ಕುಂಪಲದ ಹುಡುಗಿ ಪ್ರೇಕ್ಷಾ ಇಹಲೋಕ ತ್ಯಜಿಸಿ ವಾರವಾಗುತ್ತಿದೆ. ತುಂಬು ಕನಸುಗಳನ್ನು ಕಂಡು ಮಾಡೆಲಿಂಗ್ ನಲ್ಲಿ ದೊಡ್ಡ ಹೆಸರು ಮಾಡಬೇಕು, ಕಿರುತೆರೆ, ಸಿನೆಮಾಗಳಲ್ಲಿ ಅಭಿನಯಿಸಬೇಕು ಎಂದು ಆಸೆ ಇಟ್ಟುಕೊಂಡಿದ್ದ ಯುವತಿ ಆಸೆಗಳೇ ಇಲ್ಲದ ಲೋಕಕ್ಕೆ ಹೊರಟುಹೋಗಿದ್ದಾಳೆ. ಹುಶಾರಿಲ್ಲ ಎಂದು ಸಾಯುವ ದಿನ ಕಾಲೇಜಿಗೂ ಹೋಗದ ಪ್ರೇಕ್ಷಾ ಆವತ್ತು ಬೆಂಗಳೂರಿಗೂ ಹೋಗುವವಳಿದ್ದಳು. ಆದರೆ ಬೆಂಗಳೂರು ಬಸ್ ಹತ್ತಬೇಕಾದವಳು ಯಮ ಕಳುಹಿಸಿಕೊಟ್ಟ ವಾಹನ ಏರಿ ಬೇರೊಂದು ಲೋಕಕ್ಕೆ ಹೋಗಿದ್ದಾಳೆ. ತಾಯಿ ಮತ್ತು ತಂಗಿ ಇದನ್ನು ಕೊಲೆ ಎಂದೇ ಹೇಳುತ್ತಿದ್ದಾರೆ. ಆಕೆ ಸತ್ತ ದಿನ ಹುಡುಗರು ಆ ಮನೆಗೆ ಬಂದಿದ್ದರು ಎಂದು ನೋಡಿದವರು ಇದ್ದ ಕಾರಣ ತನಿಖೆಗೆ ಅದು ನೆರವಾಗಿದೆ. ಆವತ್ತು ಸಾಯುವ ಮೊದಲು ಪ್ರೇಕ್ಷಾ ಅದೆಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎನ್ನುವುದನ್ನು ನಾವು ಅಂದಾಜು ಮಾಡಲು ಸಾಧ್ಯವೇ ಇಲ್ಲ. ಅವಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಯುವಕನೇ ಆಕೆಯ ಸಾವಿಗೆ ಕಾರಣನಾಗಿದ್ದನಾ ಎನ್ನುವುದು ಇನ್ನು ತನಿಖೆಯಿಂದ ಗೊತ್ತಾಗಬೇಕಿದೆ. ಆದರೆ ಸೌಂದರ್ಯ ಎನ್ನುವುದು ಆಕೆಗೆ ದೇವರೆಡೆ ಪ್ರಯಾಣವನ್ನು ಇಷ್ಟು ಬೇಗ ಮಾಡಿಬಿಟ್ಟಿತಾ ಎನ್ನುವ ಪ್ರಶ್ನೆ ಉದ್ಭವಿಸುತ್ತಿದೆ. ಅದೇನೆ ಇದ್ದರೂ ಈ ಸಾವಿನ ಹಿಂದೆಯೂ ಡ್ರಗ್ಸ್ ಕಮಟು ವಾಸನೆ ಮಾತ್ರ ಗಾಢವಾಗಿ ಮೂಗಿಗೆ ಬಡಿಯುತ್ತಿದೆ. ಈ ಪ್ರಕರಣದ ಬಗ್ಗೆ, ಹುಡುಗಿಯ ಮನೆಯವರ ಪರವಾಗಿ, ಡ್ರಗ್ಸ್ ಗಾಂಜಾ ಗ್ಯಾಂಗಿನ ಬಗ್ಗೆ ಹೇಳಿಕೆ ನೀಡಿದ ಮೋಹನ ಶೆಟ್ಟಿ ಎನ್ನುವವರ ಮನೆಯ ಮೇಲೆ ದೊಡ್ಡ ಸಂಖ್ಯೆಯಲ್ಲಿ ಬಂದ ಯುವಕರ ತಂಡವೊಂದು ಕಲ್ಲು ಬಿಸಾಡಿ ಅಕ್ಷರಶ: ಭಯೋತ್ಪಾದಕ ಕೃತ್ಯವನ್ನು ಮಾಡಿರುವುದು ಮಾತ್ರ ಕ್ಷಮಿಸಲು ಸಾಧ್ಯವೇ ಇಲ್ಲ.
ಮಂಗಳೂರು ಅಥವಾ ಹಿಂದಿನ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆ ಆಗಿದ್ದರೂ ಗಾಂಜಾ ಜಾಲ ಮಾತ್ರ ಸಾಕಷ್ಟು ಅಭಿವೃದ್ಧಿ ಕಂಡಿದೆ. ಇಲ್ಲಿ ಯುವಕರು ಕಾಫಿ, ಚಾಗಿಂತ ಸಲೀಸಾಗಿ ಗಾಂಜಾ ಸೇವನೆ ಮಾಡುತ್ತಾರೆ. ಯುವಕರಿಗೆ ಗಾಂಜಾ, ಡ್ರಗ್ಸ್ ಪೂರೈಸುವ ಮೂಲಗಳು ಇಲ್ಲಿವೆ. ಇದನ್ನೆಲ್ಲ ನೋಡಬೇಕಾದ ಪೊಲೀಸ್ ಇಲಾಖೆ ಮಾತ್ರ ಗಾಂಧೀಜಿಯವರ ಮೂರು ಮಂಗಗಳಂತೆ ಗಾಂಜಾ ವಿಷಯದಲ್ಲಿ ನೋಡುವುದಿಲ್ಲ, ಮಾತನಾಡುವುದಿಲ್ಲ, ಕೇಳುವುದಿಲ್ಲ ಎನ್ನುವ ಮಟ್ಟಕ್ಕೆ ಬಂದು ಕುಳಿತಿದೆ. ಆದ್ದರಿಂದ ಇಲ್ಲಿ ಗಾಂಜಾ ರಾಜಾರೋಶವಾಗಿ ಚಲಾವಣೆಯಲ್ಲಿದೆ. ಇದಕ್ಕಾಗಿ ಕೊಲೆಯತ್ನ, ಕೊಲೆಗಳು, ಹಲ್ಲೆ, ಹಲ್ಲೆಯತ್ನಗಳು ಇಲ್ಲಿ ಅನೇಕ ಬಾರಿ ನಡೆದಿವೆ. ಗಾಂಜಾ ಸೇವಿಸಿದ ನಂತರ ಯಾರೂ ಯಾರನ್ನು ಕೇರ್ ಮಾಡಲ್ಲ ಎನ್ನುವುದು ಇಲ್ಲಿ ಜಗಜ್ಜಾಹೀರಾಗಿರುವ ವಿಷಯ. ಗಾಂಜಾ ಜಾಲವನ್ನು ಹೆಡೆಮುರಿ ಕಟ್ಟಿ ಬಿಸಾಡದಿದ್ದರೆ ಉಳ್ಳಾಲ ನಿಜಕ್ಕೂ ಭವಿಷ್ಯದಲ್ಲಿ ಡೇಂಜರ್.
ಪ್ರೇಕ್ಷಾ ಪ್ರಕರಣದಲ್ಲಿ ಪೊಲೀಸರು 13 ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅವರ ರಕ್ತದ ಸ್ಯಾಂಪಲ್ ಪರಿಶೀಲಿಸಿದಾಗ ಅದರಲ್ಲಿ 11 ಮಂದಿ ಗಾಂಜಾ ವ್ಯಸನಿಗಳಾಗಿರುವುದು ಪತ್ತೆಯಾಗಿದೆ. ಹಾಗಾದರೆ ಇದು ಏನನ್ನು ಸೂಚಿಸುತ್ತದೆ. ಗಾಂಜಾ ಕೊಟ್ಟರೆ ಇವರು ಯಾರ ಮನೆಗಾದರೂ ಕಲ್ಲು ಬಿಸಾಡಬಹುದು, ಯಾರ ಎದೆಗೂ ಚೂರಿ ಹಾಕಬಹುದು ಎನ್ನುವುದು ಇದಕ್ಕೆ ಸಾಕ್ಷಿ. ಈ ಕುರಿತು ಖಾದರ್ ಪ್ರೇಕ್ಷಾ ಮನೆಗೆ ಭೇಟಿ ನೀಡಿದ ಬಳಿಕ ಈ ವಿಷಯದ ಬಗ್ಗೆ ಪೊಲೀಸ್ ಕಮೀಷನರ್ ಅವರಲ್ಲಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. ಇಲ್ಲಿ ಪ್ರೇಕ್ಷಾ ಪ್ರಕರಣದ ಬಗ್ಗೆ ಮಾತನಾಡಿದರೆ ಸಾಲುವುದಿಲ್ಲ. ಇದಕ್ಕೆ ಕಾರಣವಾಗಿರುವ ಯುವಕರು ಈ ಪ್ರಕರಣಕ್ಕೆ ಗಾಂಜಾ ನಂಟಿರುವುದನ್ನು ಕೂಡ ಪರೋಕ್ಷವಾಗಿ ಒಪ್ಪಿಕೊಂಡಂತೆ ಆಗಿದೆ. ಅದನ್ನು ಕೂಡ ಪರಿಶೀಲಿಸಬೇಕು. ಖಾದರ್ ಅವರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಸವಾಲಾಗಿರುವ ಗಾಂಜಾ ಜಾಲವನ್ನು ಬುಡ ಸಮೇತ ಕಿತ್ತು ಬಿಸಾಡಲು ತಮ್ಮ ಪ್ರಯತ್ನ ಮಾಡಬೇಕು. ಅವರಿಗೆ ಇದು ಗೊತ್ತಿಲ್ಲದ ಸಂಗತಿ ಏನಲ್ಲ. ಅವರಿಗೆ ಇದು ಅಸಾಧ್ಯವೂ ಅಲ್ಲ. ಒಂದು ವೇಳೆ ಈ ಬಗ್ಗೆ ಖಾದರ್ ಮೌನವಾಗಿದ್ದರೆ ಅವರ ಬಗ್ಗೆ ಸಜ್ಜನರಿಗೆ, ಪ್ರಜ್ಞಾವಂತರಿಗೆ ಅನುಮಾನ ಬರುತ್ತದೆ. ಉಳ್ಳಾಲ, ಕುಂಪಲದ ಪೊಲೀಸರಿಗೆ ಕುಂಪಲದ ವಾತಾವರಣದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಲ್ಲಿ ಮನೆಮನೆಗಳಿಗೆ ಯುವಕರ ಕೈಯಲ್ಲಿ ಗಾಂಜಾ ಪ್ರವೇಶ ಪಡೆದಿದೆ.
