ಬೈಕ್ ರ್ಯಾಲಿ ಆದರೆ ಕೋಮು ಗಲಭೆ ಆಗುತ್ತದೆ ಎಂದ ಖಾದರ್ ಅವರೇ ಏನಾಯಿತು?
ಉಳ್ಳಾಲ ಅಥವಾ ಮಂಗಳೂರು ವಿಧಾನಸಭೆ ಕ್ಷೇತ್ರದ ಶಾಸಕ ಹಾಗೂ ಆಹಾರ ಸಚಿವ ಯು.ಟಿ. ಖಾದರ್ ಅವರು ಜ್ಯೋತಿಷಿ ಆಗಲು ಹೊರಟಿದ್ದಾರೆ. ಇನ್ನು ಮುಂದೆ ಮಂಗಳೂರಿನಲ್ಲಿ ಮತ್ತು ರಾಜ್ಯದಲ್ಲಿ ಏನು ಆಗುತ್ತೆ ಎಂದು ಯಾರಿಗಾದರೂ ಕೇಳಬೇಕು ಎಂದು ಅನಿಸಿದರೆ ಸಚಿವರು ಮಂಗಳೂರಿನಲ್ಲಿದ್ದಾಗ ಕಂಕನಾಡಿ ಅವರ ಮನೆಯಲ್ಲಿಯೋ ಅಥವಾ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿಯೋ ಕೇಳಿದರೆ ಅವರು ತಮ್ಮ ಪಾಂಡಿತ್ಯ ಪ್ರದರ್ಶಿಸಬಲ್ಲರು. ಇಲ್ಲದಿದ್ದರೆ ಮಂಗಳೂರು ಚಲೋ ಎಂದು ಯಾರೋ ಬೈಕ್ ರ್ಯಾಲಿ ಮಾಡಿದರೆ ಅದರಿಂದ ನಮ್ಮ ಜಿಲ್ಲೆಯಲ್ಲಿ ಕೋಮು ಸಂಘರ್ಷ ಆಗುತ್ತದೆ ಎಂದು ಹೇಗೆ ಭವಿಷ್ಯ ನುಡಿದರೋ ತಿಳಿಯಲಿಲ್ಲ.
ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯಾಗಲಿ ಅಥವಾ ಕಾಂಗ್ರೆಸ್ ನವರು ಆಯೋಜಿಸಿರುವ ಸಾಮರಸ್ಯ ನಡಿಗೆ ಎರಡು ರಾಜಕೀಯ ಪ್ರೇರಿತ ಕಾರ್ಯಕ್ರಮಗಳು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಹಾಗಂತ ಬೈಕ್ ರ್ಯಾಲಿ ಮಾಡಿದರೆ ಕೋಮು ಗಲಾಟೆ ಆಗುತ್ತದೆ, ಸಾಮರಸ್ಯ ನಡಿಗೆ ಮಾಡಿದರೆ ಕೋಮು ಸಂಬಂಧ ಚೆನ್ನಾಗಿ ಆಗುತ್ತದೆ ಎನ್ನುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ಯುಟಿ ಖಾದರ್ ಒಂದು ಧರ್ಮದ, ಒಂದು ಸಂಘಟನೆಯ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಯಾರಿಗಾದರೂ ಅನಿಸದೇ ಇದರು.
