ರಾಜೀನಾಮೆ ಕೊಡುತ್ತಿರುವವರು ಪಲಾಯನವಾದ ಮಾಡುತ್ತಿದ್ದಾರಾ?
ಪಕ್ಷ ಅಂದರೆ ನಾಯಕರು ಅಲ್ಲ. ಪಕ್ಷ ಅಂದರೆ ಕಾರ್ಯಕರ್ತರು. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ ಗೆದ್ದು ಶಾಸಕರಾಗಬೇಕಾದರೆ ಅದರ ಹಿಂದೆ ಅಸಂಖ್ಯಾತ ನಿಷ್ಟಾವಂತ ಕಾರ್ಯಕರ್ತರ ಪರಿಶ್ರಮ ಇದೆ. ಅವರು ಆಧಾರಸ್ತಂಭ. ಮನೆಮನೆಗೆ ಹೋಗಿ ಪ್ರಚಾರ, ಮತದಾರರ ಕಷ್ಟ, ಸುಖ, ಅಭಿವೃದ್ಧಿಯ ಭರವಸೆ, ಈಡೇರಿಕೆ ಎಲ್ಲವನ್ನು ಮಾಡುವುದು ತಳಮಟ್ಟದ ಕಾರ್ಯಕರ್ತ. ಒಬ್ಬ ಬೂತ್ ಅಧ್ಯಕ್ಷ, ಕಾರ್ಯದರ್ಶಿ ಅವರ ವಾರ್ಡಿನಲ್ಲಿ ಅವರೇ ಶಾಸಕರು. ಅವರಿಗೆ ಏನೂ ಐದು ರೂಪಾಯಿ ಸಂಬಳ ಬರುವುದಿಲ್ಲ. ಚುನಾವಣೆ ಬಂತೆಂದರೆ ಒಂದಿಷ್ಟು ಚಿಲ್ಲರೆ ಪ್ರಚಾರದ ಖರ್ಚಿಗೆ ಬರುತ್ತದೆ ಬಿಟ್ಟರೆ ಅದಕ್ಕಾಗಿ ಆ ಕಾರ್ಯಕರ್ತ ತನ್ನ ಉದ್ಯೋಗ, ವ್ಯವಹಾರವನ್ನು ಬದಿಗಿಟ್ಟು ಸೇವೆ ಸಲ್ಲಿಸಬೇಕಾಗುತ್ತದೆ. ಇನ್ನು ಚುನಾವಣೆಯ ಸಂದರ್ಭದಲ್ಲಿ ಯಾರೋ ಗೆಲ್ಲಲು ಇವರು ತಾವೇ ಚುನಾವಣೆಗೆ ನಿಂತಿದ್ದೇವೆಯೋ ಎನ್ನುವಂತೆ ಹಗಲಿರುಳು ಕೆಲಸ ಮಾಡಬೇಕಾಗುತ್ತದೆ. ಇಷ್ಟಾಗಿಯೂ ಅವನಿಗೆ ಸಿಗುವ ಮರ್ಯಾದೆ ಎಷ್ಟು? ಹೀಗಾಗಿಯೂ ರಾಜ್ಯದಲ್ಲಿ ಎರಡು ಸ್ಥಾನದಿಂದ ಭಾರತೀಯ ಜನತಾ ಪಾರ್ಟಿ ಪ್ರಸ್ತುತ 120 ಸ್ಥಾನಗಳನ್ನು ಪಡೆದು ಅಧಿಕಾರದಲ್ಲಿದೆ. ಗೆದ್ದಿರುವುದು 120 ಶಾಸಕರೇ ಆಗಿದ್ದರೂ ಅವರ ಹಿಂದೆ ಲಕ್ಷಾಂತರ ಪ್ರಾಮಾಣಿಕ ಕಾರ್ಯಕರ್ತರ ಬೆವರು ಇದೆ. ಏರಿಯಾದಲ್ಲಿ ಒಂದು ತೋಡು, ಕಾಲುದಾರಿ, ಲೈಟ್ ಕಂಬ ಹಾಕಿಸಲು ಕೂಡ ಜನರು ಕೇಳುವುದು ಅದೇ ಏರಿಯಾದ ಬಿಜೆಪಿ ಕಾರ್ಯಕರ್ತರ ಹತ್ತಿರ, ” ವೋಟ್ ಕೇಳುವಾಗ ಬರುತ್ತೀರಿ, ಅದೇ ಈಗ ಇಂಟರ್ ಲಾಕ್ ಹಾಕಿಸಬೇಕಾದರೆ ಎಷ್ಟು ಸಲ ಹೇಳಬೇಕ್ರಿ” ಎಂದು ಝಾಡಿಸುವುದು ಮತದಾರ ಅದೇ ತಳಮಟ್ಟದ ಕಾರ್ಯಕರ್ತರ ಬಳಿ. ಅದು ಅಭಿವೃದ್ಧಿಯ ವಿಷಯವಾದರೆ ಇನ್ನು ಹಿಂದೂತ್ವದ ಮೇಲೆ ಅಧಿಕಾರಕ್ಕೆ ಬಂದ ಬಿಜೆಪಿ ಮುಖಂಡರಿಗೆ ಒಬ್ಬ ಹಿಂದೂ ಕಾರ್ಯಕರ್ತ ಕೊಲೆಯಾದರೆ ಅವನ ಮನೆಗೆ ಹೋಗಲು 15 ರಿಂ 18 ಗಂಟೆಗಳು ಬೇಕಾ? ನಿಮಗೆ ಒಬ್ಬ ಹಿಂದೂ ಕಾರ್ಯಕರ್ತ ಸತ್ತರೆ ಅದು ಮತ ತರುತ್ತೆ ಎನ್ನುವ ಭ್ರಮೆ ಅಥವಾ ಹಿಂದಿನ ಅನುಭವ ಖುಷಿ ಕೊಡುತ್ತಿದೆಯಾ? ಅವನ ಮನೆಗೆ ನೀವು ಬೇಗ ಹೋದ ಕೂಡಲೇ ಮೃತಪಟ್ಟ ಕಾರ್ಯಕರ್ತ ಮತ್ತೆ ಹುಟ್ಟಿ ಬರಲ್ಲ.
