ಮಂಗಳೂರನ್ನು ಸ್ವಚ್ಚ ಇಡುವ ಬಗ್ಗೆ ನಿಮ್ಮ ಬಳಿ ಹೊಸ ಪ್ಲಾನ್ ಇದೆಯಾ??
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಾರ್ಡುಗಳನ್ನು ಸ್ವಚ್ಚ ಮಾಡುತ್ತೇವೆ, ಸುಂದರ ಮಾಡುತ್ತೇವೆ ಎಂದು ಆರೂವರೆ ವರ್ಷಗಳ ಹಿಂದೆ ಮಂಗಳೂರಿಗೆ ಕಾಲಿಟ್ಟ ಆಂಟೋನಿ ವೇಸ್ಟ್ ಮ್ಯಾನೇಜಿಮೆಂಟಿನವರು ತಿಂಗಳಿಗೆ ಎರಡು ಕೋಟಿ ರೂಪಾಯಿಗಳನ್ನು ದೋಚುತ್ತಾ ಪಾಲಿಕೆಯ ತಿಜೋರಿಯನ್ನು ಸ್ವಚ್ಚ ಮಾಡಿದರು. ಅನೇಕ ಕಾರ್ಪೋರೇಟರ್ಸ್, ಅಧಿಕಾರಿಗಳನ್ನು ಸುಂದರ ಮಾಡಿದರು. ಅದು ಬಿಟ್ಟರೆ ಅವರಿಂದ ಮಂಗಳೂರು ಸ್ವಚ್ಚ, ಸುಂದರ ಆದದ್ದು ಅಷ್ಟರಲ್ಲಿಯೇ ಇದೆ. ಕಾಂಗ್ರೆಸ್ ಪಾಲಿಕೆಯಲ್ಲಿ ಆಡಳಿತ ಮಾಡುವಾಗಲು ಈ ಆಂಟೋನಿಯವರನ್ನು ಬಗ್ಗಿಸಲು ಆಗಲಿಲ್ಲ. ಭಾರತೀಯ ಜನತಾ ಪಾರ್ಟಿಯ ಆಳ್ವಿಕೆ ಈಗ ಇರುವಾಗಲು ಇವರೇ ಬಗ್ಗಿದ್ದು ಬಿಟ್ಟರೆ ಆಂಟೋನಿಯನ್ನು ಅಲುಗಾಡಿಸಲು ಆಗಲಿಲ್ಲ. ಹಿಂದೆ ಕೆಎಎಸ್ ಶ್ರೇಣಿಯ ಅಧಿಕಾರಿ ಪಾಲಿಕೆಯಲ್ಲಿ ಆಯುಕ್ತರಾಗಿದ್ದಾಗಲೂ ಆಂಟೋನಿಯದ್ದೇ ನಡೆಯುತ್ತಿತ್ತು. ಈಗ ಐಎಎಸ್ ಕಮೀಷನರ್ ಬಂದ ಬಳಿಕವೂ ಇವರಿಂದ ಚಿಕ್ಕ ಚಾಟಿ ಏಟು ಬಿಡಿ, ಒಂದು ಅಡಿಕೋಲಿನಿಂದಲೂ ಹೆದರಿಸಲು ಆಗಲಿಲ್ಲ. ಆದ್ದರಿಂದ ಆಂಟೋನಿ ವೇಸ್ಟ್ ಆಡಿದ್ದೇ ಆಟ, ತೆಗೆದದ್ದೇ ಕಸ ಎನ್ನುವಂತಹ ಪರಿಸ್ಥಿತಿ ಇದೆ. ಅವರ ಧೀಮಾಕು ಯಾವ ಮಟ್ಟದಲ್ಲಿ ಇದೆ ಎಂದರೆ ಅದೇ ಇವತ್ತಿನ ಸ್ಪೆಶಲ್ ಕಥೆ.
