ಹೆಸರು ಬದಲಾವಣೆಯಿಂದ ಮಿನಿ ವಿಧಾನಸೌಧ ಶುದ್ಧವಾಗುತ್ತಾ?

ಮಿನಿ ವಿಧಾನಸೌಧ ಇನ್ನು ತಾಲೂಕು ಆಡಳಿತ ಸೌಧ ಎಂದು ಮರು ನಾಮಕರಣ ಮಾಡಲಾಗಿದೆ. ಮಿನಿ ವಿಧಾನಸೌಧದಲ್ಲಿ ಮಿನಿ ಎಂಬ ಶಬ್ದ ಆಂಗ್ಲ ಭಾಷೆಯದ್ದಾಗಿರುವುದರಿಂದ ಅದು ಕರ್ನಾಟಕದಲ್ಲಿ ಬೇಡಾ ಎನ್ನುವ ಕಾರಣಕ್ಕೆ ಮತ್ತು ಮಿನಿ ವಿಧಾನಸೌಧದಲ್ಲಿ ಯಾವುದೇ ಕಲಾಪ ಅಥವಾ ಶಾಸನಗಳ ರಚನೆಗಳು ಆಗುವುದಿಲ್ಲವಾದ್ದರಿಂದ ಆ ಹೆಸರು ಸೂಟ್ ಆಗಲ್ಲ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಭರಣ ಅವರು ಸರಕಾರಕ್ಕೆ ಸಲಹೆ ನೀಡಿರುವುದರಿಂದ ಹೆಸರು ಬದಲಾಯಿಸಲಾಗಿದೆ. ಇಲ್ಲಿ ಕೇವಲ ಆಡಳಿತ ಸಂಬಂಧಿ ಕೆಲಸಗಳು ನಡೆಯುವುದರಿಂದ ತಾಲೂಕು ಆಡಳಿತ ಸೌಧ ಎಂದು ಇರಲಿ ಎನ್ನುವ ಅಭಿಪ್ರಾಯ ಮೂಡಿದ ಕಾರಣ ಈ ಹೆಸರು ಇಡಲಾಗಿದೆ. ಆದರೆ ವಿಷಯ ಇರುವುದು ಹೆಸರು ಬದಲಾಯಿಸಿರುವುದರಿಂದ ಏನಾಗುತ್ತದೆ ಎನ್ನುವುದು ಮಾತ್ರ. ಇಲ್ಲಿಯ ತನಕ ಎಷ್ಟು ಹಣ ಲಂಚ ಕೊಟ್ಟು ಕೆಲಸ ಮಾಡಬೇಕಾಗಿತ್ತೋ ಮುಂದೆಯೂ ಅಷ್ಟೇ ಲಂಚ ನೀಡಿ ಕೆಲಸ ಮಾಡಬೇಕಿದೆ. ಕೊಡಬೇಕಾದ ಲಂಚದಲ್ಲಿ ಏನಾದರೂ ಕಡಿಮೆ ಆಗುತ್ತಾ? ಇಲ್ಲ. ಯಾಕೆ, ಅದನ್ನು ಸರಿ ಮಾಡಲು ಆಗಲ್ವಾ? ಇನ್ನು ಆಡಳಿತ ಸೌಧ ಎಂದು ಹೆಸರು ಬದಲಾಯಿಸಿದ ಕೂಡಲೇ ಒಳಗೆ ಆಗುತ್ತಿರುವ ಲೋಪ ಸರಿಯಾಗುತ್ತಾ?
