಅದೇ ರೀತಿಯಲ್ಲಿ ಪಾಲಿಕೆಯಲ್ಲಿ ಆಯುಕ್ತರ ಮಾತುಗಳನ್ನು ಎಲ್ಲಿಯೋ ಒರೆಸಿಕೊಂಡು ಓಡಾಡುವ ಅಧಿಕಾರಿಗಳು ಇರುತ್ತಾರೆ.
ಮನಪಾ ವ್ಯಾಪ್ತಿಯಲ್ಲಿ ನಿತ್ಯ ನೂರಾರು ಸಮಸ್ಯೆ ಇರುತ್ತದೆಯಲ್ಲ. ಅದನ್ನು ನಾಗರಿಕರು ಯಾರ ಬಳಿ ಹೇಳುವುದು, ಅವರ ಕೈಯಲ್ಲಿ ಅವರ ward ನ corporator ಸಿಕ್ಕಿದರೆ ಪುಣ್ಯ. ಒಂದೊಮ್ಮೆ ಸಿಕ್ಕಿದರೂ ಅವನು ಅಥವಾ ಅವಳು ಮಾಡಿದರೆ ನಸೀಬು. ಅವರು ಇದು ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಹೇಳಿದರೆ ಅಥವಾ ಅವರೇ ಇದು ಆಯಾ ವಿಭಾಗದ ಅಧಿಕಾರಿಯ ಹತ್ತಿರ ಹೇಳಿದರೆ ಆಗುತ್ತೆ ಎಂದು ಐಡಿಯಾ ಕೊಟ್ಟರೆ ಆಗ ನೀವು ಮಹಾನಗರ ಪಾಲಿಕೆಯ ಮೆಟ್ಟಿಲು ಹತ್ತಲೇಬೇಕು. ಪಾಲಿಕೆಯ ಮೆಟ್ಟಿಲು ಒಮ್ಮೆ ಹತ್ತುವ ಅಭ್ಯಾಸವಾದರೆ ಮತ್ತೇ ಅದು ಖಾಯಂ ಆಗುತ್ತದೆ. ಯಾಕೆಂದರೆ ಅದೊಂದು ರೀತಿಯಲ್ಲಿ ನ್ಯಾಯಾಲಯವಿದ್ದಂತೆ. ಅಲ್ಲಿ ಒಮ್ಮೆ ಹೋಗಿ ಕೆಲಸ ಮಾಡಿ ಬಂದೆ ಎಂದು ಯಾರಾದರೂ ಹೇಳಿದರೆ ಒಂದೋ ಆತ ಸುಳ್ಳು ಹೇಳುತ್ತಿರಬೇಕು ಅಥವಾ ಆತ ಹೋದ ಜನ್ಮದಲ್ಲಿ ತುಂಬಾ ಪುಣ್ಯ ಮಾಡಿರಬೇಕು.
ಆದರೆ ಏನು ಮಾಡುವುದು, ಜನಸಾಮಾನ್ಯರು ತಮ್ಮ ಮನವಿ ಪತ್ರ ಹಿಡಿದು ಪಾಲಿಕೆಗೆ ಸುತ್ತು ಹಾಕುತ್ತಲೇ ಇರುತ್ತಾರೆ. ಇವರು ಕೊಟ್ಟ application ಗೆ ಅಲ್ಲಿ ಹಿಂಬರಹ ಕೊಡುವುದಿಲ್ಲ. ತುಂಬಾ ಜನ ನನ್ನ ಬಳಿ ಕೇಳುತ್ತಾರೆ, ಆ ಅಧಿಕಾರಿ ಎಷ್ಟು ಗಂಟೆಗೆ ಸಿಗುತ್ತಾರೆ, ಈ ಅಧಿಕಾರಿ ಎಷ್ಟು ಗಂಟೆಗೆ ಸಿಗುತ್ತಾರೆ. ನಾನು ಹೇಳುವುದಿಷ್ಟೇ. ಪ್ರತಿಯೊಬ್ಬ ಅಧಿಕಾರಿಗೂ ಮಧ್ಯಾಹ್ನ ಮೂರು ಗಂಟೆಯ ಬಳಿಕ ಕಡ್ಡಾಯವಾಗಿ ತಮ್ಮ ಕಚೇರಿಯಲ್ಲಿಯೇ ಇರಬೇಕು ಎನ್ನುವ ಸುತ್ತೋಲೆಯನ್ನು ಆಯಾ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ ಮನಪಾ ಆಯುಕ್ತರು ಹೊರಡಿಸಿದ್ದಾರೆ. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ನಿಮಗೆ ಬೇಕಾದ ಅಧಿಕಾರಿ ನೀವು ಹೋದ ಸಮಯಕ್ಕೆ ನಿಮಗೆ ಸಿಗುತ್ತಾರೆ. ಒಂದು ವೇಳೆ ನಿಮ್ಮ ಅದೃಷ್ಟ ಸರಿಯಿಲ್ಲದಿದ್ದರೆ ನೀವು ಇಡೀ ದಿನ ಅಲ್ಲಿಯೇ ಕುಳಿತುಕೊಂಡರು ಅಧಿಕಾರಿ ನಿಮಗೆ ಸಿಗುವುದಿಲ್ಲ.