ಈಗ ಸಿಸ್ಟಮ್ ಹೇಗೆ ನಡೆಯುತ್ತಿದೆ ಎಂದರೆ ವಾರಕ್ಕೆ ಆರು ದಿನ ವೇಟ್ ಅಂದರೆ ಹಸಿ ತ್ಯಾಜ್ಯವನ್ನು ಇವರು ನಿಮ್ಮ ಮನೆ, ವ್ಯವಹಾರಿಕ ತಾಣದಿಂದ ಸಂಗ್ರಹಿಸಿಕೊಂಡು ಹೋಗಬೇಕು. ವಾರದಲ್ಲಿ ಒಂದು ದಿನ ಗೊಂದಲ ಬೇಡಾ ಎನ್ನುವ ಕಾರಣಕ್ಕೆ ಶುಕ್ರವಾರ ಫಿಕ್ಸ್ ಮಾಡಿ ಆವತ್ತು ಒಣ ತ್ಯಾಜ್ಯವನ್ನು ಸಂಗ್ರಹಿಸುವ ಸಂಪ್ರದಾಯ ಶುರುವಾಗಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಬೋಳೂರು ವಾರ್ಡ್ ಬರುತ್ತದೆ. ಈ ವಾರ್ಡಿನ ಪರಿಸರದಲ್ಲಿ ಶುಕ್ರವಾರ ಒಣ ತ್ಯಾಜವನ್ನು ಸಂಗ್ರಹಿಸಲು ಆಂಟೋನಿ ವೇಸ್ಟಿನವರ ಗಾಡಿ ಬರುವುದೇ ಇಲ್ಲ. ಅವರು ಬರುವುದೇನಿದ್ದರೂ ಗುರುವಾರದ ನಂತರ ಸೀದಾ ಶನಿವಾರ. ಶನಿವಾರ ಬಂದವರೇ ಹಿಂದಿನ ದಿನ ಮನೆಯವರು ಸಂಗ್ರಹಿಸಿಟ್ಟ ಒಣ ಮತ್ತು ಆ ದಿನ ಬೆಳಿಗ್ಗೆ ತಂದಿಟ್ಟ ಹಸಿ ತ್ಯಾಜ್ಯವನ್ನು ಮಿಕ್ಸ್ ಮಾಡಿ ಗಾಡಿಯಲ್ಲಿ ತುಂಬಿಸಿಕೊಂಡು ಹೋಗುತ್ತಾರೆ. ಇದು ಶುದ್ಧ ತಪ್ಪು. ನಿತ್ಯ ಜನಸಾಮಾನ್ಯರು ಒಣ ಮತ್ತು ಹಸಿ ಎರಡನ್ನು ಮಿಕ್ಸ್ ಮಾಡಿ ಕೊಟ್ಟರೆ ಸಂಸ್ಕೃರಣೆಯಲ್ಲಿ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಆರು ದಿನ ಹಸಿ ಕೊಡಿ, ಒಂದು ದಿನ ಒಣ ಕೊಡಿ ಎನ್ನುವ ನಿಯಮ ಜಾರಿಗೆ ತರಲಾಗಿದೆ. ಒಂದು ದಿನ ಒಣ ಯಾಕೆಂದರೆ ಒಣ ವಾಸನೆ ಹೊಮ್ಮಿಸುವುದಿಲ್ಲ. ಹಸಿ ತ್ಯಾಜ್ಯವನ್ನು ದಿನಗಟ್ಟಲೆ ಇಡಲು ಆಗುವುದಿಲ್ಲ. ಆದ್ದರಿಂದ ಈ ಪದ್ಧತಿ ಇದೆ. ಆದರೆ ಇವರು ಶುಕ್ರವಾರ ಬರದೇ ಸೀದಾ ಶನಿವಾರ ಬಂದು ಎರಡನ್ನು ಮಿಶ್ರಣ ಮಾಡಿ ತೆಗೆದುಕೊಂಡು ಹೋದರೆ ಇದರಿಂದ ಉತ್ತಮ ಉದ್ದೇಶವೇ ವಿಫಲವಾಗುತ್ತದೆ. ಇವರು ಹೀಗೆ ಮಾಡುವುದನ್ನು ಇತ್ತೀಚೆಗೆ ಬೋಳೂರಿನ ಯುವಕರು ಗಾಡಿ ಅಡ್ಡ ಹಾಕಿ ಪ್ರಶ್ನಿಸಿದ್ದಾರೆ. ನೀವು ಹೀಗೆ ಮಾಡುವುದು ಸರಿಯಲ್ಲ ಎಂದಿದ್ದಾರೆ. ಹೀಗೆ ಮಾಡಿದರೆ ಪಾಲಿಕೆಗೆ ದೂರು ಕೊಡಬೇಕಾಗುತ್ತದೆ ಎಂದಿದ್ದಾರೆ. ಅದಕ್ಕೆ ಗಾಡಿಯಲ್ಲಿದ್ದವರು ಏನು ಹೇಳಿದರು, ಗೊತ್ತಾ? “ನೀವು ಹೆಚ್ಚು ಮಾತನಾಡಿದರೆ ಮುಂದಿನ ವಾರದಿಂದ ಶುಕ್ರವಾರ, ಶನಿವಾರ ಎರಡೂ ದಿನ ಬರುವುದಿಲ್ಲ”.
ನಂತರ ಈ ಯುವಕರು ಪಾಲಿಕೆಯಲ್ಲಿ ಸಂಬಂಧಪಟ್ಟವರಿಗೆ ದೂರು ನೀಡಿದ್ದಾರೆ. ಆದರೆ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.
