• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರಿನ ಟ್ರಾಫಿಕ್ ಜಾಮ್ ಸರಿಮಾಡುವ ಆಸಕ್ತಿ ಇದ್ದವರು ಮುಂದೆ ಬನ್ನಿ!

Hanumantha Kamath Posted On November 3, 2021


  • Share On Facebook
  • Tweet It

ಮಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತೆ ಮತ್ತೆ ಹೆಚ್ಚಾಗುತ್ತಿದೆ. ಟ್ರಾಫಿಕ್ ಪೊಲೀಸರ ಬಳಿ ಕೇಳಿದರೆ ಎಲ್ಲಾ ಕಡೆ ರಸ್ತೆ ಕಾಮಗಾರಿಗಳು ನಡೆಯುತ್ತಿದೆಯಲ್ಲ, ಅದಕ್ಕೆ ಈ ಸಮಸ್ಯೆ ಎಂದು ಹೇಳುತ್ತಾರೆ. ಹಾಗಂತ ರಸ್ತೆ ಕಾಮಗಾರಿಗಳನ್ನು ಮಾಡದೇ ಇರಲು ಆಗುತ್ತಾ? ಇಲ್ಲ, ಆಗುವುದಿಲ್ಲ. ಅಭಿವೃದ್ಧಿ ಕಾಮಗಾರಿಗಳು ಯಾವತ್ತೂ ನಡೆಯುತ್ತಲೇ ಇರಬೇಕು. ಅದಕ್ಕೆ ಅಂತ್ಯವಿರುವುದಿಲ್ಲ. ಅದು ಪೊಲೀಸ್ ಇಲಾಖೆಗೂ ಗೊತ್ತಿರಬೇಕು. ಹಾಗಾದರೆ ಇವರು ರಸ್ತೆ ಕಾಮಗಾರಿಗಳು ಮುಗಿಯುವುದನ್ನು ಕಾಯುತ್ತಿದ್ದಾರಾ ಅಥವಾ ಜನರಿಗೆ ಉಪದ್ರವ ಆಗಲಿ, ನಮಗೇನು ಎಂದು ಯೋಚಿಸುತ್ತಿದ್ದಾರಾ? ಅವರೇ ಹೇಳಬೇಕು. ಆದರೆ ಒಂದಂತೂ ನಿಜ. ಟ್ರಾಫಿಕ್ ಪೊಲೀಸರ ನಿರಾಸಕ್ತಿಯಿಂದ ಮಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿರುವುದು ಮಾತ್ರ ಪಕ್ಕಾ. ಹೆಲ್ಮೆಟ್ ಹಾಕದವರ ಫೋಟೋ ತೆಗೆಯಲು ಇವರು ತೋರಿಸುತ್ತಿರುವ ಆಸಕ್ತಿ ಟ್ರಾಫಿಕ್ ಸಮಸ್ಯೆಗಳನ್ನು ನಿವಾರಿಸುವಲ್ಲಿ ತೋರಿಸಿದರೆ ಮಂಗಳೂರು ನಗರದ ಟ್ರಾಫಿಕ್ ವ್ಯವಸ್ಥೆ ತುಂಬಾ ಸುಧಾರಿಸುತ್ತಿತ್ತು. ಈಗ ಬೇಕಾದರೆ ನೋಡಿ. ಮಂಗಳೂರು ಸಿಟಿಯಲ್ಲಿ ಬಹುತೇಕ ರಸ್ತೆಗಳು ಅಗಲವಾಗುತ್ತಾ ಇವೆ. ಹಾಗಂತ ಈ ಟ್ರಾಫಿಕ್ ಜಾಮ್ ಆಗುವುದು ಸರಿಯಾಗಬೇಕಿತ್ತಲ್ಲವೇ? ಇಲ್ಲ, ಆಗುತ್ತಿಲ್ಲ. ಅದರ ಬದಲಿಗೆ ಇನ್ನೂ ಜಾಸ್ತಿಯಾಗುತ್ತಿವೆ. ಯಾಕೆಂದರೆ ಎಲ್ಲಿ ರಸ್ತೆ ಅಗಲವಾಗುತ್ತಿವೆಯೋ ಅಲ್ಲಿ ಅಗಲವಾದ ಜಾಗದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ಏನಾಗುತ್ತಿದೆ. ಅನಾವಶ್ಯಕವಾಗಿ ಆ ರಸ್ತೆಗಳಲ್ಲಿ ಬೇರೆ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಹೀಗೆ ರಸ್ತೆಗಳ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುವವರು ಬೆಳಿಗ್ಗೆ, ರಾತ್ರಿ ತಮ್ಮ ವಾಹನಗಳನ್ನು ಯಾವುದೋ ರಸ್ತೆಯ ಅಗಲವಾದ ಜಾಗದಲ್ಲಿ ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ನಿಲ್ಲಿಸಿ ಹೋದರೆ ಅದನ್ನು ಪೊಲೀಸರು ಕೇಳುವುದಿಲ್ಲ. ಯಾವಾಗ ಪೊಲೀಸರೇ ಕೇಳುವುದಿಲ್ಲವೋ ನಿಲ್ಲಿಸುವವರಿಗೆ ಏನು ತೊಂದರೆ. ಅವರು ತಮ್ಮ ಪಾಡಿಗೆ ತಾವು ನಿಲ್ಲಿಸಿ ಹೋಗುತ್ತಾರೆ. ಇದರಿಂದ ರಸ್ತೆ ಅಗಲ ಮಾಡಿದ ಉದ್ದೇಶವೇ ಹಾಳಾಗಿ ಹೋಗುತ್ತದೆ.