ಆದರೆ ಒಬ್ಬ ಜನಪ್ರತಿನಿಧಿ ಇರುವುದೇ ತನ್ನ ಜನರ ಕಷ್ಟಸುಖದಲ್ಲಿ ಭಾಗಿಯಾಗಲು. ಸುಖದ ವಿಷಯ ಬಂದಾಗ ಕರೆಯದೇ ಹೋಗಬೇಡಾ, ಕಷ್ಟದ ವಿಷಯದಲ್ಲಿ ಕರೆಯಲು ಕಾಯಬೇಡಾ ಎನ್ನುವ ಮಾತಿದೆ. ಪ್ರವೀಣ್ ರಾತ್ರಿ ಮೃತರಾದರೆ ಮರುದಿನ ಮಧ್ಯಾಹ್ನ 1 ಗಂಟೆಗೆ ಆತ ಸತ್ತ ಊರಿಗೆ ಹೋಗುತ್ತಾರೆ ಎಂದ ಕೂಡಲೇ ಮೊದಲ ಆಕ್ರೋಶ ವ್ಯಕ್ತವಾಗಿತ್ತು. ಇನ್ನು ಕಠಿಣ ಕ್ರಮ ಎಂದು ಹೇಳುವವರು ಇನ್ನೆಷ್ಟು ಕೊಲೆಗಳಾಗಲು ಕಾಯುತ್ತಿದ್ದಾರೆ ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಯಾಕೆಂದರೆ ನಾಳೆ ಇದೇ ತಳಮಟ್ಟದ ಮುಖಂಡರು ವೋಟ್ ಕೇಳಲು ತಮ್ಮ ಏರಿಯಾದಲ್ಲಿ ಹೋದಾಗ ಅವರಿಗೆ ಎದುರಾಗುವ ಪ್ರಶ್ನೆಗಳಿಗೆ ಉತ್ತರ ಕೊಡಲಾಗುವುದಿಲ್ಲ ಎಂದು ಗೊತ್ತಿದ್ದ ಕಾರಣ ಅಂತಹ ಮುಖಂಡರು ತಮ್ಮ ಜವಾಬ್ದಾರಿಗಳಿಗೆ ರಾಜೀನಾಮೆ ಕೊಡುತ್ತಿದ್ದಾರೆ. ಇವರು ರಾಜೀನಾಮೆ ಕೊಡುವುದರಿಂದ ಪರಿಸ್ಥಿತಿ ಸರಿಯಾಗುತ್ತಾ? ಪರಿಸ್ಥಿತಿ ಸರಿಯಾಗುತ್ತಾ ಅಥವಾ ಬಿಡುತ್ತಾ ಗೊತ್ತಿಲ್ಲ, ಆದರೆ ನಾವು ಜನರ ಆಕ್ರೋಶದ ಪ್ರಶ್ನೆಗಳಿಗೆ ಉತ್ತರ ಕೊಡುವುದು ತಪ್ಪುತ್ತದೆ ಎನ್ನುವ ಭಾವನೆ ರಾಜೀನಾಮೆ ಕೊಡುವವರಲ್ಲಿದೆ. ಸಾಮಾನ್ಯವಾಗಿ ಉತ್ತಮ ಕಾರ್ಯ ನಿರ್ವಹಿಸುವ ವ್ಯಕ್ತಿಗೆ ತಳಮಟ್ಟದಿಂದ ಒಂದೊಂದೇ ಜವಾಬ್ದಾರಿ ಕೊಟ್ಟು ಉನ್ನತ ಸ್ಥಾನದ ತನಕ ಬೆಳೆಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಲೇ ಬರುತ್ತಿದೆ. ಅದಕ್ಕೆ ಜೀವಂತ ಉದಾಹರಣೆ ಅಮಿತಾ ಶಾ. ಒಂದು ಬೂತ್ ಅಧ್ಯಕ್ಷರಾಗಿದ್ದ ಅಮಿತ್ ಶಾ ಈಗ ದೇಶದ ಗೃಹಸಚಿವರು. ಅಷ್ಟು ಉನ್ನತ ಸ್ಥಾನಕ್ಕೆ ಅವರು ತಲುಪಲು ಅವರು ಕೂಡ ಸಾಕಷ್ಟು ಕೆಲಸ ಮಾಡಿರುತ್ತಾರೆ. ಬಿಜೆಪಿ ಏನೂ ಇಲ್ಲದಿದ್ದಾಗ ಅವರೆಲ್ಲರೂ ಎಂತೆಂತಹ ಸವಾಲು ಎದುರಿಸಿ ಕೆಲಸ ಮಾಡಿದವರು. ಹೀಗಿರುವಾಗ ಅವರು ನನಗೆ ಇದು ಆಗಲ್ಲ, ಬಿಜೆಪಿ ರಾಜ್ಯ, ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಹೇಳಿದಿದ್ರೆ ಇಷ್ಟು ಉನ್ನತ ಸ್ಥಾನಕ್ಕೆ ಏರಲು ಆಗುತ್ತಿತ್ತಾ? ಅವರು ಒಬ್ಬರು ಅಂದಲ್ಲ. ಕೋಟ್ಯಾಂತರ ಕಾರ್ಯಕರ್ತರ ಶ್ರಮ, ಪ್ರಾರ್ಥನೆಯಿಂದ ಪಕ್ಷವೊಂದು ಅಧಿಕಾರಕ್ಕೆ ಬರುತ್ತದೆ. ಅಷ್ಟು ಕಾರ್ಯಕರ್ತರು ಯಾಕೆ ಸೇವೆ ಸಲ್ಲಿಸುತ್ತಾರೆ. ಒಂದು ಸಿದ್ಧಾಂತಕ್ಕಾಗಿ. ಬಿಜೆಪಿಯ ಸಿದ್ಧಾಂತ ಯಾವುದು? ಹಿಂದೂತ್ವ. ಅದನ್ನೇ ನೀವು ಮರೆತಿದ್ದಿರಿ ಅಂದರೆ ಇನ್ನು ಯಾವ ನಾಚಿಕೆ ಬಿಟ್ಟು ಕೆಲಸ ಮಾಡಲು ಸಾಧ್ಯ.
ಇನ್ನು ಲಾಠಿಚಾರ್ಜ್ ಮಾಡದೇ ಬೇರೆ ಉಪಾಯವಿರಲಿಲ್ಲ ಎಂದು ಪೊಲೀಸರು ಹೇಳುತ್ತಿರುವುದು ಸರಿಯಾ? ಪ್ರತಿಭಟನಾಕಾರರ ಗುಂಪು ಅಲ್ಲಿನ ಮಸೀದಿಯ ಮೇಲೆ ಕಲ್ಲು ಬಿಸಾಡಲು ತೊಡಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಿರಬಹುದು. ಆದರೆ ಅಲ್ಲಿ ಮೀಡಿಯಾದವರು ಚಿತ್ರೀಕರಿಸಿದ ವಿಡಿಯೋವನ್ನು ನೀವು ನೋಡಿರಬಹುದು. ಅದರಲ್ಲಿ ರಮೇಶ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಹೊಡೆಯುತ್ತಿದ್ದಾರೆ. ಅವರ ಹಿನ್ನಲೆ ಪೊಲೀಸರಿಗೆ ಗೊತ್ತಿಲ್ಲ ಎಂದೇ ಇಟ್ಟುಕೊಳ್ಳೋಣ. ಆದರೆ ರಮೇಶ್ ಅವರು ಮಸೀದಿಗೆ ಕಲ್ಲು ಹೊಡೆಯಲು ಅಲ್ಲಿ ನಿಂತಿದ್ರಾ? ಅವರು ಆ ಬಗ್ಗೆ ಪ್ರಚೋದನಾ ಹೇಳಿಕೆ ನೀಡುತ್ತಿದ್ದರಾ? ಏನೂ ಇಲ್ಲ. ಆದರೂ ಅವರಿಗೆ ಐದಾರು ಪೊಲೀಸರು ಸುತ್ತುವರೆದು ಲಾಠಿಯಿಂದ ಹೊಡೆದಿದ್ದಾರೆ. ಈದ್ಗಾದಲ್ಲಿ ರಾಷ್ಟ್ರಧ್ವಜ ಹಾರಿಸಿದ ಕಾಸರಗೋಡುವಿನಲ್ಲಿ ಮತಾಂಧರ ಬೆದರಿಕೆಯ ನಡುವೆ ಪಕ್ಷಕ್ಕಾಗಿ ಕೆಲಸ ಮಾಡುವ ರಮೇಶ್ ಅವರು ಕಾಸರಗೋಡುವಿನಿಂದ ಬೆಳ್ಳಾರೆಗೆ ಬಂದದ್ದಕ್ಕೆ ಬಿಜೆಪಿ ಸರಕಾರ ಉಡುಗೊರೆ ಇದೆನಾ?
Leave A Reply