ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
ರಾಹುಲ್ ಗಾಂಧಿ ವಿರುದ್ಧ ಸೂರತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ತೀರ್ಪಿನಿಂದ ಕಾಂಗ್ರೆಸ್ ಖಂಡಿತವಾಗಿ ಇರಿಸುಮುರಿಸು ಅನುಭವಿಸುತ್ತಿದೆ. ಯಾಕೆಂದರೆ ಜನಪ್ರತಿನಿಧಿಗಳ ಕಾಯ್ದೆ 1951 ರಲ್ಲಿ ಬಹಳ ಸ್ಪಷ್ಟವಾಗಿ ಏನು ನಮೂದಿಸಿದೆ ಎಂದರೆ ಯಾವನೇ ಚುನಾಯಿತ ಜನಪ್ರತಿನಿಧಿ ಯಾವುದೇ ಪ್ರಕರಣದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಅವಧಿಗೆ ಶಿಕ್ಷೆ ಘೋಷಿತನಾದರೆ ಆಗ ಆ ಜನಪ್ರತಿನಿಧಿಯ ಸ್ಥಾನಕ್ಕೆ ಚ್ಯುತಿ ಬರುತ್ತದೆ. ಅಂತವರನ್ನು ಸದನದಿಂದ ಅನರ್ಹಗೊಳಿಸಬಹುದು. ಈಗ ರಾಹುಲ್ ವಿರುದ್ಧವೂ ಆಗಿರುವುದು ಅದೇ. ಇದರಿಂದ ಏನು ಸಂದೇಶ ಹೋಗುತ್ತದೆ ಎಂದರೆ ಜನಪ್ರತಿನಿಧಿಗಳು ತಮ್ಮ ಸೇವಾವಧಿಯಲ್ಲಿ ಆದಷ್ಟು ಶುದ್ಧತೆಯನ್ನು ಕಾಪಾಡಬೇಕು. ಯಾಕೆಂದರೆ ಅವರನ್ನು ಜನ ಗಮನಿಸುತ್ತಾ ಇರುತ್ತಾರೆ. ರಾಜಕಾರಣಿಗಳ ನಡೆ, ನುಡಿ ಮಾದರಿಯಾಗಿರಬೇಕು. ಅವರು ಹೇಳಿಕೆ ಮತ್ತು ಜೀವನದಲ್ಲಿ ದಾರಿ ತಪ್ಪಿದರೆ ಅದರ ದೂರಗಾಮಿ ಪರಿಣಾಮ ನೋಡಬೇಕಾಗುತ್ತದೆ. ಸೂರತ್ ನ್ಯಾಯಾಲಯದಲ್ಲಿ ಗುಜರಾತ್ ರಾಜ್ಯದ ಭಾರತೀಯ ಜನತಾ ಪಾರ್ಟಿಯ ಶಾಸಕ ಪೂರ್ಣೇಶ್ ಈ ಪ್ರಕರಣವನ್ನು ದಾಖಲಿಸಿದಾಗ ಇದರ ತೀರ್ಪು ಈ ಪರಿ ಇರುತ್ತೆ ಎಂದು ಕಾಂಗ್ರೆಸ್ಸಿಗರಿಗೆ ಮತ್ತು ಸ್ವತ: ರಾಹುಲ್ ಗಾಂಧಿಯವರಿಗೂ ಅಂದಾಜು ಇರಲಿಲ್ಲ. ಯಾಕೆಂದರೆ ಯಾವುದೇ ಹೇಳಿಕೆ ತಮ್ಮನ್ನು ಅನರ್ಹ ತನಕ ತೆಗೆದುಕೊಂಡು ಹೋಗಬಹುದು ಎಂದು ಈ ತಲೆಮಾರಿನ ರಾಜಕಾರಣಿಗಳು ಮರೆತು ಯಾವುದೋ ಕಾಲವಾಗಿದೆ. ಇಂತಹ ಮನಸ್ಥಿತಿಯಲ್ಲಿಯೇ ರಾಹುಲ್ ಕರ್ನಾಟಕದ ಕೋಲಾರದಲ್ಲಿ ನಿಂತು ಮೋದಿ ಹೆಸರಿನ ಎಲ್ಲರೂ ಕಳ್ಳರೇ ಯಾಕೆ ಎನ್ನುವ ಅರ್ಥದ ಮಾತುಗಳನ್ನು ಆಡಿದ್ದರು.
