ಬಟ್ಟೆ, ಚಪ್ಪಲಿ ಅಂಗಡಿಗಳ ತಪ್ಪೇನು ಹೇಳಿ, ಡಿಸಿಯವರೇ?
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಸೋಮವಾರ ಬಟ್ಟೆ ಮತ್ತು ಚಪ್ಪಲಿ ಸಹಿತ ಕೆಲವು ವ್ಯಾಪಾರಿಗಳು ದಿಢೀರನೆ ಪ್ರತಿಭಟನೆ ನಡೆಸಿದ್ದಾರೆ. ಅವರು ಪ್ರತಿಭಟನೆ ಮಾಡುವುದು ಸಹಜ. ಇಂತಹ ಒಂದು ನಿರೀಕ್ಷೆ ಸಹಜವಾಗಿ ಇತ್ತು. ಯಾಕೆಂದರೆ ಜಿಲ್ಲಾಡಳಿತ ಅಥವಾ ಅದಕ್ಕೆ ಸೂಕ್ತ ನಿರ್ದೇಶನಗಳನ್ನು ಕೊಡುತ್ತಿರುವ ರಾಜ್ಯ ಸರಕಾರ ನಿರಂತರವಾಗಿ ವ್ಯಾಪಾರಿಗಳಲ್ಲಿ ಭೇದಭಾವ ಮಾಡುತ್ತಿರುವಂತೆ ತೋರುತ್ತಿದ್ದ ಕಾರಣ ಒಂದು ವರ್ಗದ ವ್ಯಾಪಾರಿಗಳು ಅನಿವಾರ್ಯವಾಗಿ ಪ್ರತಿಭಟನೆಗೆ ಇಳಿದಿದ್ದಾರೆ. ಯಾಕೆಂದರೆ ಪ್ರತಿ ಬಾರಿ ಲಾಕ್ ಡೌನ್ ವಿಸ್ತರಿಸುವಾಗ ಜಿಲ್ಲಾಧಿಕಾರಿ ಅಥವಾ ಉಸ್ತುವಾರಿ ಸಚಿವರ ಬಾಯಿಂದ ಬರುತ್ತಿದ್ದದ್ದು ಒಂದೇ ಮಾತು “ಅಗತ್ಯ ವಸ್ತುಗಳ ಖರೀದಿಯನ್ನು ಬಿಟ್ಟು ಬೇರೆ ಅಂಗಡಿಗಳನ್ನು ತೆರೆಯುವಂತಿಲ್ಲ” ಇಲ್ಲಿ ಅಗತ್ಯ ವಸ್ತುಗಳು ಎಂದರೆ ಎಲ್ಲರಿಗೂ ಗೊತ್ತಿರುವಂತೆ ಹಾಲು, ತರಕಾರಿ, ಜಿನಸಿ ಮತ್ತು ಮಾಂಸ, ಮೀನು. ಈ ಅಂಗಡಿಗಳಿಗೆ ಹೋಗುತ್ತಿದ್ದೇವೆ ಎನ್ನುವ ಒಂದೇ ಒಂದು ಸಬೂಬು ಹೇಳಿ ಪ್ರತಿ ಮನೆಯ ಒಂದಕ್ಕಿಂತ ಹೆಚ್ಚು ಸದಸ್ಯರು ಹೊರಗೆ ಸುತ್ತಾಡುತ್ತಿದ್ದರು. ಅದು ಈಗಲೂ ಜಾರಿಯಲ್ಲಿದೆ. ನೀವು ಬೇಕಾದರೆ ಬೆಳಿಗ್ಗೆ 10 ಗಂಟೆಗೆ ಮಂಗಳೂರನ್ನು ನೋಡಿ. ಬಸ್ಸುಗಳು ಓಡಾಡುತ್ತಿಲ್ಲ ಎನ್ನುವುದು ಬಿಟ್ಟರೆ ಪ್ರತಿ ಮನೆಯ ಒಂದಕ್ಕಿಂತ ಹೆಚ್ಚು ವಾಹನಗಳು ರಸ್ತೆಯಲ್ಲಿ ಸುತ್ತಾಡುತ್ತಿವೆ.