ಖಾದರ್ ಶಾಸಕನಾಗಿ ತಮ್ಮ ಕ್ಷೇತ್ರದಲ್ಲಿ ಪವರ್ ಫುಲ್ ರಾಜಕಾರಣಿ. ಅವರಿಗೆ ಹಿಂದೂಗಳು ದೊಡ್ಡ ಸಂಖ್ಯೆಯಲ್ಲಿ ವೋಟ್ ಮಾಡಿದ್ದಾರೆ. ಇನ್ನು ಪಿಎಫ್ಐ, ಕೆಎಫ್‌ಡಿಯಂತಹ ಸಂಘಟನೆಗಳು ಇವರ ಕ್ಷೇತ್ರದಲ್ಲಿ ಮಾಡಿರುವ ದಾಂಧಲೆ ಇವರಿಗೆ ಗೊತ್ತಿಲ್ಲವೆಂದಲ್ಲ. ಎಸ್‌ಡಿಪಿಐ ಯಾವತ್ತಿದ್ದರೂ ಖಾದರ್ ಅವರಿಗೆ ಮಗ್ಗುಲ ಮುಳ್ಳು. ಈಗ ಬಿಜೆಪಿ ಬೈಕ್ ರ್ಯಾಲಿ ಮಾಡಿದರೆ ಗಲಾಟೆ ಆಗುತ್ತೆ ಎಂದು ಯುಟಿ ಖಾದರ್ ಹೇಳುತ್ತಾರೆ ಎಂದರೆ ಅವರಿಗೆ ಬೈಕ್ ರ್ಯಾಲಿ ಯಾರ ವಿರುದ್ಧ ಇದೆ ಅವರು ಗಲಾಟೆ ಮಾಡಿಯೇ ಮಾಡುತ್ತಾರೆ ಎಂದು ಇವರೇ ಒಪ್ಪಿಕೊಂಡಂತಾಯಿತಲ್ಲವೇ? ಹಾಗಾದರೆ ಒಬ್ಬ ಜವಾಬ್ದಾರಿಯುತ ಸಚಿವನಾಗಿ ಖಾದರ್ ಏನು ಮಾಡಬೇಕು?
ಒಂದು ವೇಳೆ ಏನಾದರೂ ಅಹಿತಕರ ಘಟನೆ ನಡೆಯದಿದ್ದರೇ ಖಾದರ್ ತಮ್ಮ ಹೇಳಿಕೆ ಸುಳ್ಳಾಯಿತು ಎಂದು ಒಪ್ಪಿಕೊಳ್ಳಬೇಕಲ್ಲವೇ? ಅಥವಾ ತಮ್ಮ ನಾಯಕನ ಹೇಳಿಕೆ ಯಾವುದೇ ಕಾರಣಕ್ಕೂ ಸುಳ್ಳಾಗಬಾರದು ಎಂದು ಖಾದರ್ ಬೆಂಬಲಿಗರು ಆ ಹೇಳಿಕೆಯನ್ನು ನಿಜ ಮಾಡಲು ಹೊರಟಿದ್ದರಾ? ಇದು ನಿಜಕ್ಕೂ ಅಪಾಯಕಾರಿ. ಖಾದರ್ ಅವರಿಗೇ ತಮ್ಮ ಹೇಳಿಕೆ ನಿಜವೂ ಆಗಬೇಕು ಹಾಗೆ ಬಿಜೆಪಿ ರ್ಯಾಲಿ ಸಫಲವೂ ಆಗಬಾರದು ಎನ್ನುವ ಮನಸ್ಥಿತಿ ಇದ್ದರೆ ಮಂಗಳೂರಿನಲ್ಲಿ ಬರುವ ದಿನಗಳಲ್ಲಿ ಖಾದರ್ ಅವರ ಹೇಳಿಕೆ ಸತ್ಯ ಮಾಡಲು ತಯಾರಿ ನಡೆದಿದೆ ಎಂದೇ ಅರ್ಥವಲ್ಲವೇ?