ಯಾಕೆಂದರೆ ಆಂಟೋನಿ ವೇಸ್ಟ್ ವಿಚಾರದಲ್ಲಿ ಪಾಲಿಕೆ ಗಾಂಧೀಜಿಯವರ ಮೂರು ಮಂಗಗಳಂತೆ ವರ್ತಿಸುತ್ತದೆ. ಆಂಟೋನಿ ವೇಸ್ಟಿನವರ ವಿಷಯ ಕೇಳುವುದಿಲ್ಲ, ಮಾತನಾಡುವುದಿಲ್ಲ, ನೋಡುವುದಿಲ್ಲ ಎನ್ನುವ ಧೋರಣೆ. ಪರಿಸ್ಥಿತಿ ಹೀಗೆ ಇರುವಾಗಲೇ ಮುಂದಿನ ಡಿಸೆಂಬರ್ ಮುಗಿಯುವಷ್ಟರಲ್ಲಿ ಆಂಟೋನಿಯವರ ಏಳು ವರ್ಷಗಳ ಗುತ್ತಿಗೆ ಅವಧಿ ಕೂಡ ಮುಗಿಯುತ್ತದೆ. ನಂತರ ಇವರ ಗುತ್ತಿಗೆಯನ್ನು ನವೀಕರಣ ಮಾಡಿದರೆ ಪಾಲಿಕೆಯ ಆಡಳಿತ ಪಕ್ಷ ಬಿಜೆಪಿಯನ್ನು ಇಲ್ಲಿನ ಜನ ಈ ಜನ್ಮದಲ್ಲಿ ಕ್ಷಮಿಸುವುದಿಲ್ಲ. ಆದ್ದರಿಂದ ಹಿಂದಿನ ಏಳು ವರ್ಷಗಳ ಮೊದಲಿನ ತ್ಯಾಜ್ಯ ಸಂಗ್ರಹ ಗುತ್ತಿಗೆದಾರರಿಗೆ ಮತ್ತೆ ಮಂಗಳೂರಿನ ಸ್ವಚ್ಚತೆಯನ್ನು ಒಪ್ಪಿಸುವ ಚಿಂತನೆ ಶುರುವಾಗಿದೆ. ಆದರೆ ಅವರಿಗೆ ಕೊಟ್ಟರೆ ಅದು ಬೆಂಕಿಯಿಂದ ಬಾಣಲೆಗೆ ಬಿದ್ದಂತೆ. ಅದರೊಂದಿಗೆ ಕೇಂದ್ರ ಸರಕಾರದ ನಿಯಮಾವಳಿಗಳ ಪ್ರಕಾರ ತ್ಯಾಜ್ಯ ಸಂಗ್ರಹಿಸುವ ಗುತ್ತಿಗೆದಾರರ ಬಗ್ಗೆ ಅನೇಕ ಮಾನದಂಡಗಳಿವೆ. ಅದನ್ನು ಈ ಖಾಸಗಿ ಗುತ್ತಿಗೆದಾರರು ಪೂರೈಸಲು ಸಾಧ್ಯವಿಲ್ಲ. ಹಾಗಾದರೆ ಪಾಲಿಕೆ ಏನು ಮಾಡಬಹುದು. ಮಂಗಳೂರು ಸ್ವಚ್ಚ, ಸುಂದರವಾಗಿಯೂ ಇರಬೇಕು. ತಿಂಗಳಿಗೆ ಎರಡು ಕೋಟಿ ಕೊಡುವುದು ಸಾಕಷ್ಟು ಉಳಿಯಬೇಕು. ಭ್ರಷ್ಟಾಚಾರ ನುಸುಳದಂತೆ ಜನರ ತೆರಿಗೆ ಹಣ ಯೋಗ್ಯವಾಗಿ ಖರ್ಚಾಗಬೇಕು. ಈ ಬಗ್ಗೆ ಪಾಲಿಕೆಯ ಪ್ಲ್ಯಾನ್ ಏನು? ಅದನ್ನು ಮುಂದಿನ ಜಾಗೃತ ಅಂಕಣದಲ್ಲಿ ಹೇಳುತ್ತೇನೆ. ನಿಮ್ಮ ಬಳಿಯೂ ಒಳ್ಳೆಯ ಯೋಚನೆ ಇದ್ದರೆ ತಡ ಯಾಕೆ, ಈ ಕಮೆಂಟ್ ಬ್ಲಾಕಿನಲ್ಲಿ ಬರೆಯಿರಿ. ನಿಮ್ಮ ಐಡಿಯಾ ಉತ್ತಮ ಇದ್ದರೆ ಅದನ್ನು ಪಾಲಿಕೆ ಸ್ವೀಕರಿಸಲೂಬಹುದು. ಏನಂತಿರಾ!
Leave A Reply