ಈಗ ಶಾಲೆ, ಕಾಲೇಜುಗಳು ಶುರುವಾಗಿದೆ. ಇದರಿಂದ ವಾಹನಗಳ ಭರಾಟೆಗಳು ನಿತ್ಯ ಹೆಚ್ಚಾಗುತ್ತದೆ. ಮಕ್ಕಳನ್ನು ಕರೆದುಕೊಂಡು ಬರುವ, ಕರೆದುಕೊಂಡು ಹೋಗುವ ಆಟೋ ರಿಕ್ಷಾಗಳು, ಮಿನಿ ಬಸ್ಸುಗಳು ಕೂಡ ಎಲ್ಲೆಂದರಲ್ಲಿ ನಿಂತರೆ ಮತ್ತೆ ಶಾಲೆ, ಕಾಲೇಜುಗಳ ಆಸುಪಾಸಿನಲ್ಲಿ ಟ್ರಾಫಿಕ್ ಜಾಮ್ ಎನ್ನುವುದು ಮಾಮಾಲಿಯಾಗಿ ಹೋಗುತ್ತವೆ. ಇದೆಲ್ಲ ಟ್ರಾಫಿಕ್ ಪೊಲೀಸರು ನೋಡುವುದಿಲ್ಲ. ಇನ್ನು ಎಲ್ಲೆಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತವೆಯೋ ಅಲ್ಲಿ ನೋ ಎಂಟ್ರಿ ಮತ್ತು ನೋ ಪಾರ್ಕಿಂಗ್ ಬೋರ್ಡ್ ಗಳು ಕೂಡ ಹಾಕಬೇಕು. ಇನ್ನು ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಡೈವರ್ಟ್ ಮಾಡಿ ಬೇರೆ ಕಡೆಯಿಂದ ಕಳುಹಿಸಬೇಕಾದರೆ ಅಲ್ಲೊಬ್ಬ ಟ್ರಾಫಿಕ್ ಕಾನ್ಸಟೇಬಲ್ ಅಥವಾ ಕನಿಷ್ಟ ಹೋಂಗಾರ್ಡ್ ನವರನ್ನು ಆದರೂ ಹಾಕಬಹುದಲ್ಲವೇ? ಕೆಲವು ಬಾರಿ ಅಂತಹ ರಸ್ತೆಗಳನ್ನು ಏಕಮುಖವನ್ನಾಗಿ ಕೂಡ ಮಾಡಬಹುದು. ಇದರಿಂದ ಅನಗತ್ಯವಾಗಿ ವಾಹನಗಳು ಅಲ್ಲಿ ಬ್ಲಾಕ್ ನಲ್ಲಿ ಸಿಲುಕಿ ಸಮಯ ಮತ್ತು ಇಂಧನ ವ್ಯಯವಾಗುವುದು ತಪ್ಪುತ್ತದೆ. ಆದರೆ ಅದನ್ನು ಮಾಡುವುದು ಯಾರು? ಅಲ್ಲೊಂದು ಬೋರ್ಡ್ ಹಾಕುವುದು ಏನೂ ಕಷ್ಟವಲ್ಲ. ಇದು ಏನೂ ಮಾಡುವುದಿಲ್ಲ. ಇದರಿಂದ ವಾಹನಗಳು ಅತ್ತ ಸಂಚರಿಸಿ ತೊಂದರೆಗೆ ಸಿಲುಕುತ್ತವೆ. ಹಂಪನಕಟ್ಟೆಯಲ್ಲಿ ಹಿಂದೆ ಕನಿಷ್ಟ ಆರು ಜನ ಪೊಲೀಸರನ್ನು ಸಿಗ್ನಲ್ ಬಳಿ ಡ್ಯೂಟಿಗೆ ಹಾಕಲಾಗುತ್ತಿತ್ತು. ಈಗ ಅಲ್ಲಿ ಇಬ್ಬರನ್ನು ಮಾತ್ರ ಹಾಕಲಾಗುತ್ತಿದೆ. ಇನ್ನು ಈ ಟ್ರಾಫಿಕ್ ಪೊಲೀಸರು ತಮಗೆ ನಿಗದಿತವಾಗಿರುವ ಜಾಗ ಬಿಟ್ಟು ನಾಲ್ಕು ಹೆಜ್ಜೆಗಳನ್ನು ಆಚೀಚೆ ಇಡುವುದಿಲ್ಲ. ಇದರಿಂದ ಅವರ ಇಚ್ಚಾಶಕ್ತಿ ಗೊತ್ತಾಗುತ್ತದೆ.

