ಹಾಲಿನ ದರ ಹೆಚ್ಚಾದರೆ ಹೋಟೇಲಿನವರು ಖುಷ್!
ಕರ್ನಾಟಕದಲ್ಲಿ ಹಾಲಿನ ದರ ಲೀಟರಿಗೆ ಮೂರು ರೂಪಾಯಿ ಏರಿಸಲು ಕಾಂಗ್ರೆಸ್ ಸರಕಾರ ತೀರ್ಮಾನಿಸಿ ಆದೇಶ ಹೊರಡಿಸಿದೆ. ಮುಂದಿನ 9 ತಿಂಗಳು ಯಾವುದೇ ಚುನಾವಣೆಗಳು ಇಲ್ಲದೇ ಇರುವುದರಿಂದ ಅಂತಹ ಸಮಸ್ಯೆ ಯಾವುದೂ ಇಲ್ಲ. ಇನ್ನು ಪ್ರತಿ ಬಾರಿ ಹಾಲಿನ ದರ ಏರಿಸುವಾಗ ರೈತರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವುದರಿಂದ ಇತ್ತ ವಿಪಕ್ಷಗಳು ಕೂಡ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿ ಹೋರಾಟ ಮಾಡುವುದಿಲ್ಲ. ಈ ಧೈರ್ಯ ಆಡಳಿತ ಪಕ್ಷಕ್ಕೆ ಇರುವುದರಿಂದ ಹಾಲು, ಮೊಸರು ವಿಷಯದಲ್ಲಿ ದರ ಹೆಚ್ಚಳಕ್ಕೆ ಅವರು ಟೆನ್ಷನ್ ಮಾಡುವುದಿಲ್ಲ. ಆದರೆ ಯಾವಾಗ ಲೀಟರ್ ಮೇಲೆ ಮೂರು ರೂಪಾಯಿ ಹೆಚ್ಚಳವಾಗುತ್ತದೋ ಆಗ ಹೋಟೇಲುಗಳಲ್ಲಿ ಪ್ರತಿ ಕಾಫಿ, ಚಾ ಮೇಲೆ ಗ್ಲಾಸಿಗೆ ಎರಡ್ಮೂರು ರೂಪಾಯಿ ಹೆಚ್ಚಳವಾಗುತ್ತಾ ಹೋಗುತ್ತದೆ. ಇದು ಯಾಕೆ ಎನ್ನುವುದು ಯಕ್ಷ ಪ್ರಶ್ನೆ. ಒಂದು ಲೀಟರ್ ಹಾಲಿಗೆ ಹೋಟೇಲಿನವರು ನೀರು ಬೆರೆಸಿ ಅದರಲ್ಲಿ 20 ಗ್ಲಾಸ್ ಕಾಫಿ ಮಾಡಿದರೆ ಪ್ರತಿ ಗ್ಲಾಸಿಗೆ ಎರಡು ರೂ ಜಾಸ್ತಿ ಮಾಡಿದರೆ ನಿವ್ವಳ 40 ರೂಪಾಯಿ ಹೆಚ್ಚು ವಸೂಲಿ ಮಾಡಿದ ಹಾಗೆ ಆಗುತ್ತದೆ. ಅಲ್ಲಿ ಲೀಟರಿಗೆ ಹೆಚ್ಚು ಆದದ್ದು ಮೂರು ರೂಪಾಯಿ. ಇಲ್ಲಿ ಹೋಟೆಲಿನವರಿಗೆ ಸಿಕ್ಕಿದ್ದು ಹೆಚ್ಚುವರಿ 37 ರೂಪಾಯಿ. ಆದ್ದರಿಂದ ಹೋಟೇಲಿನವರು ಕೂಡ ಹಾಲಿನ ದರ ಹೆಚ್ಚಳವಾಗಲಿ ಎಂದೇ ಬಯಸುತ್ತಾರಾ ಎನ್ನುವುದು ಪ್ರಶ್ನೆ.
ಕೆಎಂಎಫ್ ನಷ್ಟದಲ್ಲಿದೆ ಎಂದು ಹೆಚ್ಚಳವಾ?