ಉದಾಹರಣೆಗೆ ನಿಮಗೆ ಜಾತಿ ಪ್ರಮಾಣ ಪತ್ರವೋ ಅಥವಾ ಆದಾಯ ಪ್ರಮಾಣ ಪತ್ರವೋ ಮಾಡಲು ಇದೆ ಎಂದು ಅಂದುಕೊಳ್ಳಿ. ಅದನ್ನು ಮಾಡಿಸಲು ಇಲ್ಲಿಯ ತನಕ ಕನಿಷ್ಟ ಒಂದು ತಿಂಗಳಾದರೂ ಬೇಕಾಗುತ್ತಿತ್ತು. ಇನ್ನು ಮುಂದೆ ಅದು ಒಂದು ವಾರದ ಒಳಗೆ ಮಾಡಿಸಲು ಆಗುತ್ತಾ, ಇಲ್ಲ, ಆಗುವುದಿಲ್ಲ. ಇಲ್ಲಿಯ ತನಕ ನೀವೇ ನಿಮ್ಮ ಗ್ರಾಮ ಕರಣಿಕರ ಬಳಿ ಹೋಗಿ ಅಲ್ಲಿ ಬರೆಸಿಕೊಂಡು ಈ ಮಿನಿ ವಿಧಾನಸೌಧದ ಒಳಗೆ ಹೋಗಿ ಅಲ್ಲಿ ಕಂದಾಯ ನಿರೀಕ್ಷಕರ ಬಳಿ ಹೋಗಿ, ಅಲ್ಲಿಂದ ಉಪತಹಶೀಲ್ದಾರರ ಬಳಿ ಹೋಗಿ ನಂತರ ಅಲ್ಲಿಂದ ತಹಶೀಲ್ದಾರರ ಬಳಿ ಹೋಗಿ ಮಾಡಿಸಿಕೊಂಡು ಬರುವಾಗ ಒಂದು ತಿಂಗಳು ಕಳೆದಿರುತ್ತದೆ. ಅಷ್ಟಕ್ಕೂ ಅವರು ಮಾಡಬೇಕಾಗಿರುವುದು ಕೇವಲ ಥಂಬ್ ಮಾತ್ರ. ಅಷ್ಟು ಮಾಡಲು ಎಷ್ಟು ದಿನ ಎಳೆಯಲು ಆಗುತ್ತೋ ಅಷ್ಟು ದಿನ ಎಳೆಯಲಾಗುತ್ತದೆ. ಇನ್ನು ಆರ್ ಟಿಸಿಯಲ್ಲಿ ಏನಾದರೂ ಸಣ್ಣ ಬದಲಾವಣೆ ಇದ್ದರೂ ಅದು ಕೂಡ ಎಷ್ಟು ದಿನ ಹಿಡಿಯುತ್ತದೆ ಎನ್ನುವುದು ಅನುಭವಿಸಿದವರಿಗೆ ಗೊತ್ತು. ಇನ್ನು ಪ್ರಾಪರ್ಟಿ ಕಾರ್ಡ್ ಸಹಿತ ಏನೇ ಕೆಲಸ ಮಾಡಿಸಲು ಇದ್ದರೂ ಇಲ್ಲಿಯ ತನಕ ಮಿನಿ ವಿಧಾನಸೌಧದಲ್ಲಿ ಎಷ್ಟು ದಿನ ಹಿಡಿಯುತ್ತದೆ ಎನ್ನುವುದು ನಾಗಭರಣ ಅವರಿಗೆ ಗೊತ್ತಿದೆಯೋ? ಅವರು ಆ ಬಗ್ಗೆ ಏನಾದರೂ ಸಲಹೆ ಕೊಟ್ಟಿದ್ದರೆ ತುಂಬಾ ಒಳ್ಳೆಯದಿತ್ತು. ಸರಕಾರಕ್ಕೆ ಕನ್ನಡ ಪ್ರಾಧಿಕಾರದ ಅಧ್ಯಕ್ಷರ ಮನವಿ ತಕ್ಷಣ ಕೇಳುವುದೇ ಆದರೆ ಈ ರಾಜ್ಯದ ಲಕ್ಷಾಂತರ ಮಧ್ಯಮ ವರ್ಗದ ನಾಗರಿಕರ ಕೂಗು ಯಾಕೆ ಕೇಳುವುದಿಲ್ಲ. ಈಗ ಹೆಸರು ಬದಲಾವಣೆ ಆಗಿದೆ. ಅದೇ ರೀತಿ ಇಲ್ಲಿಯ ತನಕ ಮಿನಿ ವಿಧಾನಸೌಧದ ಒಳಗೆ ಬ್ರೋಕರ್ ಗಳ ರಾಜ್ಯಭಾರವೇ ಯಾವಾಗಲೂ ಅವಿರತವಾಗಿ ನಡೆಯುತ್ತಿತ್ತು. ಇನ್ನು ಮುಂದೆ ಹೆಸರು ಬದಲಾವಣೆ ಆಗಿರುವುದರಿಂದ ಬ್ರೋಕರ್ ಗಳ ಕೆಲಸ ಬೇಗ ಆಗುವುದು ನಿಂತು ಜನಸಾಮಾನ್ಯರ ಕೆಲಸ ಬೇಗ ಆಗುತ್ತಾ? ಇಲ್ಲವಲ್ಲ. ಅದೇ ಹಿಂದಿನ ಚಾಳಿ ಮುಂದುವರೆಯುತ್ತದೆ. ನಾವು ನೇರವಾಗಿ ಸ್ವಯಂ ಕೆಲಸ ಮಾಡಿಸಲು ಬಂದರೆ ಆಗುವ ತಡ ಮತ್ತು ಬ್ರೋಕರ್ ಗಳ ಕೈಯಿಂದ ಆಗುವ ವೇಗ ಇನ್ನು ಮುಂದೆ ಬದಲಾವಣೆ ಕಾಣುತ್ತಾ? ಇಲ್ಲವಲ್ಲ, ಅದು ಕೂಡ ಹಾಗೆ ಮುಂದುವರೆಯಲಿದೆ. ಹಾಗಿದ್ದ ಮೇಲೆ ಹೆಸರು ಬದಲಾಯಿಸಿದ್ದರಿಂದ ಆಗುವ ಪ್ರಯೋಜನವೇನು? ಈಗ ಆಗಬೇಕಾಗಿರುವುದು ಹೆಸರು ಬದಲಾವಣೆ ಮಾತ್ರವಲ್ಲ, ಕ್ರಿಯೆ ಬದಲಾವಣೆ.
