ಇನ್ನು ಬೆಳಿಗ್ಗೆ ಓದಲು ಕುಳಿತರೆ ಪಕ್ಕದ ಮಸೀದಿಯ ಅಜಾನ್ ಕೇಳಲ್ಲ!!
ರಾಜ್ಯದ ವಕ್ಫ್ ಬೋರ್ಡ್ ಒಂದು ಸುತ್ತೋಲೆಯನ್ನು ಹೊರಡಿಸಿದೆ. ಅದರಲ್ಲಿ ಮಸೀದಿ ಹಾಗೂ ದರ್ಗಾದಲ್ಲಿ ಧ್ವನಿ ವರ್ಧಕಗಳನ್ನು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ತನಕ ಬಳಸುವಂತಿಲ್ಲ ಎಂದು ಹೇಳಲಾಗಿದೆ. ಈ ಮೂಲಕ ಮಸೀದಿಗಳ, ದರ್ಗಾಗಳ ಸುತ್ತಲೂ ಇರುವ ಅನ್ಯಧರ್ಮಿಯರ ನಿದ್ದೆಗೆ ಭಂಗ ಬರುವುದು ಈ ಮೂಲಕ ತಪ್ಪಲಿದೆ. ಇಲ್ಲದಿದ್ದರೆ ಬೆಳಿಗ್ಗೆ ಯಾವಾಗ ಇವರು ಲೌಡ್ ಸ್ಪೀಕರ್ ಆನ್ ಮಾಡುತ್ತಾರೆ ಎಂದು ಆತಂಕದಿಂದಲೇ ನಿದ್ದೆಗೆ ಶರಣಾಗಬೇಕಿತ್ತು. ಇತ್ತೀಚೆಗೆ ಈ ಬಗ್ಗೆ ತೆಲಂಗಾಣ ರಾಜ್ಯದ ವಿಶ್ವವಿದ್ಯಾನಿಲಯದ ಉಪಕುಲಪತಿಯೊಬ್ಬರು ಅಲ್ಲಿನ ಜಿಲ್ಲಾಧಿಕಾರಿಯವರಿಗೆ ಲಿಖಿತವಾಗಿ ಮನವಿ ಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳಲು ಕೋರಿದ್ದರು. ಹೀಗೆ ಹಿಂದೆ ಒಮ್ಮೆ ಸೋನು ನಿಗಮ್ ಅವರು ಕೂಡ ಈ ಬಗ್ಗೆ ತಮ್ಮ ಧ್ವನಿ ಎತ್ತಿದ್ದರು. ಅನೇಕ ಕಲಾವಿದರು ಕೂಡ ಅವರಿಗೆ ಬೆಂಬಲ ಮತ್ತು ಕೆಲವರು ವ್ಯಂಗ್ಯ ಕೂಡ ಮಾಡಿದ್ದರು. ಇನ್ನು ನೈಟ್ ಡ್ಯೂಟಿ ಮಾಡಿ ಬೆಳಿಗ್ಗಿನ ಜಾವಕ್ಕೆ ನಿದ್ದೆಗೆ ಜಾರುತ್ತಿದ್ದವರಿಗೆ ಇದು ದೊಡ್ಡ ರೀತಿಯಲ್ಲಿ ಕಿರಿಕಿರಿಯನ್ನು ಉಂಟು ಮಾಡುತ್ತಿತ್ತು.
ಕಳೆದ ಕೆಲವು ಸಮಯಗಳ ಹಿಂದೆ ಮಹಾರಾಷ್ಟ್ರದಲ್ಲಿ ಹುಡುಗಿಯೊಬ್ಬಳು ಪರೀಕ್ಷೆಗೆ ಓದಲು ಕುಳಿತಿರುವಾಗ ಈ ಧ್ವನಿವರ್ಧಕಗಳ ಶಬ್ದಮಾಲಿನ್ಯದಿಂದ ಕಿರಿಕಿರಿ ಅನುಭವಿಸಿದ್ದೇನೆ ಎಂದು ಆ ಮಸೀದಿಗೆ ಹೋಗಿ ತನ್ನ ತೊಂದರೆಯನ್ನು ಹೇಳಿದ್ದಳು. ಆ ಬಳಿಕ ಆ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲನ್ನು ಕೂಡ ಏರಿತ್ತು. ಆದರೆ ಪೊಲೀಸರಾಗಲಿ, ಯಾರಾದರಾಗಲಿ ಇದನ್ನು ನಿಲ್ಲಿಸಲು ಏನು ತಾನೆ ಧೈರ್ಯ ಮಾಡಿಯಾರು?
ವಕ್ಫ್ ಬೋರ್ಡ್ ಆದೇಶದಲ್ಲಿ ಅಜಾನ್ ಕೂಗುವುದನ್ನು ನಿಷೇಧ ಮಾಡಲು ಯಾರು ಹೇಳಿಲ್ಲ. ಆದರೆ ಆಜಾನ್ ನನ್ನು ಮಸೀದಿಯೊಳಗೆ ಮಾತ್ರ ಧ್ವನಿವರ್ಧಕಗಳಿಲ್ಲದೆ ಹೇಳಿ ಎಂದು ಇಲ್ಲಿನ ತನಕ ಇದ್ದ ಒತ್ತಾಯ. ಆದರೆ ಮುಸಲ್ಮಾನರಲ್ಲಿರುವ ಮೂಲಭೂತಿಗಳು ಇದನ್ನು ಒಪ್ಪಲು ಸಿದ್ಧರಿಲ್ಲ. ಯಾಕೆಂದರೆ ಮೊದಲನೇಯದಾಗಿ ಅವರಿಗೆ ಇದನ್ನು ಒಪ್ಪಿ ಲೌಡ್ ಸ್ಪೀಕರ್ ತೆಗೆದುಹಾಕಿದರೆ ತಾವು ಮೋದಿಗೆ ಶಿರಬಾಗಿದಂತೆ ಎಂದು ಅನಿಸಿಬಿಟ್ಟಿದೆ. ಆರೇಳು ವರ್ಷಗಳ ಹಿಂದೆ ಇಲ್ಲದ್ದು ಮೋದಿ ಬಂದ ಮೇಲೆ ಯಾಕೆ ಈ ಬಗ್ಗೆ ಹಿಂದೂಗಳ ಅಸಮಾಧಾನ ಎಂದು ಅವರು ಮಾತನಾಡಿಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮೋದಿ ಹೇಳಿದಂತೆ ಕೇಳಲು ಸಾಧ್ಯವೇ ಇಲ್ಲ ಎಂದು ಅವರು ನಿರ್ಣಯಿಸಿದ್ದಾರೆ. ಆದರೆ ಇವರ ಲೌಡ್ ಸ್ಪೀಕರಿನಿಂದ ಕಿರಿಕಿರಿಗೊಳಗಾದ ಹಿಂದೂಗಳು ಹೇಳುವಂತೆ ನಮಗೆ 2014 ರ ಮೊದಲು ಇದೇ ಕಿರಿಕಿರಿ ಆಗುತ್ತಿತ್ತು. ಆದರೆ ಆಗ ಹೇಳಲು ಹೋದರೆ ಇವರು ಕ್ಷಣ ಮಾತ್ರದಲ್ಲಿ ಗುಂಪುಗೂಡಿ ನಮ್ಮ ಮೇಲೆ ಏನಾದರೂ ಮಾಡಬಹುದು