ಮೊಟ್ಟೆ ಬಿಸಾಡಲು ಹೊರಡುವವ ಐಡಿ ಮಾಡಿಸಬೇಕಾ?
ಮಡಿಕೇರಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ವಿಷಯ ಆ ಕ್ಷಣದಿಂದಲೇ ಸಾಕಷ್ಟು ಸುದ್ದಿಯಾಗಿತ್ತು. ಒಬ್ಬ ಉನ್ನತ ಕಾಂಗ್ರೆಸ್ಸಿಗನ ಮೇಲೆ ಒಬ್ಬ ಕಾರ್ಯಕರ್ತ ಮೊಟ್ಟೆ ಎಸೆದಿದ್ದಾನೆ ಎಂದ ಕೂಡಲೇ ಎಸೆದ ವ್ಯಕ್ತಿ ಯಾವ ಪಕ್ಷದ ಕಾರ್ಯಕರ್ತ ಎಂದು ಸಾಮಾನ್ಯವಾಗಿ ಎಂತವರಿಗಾದರೂ ಗೊತ್ತಾಗುತ್ತೆ. ಸಿದ್ದುವಿನಿಂದ ಹಿಡಿದು ಖಾದರ್ ತನಕ ಎಲ್ಲಾ ಮುಖಂಡರು ಅರ್ಧ ನಿದ್ದೆಯಲ್ಲಿ ಎದ್ದು ಸುದ್ದಿಗೋಷ್ಟಿ ನಡೆಸಿ ಭಾರತೀಯ ಜನತಾ ಪಾರ್ಟಿಯ ಮುಖಂಡರ, ಕಾರ್ಯಕರ್ತರ ಮೇಲೆ ಸರಣಿ ಪ್ರಕಾರ ಆರೋಪ ಹೊರಿಸಿದರು. ಎಲ್ಲಿಯ ತನಕ ಅಂದರೆ ಖಾದರ್ ಇದು ರಾಜ್ಯ ಸರಕಾರದ ಪ್ರಾಯೋಜಿತ ದಾಳಿ ಎಂದು ಕೂಡ ಸೇರಿಸಿ ತಮ್ಮ ಸುದ್ದಿಗೋಷ್ಟಿ ಪ್ರತ್ಯೇಕವಾಗಿ ಬರುವಂತೆ ನೋಡಿಕೊಂಡರು. ರಮಾನಾಥ್ ರೈ, ಹರೀಶ್ ಕುಮಾರ್, ಮಂಜುನಾಥ ಭಂಡಾರಿ ಸೇರಿ ಒಂದು ಸುದ್ದಿಗೋಷ್ಟಿ ನಡೆಸಿದರೆ ಖಾದರ್ ಬೇರೆಯದ್ದೇ ಮಾಡಿ ತಾವು ವಿಧಾನಸಭಾ ವಿಪಕ್ಷ ಉಪನಾಯಕ ಎಂದು ರೈಯವರಿಗೆ ತೋರಿಸಿಕೊಟ್ಟರು. ಅದೆಲ್ಲವೂ ಮಾದ್ಯಮಗಳಲ್ಲಿ ಯಥಾವತ್ತು ಬರುತ್ತಿದ್ದಂತೆ ಮೊಟ್ಟೆಯನ್ನು ಎಸೆದವನನ್ನು ಪೊಲೀಸರು ಬಂಧಿಸಿಬಿಟ್ಟರು. ಆತನ ಹೆಸರು ಸಂಪತ್. ಆತ ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಮಾಧ್ಯಮವೊಂದರ ಮುಂದೆ ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ತಾನು ಮೂಲತ: ಜೀವಿಜಯರ ಬೆಂಬಲಿಗ ಎಂದು ಕೂಡ ಸ್ಪಷ್ಟಪಡಿಸಿದ್ದಾನೆ. ಒಂದು ಕಾಲದಲ್ಲಿ ಕೊಡಗನ್ನು ಅಕ್ಷರಶ: ಆಳಿದವರಲ್ಲಿ ನಾಣಯ್ಯ ಹಾಗೂ ಜೀವಿಜಯ ಅವರು ಪ್ರಮುಖರು. ಅದು ಆಗ ಜನತಾ ಪರಿವಾರದ ಪ್ರಬಲ ಕೋಟೆ. ಕ್ರಮೇಣ ಅಲ್ಲಿ ಕೇಸರಿ ಪಾಳಯ ಬಲಿಷ್ಟವಾಗತೊಡಗಿತು. ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಶಾಸಕರಾದರು. ಜೆಡಿಎಸ್ ನಲ್ಲಿದ್ದ ಜೀವಿಜಯರು ಕಾಂಗ್ರೆಸ್ಸಿಗೆ ಬಂದರು. ಆಗ ಸಹಜವಾಗಿ ಒಂದಿಷ್ಟು ಜನ ಕಾರ್ಯಕರ್ತರು ಅವರನ್ನು ಹಿಂಬಾಲಿಸಿದರು. ಹಾಗೆ ಬಂದವರೆಲ್ಲ ಜೀವಿಜಯರ ಸುತ್ತಲೂ ಓಡಾಡಿಕೊಂಡವರೇ ಆಗಬೇಕಿಲ್ಲ. ಯಾವುದೋ ಒಂದು ಕಾಲದಲ್ಲಿ ಅವರು ಸರಕಾರದಲ್ಲಿದ್ದಾಗ ಏನಾದರೂ ಲಾಭ ಪಡೆದುಕೊಂಡವರು ಆಗಿರಬಹುದು. ತಮ್ಮ ನಾಯಕ ಒಂದು ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋದಾಗ ಅವರಿಂದ ಉಪಕೃತರಾದವರು ಕೂಡ ನಿಷ್ಟೆ ಬದಲಿಸುವುದು ಸಹಜ. ಹಾಗೆ ಜೀವಿಜಯ ಈ ಸಂಪತ್ತು ನಿಮ್ಮ ಬೆಂಬಲಿಗರಾ ಎಂದು ಕೇಳಿದಾಗ ನಿಜವಾಗಿಯೂ ಗೊತ್ತಿಲ್ಲದೆ ಗೊತ್ತಿಲ್ಲ ಎಂದಿರಲೂ ಸಾಕು ಅಥವಾ ಗೊತ್ತಿದೆ ಎಂದು ಹೇಳಿದರೆ ಪಕ್ಷಕ್ಕೆ ತೊಂದರೆ ಆಗುತ್ತದೆ ಎಂದು ಗೊತ್ತಿಲ್ಲ ಎಂದು ಕೂಡ ಹೇಳಿರಬಹುದು. ಹೀಗೆ ವಿಷಯ ಇರುವುದರಿಂದ ಅವರು ಕಾಂಗ್ರೆಸ್ಸಿಗ ಅಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗಂತ ಅವನು ಕಾಂಗ್ರೆಸ್ಸಿಗ ಎಂದ ಕೂಡಲೇ ಕಾಂಗ್ರೆಸ್ ಕಚೇರಿಗೆ ಬರಬೇಕು ಎನ್ನುವ ಅಗತ್ಯ ಅಥವಾ ಅನಿವಾರ್ಯತೆ ಇಲ್ಲ. ಒಬ್ಬ ವ್ಯಕ್ತಿ ಒಂದು ಪಕ್ಷದ ಕಾರ್ಯಕರ್ತ ಎಂದ ಕೂಡಲೇ ಅವನು ಎಷ್ಟರಮಟ್ಟಿಗಿನ ಕಾರ್ಯಕರ್ತ ಎನ್ನುವುದಕ್ಕೆ ಮಾನದಂಡವಿಲ್ಲ. ಆದ್ದರಿಂದ ಅವನು ನಮ್ಮವನಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅದರೊಂದಿಗೆ ಕಾಂಗ್ರೆಸ್ಸಿಗರು ಹೇಳುವ ಪ್ರಕಾರ ಸಂಪತ್ತು ಅಪ್ಪಚ್ಚು ರಂಜನ್ ಅವರೊಂದಿಗೆ ಕೇಸರಿ ಶಾಲು ಹಾಕಿ ಫೋಟೋ ತೆಗೆದಿದ್ದಾರೆ, ಆದ್ದರಿಂದ ಅವರು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಹಾಸ್ಯಾಸ್ಪದ ವಿಷಯ. ನೀವು ಯಾರ ಜೊತೆಯಲ್ಲಿ ನಿಂತು ಫೋಟೋ ತೆಗೆಯುತ್ತಿರೋ ಅವರನ್ನು ತುಂಬಾ ಆರಾಧಿಸುತ್ತೀರಿ ಎನ್ನುವುದು ಸುಳ್ಳು. ಎಷ್ಟೋ ಸಂದರ್ಭದಲ್ಲಿ ಸೆಲೆಬ್ರಿಟಿಗಳ ಜೊತೆ ನಿಂತು ತೆಗೆಯುವ ಫೋಟೋವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವವರು ಇದ್ದಾರೆ. ಇನ್ನು ಕಾಂಗ್ರೆಸ್ಸಿನ ಕಾರ್ಯಕರ್ತ ಅದೇಗೆ ಕೇಸರಿ ಶಾಲು ಹಾಕಿಕೊಂಡ ಎನ್ನುವುದು ಕೂಡ ಕಾಂಗ್ರೆಸ್ ತನ್ನ ಕಾಲಿನ ಮೇಲೆ ತಾನೆ ಕಲ್ಲು ಎತ್ತಾಕಿಕೊಂಡ ಹಾಗೆ ಎನ್ನುವುದನ್ನು ಕೂಡ ಗಮನಿಸಬಹುದು. ಇನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಯಲ್ಲಿ ಅಲ್ಲಿನ ಸಮವಸ್ತ್ರ ಧರಿಸಿ ಫೋಟೋ ತೆಗೆದಿದ್ದಾರೆ, ಅವರು ಕಾಂಗ್ರೆಸ್ಸಿಗರಲ್ಲ ಎನ್ನುವುದು ಕೂಡ ಕಾಂಗ್ರೆಸ್ ತಾನೇ ತೋಡುವ ಬಾವಿಗೆ ತಾನೆ ಬಿದ್ದ ಹಾಗೆ ಆಗುತ್ತದೆ. ಸಂಘ ಯಾರಿಗೆ ಮತ ಹಾಕಿ ಎಂದು ಯಾವತ್ತೂ ಹೇಳಿಲ್ಲ ಮತ್ತು ಹೇಳುವುದೂ ಇಲ್ಲ. ಇನ್ನು ಈಗ ಕಾಂಗ್ರೆಸ್ಸಿನಲ್ಲಿ ಇರುವ ಎಷ್ಟೋ ಮಂದಿ ಒಂದು ಸಮಯದಲ್ಲಿ ಸಂಘದ ಒಳಗೆ ಹೋಗಿ ಬಂದವರೇ ಆಗಿದ್ದಾರೆ. ಒಟ್ಟಿನಲ್ಲಿ ಸಂಪತ್ತು ಯಾವ ಪಕ್ಷದವರು ಎಂದು ಪೊಲೀಸರು ತನಿಖೆ ಮಾಡಿದರೂ ಅದರಿಂದ ಮೀಡಿಯಾಗಳಿಗೆ ಒಂದು ಸುದ್ದಿಯಾಗುತ್ತದೆ ಬಿಟ್ಟರೆ ಅವರ ಕೇಸಿನ ಮೇಲೆ ಯಾವ ಪರಿಣಾಮ ಕೂಡ ಬೀರುವುದಿಲ್ಲ. ಒಬ್ಬ ವ್ಯಕ್ತಿ ತಾನು ಇಂತಿಂತಹ ಪಕ್ಷದ ಕಾರ್ಯಕರ್ತನಾಗಿರುವುದರಿಂದ ಇಂತಿಂತವರ ಮೇಲೆ ಮೊಟ್ಟೆ ಬಿಸಾಡಿದೆ ಎನ್ನುವುದು ನ್ಯಾಯಾಲಯದಲ್ಲಿ ಮುಖ್ಯವಾಗುವುದೇ ಇಲ್ಲ. ನ್ಯಾಯಾಲಯ ಅಂತಹ ವ್ಯಕ್ತಿಗಳನ್ನು ಒಬ್ಬ ಆರೋಪಿಯನ್ನಾಗಿಯೇ ನೋಡುತ್ತದೆ ಹೊರತು ಯಾವುದಾದರೂ ಪಕ್ಷದ ಕಾರ್ಯಕರ್ತನಾಗಿ ಅಲ್ಲ. ಇನ್ನು ಸಂಪತ್ತು ಮಾತ್ರವಲ್ಲ, ಮಡಿಕೇರಿಯ ಪ್ರವಾಸದಲ್ಲಿದ್ದಾಗ ಸಿದ್ದು ಮೇಲೆ ಬೇರೆ ಭಾಗಗಳಲ್ಲಿಯೂ ಮೊಟ್ಟೆ ಬಿಸಾಡಲಾಗಿದೆ. ಅದು ಕೂಡ ಈಗ ಬಹಿರಂಗವಾಗುತ್ತಿದೆ. ತಾವು ಅಪ್ಪಟ ಮಾಂಸಹಾರಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸಿದ್ದುಗೆ ಅವರದ್ದೇ ಪಕ್ಷದ ಕಾರ್ಯಕರ್ತ ಪ್ರೀತಿಯಿಂದ ಮೊಟ್ಟೆ ನೀಡಿದ್ದಾನೆ ಎಂದು ಡಿಕೆಶಿ ಈ ಪ್ರಕರಣವನ್ನು ಬೇರೆ ರೀತಿಯಲ್ಲಿ ತೆಗೆದುಕೊಂಡು ಹೋಗಬಹುದಿತ್ತು!
Leave A Reply