ಬಿಜೆಪಿ ಶಾಸಕನ ಕೊಲೆಯಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಅನ್ಸಾರಿ ಜೈಲಿನಲ್ಲಿ ಸಾವು!
ಮುಖ್ತಾರ್ ಅನ್ಸಾರಿ ಎಂಬ ಕುಖ್ಯಾತ ಕ್ರಿಮಿನಲ್ ಹಿನ್ನಲೆಯ ರೌಡಿ, ಐದು ಬಾರಿ ಶಾಸಕ, 60 ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದ ವ್ಯಕ್ತಿ ಉತ್ತರ ಪ್ರದೇಶದ ಜೈಲಿನಲ್ಲಿ ಮೃತಪಟ್ಟಿದ್ದಾನೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಮೊಹಮ್ಮದ್ ಅಹ್ಮದ್ ಅನ್ಸಾರಿಯವರ ಕುಟುಂಬಸ್ಥನಾಗಿದ್ದ ಮುಖ್ತಾರ್ ಅನ್ಸಾರಿಯ ಹಿರಿಯರು ಮಿಲಿಟರಿಯಲ್ಲಿ ಉನ್ನತ ಸೇವೆ ಸಲ್ಲಿಸಿದ್ದರು. ಆದರೆ ಮುಖ್ತಾರ್ ಅನ್ಸಾರಿ 1990 ರಲ್ಲಿ ಕ್ರಿಮಿನಲ್ ಚಟುವಟಿಕೆಗಳಿಗೆ ವಾಲಿ ಮಾವು, ಘಾಜಿಪುರ, ವಾರಣಾಸಿ, ಜೌನಾಪುರಾ ಜಿಲ್ಲೆಗಳಲ್ಲಿ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ.
ಬನಾರಸ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ನಾಯಕನಾಗಿ ತನ್ನ ಸಾರ್ವಜನಿಕ ಜೀವನಕ್ಕೆ ಬಂದ ಅನ್ಸಾರಿ ಅಲ್ಲಿ ಸಿಕ್ಕಿದ ಇಮೇಜಿನಿಂದಲೇ 1996 ರಲ್ಲಿ ಮೊದಲ ಬಾರಿಗೆ ಮಾವು ಶಾಸಕನಾಗಿ ಆಯ್ಕೆಯಾದ. ಆ ಬಳಿಕ ಎರಡು ಸಲ ಬಿಎಸ್ ಪಿಯಿಂದ ಮೂರು ಬಾರಿ ಪಕ್ಷೇತರನಾಗಿ ಗೆದ್ದಿದ್ದ. 2009 ರಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡ ಮುರಳಿ ಮನೋಹರ್ ಜೋಷಿ ಅವರ ವಿರುದ್ಧ 17,211 ಮತಗಳಿಂದ ಸೋತಿದ್ದ. ಜೈಲಿನಲ್ಲಿರುವಾಗ ಬಹುಸಮಾಜವಾದಿ ಪಾರ್ಟಿ ಅವನಿಗೆ ಟಿಕೆಟ್ ನೀಡಿತ್ತು.
2010 ರಲ್ಲಿ ಈತನನ್ನು ಮತ್ತು ಇವನ ಸಹೋದರನನ್ನು ಬಿಎಸ್ ಪಿಯಿಂದ ಉಚ್ಚಾಟನೆ ಮಾಡಲಾಗಿತ್ತು. ಗಾಜಿಯಾಪುರ ಜೈಲಿನಲ್ಲಿ ಪೊಲೀಸರು ದಾಳಿ ನಡೆಸಿದಾಗ ಈತ ಜೈಲಿನ ಒಳಗೆ ಏರ್ ಕೂಲರ್, ಅಡುಗೆ ಮಾಡುವ ಐಷಾರಾಮಿ ವಸ್ತುಗಳನ್ನು ಬಳಸಿ ವೈಭೋಗದ ಜೀವನ ನಡೆಸುತ್ತಿದ್ದ ಎನ್ನುವುದು ಪತ್ತೆಯಾಗಿತ್ತು. ತಕ್ಷಣ ಇವನನ್ನು ಅಲ್ಲಿಂದ ಮಥುರಾ ಜೈಲಿಗೆ ಸ್ಥಳಾಂತರಿಸಲಾಗಿತ್ತು.
2005 ರಿಂದ ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯದ ಜೈಲುಗಳಲ್ಲಿದ್ದ ಮುಖ್ತಾರ್ ಅನ್ಸಾರಿಗೆ 2023 ರ ಎಪ್ರಿಲ್ ನಲ್ಲಿ ಹತ್ತು ವರ್ಷಗಳ ಜೀವಾವಧಿ ಶಿಕ್ಷೆ ನ್ಯಾಯಾಲಯದಿಂದ ಘೋಷಿಸಲಾಗಿತ್ತು. ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಅವರನ್ನು ಕೊಂದ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಲಾಗಿತ್ತು. ಮಾರ್ಚ್ 28, 2024 ರಂದು ಅನ್ಸಾರಿ ಜೈಲಿನಲ್ಲಿರುವಾಗಲೇ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ. ಸಾಯುವಾಗ ಅವನಿಗೆ 60 ವರ್ಷ. ತಂದೆಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಮಗ ಉಮರ್ ಅನ್ಸಾರಿ ನಿಧಾನಗತಿಯ ವಿಷಪ್ರಾಶಣ ಮಾಡಿ ಹಂತಹಂತವಾಗಿ ಕೊಲ್ಲಲಾಗಿದೆ, ಆದ್ದರಿಂದ ಈ ಕುರಿತು ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾನೆ. ಸಾಯುವ 10 ದಿನಗಳ ಮೊದಲು ಮಾರ್ಚ್ 19, 2024 ರಂದು ಬಾರಾಬಂಕಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದ ಅನ್ಸಾರಿ ತನಗೆ ಆಹಾರದಲ್ಲಿ ವಿಷಯುಕ್ತ ವಸ್ತುವನ್ನು ಸೇರಿಸಿ ನೀಡಿರುವ ಶಂಕೆ ಇದ್ದು, ಆಹಾರ ಸೇವಿಸಿದ ಬಳಿಕ ನರ ಮತ್ತು ಮಂಡಿಗಳಲ್ಲಿ ವಿಪರೀತ ನೋವಾಗುತ್ತದೆ ಎಂದು ತಿಳಿಸಿದ್ದ. ಉತ್ತರ ಪ್ರದೇಶ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಈ ನಡುವೆ ಆತ ಮೃತಪಟ್ಟಿದ್ದಾನೆ.
Leave A Reply