ರೀಲ್ಸ್ ಹುಚ್ಚಾಟಕ್ಕೆ ಯೂಟ್ಯೂಬ್ ಪ್ರಭಾವಿ ಅನ್ವಿ ಬಲಿ!

ಮಳೆಗಾಲದ ಸಂದರ್ಭದಲ್ಲಿ ಜಲಪಾತ, ಚಾರಣಕ್ಕೆ ತೊಡಗುವವರು ಆದಷ್ಟು ಎಚ್ಚರಿಕೆಯನ್ನು ವಹಿಸಬೇಕು, ಇಂತಹ ದಿನಗಳಲ್ಲಿ ಆದಷ್ಟು ಇಂತಹ ಪ್ರದೇಶಗಳಿಗೆ ಭೇಟಿ ಕೊಡುವುದನ್ನು ಕಡಿಮೆ ಮಾಡಬೇಕು ಎಂದು ಎಷ್ಟೇ ಜಾಗೃತಿಯನ್ನು ಮೂಡಿಸಿದರೂ ಅದನ್ನು ಯುವಜನಾಂಗ ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎನ್ನುವುದು ಪ್ರಶ್ನೆ. ಕೆಲವರು ಒಂದು ರೀಲ್ ಗಾಗಿ ತಮ್ಮ ಪ್ರಾಣವನ್ನೇ ಪಣಕ್ಕೆ ಇಡುವುದನ್ನು ನಾವು ನೋಡಬಹುದು. ಕೆಲವರು ಇಂತಹ ರೀಲ್ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುವುದು ಇದೆ. ಅನ್ವಿ ಕಾಮ್ದಾರ್ ಎನ್ನುವ 26 ವರ್ಷದ ಯುವತಿ ಅದಕ್ಕೆ ತಾಜಾ ಉದಾಹರಣೆ. ತನ್ನ ಪ್ರವಾಸದ ಹುಚ್ಚನ್ನು ರೀಲ್ಸ್ ಮೂಲಕ ಹೊರಗೆ ತೋರಿಸುತ್ತಿದ್ದ ಅನ್ವಿ ಕಾಮ್ದಾರ್ ರೀಲ್ ಮಾಡುವ ಸಂದರ್ಭದಲ್ಲಿಯೇ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ವಿಧಿಯಾಟಕ್ಕೆ ಬಲಿಯಾಗಿದ್ದಾಳೆ.
ಇನ್ಸ್ಟಾಗ್ರಾಮ್ ಇವತ್ತಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಅನ್ವಿ ಕಾಮ್ದಾರ್ ಅವರು ಮೂಲತ ಚಾರ್ಟೆಡ್ ಅಕೌಂಟೆಂಟ್ ಆಗಿದ್ದರೂ ತಮ್ಮನ್ನು ಟ್ರಾವೆಲ್ ಡಿಟೆಕ್ಟಿವ್ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದರು. ಕುಂಭೆ ಜಲಪಾತಕ್ಕೆ ಜುಲೈ 16 ರಂದು ತಮ್ಮ ಸ್ನೇಹಿತ ಬಳಗದೊಂದಿಗೆ ಹೋಗಿದ್ದ ಆಕೆ ರೀಲ್ ಚಿತ್ರೀಕರಣದ ಮೇಲೆ 300 ಅಡಿ ಆಳದ ಕಮರಿಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಅಧಿಕಾರಿಗಳು, ರಕ್ಷಣಾ ತಂಡ, ಕೋಸ್ಟ್ ಗಾರ್ಡ್ ಪಡೆಗಳೊಂದಿಗೆ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಮಂಡಳಿಯ ಸಿಬ್ಬಂದಿಯಿಂದ ಹೆಚ್ಚುವರಿ ಸಹಾಯವನ್ನು ಕೋರಲಾಯಿತು. ಆದರೆ ಮಳೆಯ ರಭಸಕ್ಕೆ ಕಲ್ಲುಗಳು ನಿರಂತರವಾಗಿ ಕಂದಕಕ್ಕೆ ಬೀಳುತ್ತಿದ್ದ ಕಾರಣ , ರಕ್ಷಣಾ ಕಾರ್ಯಾಚರಣೆಗೆ ಇನ್ನಷ್ಟು ಅಡಚಣೆಯಾಗಿತ್ತು. ಐದಾರು ಗಂಟೆಗಳ ಕಾರ್ಯಾಚರಣೆಯ ಬಳಿಕ ಅನ್ವಿಯನ್ನು ಹೊರಗೆ ತೆಗೆಯಲಾಯಿತು. ಗಂಭೀರ ಗಾಯಗೊಂಡಿದ್ದ ಅನ್ವಿಯನ್ನು ಉಳಿಸಲಾಗಲಿಲ್ಲ.
ಮುಂಬೈನಲ್ಲಿ ನೆಲೆಸಿರುವ ಅನ್ವಿ ಕಾಮ್ದಾರ್ ಗೆ ಇನ್ಸ್ಟಾಗ್ರಾಮ್ ನಲ್ಲಿ ಎರಡು ಲಕ್ಷ 54 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಅನ್ವಿ ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿದ್ದು, ಎರಡು ದಿನಗಳ ಹಿಂದಷ್ಟೇ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲಿ ಮಳೆಗಾಲದಲ್ಲಿ ಜನರು ಭೇಟಿಕೊಡಬಹುದಾದ ಐದು ಸ್ಥಳಗಳ ಪಟ್ಟಿಯನ್ನು ನೀಡಿದ್ದರು.
ಕೆಜಿ ಪ್ಲಾಸ್ಟಿಕ್ ಕೊಡಿ ಕೆಜಿ ಸಕ್ಕರೆ ಉಚಿತವಾಗಿ ಪಡೆಯಿರಿ!
ಪ್ಲಾಸ್ಟಿಕ್ ನಷ್ಟು ಪ್ರಕೃತಿ ಮಾರಕ ಮತ್ತೊಂದಿಲ್ಲ. ಏಕಬಳಕೆಯ ಪ್ಲಾಸ್ಟಿಕ್ ಎಷ್ಟು ಕಡಿಮೆ ಬಳಸುತ್ತಿರೋ ಅಷ್ಟು ನಾವು ಪ್ರಕೃತಿಯನ್ನು ಉಳಿಸುತ್ತೇವೆ ಎಂದೇ ಲೆಕ್ಕ. ಆ ನಿಟ್ಟಿನಲ್ಲಿ ಕರ್ನಾಟಕದ ವಡಗೇರಾ ತಾಲೂಕು ಪಂಚಾಯತ್ ಅಧಿಕಾರಿಯು ಈ ಘೋಷಣೆಯನ್ನು ಮಾಡಿದ್ದಾರೆ. ಇದರಿಂದ ಹಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ತಮ್ಮ ಮನೆಗಳ ಮತ್ತು ಆಸುಪಾಸಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಒಟ್ಟು ಮಾಡಿ ಪಂಚಾಯತ್ ಕಚೇರಿಗೆ ತಂದು ಕೊಡುತ್ತಿದ್ದಾರೆ. ಇದರಿಂದ ಒಂದೇ ದಿನ 25 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಒಟ್ಟಾಗಿದೆ.
ಈಗಾಗಲೇ ತಾಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ಈಗಾಗಲೇ ಸಕ್ಕರೆಯನ್ನು ಗೋಣಿಯಲ್ಲಿ ತಂದು ಸಾಕಷ್ಟು ಸಂಗ್ರಹಿಸಿಕೊಂಡಿದ್ದಾರೆ.