ಅಧಿಕಾರಿಗಳಿಗೆ ಸುತ್ತೋಲೆ ಅಲ್ಲ, ಕೈಗೆ, ಕಾಲಿಗೆ ಚೈನು ಹಾಕಿ ಕಟ್ಟಿದರೂ ಕೆಲವು builders ಅಥವಾ ಗುತ್ತಿಗೆದಾರ ಅದನ್ನು ಬಿಚ್ಚಿ ಇವರನ್ನು ತಮ್ಮ ಕಾರಿನಲ್ಲಿ ಎತ್ತಾಕಿಕೊಂಡು ತೆಗೆದುಕೊಂಡು ಹೋಗುತ್ತಾರೆ. ಅದು ಯಾಕೆ ಎಂದು ಮುಂದೆ ಹೇಳುತ್ತೇನೆ. ಇನ್ನೂ ಹಿಂದೆ ಬಂದ ಆಯುಕ್ತರಿಗೆ ಜನರ ತೊಂದರೆ ಗೊತ್ತಿಲ್ಲ ಎಂದಲ್ಲ. ಜನ ಅಧಿಕಾರಿಗಳ ಚೇಂಬರ್ ಹೊರಗೆ ಕಾಯುವುದು ನೋಡಲಾರದೆ ಅವರು ಅನೇಕ ಬಾರಿ ಸುತ್ತೋಲೆ ಹೊರಡಿಸಿದ್ದಾರೆ. ಬೇಕಾದರೆ ಸುತ್ತೋಲೆ ಹೊರಡಿಸಿದ ದಿನಾಂಕಗಳ ದಾಖಲೆಗಳು ಕೂಡ ನನ್ನ ಬಳಿ ಇವೆ. 19.9.2009, 1.10.2009, 18.6.2010, 29.11.2010. 23-10-2015,14-08-2018 ಇಷ್ಟು ದಿನಾಂಕಗಳಲ್ಲಿ ಸುತ್ತೋಲೆಗಳನ್ನು ಹೊರಡಿಸಿ ಖಡಕ್ಕಾಗಿ ಸೂಚನೆ ನೀಡಲಾಗಿದೆ. ಆದರೆ ಏನೂ ಪ್ರಯೋಜನವಾಗಿಲ್ಲ. ಆದರೆ ಪಾಪ ಜನರಿಗೆ ಈ ಬಗ್ಗೆ ಗೊತ್ತಿರುವುದಿಲ್ಲ. ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆ ಆರು ಗಂಟೆಯ ಒಳಗೆ ಎಲ್ಲ ಅಧಿಕಾರಿಗಳು ತಪ್ಪದೆ ತಮ್ಮ ಕಚೇರಿಯಲ್ಲಿ ಸಿಗುತ್ತಾರೆ ಎಂದು ನಂಬುವ ದುರಾದೃಷ್ಟವಂತರು ಮನಪಾಗೆ ಬಂದು ಕಾಯುವುದು ಪಾಲಿಕೆ ಅಸ್ತಿತ್ವಕ್ಕೆ ಬಂದ ಸಮಯದಿಂದಲೂ ಇದ್ದದ್ದೇ.
