ಅಮೆರಿಕ ಇತಿಹಾಸದಲ್ಲಿಯೇ ಭೀಕರ ಸಾಮೂಹಿಕ ನರಹತ್ಯೆ!
>> 58 ಬಲಿ, ಒಂಟಿತೋಳ ಮಾದರಿ ದಾಳಿ
>> ಇದು ಪೈಶಾಚಿಕ ಕೃತ್ಯ ಎಂದು ಅಧ್ಯಕ್ಷ ಟ್ರಂಪ್ ಕಿಡಿ
ಲಾಸ್ ವೆಗಾಸ್ : 22 ಸಾವಿರ ಜನರು ಸಂಗೀತ ಆಸ್ವಾದಿಸಲು ಸೇರಿದ್ದ ಕಾರ್ಯಕ್ರಮ. ಜಗಮಗಿಸುವ ಬೆಳಕುಗಳ ಮಧ್ಯೆ ಕುಣಿದು ಕುಪ್ಪಳಿಸುತ್ತಿದ ರಸಿಕರು. ರಾತ್ರಿ 10.30 ಆದರೂ ಮನೆ ಚಿಂತ ಮರೆತವರಿಗೆ ಇದ್ದಕಿದ್ದಂತೆ ಆಕಾಶದಿಂದ ಗುಂಡುಗಳ ಸುರಿಮಳೆ ಎದುರಾಯಿತು. ಏನಾಗ್ತಿದೆ ಎಂದು ಕಣ್ಣು ಮಿಟುಕಿಸುವಷ್ಟರಲ್ಲಿ ರಕ್ತ ಸುರಿದು ಕೆಳಗೆ ಬೀಳುತ್ತಿದ್ದ ಜನರು ಕಣ್ಣಿಗೆ ಗೋಚರಿಸ ತೊಡಗಿದರು. ಚೀರಾಟ, ಆಕ್ರಂದನ ಮುಗಿಲು ಮುಟ್ಟಿ, ಸಂಗೀತ ಸ್ತಬ್ಧವಾಗಿ 10 ನಿಮಿಷ ಮೌನ ಆವರಿಸಿತು. ರಕ್ತದ ಕೋಡಿಯಲ್ಲಿ 50ಕ್ಕೂ ಹೆಚ್ಚು ಶವಗಳು ತೇಲಾಡುತ್ತಿದ್ದವು.
ಇದು ಸಿನಿಮಾ ದೃಶ್ಯವಲ್ಲ. ಭಾನುವಾರ ರಾತ್ರಿ ಅಮೆರಿಕದ ಲಾಸ್ ವೆಗಾಸ್‍ನಲ್ಲಿ ನಡೆದ ಭೀಕರ ಸಾಮೂಹಿಕ ಹತ್ಯೆಯ ಚಿತ್ರಣ. ಅಮೆರಿಕ ತನ್ನ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಭೀಕರ ನರಮೇಧಕ್ಕೆ ಸಾಕ್ಷಿಯಾಗಿದೆ. 58 ಜನರು ಸತ್ತಿದ್ದಾರೆ, 515 ಮಂದಿಗೆ ಗಾಯಗಳಾಗಿವೆ. ಆತಂಕದಲ್ಲಿ ಉಂಟಾದ ಕಾಲ್ತುಳಿತಕ್ಕೆ ಬಲಿಯಾದ ಮಂದಿಯ ಲೆಕ್ಕಸಿಕ್ಕಿಲ್ಲ.
ಎಲ್ಲಿ, ಹೇಗೆ ? : ಲಾಸ್ ವೆಗಾಸ್ ನಗರ ಕೇಂದ್ರಸ್ಥಾನ ಮ್ಯಾಂಡಲಯ್ ರೆಸಾರ್ಟ್ ಮತ್ತು ಕ್ಯಾಸಿನೊದಿಂದ 350 ಮೀ. ದೂರದ ಬಯಲು ಪ್ರದೇಶದಲ್ಲಿ ರೂಟ್ 91 ಹಾರ್ವೆಸ್ಟ್ ಉತ್ಸವ ಸಂಗೀತ ಸಂಜೆ ಏರ್ಪಡಿಸಲಾಗುತ್ತು. ರೆಸಾರ್ಟ್ ಹೋಟೆಲ್‍ನ 32ನೇ ಮಹಡಿಯಿಂದ ಆರೋಪಿ ಸ್ಟಿಫನ್ ಪೆಡಾಕ್(64) ಗುಂಡಿನ ದಾಳಿ ಆರಂಭಿಸಿದ್ದಾನೆ. ಕಿಟಕಿಗಳನ್ನು ಒಡೆದು ಮೂರು ಬಾರಿ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಮೊದಲು 9 ಸೆಕೆಂಡ್ ಒಂದೇ ಸಮನೇ ಗುಂಡು ಹಾರಿಸಿದ್ದಾನೆ. ನಂತರ ಇನ್ನೊಂದು ಕಡೆಯ ಕಿಟಕಿಗೆ ಹೋಗಿ 4 ಸೆಕೆಂಡ್‍ಗಳ ಎರಡು ಸುತ್ತು ಆಟೋಮ್ಯಾಟಿಕ್ ಮಷೀನ್ ಗನ್‍ನಿಂದ ಗುಂಡಿನ ಸುರಿಮಳೆ ಸುರಿಸಿದ್ದಾನೆ.
ಗುಂಡು ಹಾರಿಸಿಕೊಂಡ ಆತ್ಮಹತ್ಯೆ: ದುಷ್ಕರ್ಮಿ ಪೆಡಾಕ್ ಪೊಲೀಸರ ಕೈಗೆ ಸಿಕ್ಕುಬೀಳದೆ ತನ್ನ ಹಣೆಗೆ ಗುಂಡು ಹಾರಿಸಿಕೊಂಡು ಸತ್ತಿದ್ದಾನೆ. ಸೆ.28ಕ್ಕೆ ರೆಸಾರ್ಟ್ ಹೋಟೆಲ್‍ನಲ್ಲಿ ತಂಗಿದ್ದ ಸ್ಟೀಫನ್ ಮೂರು ದಿನಗಳಿಂದ ಭರ್ಜರಿ ಮೋಜು ಮಸ್ತಿ ನಡೆಸಿದ್ದಾನೆ. ಸಾಯುವ ತೀರ್ಮಾನ ಮಾಡಿದ್ದ ಆತನ ರೂಮಿನಿಂದ 10 ಆಟೋಮ್ಯಾಟಿಕ್ ಗನ್‍ಗಳು, ಅಪಾರ ಗುಂಡುಗಳು ಸಿಕ್ಕಿವೆ. ವೃತ್ತಿಯಿಂದ ಆತ ಅಕೌಂಟೆಂಟ್ ಆಗಿದ್ದ, ಆದರೆ ಹಲವು ವರ್ಷಗಳಿಂದ ನಿವೃತ್ತಿ ಜೀವನ ನಡೆಸುತ್ತಿದ್ದ.
ಐಸಿಸ್ ಹೊಣೆಹೊತ್ತರೂ ಎಫ್‍ಬಿಐ ನಂಬುತ್ತಿಲ್ಲ : ದಾಳಿಯ ಹೊಣೆಯನ್ನು ಇಸ್ಮಾಮಿಕ್ ಉಗ್ರ ಸಂಘಟನೆ ಐಸಿಸ್ ಹೊತ್ತಿದೆ. ತನ್ನ ಮುಖವಾಣಿ ಅಮಾಕ್‍ನಲ್ಲಿ ” ದಾಳಿ ರೂವಾರಿ ಕೆಲ ತಿಂಗಳ ಹಿಂದೆ ಇಸ್ಲಾಂಗೆ ಮತಾಂತರಗೊಂಡಿದ್ದ, ಅವನು ನಮ್ಮವನು’ ಎಂದು ಹೇಳಿಕೊಂಡಿದೆ. ಆದರೆ ಅಮೆರಿಕದ ಮೊಲೀಸರು ಇದು ಉಗ್ರರೊಂದಿಗೆ ನಂಟು ಹೊಂದಿರುವ ವ್ಯಕ್ತಿ ನಡೆಸಿರುವ ಕೃತ್ಯವಲ್ಲ ಎಂದು ಐಸಿಸ್ ಹೊಣೆಯನ್ನು ಅಲ್ಲಗಳೆದಿದ್ದಾರೆ. ಎಲ್ಲೆ ದಾಳಿ ನಡೆದರೂ ಅದು ನನ್ನಿಂದ ಎನ್ನುವಂತೆ ಹೊಣೆ ಹೊತ್ತುಕೊಳ್ಳುವ ಐಸಿಸ್ ವರ್ತನೆ ನಗೆಪಾಟಲಿಗೀಡಾಗಿದೆ.
Leave A Reply