ಈಗ ನಿಜವಾಗಿ ರಸ್ತೆಯಲ್ಲಿ ಕಾಣಬೇಕಾದವರು ಕೊರೊನಾ ವಾರಿಯರ್ಸ್ ಗಳು ಮಾತ್ರ. ಉಳಿದವರಿಗೆ ಏನು ಕೆಲಸ. ಇನ್ನು ಎಲ್ಲರೂ ಅಗತ್ಯ ವಸ್ತುಗಳ ಹೆಸರಿನಲ್ಲಿಯೇ ಹೊರಗೆ ಬರುತ್ತಿರುವುದರಿಂದ ಇವತ್ತೇ ಎಲ್ಲವನ್ನು ಖರೀದಿಸುತ್ತಿಲ್ಲ. ನಾಳೆ ಹೊರಗೆ ಬಂದು ಸುತ್ತಾಡಲು ಕಾರಣ ಬೇಕಲ್ಲ. ಆದ್ದರಿಂದ ಎಲ್ಲರೂ ಆವತ್ತಿಗೆ ಮಾತ್ರ ಬೇಕಾದ ವಸ್ತುಗಳ ಖರೀದಿಯನ್ನು ಮಾಡುತ್ತಿದ್ದಾರೆ. ಇದರಿಂದಲೇ ಅಗತ್ಯ ವಸ್ತುಗಳ ಅಂಗಡಿಯಲ್ಲಿ ರಶ್ ಆಗುತ್ತಿದೆ. ಇನ್ನು ಬಟ್ಟೆ ಅಂಗಡಿಯಿಂದ ಹಿಡಿದು ಜ್ಯುವೆಲ್ಲರ್ಸ್, ಸ್ಟೇಶನರಿ, ಫೋಟೋ ಸ್ಟುಡಿಯೋ, ಪಾತ್ರೆಯ ಅಂಗಡಿಯಿಂದ ಹಿಡಿದು ಜೆರಾಕ್ಸ್ ಅಂಗಡಿಯ ತನಕ ಎಲ್ಲವೂ ಬಂದ್. ಒಂದು ವೇಳೆ ನಾವು ಇವುಗಳನ್ನು ತೆರೆದಿಟ್ಟರೆ ಸಮಸ್ಯೆ ಏನು? ಒಂದು ದಿನ ಟೋಮೆಟೋ, ಒಂದು ದಿನ ನೀರುಳ್ಳಿ, ಒಂದು ದಿನ ಬಟಾಟೆ ಎಂದು ಜನ ಹೊರಗೆ ಬರುತ್ತಿರುವಂತೆ ಬಟ್ಟೆ, ಚಪ್ಪಲಿ, ಜ್ಯುವೆಲ್ಲರ್ಸ್ ಗಳಿಗೆ ಹೋಗಲು ಇದೆ ಎಂದು ನಿತ್ಯ ಕಾರಣ ಹೇಳಲು ಆಗುವುದಿಲ್ಲ. ಯಾಕೆಂದರೆ ನಿತ್ಯ ಇಂತಹ ಅಂಗಡಿಗಳಲ್ಲಿ ಕೆಲಸವಿರುವುದಿಲ್ಲ. ಹಾಗಂತ ಇದ್ಯಾವುದೂ ಬೇಡವೇ. ಬಟ್ಟೆ ಅಂಗಡಿ ತೆರೆಯದೇ ಎರಡು ತಿಂಗಳ ಮೇಲಾಯಿತು. ಲಾಕ್ ಡೌನ್ ಇಷ್ಟು ದಿನ ಆಗುತ್ತೆ ಎಂದು ಅಂದಾಜಿಲ್ಲದ ಹಲವರಿಗೆ ತಮ್ಮ ಅಗತ್ಯ ಒಳಉಡುಪುಗಳನ್ನು ಖರೀದಿಸಬೇಕಾದ ಅನಿವಾರ್ಯತೆ ಈಗ ಬಂದಿರಬಹುದು. ಇನ್ನು ಮಳೆಗಾಲ ಬೇರೆ. ಜಿಲ್ಲಾಡಳಿತ ಲಾಕ್ ಡೌನ್ ಮಾಡಲು ಆದೇಶ ನೀಡಿದಾಗ ಬಿರುಬೇಸಿಗೆ. ಒಗೆದು ಹಾಕಿದ ಬಟ್ಟೆಗಳು ತಕ್ಷಣ ಒಣಗುತ್ತಿದ್ದವು. ಈಗ ಧಾರಾಕಾರ ಮಳೆ. ಒಳ ಉಡುಪುಗಳು ಸುಲಭವಾಗಿ ಒಣಗಲ್ಲ. ಹೊಸತನ್ನು ತರಲು ಜಿಲ್ಲಾಡಳಿತ ಬಿಡುತ್ತಿಲ್ಲ. ಹಾಕದೇ ಮನೆಯೊಳಗೆ ಓಡಾಡುವಂತೆ ಮಾಡಿದ ಶ್ರೇಯಸ್ಸು ಜಿಲ್ಲಾಧಿಕಾರಿಯವರದ್ದು. ಒಂದು ವೇಳೆ ಬಟ್ಟೆ ಅಂಗಡಿಯವರಿಗೂ ಬೆಳಿಗ್ಗೆ 7 ರಿಂದ 1 ಗಂಟೆಯ ತನಕ ತೆರೆಯಲು ಅವಕಾಶ ಮಾಡಿಕೊಟ್ಟರೆ ಏನು ಮುಳುಗುತ್ತಿತ್ತು. ಬಟ್ಟೆ ಅಂಗಡಿಗೆ ಹೋದರೆ ಜನರು ಅದು ಇದು ಮುಟ್ಟಿ ಕೊರೊನಾ ಹರಡಿಸುತ್ತಾರೆ ಎಂದು ಕೆಲವರ ವಾದ. ಸ್ವಾಮಿ, ಯಾರು ಕೂಡ ಈಗ ಗಂಟೆಗಟ್ಟಲೆ ಶಾಪಿಂಗ್ ಮಾಡುವ ಮೂಡಿನಲ್ಲಿ ಇಲ್ಲ. ಬರುವುದು ಅಗತ್ಯ ಬಟ್ಟೆಗಳನ್ನು ಖರೀದಿಸುವುದು ರೈಟ್ ಹೇಳುವುದು. ಬೇರೆ ಎಲ್ಲ ಅಂಗಡಿಗಳಿಗೂ ಇದೇ ಸೂತ್ರ ಅನ್ವಯವಾಗುತ್ತದೆ. ಅಷ್ಟಿದ್ದರೆ ಜನ ತರಕಾರಿ ಖರೀದಿಸಲು ಹೋಗುತ್ತಾರಲ್ಲ. ಅಲ್ಲಿ ಎಲ್ಲವನ್ನು ಕೈಯಿಂದ ಎತ್ತಿ ನೋಡಿ ಬೇಡಾ ಎಂದರೆ ಅಲ್ಲಿಯೇ ಬಿಟ್ಟು ಚೆನ್ನಾಗಿರುವುದನ್ನು ಮಾತ್ರ ತೆಗೆಯಲ್ವಾ? ಆಗ ಕೊರೊನಾ ಹರಡಲ್ವಾ? ಜಿಲ್ಲಾಡಳಿತ ಕೆಲವೇ ಜನರನ್ನು ಸೇರಿಸಿ ಶುಭ ಸಮಾರಂಭ ಮಾಡಿ ಎಂದು ಅವಕಾಶ ನೀಡಿದೆ. ಆದರೆ ಸ್ಟುಡಿಯೋ ತೆರೆಯಬಾರದು ಎಂದು ಹೇಳಿದೆ. ಇಸ್ತ್ರೀ ಅಂಗಡಿಯವರು ಏನು ತಪ್ಪು ಮಾಡಿದ್ದಾರೆ, ಅಲ್ಲಿ ಯಾವ ರಶ್ ಆಗುತ್ತದೆ. ನಾನು ಹೇಳುವುದು, ಸಿನೆಮಾ ಥಿಯೇಟರ್ ಗಳು