ಇನ್ನು ರೈತರ ಹೆಸರಿನಲ್ಲಿ ಕೆಎಂಎಫ್ ನವರು ದರ ಹೆಚ್ಚಿಸಲು ಸರಕಾರಕ್ಕೆ ದಂಬಾಲು ಬಿದ್ದು ಹೆಚ್ಚಳ ಮಾಡಿಕೊಳ್ಳುತ್ತಾರೆ. ಆದರೆ ರೈತರ ಹೆಸರಿನಲ್ಲಿ ಹೆಚ್ಚಳವಾಗಿರುವ ದರ ಅವರಿಗೆ ಸಿಗುತ್ತದಾ ಎನ್ನುವುದು ಪ್ರಶ್ನೆ. ಯಾಕೆಂದರೆ ರಾಜ್ಯದ ಹೊಸ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹೈನುಗಾರರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನದಲ್ಲಿ ಒಂದೂವರೆ ರೂಪಾಯಿ ಕಡಿತ ಮಾಡಲಾಗಿತ್ತು. ಅದನ್ನು ಯಾಕೆ ಹಾಗೆ ಮಾಡಿದ್ದು ಎಂದು ಕೇಳಿದರೆ ಅದು ಬೇಸಿಗೆ ಕಾಲದಲ್ಲಿ ಹೆಚ್ಚುವರಿಯಾಗಿ ಕೊಡುವ ಸಹಾಯ ಧನ. ಬೇಸಿಗೆ ಮುಗಿಯಿತ್ತಲ್ಲ, ಅದಕ್ಕೆ ಕಡಿಮೆ ಮಾಡಿದ್ದು ಎಂದು ಇವರು ಹೇಳಿದ್ದರು. ಒಂದು ವೇಳೆ ಹೈನುಗಾರರ ಮೇಲೆ ಅಷ್ಟು ಪ್ರೀತಿ ಇದ್ದರೆ ನಾವು ಒಂದೂವರೆ ರೂಪಾಯಿ ಕಡಿತ ಮಾಡುವುದಿಲ್ಲ ಎಂದು ಹೇಳಬಹುದಿತ್ತು. ಆದರೆ ಹಾಗೆ ಮಾಡಿಲ್ಲ. ಹಾಗಿರುವಾಗ ಈಗ ಹೈನುಗಾರರ ಮೇಲೆ ವಿಶೇಷ ಪ್ರೀತಿ ಬರಲು ಕಾರಣ ಏನು?
ಕೆಎಂಎಫ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಖ್ಯಮಂತ್ರಿಯವರೊಂದಿಗೆ ಈ ದರ ಹೆಚ್ಚಳದ ಬಗ್ಗೆ ಸಭೆ ಮಾಡುವಾಗ ನಮ್ಮ ಸಂಸ್ಥೆ ನಷ್ಟದಲ್ಲಿದೆ. ಆದ್ದರಿಂದ ಹೆಚ್ಚಳ ಅನಿವಾರ್ಯ ಎನ್ನುವ ಅರ್ಥದ ಮಾತುಗಳನ್ನು ಆಡಿದ್ದಾರೆ. ಆದರೆ ಸಿಎಂ “ನೀವು ನಿಮ್ಮ ಆಡಳಿತಾತ್ಮಕ ತಪ್ಪು ಮತ್ತು ಹೊರೆಯ ಕಾರಣದಿಂದ ಈ ದರ ಹೆಚ್ಚಿಸುವುದಕ್ಕೆ ಒತ್ತಡ ಹಾಕುವುದು ಸರಿಯಲ್ಲ” ಎನ್ನುವ ಅರ್ಥದ ಮಾತುಗಳನ್ನು ಹೇಳಿದ್ದಾರೆ. ಅದಕ್ಕೆ ಕೆಎಂಎಫ್ ನವರು ನಾವು ಮೂರು ತಿಂಗಳಿನಿಂದ ನಷ್ಟವನ್ನು ಅನುಭವಿಸುತ್ತಿರುವುದಾಗಿ ಮತ್ತೆ ಒತ್ತಿ ಒತ್ತಿ ಹೇಳಿದ್ದಾರೆ. ಅದಕ್ಕೆ ಸಿಎಂ “ಕೆಎಂಎಫ್ ವ್ಯವಹಾರಿಕ ಲಾಭಗಳನ್ನು ನೋಡಿಕೊಂಡು ಬೆಳೆಯಬೇಕೆಂದು ಅದನ್ನು ಹುಟ್ಟು ಹಾಕಿರುವುದಲ್ಲ. ಕೆಎಂಎಫ್ ಹೈನುಗಾರರ ಭವಿಷ್ಯ ಮತ್ತು ಸಾವರ್ಜನಿಕರ ಹಿತಾಸಕ್ತಿ ಎರಡನ್ನು ಗಮನದಲ್ಲಿಟ್ಟು ಕೆಲಸ ಮಾಡಬೇಕು ಎನ್ನುವ ಕಾರಣಕ್ಕೆ ಆರಂಭಿಸಿದ್ದು” ಎಂದು ತಿರುಗಿಸಿ ಹೇಳಿದ್ದಾರೆ. ಇದೆಲ್ಲವನ್ನು ಗಮನಿಸುವಾಗ ಹಾಲಿನ ದರ ಮೂರು ರೂ ಹೆಚ್ಚಳ ಮಾಡಿರುವುದರ ಹಿಂದೆ ರೈತರ ಏಳಿಗೆಗಿಂತ ಕೆಎಂಎಫ್ ಹಿತಾಸಕ್ತಿಯೇ ಜಾಸ್ತಿ ಇದ್ದಂತೆ ಕಾಣುತ್ತದೆ.
ಎರಡು ಸಾವಿರ ಪಡೆಯಲು ಹೊಸ ಕಂಡೀಶನ್!
ಇನ್ನು ರಾಜ್ಯ ಸರಕಾರದ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಯಲ್ಲಿರುವ ತಾಂತ್ರಿಕ ನಿರ್ಭಂದನೆಗಳು ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಮನೆಯ ಯಜಮಾನಿಗೆ ಪ್ರತಿ ತಿಂಗಳಿಗೆ ಎರಡು ಸಾವಿರ ರೂಪಾಯಿ ಕೊಡುವ ಸ್ಕೀಮಿಗೆ ಹೊಸ ಹೊಸ ಕಂಡೀಶನ್ ಗಳು ಸೇರುತ್ತಾ ಹೋಗುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಈಗ ಹೊಸದಾಗಿ ಏನೆಂದರೆ ರೇಶನ್ ಕಾರ್ಡಿನಲ್ಲಿ ಮನೆಯ ಯಜಮಾನಿಯ ಹೆಸರು ಮೇಲೆ ಇರಬೇಕು ಎನ್ನುವ ಕಂಡಿಷನ್ ಹಾಕಲಾಗಿದೆ. ಬಹುತೇಕ ಮನೆಗಳ ರೇಶನ್ ಕಾರ್ಡಿನಲ್ಲಿ ಮನೆಯ ಯಜಮಾನನ ಹೆಸರು ಮೇಲೆ ಇರುತ್ತದೆ. ಅಂತಹ ಮನೆಗಳಲ್ಲಿ ಹೆಂಗಸರು ಎರಡು ಸಾವಿರ ರೂಪಾಯಿಗಾಗಿ ಅರ್ಜಿ ಹಾಕಿದರೆ ಅವರ ಹೆಸರು ರೇಶನ್ ಕಾರ್ಡಿನಲ್ಲಿ ಮೇಲೆ ಇರದಿದ್ದರೆ ಅಂತವರಿಗೆ ಹಣ ಸಿಗುವುದಿಲ್ಲ. ಅದಕ್ಕಾಗಿ ಅವರು ತಮ್ಮ ಹೆಸರು ಮೇಲೆ ಹಾಕಿಸಲು ಮತ್ತೆ ಓಡಾಡಬೇಕಾಗುತ್ತದೆ. ಇದು ಅರ್ಧ ರಾಜ್ಯದ ಸಮಸ್ಯೆಯಾಗಿದೆ. ಹೀಗೆ ರಾಜ್ಯ ಸರಕಾರ ಗ್ಯಾರಂಟಿಯಿಂದ ಜನರಿಗೆ ಸೌಲಭ್ಯ ಕೊಡುತ್ತದೋ, ಆಸೆ ತೋರಿಸಿ ಉಪದ್ರವ ಕೊಡುತ್ತದೋ, ಕಾದು ನೋಡಬೇಕು!!
Leave A Reply