ನಿಮಗೆ ಗೊತ್ತಿರಬಹುದು, ಅನೇಕ ಬಾರಿ ಆಡಳಿತ ಪಕ್ಷದ ಶಾಸಕರು, ಸಚಿವರು ಯಾವುದೇ ಹಗರಣದಲ್ಲಿ ಸಿಲುಕಿ ಬಿದ್ದಾಗ ಪೊಲೀಸ್ ತನಿಖೆಯಾಗುವ ಮೊದಲೇ ಸಿಎಂ ನಿಂದ ಎಲ್ಲ ಸಚಿವರು ಅದು ಸುಳ್ಳು ಆರೋಪ ಎಂದು ಹೇಳಲು ಆರಂಭಿಸುತ್ತಾರೆ. ಅದರರ್ಥ ತಾವು ಪರೋಕ್ಷವಾಗಿ ಪೊಲೀಸ್ ಇಲಾಖೆ ಮೇಲೆ ಒತ್ತಡ ತಂದು ತಮ್ಮ ಹೇಳಿಕೆ ನಿಜ ಮಾಡಲು ಒಳಗಿಂದೊಳಗೆ ಕೆಲಸ ಮಾಡುತ್ತೇವೆ ಎನ್ನುವ ಮುನ್ಸೂಚನೆ. ಇಲ್ಲಿಯೂ ಖಾದರ್ ತಮ್ಮ ಹೇಳಿಕೆ ನಿಜವಾಗಲಿ ಎಂದು ಕೆಲಸ ಮಾಡಿಸಿದ್ದರಾ? ಇನ್ನೊoದೆಡೆ ಕಾಂಗ್ರೆಸ್ ನೇತೃತ್ವದ ಸಾಮರಸ್ಯ ನಡಿಗೆಯಿಂದ ಯಾವ ಅಹಿತಕರ ಘಟನೆ ಕೂಡ ನಡೆಯುವುದಿಲ್ಲ ಎಂದು ಕೂಡ ಸಚಿವ ಖಾದರ್ ಭವಿಷ್ಯ ನುಡಿದಿದ್ದಾಾರೆ. ಇದು ಅವರಿಗೆ ಹೇಗೆ ಗೊತ್ತಾಯಿತು. ಒಂದು ವೇಳೆ ಖಾದರ್ ಹೇಳಿಕೆಯನ್ನು ಸುಳ್ಳು ಮಾಡಲು ಸಾಮರಸ್ಯ ನಡಿಗೆ ವಿರೋಧಿಗಳು ಏನಾದರೂ ಸಂಚು ಮಾಡಿದರೆ?
ಮೊದಲೇ ಎಸ್‌ಡಿಪಿಐ ನಾಯಕರು ಸುದ್ದಿಗೋಷ್ಠಿ ಮಾಡಿ ಸಾಮರಸ್ಯ ನಡಿಗೆ ರಾಜಕೀಯ ಗಿಮಿಕ್ ಎಂದಿದ್ದಾರೆ. ಹಾಗೆ ತಮ್ಮ ಬೈಕ್ ರ್ಯಾಲಿಗೆ ಇಷ್ಟು ತೊಂದರೆ ಕೊಟ್ಟು ಅದರಿಂದ ಅಹಿತಕರ ಘಟನೆ ಆಗುವಂತೆ (ಒಂದು ವೇಳೆ ಆದಲ್ಲಿ) ನೋಡಿಕೊಂಡ ಕಾಂಗ್ರೆಸ್ ನಾಯಕರ ಸಾಮರಸ್ಯ ನಡಿಗೆ ಯಶಸ್ವಿಯಾದ್ದಲ್ಲಿ ಅದರಿಂದ ಜನರಿಗೆ ಹೋಗುವ ಸಂದೇಶ ಏನು? ಎಂದು ಚಿಂತನೆ ಮಾಡುವ ಯಾವುದಾದರೂ ಬಿಸಿರಕ್ತದ ಸಂಘಟನೆ ಹುಡುಗರು ರಂಗಕ್ಕೆ ಇಳಿದರೆ ಆಗ ತೊಂದರೆಯಾಗುವುದು ಯಾರಿಗೆ? ನನ್ನ ಪ್ರಕಾರ ಯಾವುದೇ ಒಂದು ರಾಜಕೀಯ ಪಕ್ಷ ಹಮ್ಮಿಕೊಂಡ ಕಾರ್ಯಕ್ರಮದಿಂದ ಸರಕಾರ ನಾಶವೂ ಆಗುವುದಿಲ್ಲ, ಕಾರ್ಯಕ್ರಮ ಮಾಡಿದವರು ಅಧಿಕಾರಕ್ಕೆ ಬಂದೇ ಬಿಟ್ಟರು ಎಂದು ಹೇಳಲು