ಇದರಿಂದ ಏನಾಗುತ್ತದೆ? ಯುವಕರು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಅದರೊಂದಿಗೆ ಬೇರೆಯವರ ಜೀವನವನ್ನು ಕೂಡ ಅನ್ಯಾಯವಾಗಿ ಹಾಳು ಮಾಡುತ್ತಾರೆ. ಇದು ಕುಂಪಲ, ಉಳ್ಳಾಲಕ್ಕೆ ಮಾತ್ರ ಸೀಮಿತವಾಗಿಲ್ಲ. ಉಳ್ಳಾಲದುದ್ದಕ್ಕೂ ಇದು ಶಾಪವಾಗಿ ಬೆಳೆಯುತ್ತಿದೆ. ಅನೇಕ ಉನ್ನತ ಕಾಲೇಜುಗಳು ಇರುವ ಪ್ರದೇಶದಲ್ಲಿ ಹೊರಗಿನಿಂದ ಬರುವ ವಿದ್ಯಾರ್ಥಿಗಳು ಹೆಚ್ಚಾಗುತ್ತಿದ್ದಾರೆ. ಕೇರಳ ಗಡಿ ಭಾಗ ಆಗಿರುವುದರಿಂದ ಗಾಂಜಾ ಕೂಡ ಸಲೀಸಾಗಿ ಒಳಗೆ ಬರುತ್ತಿದೆ. ಇನ್ನು ಖಾದರ್ ಕೂಡ ಈ ಬಗ್ಗೆ ಅಂತಹ ಗಂಭೀರ ಕ್ರಮಗಳನ್ನು ಕೈಗೊಂಡಂತೆ ಕಾಣುತ್ತಿಲ್ಲ. ಇದರಿಂದಲೇ ಅಲ್ಲಿ ಗಾಂಜಾ ಸೇವಿಸಿ ಗಲಾಟೆಗಳು ಆಗುವುದು ಸಾಮಾನ್ಯ. ಈಗ ಅದೇ ಗಾಂಜಾ ಒಂದು ಯುವತಿಯ ಬಾಳಿನೊಂದಿಗೆ ಆಟವಾಡಿದೆ. ಅವಳು ಗಾಂಜಾ ಸೇವನೆ ಮಾಡಿಲ್ಲ. ಆದರೆ ಅದನ್ನು ಸೇವನೆ ಮಾಡುತ್ತಿದ್ದ ಯುವಕರು ಅವಳನ್ನು ಪೀಡಿಸಿರಬಹುದು. ಊರು ಬಿಟ್ಟು ಹೋಗದಂತೆ ಒತ್ತಡ ಹಾಕಿರಬಹುದು. ಅವಳ ಬಾಳಿನೊಂದಿಗೆ ಆಟ ಆಡಲು ಒತ್ತಾಯ ಮಾಡಿರಬಹುದು. ಅವಳು ಊರು ಬಿಟ್ಟರೆ ಬದುಕನ್ನೇ ನಾಶ ಮಾಡುತ್ತೇವೆ ಎಂದು ಧಮ್ಕಿ ಹಾಕಿರಬಹುದು. ಊರು ಬಿಟ್ಟರೆ ಏನಾದರೂ ಫೋಟೋ, ವಿಡಿಯೋ ಲೀಕ್ ಮಾಡುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿರಬಹುದು. ಮನೆಯವರ ಭವಿಷ್ಯ ಹಾಳು ಮಾಡುತ್ತೇವೆ ಎಂದು ಹೆದರಿಸಿರಬಹುದು. ಹೀಗೆ ಹತ್ತು ಹಲವು ಆಯಾಮಗಳೊಂದಿಗೆ ಪ್ರಕರಣವನ್ನು ತನಿಖೆ ಮಾಡಬೇಕಾಗುತ್ತದೆ. ಕುಂಪಲದಲ್ಲಿ ಮತ್ತೊಂದು ಪ್ರೇಕ್ಷಾ ಪ್ರಕರಣ ಆಗಬಾರದು ಎಂದಾದರೆ ಈ ಬಗ್ಗೆ ಶಾಸಕರು, ಪೊಲೀಸರು ಸೂಕ್ತ ಎಚ್ಚರಿಕೆ ವಹಿಸಬೇಕು. ಮನೆಮಗಳನ್ನು ಕಳೆದುಕೊಂಡ ದು:ಖ ಆ ಕುಟುಂಬಕ್ಕೆ ಇದೆ. ಆ ನೋವು ಅವರಿಗೆ ಮಾತ್ರ ಗೊತ್ತು!!
Leave A Reply