ಎನ್ನುವ ಹೆದರಿಕೆ ಇರುತ್ತಿತ್ತು ಎನ್ನುತ್ತಾರೆ. ಈಗ ಅಲ್ಲಲ್ಲಿ ಒಂದಿಷ್ಟು ಜನ ಧೈರ್ಯ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ “ಮೋದಿ”. ಇನ್ನು 1400 ವರ್ಷಗಳ ಹಿಂದಿನಿಂದಲೂ ನಾವು ಅಜಾನ್ ಕೂಗುತ್ತಿದ್ದೇವೆ ಎಂದು ಹೇಳುವ ಮುಸಲ್ಮಾನರು ಆವತ್ತು ಇಲ್ಲದ ಲೌಡ್ ಸ್ಪೀಕರ್ ಇವತ್ತು ಯಾಕೆ ಎಂದರೆ ಆವತ್ತು ಕಾರು, ಬೈಕು ಏನೂ ಇರಲಿಲ್ಲ. ಇವತ್ತು ಎಲ್ಲಾ ಇದೆ, ಹಾಗಂತ ನಾವು ಬಳಸುವುದಿಲ್ಲವೇ ಎನ್ನುತ್ತಾರೆ. ಆದರೆ ಧಾರ್ಮಿಕ ವಿಧಿವಿಧಾನಕ್ಕೂ, ದೇಶದ ಅಭಿವೃದ್ಧಿಗೂ ವ್ಯತ್ಯಾಸವಿದೆ ಎನ್ನುವುದನ್ನು ಇವರು ಮರೆತುಬಿಡುತ್ತಾರೆ. ಇಲ್ಲಿ ಅಜಾನ್ ಕೂಗುವುದರ ಹಿಂದಿನ ವಿಷಯ ಏನೆಂದರೆ ಬೇಗ ಎದ್ದು, ಅಲ್ಲಾನ ಪ್ರಾರ್ಥನೆಯಾದ ನಮಾಜಿಗೆ ಬನ್ನಿ ಎನ್ನುವುದೇ ಆಗಿದ್ದರೆ ಹಿಂದಿನ ಕಾಲದಲ್ಲಿ ಬೊಬ್ಬೆ ಹೊಡೆದು ಎಲ್ಲರನ್ನು ಎಬ್ಬಿಸಬೇಕಿತ್ತು.
ಈಗ ಅತ್ಯಾಧುನಿಕ ತಂತ್ರಜ್ಞಾನ ಇದೆ. ನಮಾಜಿಗೆ ಬರುವವರಿಗೆ ಮೊಬೈಲಿನಲ್ಲಿ ಅಲಾರಂ ಇಡುವಂತೆ ಹೇಳಿದರೆ ಅವರೇ ಎದ್ದು ಬರಲ್ವಾ, ಅದಕ್ಕೆ ಅಕ್ಕಪಕ್ಕದಲ್ಲಿರುವ ಹಿಂದೂ ಮನೆಗಳಲ್ಲಿ ಮಲಗಿರುವವರ ನಿದ್ದೆ ಕೂಡ ಹಾಳು ಮಾಡಬೇಕಾ ಎನ್ನುವ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ನಾವು ಹಿಂದೂಗಳ ಭಜನೆಯ ಶಬ್ದ ಕೇಳಿಸುವಾಗ ವಿರೋಧಿಸಿದ್ದೇವಾ ಎಂದು ಕೇಳುವ ಇವರಿಗೆ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯ ತನಕ ಲೌಡ್ ಸ್ಪೀಕರ್ ಇಟ್ಟು ಕಿಲೋಮೀಟರ್ ಉದ್ದದ ತನಕ ಹಿಂದೂಗಳು ಯಾರಿಗೂ ನಿದ್ರಾಭಂಗ ಮಾಡುವುದಿಲ್ಲ ಎಂದು