ಎಂತದ್ದೇ ಕಾರ್ಯ ಇರಲಿ, ಮಧ್ಯಾಹ್ನ ಮೂರು ತಾಸು ಒಳಗೆ ಮುಚ್ಚಿಕೊಂಡು ಬಿದ್ದಿರಬೇಕು ಎಂದು ಅಪ್ಪಟ ಉತ್ತರ ಕನ್ನಡ ಶೈಲಿಯಲ್ಲಿಯು ಇವರಿಗೆ ಹೇಳಬೇಕಾಗಬೇಕೇನೊ. ಜನರ ಸಮಸ್ಯೆಗಳು ಹೆಚ್ಚಾಗಿ ಒಂದೇ ರೀತಿಯಲ್ಲಿ ಇರುತ್ತವೆ. ಒಂದೊ ನೀರಿನ ಸಮಸ್ಯೆ, ಕೆಲವರಿಗೆ ಒಳಚರಂಡಿ ಅವ್ಯವಸ್ಥೆ, ಕೆಲವರಿಗೆ ಅನಧಿಕೃತ ಕಟ್ಟಡ construction ಸಮಸ್ಯೆ ಇಂತಹ ಅನೇಕ ಸಮಸ್ಯೆಗಳು ಇರುತ್ತವೆ. ಅವರು ಲಿಖಿತ ದೂರು ನೀಡಿ ಅನೇಕ ದಿನಗಳಾಗಿರುತ್ತವೆ. ಯಾರೂ ಏನು ಕ್ರಮ ಕೈಗೊಳ್ಳಲಿಲ್ಲ ಎಂದು ಮನಪಾಗೆ ಬಂದರೆ ಇಲ್ಲಿ ಅಧಿಕಾರಿಗಳೇ ಇರುವುದಿಲ್ಲ. ಜೆಇ, ಎಇಇ ಗುತ್ತಿಗೆದಾರರ ಕಾರಿನಲ್ಲಿ ಅವನು ಮಾಡಿರುವ ಕೆಲಸದ ಅಳತೆ ತೆಗೆಯಲು ಹೋಗಿರುತ್ತಾರೆ. ಇನ್ನೂ ಟಿಪಿಒ ಮತ್ತು ಎಟಿಪಿಒ ಕಟ್ಟಡ ಕಟ್ಟಲು ಅನುಮತಿ, ಕಟ್ಟಡ ಪ್ರವೇಶ ಪತ್ರ ನೀಡುವುದಕ್ಕಾಗಿ ಕಟ್ಟಡ ವೀಕ್ಷಿಸಲು ಬಿಲ್ಡರ್ಸ್ ಅಥವಾ ಗುತ್ತಿಗೆದಾರರ ಕಾರಿನಲ್ಲಿ ಹೋಗಿರುತ್ತಾರೆ. ಬಡ ಮತ್ತು ಮಧ್ಯಮ ವರ್ಗದ ಜನ ಮಾತ್ರ ಬಸ್ಸಿನಲ್ಲಿ ನೇತಾಡುತ್ತಾ ಲಾಲ್ ಭಾಗ್ ನಲ್ಲಿ ಇಳಿದು ಅಧಿಕಾರಿ ಸಿಗುತ್ತಾರಾ, ಇಲ್ಲವೊ ಎಂದು ಮನದಲ್ಲಿಯೇ ಟಾಸ್ ಹಾಕುತ್ತಾ ಪಾಲಿಕೆಯ ಒಳಗೆ ಕಾಲಿಡುತ್ತಾರೆ. ಇದನ್ನು ತಪ್ಪಿಸಲು ನಾನು ಈಗಿನ ಆಯುಕ್ತ ಶ್ರೀ ಅಕ್ಷಯ್ ಶ್ರೀಧರ್ ಅವರಿಗೆ ಕೇಳಿಕೊಳ್ಳುವುದಿಷ್ಟೇ. ಒಂದು ದಿನ ಸಡನ್ನಾಗಿ ಮಧ್ಯಾಹ್ನ ಮೂರುವರೆ ಗಂಟೆಗೆ ಪಾಲಿಕೆಯ ಇಂಜಿನಿಯರಿಂಗ್ ಮತ್ತು ನಗರ ಯೋಜನಾ ವಿಭಾಗಕ್ಕೆ ಭೇಟಿ ಕೊಡಿ. ಜೆಇ, ಎಇಇ, ಇಇ,ಟಿಪಿಒ, ಎಟಿಪಿಒ ಗಳ ಚೇರ್ ಖಾಲಿ ಇದೆಯಾ, ತಡಮಾಡಲೇಬೇಡಿ, ತಕ್ಷಣ ನೋಟಿಸು ನೀಡಿ. ಅವರನ್ನು ದಾರಿಗೆ ತರುವ ಜವಾಬ್ದಾರಿ ನಿಮ್ಮದು. ಇಲ್ಲದಿದ್ದರೆ ಅಧಿಕಾರಿಗಳು ಬಿಲ್ಡರ್ ಗಳ ಅಥವಾ ಗುತ್ತಿಗೆದಾರರ ಎಸಿ ಕಾರಿನಲ್ಲಿ ತಿರುಗಾಡುವುದು, ಜನ ಈ ಸೆಕೆಗೆ ಬೆವರುತ್ತಾ ಬಸ್ಸಿನಲ್ಲಿ ಬಂದು ಕಾಯುವುದು ನಡೆದೆ ಇರುತ್ತದೆ. ಎಲ್ಲವೂ ನಿಮ್ಮ ಕೈಯಲ್ಲಿ ಇದೆ ಸರ್ ನೀವು ಒಬ್ಬ ಖಡಕ್ ಅಧಿಕಾರಿ ಎಂದು ಭಾವಿಸಿದ್ದೇನೆ.
- Advertisement -
Leave A Reply