ಇನ್ನು ನೀವು ಇತ್ತೀಚಿನ ಹೊಸ ಅವಿಷ್ಕಾರವಾಗಿರುವ ಬೆಲ್ ಮೌತ್ ಎನ್ನುವ ವಿನ್ಯಾಸವನ್ನು ಹೊಸದಾಗಿ ರಸ್ತೆಗಳಲ್ಲಿ ಅಳವಡಿಸುವುದನ್ನು ಕೇಳಿರಬಹುದು ಅಥವಾ ನೋಡಿರಬಹುದು. ಅದರಲ್ಲಿಯೂ ವಾಹನಗಳನ್ನು ನಿಲ್ಲಿಸಿ ಟ್ರಾಫಿಕ್ ಜಾಮ್ ಮಾಡಲಾಗುತ್ತದೆ. ನಿಜಕ್ಕೂ ರಸ್ತೆ ಅಗಲ ಮಾಡುವುದರಿಂದ ವಾಹನಗಳ ಸವಾರರಿಗೆ ಉಪಕಾರ ಮಾಡುವ ಯೋಜನೆ ಆಡಳಿತಕ್ಕೆ ಇದ್ದಿದ್ದರೆ ಅವರು ಅಗಲವಾದ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಲು ಬಿಡುತ್ತಿರಲಿಲ್ಲ. ಇಲ್ಲಿ ಏನು ಆಗುತ್ತಿದೆ ಎಂದರೆ ಜನಪ್ರತಿನಿಧಿಗಳಿಗೆ ತಾವು ರಸ್ತೆ ಅಗಲ ಮಾಡುವ ಮೂಲಕ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಜನರಿಗೆ ತೋರಿಸಬೇಕು. ಬಂದ ಕೋಟಿಗಟ್ಟಲೆ ರೂಪಾಯಿಯನ್ನು ವಿನಿಯೋಗಿಸಬೇಕು. ಶಿಲಾನ್ಯಾಸ ಮಾಡಬೇಕು. ಉದ್ಘಾಟನೆ ಮಾಡಬೇಕು. ಫೋಟೋ, ವಿಡಿಯೋ ಮಾಡಿ ಪ್ರಚಾರ ಮಾಡಬೇಕು. ಅವರ ಕೆಲಸ ಮುಗಿಯಿತು. ಇಷ್ಟೇ ಮಾಡಿದ್ರೆ ಏನು ಪ್ರಯೋಜನ ಎಂದು ಕೇಳುವವರು ಯಾರಾದರೂ ಇದ್ದಾರಾ, ಇಲ್ಲ. ಅದಕ್ಕೆ ಇವರನ್ನು ಮತ್ತು ಸಾರ್ವಜನಿಕರನ್ನು ಅಂದರೆ ಯಾರಿಗೆ ನಗರದ ಟ್ರಾಫಿಕ್ ಪರಿಸ್ಥಿತಿ ಸುಧಾರಿಸಬೇಕೆಂಬ ಮನಸ್ಸಿದೆಯೋ ಅವರನ್ನು ಕುಳ್ಳಿರಿಸಿ ಏನು ಮಾಡಿದರೆ ಜನರಿಗೆ ಉಪಯೋಗವಾಗುತ್ತದೆ ಎನ್ನುವ ಸಮಾಲೋಚನೆಯನ್ನು ಮಾಡಬೇಕು. ಇದರಿಂದ ಜನರ ತೆರಿಗೆಯ ಹಣ ಕೂಡ ಉಪಯೋಗವಾಗುತ್ತದೆ. ಸಮಸ್ಯೆ ಕೂಡ ಪರಿಹಾರವಾಗುತ್ತದೆ. ಜನಪ್ರತಿನಿಧಿಗಳಿಗೂ ಒಳ್ಳೆಯ ಹೆಸರು ಬರುತ್ತದೆ. ಇಲ್ಲದಿದ್ರೆ ಅದೇ ರಾಗ, ಅದೇ ಹಾಡು!

  • Share On Facebook
  • Tweet It


- Advertisement -


Trending Now
ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
Hanumantha Kamath September 22, 2023
ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
Hanumantha Kamath September 15, 2023
Leave A Reply

  • Recent Posts

    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
    • ಈ ಬಾರಿ ಮಹಿಷ ದಸರಾ ಯಾಕೆ ನಡೆಯಬೇಕು!
    • ಸೌದಿಗೆ ಇಂಧನ ಶಕ್ತಿ ತುಂಬಲಿರುವ ಭಾರತ!
    • ಚೈತ್ರಾ ಕುಂದಾಪುರ ಬಂಧನದ ಹಿಂದಿನ ಕಥೆ ಏನು?
  • Popular Posts

    • 1
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search