ತೆರೆಯಲೇಬೇಕು ಎಂದು ನಾವ್ಯಾರು ಒತ್ತಾಯ ಮಾಡುವುದಿಲ್ಲ. ಆದರೆ ಪುಸ್ತಕದಂಗಡಿಗಳನ್ನು ತೆರೆಯಬಹುದಲ್ಲ. ಇದೆಲ್ಲವನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕುಳಿತು ಯೋಚಿಸಬೇಕು. ಯಾವುದನ್ನು ತೆರೆದರೆ ತೊಂದರೆ, ಯಾವುದು ಇಲ್ಲ ಎಂದು ಗೊತ್ತಿಲ್ಲದವರು ಆಡಳಿತ ಮಾಡುವುದೇ ಅಸಂಬದ್ಧ. ಡಿಸಿಯವರೇ, ನೀವು 24 ಗಂಟೆ ಆನ್ ಲೈನ್ ನಲ್ಲಿ ಆಹಾರ ತರಿಸುವ ವ್ಯವಸ್ಥೆಯನ್ನು ಮಾಡಲು ಅನುಮತಿ ನೀಡುತ್ತೀರಿ. ಆಹಾರ ತಂದುಕೊಡುವವರಿಗೆ ಕೊರೊನಾ ಇದೆಯೋ, ಇಲ್ವೋ ಗೊತ್ತಿಲ್ಲ. ಆದರೂ ನಾವು ತರಿಸುತ್ತೇವೆ. ಅಲ್ಲಿ ತಯಾರಿಸುವವರಿಗೆ ಕೊರೊನಾ ಒಳಗಿದೆಯೋ ಇಲ್ವೋ ತಿನ್ನುವ ನಮಗೆ ಗೊತ್ತಿಲ್ಲ. ಆದರೂ ಈ ಬಗ್ಗೆ ಜಿಲ್ಲಾಡಳಿತಕ್ಕೆ ಎನೂ ಬಿದ್ದು ಹೋಗಿಲ್ಲ. ಅದೇ ಬಟ್ಟೆ ಮಾರುವ ಅಂಗಡಿಯವರು ಅಂಗಡಿ ತೆರೆದ ತಕ್ಷಣ ಕೊರೊನಾ ಓಡೋಡಿ ಬರುತ್ತದೆ. ಈಗಲೂ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ವ್ಯಾಪಾರಿಗಳು ದಂಗೆ ಏಳುವ ಸಾಧ್ಯತೆ ಇದೆ. ಬೀದಿಬದಿ ವ್ಯಾಪಾರಿಗಳಿಗೆ ಬೆಳಿಗ್ಗೆ 7 ರಿಂದ 1 ಗಂಟೆಯ ತನಕ ವ್ಯಾಪಾರ ಮಾಡಬಹುದು. ಚೆನ್ನಾಗಿ ಸಂಪಾದಿಸಬಹುದು. ಅವರಿಗೆ ವ್ಯಾಪಾರದಲ್ಲಿ ಲಾಭ ಮಾತ್ರವಲ್ಲ ಸರಕಾರದಿಂದ ಆರ್ಥಿಕ ಪ್ಯಾಕೇಜು ಕೂಡ ಇದೆ. ಇನ್ನು ಕೈಗಾರಿಕೆಗಳು ಒಪನ್, ನಿರ್ಮಾಣ ಕಾಮಗಾರಿಗಳು ಒಪನ್, ಬಂದ್ ಕೇವಲ ಬಟ್ಟೆ, ಚಪ್ಪಲಿ ಇತ್ಯಾದಿ…!!
Leave A Reply