ಹೆಸರು ಬದಲಾವಣೆಯಿಂದ ಮತ್ತೆ ಒಂದಿಷ್ಟು ಖರ್ಚು ಸರಕಾರಕ್ಕೆ ಇದ್ದೇ ಇರುತ್ತದೆ. ಅದರಿಂದ ಆಗುವುದು ಏನಿಲ್ಲ. ಜನರಿಗೆ ಈ ಹೆಸರು ಬದಲಾವಣೆಯಿಂದ ವೈಯಕ್ತಿಕವಾಗಿ ಒಂದು ಪೈಸೆ ಲಾಭವಿಲ್ಲ. ಹೆಸರು ಬದಲಾಯಿಸುವುದು ಒಂದು ಫ್ಯಾಶನ್ ಆಗಿರುವುದರಿಂದ ಜನ ಒಂದೆರಡು ದಿನ ಕನ್ನಡ ಪ್ರಾಧಿಕಾರದ ಅಧ್ಯಕ್ಷರನ್ನು ನೆನಪಿಸಬಹುದು. ಆದರೆ ಅದೇ ತಾಲೂಕು ಆಡಳಿತ ಸೌಧದ ಒಳಗೆ ಹೋಗಿ ಆ ನಾಗರಿಕರ ಕೆಲಸ ಆಗದಿದ್ದರೆ ಅವನು ಅಲ್ಲಿಯೇ ನಿಂತು ಮನಸ್ಸಿನಲ್ಲಾದರೂ ಸರಕಾರವನ್ನು, ಜನಪ್ರತಿನಿಧಿಗಳನ್ನು ಬೈಯುತ್ತಾರೆ. ಅದರ ಬದಲಿಗೆ ಜನರ ಮನಸ್ಸಿನ ಧ್ವನಿ ಸರಕಾರ ಕೇಳಬೇಕು. ಜನರ ಕೆಲಸ ನಿರ್ದಿಷ್ಟ ಕಾಲದೊಳಗೆ ಮಾಡಬೇಕು ಎಂದು ಸೂಚನೆ ನೀಡಬೇಕು. ಯಾವ ಅಧಿಕಾರಿಯಿಂದ ತಡವಾಗಿದೆಯೋ ಆ ಬಗ್ಗೆ ಜನರು ಅಲ್ಲಿಯೇ ಒಂದು ಪತ್ರ ಬರೆದು ಬಾಕ್ಸಿನಲ್ಲಿ ಹಾಕುವಂತಿರಬೇಕು. ಇನ್ನು ಆಧುನಿಕ ಕಾಲ ಇದಾಗಿರುವುದರಿಂದ ಒಂದು ವಾಟ್ಸಪ್ ಮೂಲಕವೂ ದೂರು ಸಲ್ಲಿಸುವ ವ್ಯವಸ್ಥೆ ಮಾಡಬೇಕು. ಆ ದೂರುಗಳನ್ನು ಕೂಡಲೇ ಸಂಬಂಧಪಟ್ಟವರು ಸ್ವೀಕರಿಸಿ ಅದಕ್ಕೆ ಪರಿಹಾರ ಮಾಡಬೇಕು. ಅದರಿಂದ ಜನರಿಗೆ ಸರಕಾರದ ಮೇಲೆ ವಿಶ್ವಾಸ ಮೂಡುತ್ತದೆ. ಇದು ಹಲವು ವರ್ಷಗಳ ತನಕ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಒಂದು ಸರಕಾರ ಮಾಡಬೇಕಾಗಿರುವುದು ಅದನ್ನು. ಬಸವರಾಜ್ ಬೊಮ್ಮಾಯಿ ಅವರು ಏನು ಮಾಡಿದರು ಎಂದರೆ ಮಿನಿ ವಿಧಾನಸೌಧದ ಹೆಸರು ಬದಲಾಯಿಸಿದರು ಎನ್ನುವುದಕ್ಕಿಂತ ಮಿನಿ ವಿಧಾನಸೌಧದ ಒಳಗೆ ಜನರ ಕೆಲಸಗಳು ಲಂಚವಿಲ್ಲದೆ ಬೇಗ ಆಗುವಂತೆ ನಿಯಮ ತಂದರು ಎನ್ನುವಂತೆ ಆಗಬೇಕು. ಆಗ ಅದು ಸಾರ್ಥಕ ಎನಿಸುವುದು!
Leave A Reply