ಆಗುವುದಿಲ್ಲ. ಅಂತಿಮವಾಗಿ ನಮ್ಮ ಜಿಲ್ಲೆಯ ಪ್ರಬುದ್ಧ ಮತದಾರ ಎಲ್ಲವನ್ನು ಸೂಕ್ಷ್ಮವಾಗಿ ನೋಡುತ್ತಾ ಇರುತ್ತಾನೆ. ಅವನಿಗೆ ಎಲ್ಲವೂ ಗೊತ್ತಿದೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ, ಹೋರಾಟ ಸಾಮಾನ್ಯ. ಅದಕ್ಕೆ ಯಾವ ರಾಜಕಾರಣಿ ಕೂಡ ತುಂಬಾ ಚಿಂತಿಸದೆ ಅಭಿವೃದ್ಧಿ ಕಡೆ ಗಮನ ಹರಿಸಬೇಕು. ಅದು ಬಿಟ್ಟು ಬೈಕ್ ರ್ಯಾಲಿಯಲ್ಲಿ ಭಾಗವಹಿಸುವವರಿಗೆ ರಾತ್ರಿ ಉಳಿದುಕೊಳ್ಳಲು ತೊಂದರೆ ಕೊಡುವುದು ಎಲ್ಲ ಸರಿಯಲ್ಲ. ಒಂದು ವೇಳೆ ಎಲ್ಲ ಬೈಕ್ ಸವಾರರು ಒಂದೇ ಕಲ್ಯಾಣ ಮಂಟಪದಲ್ಲಿ ರಾತ್ರಿ ಇದ್ರೆ ಪೊಲೀಸರಿಗೂ ರಕ್ಷಣೆ ಕೊಡಲು ಸುಲಭವಾಗುತ್ತಿತ್ತು. ಈಗ ಎಲ್ಲರೂ ಚದುರಿ ಬೇರೆ ಬೇರೆ ಮನೆಗಳಲ್ಲಿ ಇದ್ದರೆ ದುಷ್ಕರ್ಮಿಗಳು ಒಂದೆರಡು ಮನೆಗೆ ನುಗ್ಗಿ ದೊಂಬಿ ಮಾಡಿದರೆ ಆಗ ಕೆಟ್ಟ ಹೆಸರು ಯಾರಿಗೆ? ಯಾಕೋ ಖಾದರ್ ಅವರ ಹೇಳಿಕೆ ಮತ್ತು ರಾಜ್ಯ ಸರಕಾರದ ನಡೆಗಳು ಅನುಮಾನಗಳನ್ನು ಈ ನಿಟ್ಟಿನಲ್ಲಿ ಹುಟ್ಟು ಹಾಕುತ್ತಿರುವುದು ಸುಳ್ಳಲ್ಲ!
ಆದರೆ ಬಿಜೆಪಿ ಸಹಸ್ರಾರು ಕಾರ್ಯಕರ್ತರ ಪಡೆಯನ್ನು ಸೇರಿಸಿ ಬೃಹತ್ ಸಮಾವೇಶ ಮಾಡಿತು, ಅಂದುಕೊಂಡಂತೆ ಬೈಕ್ ರ್ಯಾಲಿಯನ್ನು ತಕ್ಕ ಮಟ್ಟಿಗೆ ಯಶಸ್ವಿಯಾಯಿತು. ಆದರೆ ಸುಖಾ ಸುಮ್ಮನೇ ಆರೋಪ ಮಾಡಿ, ಕೋಮು ದಳ್ಳುರಿ ಎಂದು ಹೇಳಿಕೆ ನೀಡಿದ್ದ ಖಾದರ್ ಅವರೇ ಈಗ ಉತ್ತರಿಸಬೇಕು. ರ್ಯಾಲಿ ನಡೆದರೂ ಒಂದು ಕಪ್ಪುು ಚುಕ್ಕೆಯೂ ಕಾಣಲಿಲ್ಲ. ಸುಮ್ಮನೇ ಯಾವುದೋ ನೆಪ ಹೇಳಿ ಪ್ರಜಾಪ್ರಭುತ್ವದ ಹಕ್ಕಾದ ಪ್ರತಿಭಟನೆ ಹತ್ತಿಕುವುದು ಯಾವ ಮಟ್ಟಿಗೆ ಸರಿ. ಜನರಲ್ಲಿ ಇಲ್ಲದ ಗೊಂದಲ ಹುಟ್ಟಿಸುವುದನ್ನು ಸಚಿವರು ಬಿಡುವುದು ಒಳಿತು.
Leave A Reply