2019ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಈ ಮಾತನ್ನು ಹೇಳಿಯೂ ಅಲ್ಲಿ ಕೋಲಾರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಾಗಲಿಲ್ಲ. ಕೋಲಾರ ಬಿಡಿ, ಇಡೀ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿರುವುದು 2019 ರಲ್ಲಿ ಒಂದೇ ಒಂದು ಲೋಕಸಭಾ ಸ್ಥಾನ. ಆದರೆ ನಾಲ್ಕು ವರ್ಷಗಳ ಬಳಿಕ ಬಂದಿರುವ ತೀರ್ಪು ರಾಹುಲ್ ಅವರಿಗಂತೂ ದೊಡ್ಡ ಅವಮಾನ. ಇದರಿಂದ ಅವರ ರಾಜಕೀಯ ಜೀವನ ಮುಗಿಯಿತು ಎಂದಲ್ಲ. ಬೇರೆ ಸಾಮಾನ್ಯ ಸಂಸದರಿಗೆ ಹೀಗೆ ಆಗಿದ್ದರೆ ಅವರನ್ನು ಇಷ್ಟೊತ್ತಿಗೆ ಪಕ್ಷದಿಂದಲೇ ಉಚ್ಚಾಟನೆ ಮಾಡಿ ಮನೆಗೆ ಕಳುಹಿಸಲಾಗುತ್ತಿತ್ತು. ಆದರೆ ರಾಹುಲ್ ಮನೆಯಲ್ಲಿಯೇ ಪಕ್ಷ ಇರುವುದರಿಂದ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಕಾಂಗ್ರೆಸ್ ಈ ಹಂತದಲ್ಲಿ ಧೈರ್ಯ ಮಾಡುವುದಿಲ್ಲ. ಆದರೆ ಅದೇ ಕಾಂಗ್ರೆಸ್ ರಾಹುಲ್ ಪರ ಪ್ರತಿಭಟನೆ ಮಾಡುವುದು ಕೂಡ ಅಷ್ಟೇ ಅಸಂಬದ್ಧ. ಅವರ ರಾಜಕೀಯ ಅವರು ಏನು ಬೇಕಾದರೂ ಮಾಡಿಕೊಳ್ಳಬಹುದು. ಆದರೆ ರಾಹುಲ್ ಏನು ಮಾಡಿದರೂ ಅದನ್ನು ಸಮರ್ಥನೆ ಮಾಡುವುದು ಕಾಂಗ್ರೆಸ್ಸಿನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ.
ರಾಹುಲ್ ವಿರುದ್ಧ ಕ್ರಮ ಕೈಗೊಂಡಿರುವುದು ಅದಾನಿ ವಿರುದ್ಧ ಅವರು ಧ್ವನಿ ಎತ್ತುತ್ತಿರುವುದಕ್ಕೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ರಾಹುಲ್ ಅವರಿಗೂ ಅದಾನಿಗೂ, ಮೋದಿ ಜಾತಿಯ ವಿರುದ್ಧ ಹೇಳಿಕೆಗೂ, ನ್ಯಾಯಾಲಯದ ತೀರ್ಪಿಗೂ ಯಾವುದೇ ಸಂಬಂಧ ಇಲ್ಲ. ಒಂದಕ್ಕೊಂದು ಸಂಬಂಧ ಕಲ್ಪಿಸಿ ಖರ್ಗೆ ಅವರು ಹೇಳುವುದು ಕೂಡ ಅವರ ಆರು ದಶಕಗಳ ರಾಜಕೀಯ ಜೀವನಕ್ಕೂ ಒಂದು ಕಪ್ಪುಚುಕ್ಕೆ. ರಾಹುಲ್ ನಿಜ ಹೇಳಿದ್ದಾರೆ ಎಂದು ಖರ್ಗೆ ಅದೇಗೆ ಹೇಳುತ್ತಾರೋ ಅವರಿಗೆ ಗೊತ್ತು. ಅಭಿಮಾನ ಇರಬೇಕು. ಆದರೆ ದುರಾಭಿಮಾನ ಇರಬಾರದು. ಕಾಂಗ್ರೆಸ್ ಮೊದಲ ಕುಟುಂಬಕ್ಕೆ ಇಷ್ಟು ತಲೆಬಾಗಿ ಹೇಳಿದ್ದೆಲ್ಲವನ್ನು ಕೂಡ ಸರಿ ಎನ್ನುವುದು ಖರ್ಗೆ ಅವರಿಗೂ ಶೋಭೆ ತರುವುದಿಲ್ಲ. ಇನ್ನು ರಾಹುಲ್ ಸಹೋದರಿ ಪ್ರಿಯಾಂಕಾ ವಾದ್ರಾ ತಮ್ಮ ಸಹೋದರ ಯಾರಿಗೂ ಹೆದರಲ್ಲ ಎಂದು ಹೇಳಿದ್ದಾರೆ. ನಿಮ್ಮ ಸಹೋದರ ಯಾರಿಗೂ ಹೆದರದೇ ಇದ್ದರೂ ಪರವಾಗಿಲ್ಲ. ಆದರೆ ತಾನು ಮಾತನಾಡುವಾಗ ಒಂದಿಷ್ಟು ಯೋಚಿಸಿ ಮಾತನಾಡಲಿ ಎಂದು ಪ್ರಿಯಾಂಕಾ ಹೇಳಿದರೆ ಸಾಕು.
ಇನ್ನು ರಾಹುಲ್ ಅವರನ್ನು ಅನರ್ಹ ಮಾಡಿದ್ದು ಬಿಜೆಪಿ ಪಕ್ಷ ಅಲ್ಲ. ನರೇಂದ್ರ ಮೋದಿ ಅಲ್ಲ. ಕೇಂದ್ರ ಸರಕಾರ ಅಲ್ಲ. ಹಾಗೆ ಮಾಡಿದ್ದರೆ ದ್ವೇಷ ಎಂದು ಹೇಳಬಹುದಿತ್ತು. ಆದರೆ ಈಗ ಅನರ್ಹ ಮಾಡಿರುವುದು 1951 ರಲ್ಲಿ ರಾಹುಲ್ ಮುತ್ತಜ್ಜ ಮಾಡಿಟ್ಟಿದ್ದ ಕಾನೂನು. ಇನ್ನು ಇದು ನ್ಯಾಯಾಲಯದಿಂದ ಸಾಬೀತು ಆದ ನಂತರವೇ ಮುಂದಿನ ಪ್ರಕ್ರಿಯೆ ನಡೆದಿರುವುದು. ಹಾಗಂತ ನ್ಯಾಯಾಲಯದಿಂದ ಬಿಜೆಪಿ ಪರ ವಕೀಲರು ಮಾತ್ರ ವಾದ ಮಾಡಿರುವುದಲ್ಲ. ಅಲ್ಲಿ ರಾಹುಲ್ ಪರ ವಕೀಲರು ಕೂಡ ವಾದ ಮಾಡಿರುತ್ತಾರೆ. ಇದರಿಂದ ಅಂತಿಮವಾಗಿ ನ್ಯಾಯಾಲಯಕ್ಕೆ ರಾಹುಲ್ ಹೇಳಿರುವುದು ತಪ್ಪು ಎಂದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ. ಹಾಗಂತ ಕಾನೂನಾತ್ಮಕ ದಾರಿಗಳು ರಾಹುಲ್ ಗೆ ಮುಗಿದಿವೆ ಎಂದಲ್ಲ. ಅವರು ಗುಜರಾತ್ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು. ಅದಕ್ಕೆ 30 ದಿನಗಳ ಅವಕಾಶ ಇದೆ. ಅಲ್ಲಿ ಉಚ್ಚ ನ್ಯಾಯಾಲಯ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯುತ್ತಾ, ವಜಾ ಮಾಡುತ್ತಾ ಎನ್ನುವುದನ್ನು ಕಾಲವೇ ಹೇಳುತ್ತದೆ!
Leave A Reply