ಗೊತ್ತಿಲ್ಲ. ಇನ್ನು ಅಪರೂಪಕ್ಕೆ ಜಾತ್ರೆ, ಏಕಾಹ ಭಜನೆ ಇದ್ದರೆ ಅದಕ್ಕೆ ಇಲಾಖೆಗಳಿಂದ ಅನುಮತಿ ಸಿಕ್ಕಿದರೆ ಮಾತ್ರ ಲೌಡ್ ಸ್ಪೀಕರ್ ಇಡಬಹುದು. ಆದರೆ ಮಸೀದಿಯಲ್ಲಿ ಇವರು ನಿತ್ಯ ಇಡುವ ಲೌಡ್ ಸ್ಪೀಕರ್ ಗೆ ಇವರು ಯಾರ ಅನುಮತಿ ಕೂಡ ಕೇಳುವುದಿಲ್ಲ. ಕೇಳಿದರೆ ಯಾವ ಇಲಾಖೆ ಕೂಡ ಕೊಡಲು ಆಗುವುದಿಲ್ಲ. ಯಾಕೆಂದರೆ ಮಾನ್ಯ ಸರ್ವೋಚ್ಚ ನ್ಯಾಯಾಲಯವೇ ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಇಡುವುದಕ್ಕೆ ನಿರ್ಭಂದ ಹೇರಿದೆ. ಆದ್ದರಿಂದ ಅಲ್ಲಿ ನೋ ಪರ್ಮಿಷನ್. ಇನ್ನು ನಮ್ಮದು ಹೆಚ್ಚೆಂದರೆ ಮೂರು ನಿಮಿಷ. ಹಿಂದಿನ ಕಾಲದವರು ಗಡಿಯಾರ ಇಲ್ಲದೇ ಇದ್ದಾಗ ಅಜಾನ್ ಕೇಳಿಯೇ ಸಮಯ ಎಷ್ಟು ಎಂದು ನಿರ್ಧರಿಸುತ್ತಿದ್ದರು ಎಂದು ಮುಸ್ಲಿಮರು ಹೇಳಬಹುದು. ಆದರೆ ವಿಷಯ ಏನೆಂದರೆ ಹಿಂದಿನ ಕಾಲದಲ್ಲಿ ಗಡಿಯಾರ ಇರಲಿಲ್ಲ. ಅದಕ್ಕೆ ಅಜಾನ್ ಗೆ ಅವರು ಅವಲಂಬಿತರಾಗಿರಬಹುದು. ಇನ್ನು ಆಗಿನ ಕಾಲದಲ್ಲಿ ಈ ನೈಟ್ ಡ್ಯೂಟಿ, ಕಾಲ್ ಸೆಂಟರ್, ಮಕ್ಕಳಿಗೆ ಪರೀಕ್ಷೆಗಳ ಒತ್ತಡ, ಉನ್ನತ ಹುದ್ದೆಯಲ್ಲಿರುವವರಿಗೆ ಬೇರೆ ದೇಶಗಳ ಪ್ರತಿನಿಧಿಗಳೊಂದಿಗೆ ಇಂಟರ್ ನೆಟ್ ಮೂಲಕ ಬ್ಯುಜಿನೆಸ್ ಮೀಟಿಂಗ್, ನೈಟ್ ಶೋ ಹೀಗೆ ಯಾವುದೂ ಇರಲಿಲ್ಲ. ರಾತ್ರಿ ಎಂಟು ಆಗುತ್ತಿದ್ದಂತೆ ಚಿಮಿಣಿ ಬೆಳಕಿನಲ್ಲಿ ಊಟ, ಒಂಭತ್ತು ಗಂಟೆಗೆ ನಿದ್ರೆ, ಬೆಳಿಗ್ಗೆ 5 ಗಂಟೆಗೆ ಗದ್ದೆಗೆ ಹೋಗುವುದು ಇತ್ತು. ಆಗ ಅಜಾನ್ ಲೌಡ್ ಸ್ಪೀಕರ್ ನಲ್ಲಿ ಕೂಗಿದರೆ ವಿರೋಧ ಇರಲಿಲ್ಲ. ಈಗ ಹಾಗಲ್ಲವಲ್ಲ. ಆದರೆ ಹಳೆ ಮರಕ್ಕೆ ನೇತಾಡುವ ಮನಸ್ಸಿನವರು ಹಟ ಬಿಡಬೇಕು!
Leave A Reply